‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೬) - ಕುವೆಂಪು

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೬) - ಕುವೆಂಪು

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ ೧೯೦೪ರ ಡಿಸೆಂಬರ್ ೨೯ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (೧೯೨೯) ಪಡೆದರು.

ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (೧೯೨೯) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಆಗಿ ಕಾರ್ಯನಿರ್ವಹಿಸಿ ೧೯೬೦ಲ್ಲಿ ನಿವೃತ್ತರಾಗಿದ್ದರು.

ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು. ಮೈಸೂರಿನಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನ (೧೯೫೭) ಅಧ್ಯಕ್ಷತೆ ವಹಿಸಿದ್ದರು. ಪದ್ಮವಿಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಿ.ಲಿಟ್. (೧೯೬೯) ನೀಡಿತ್ತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ದೊರೆತಿದ್ದವು. 

ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ (೧೯೬೮) ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ. ೧೯೯೫ರಲ್ಲಿ ನಾಡೋಜ ಪ್ರಶಸ್ತಿಯನ್ನು  ಮರಣೋತ್ತರ ನೀಡಲಾಯಿತು. ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನ (೧೯೮೫) ಉದ್ಘಾಟಿಸಿದ್ದರು. ಕುವೆಂಪು ಅವರು ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು.  ಕುವೆಂಪು ಅವರು ೧೯೯೪ರ ನವೆಂಬರ್ ೧೧ರಂದು ಮೈಸೂರಿನಲ್ಲಿ ನಿಧನರಾದರು.

ಅವರ ಕೆಲವು ಕೃತಿಗಳು: ಶ್ರೀರಾಮಯಣ ದರ್ಶನಂ, ಕಬ್ಬಿಗನ ಕೈಬುಟ್ಟಿ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ವಿಚಾರ ಕ್ರಾಂತಿಗೆ ಆಹ್ವಾನ, ಬೆರಳ್ಗೆ ಕೊರಳ್, ಶೂದ್ರತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದಾ, ಪಾಂಚಜನ್ಯ, ಬೊಮ್ಮನಹಳ್ಳಿ ಕಿಂದರಿಜೋಗಿ, ಕೊಳಲು ಇತ್ಯಾದಿ.

ಹೊಸಗನ್ನಡ ಕಾವ್ಯಶ್ರೀಯಲ್ಲಿ ಪ್ರಕಟವಾದ ‘ಕುವೆಂಪು’ ಅವರ ಎರಡು ಕವನಗಳ ಪೈಕಿ ಒಂದನ್ನು ಈಗಾಗಲೇ ನೀವು ಓದಿರಬಹುದು. ಮತ್ತೊಂದು ಕವನವನ್ನು ಇಲ್ಲಿ ಪ್ರಕಟ ಮಾಡಲಾಗಿದೆ.

ರೈಲ್ ರಸ್ತೆ

ಬೇಸಗೆಯ ಬಿಸಿಲು ಸುಡುತಿಹುದು ಸುಡಸುಡನೆ ;

ಮೂರ್ಛೆ ಹೋಗಿದೆ ಭೂಮಿ ನಡುಗಿ ನಡನಡನೆ !

ಹರಿಯುತಿದೆ ಬಯಲಿನಲಿ ಕಂಬಿ ದಾರಿ

ಕರ್ಕಶದ ಕಟುನೀಲಿ ಕಾಂತಿಯನು ಕಣ್ಗೆಕಾರಿ ;

ದೂರ, ಸಮದೂರವಾಗಿ,

ದಿಗ್ಮೂಲೆಯಿಂ ಬಂದು ದಿಗ್ಮೂಲೆಯಾಗಿ

ವೇದಿಂದೋಡುತಿರುವೆರಡು ಕಾಳಾಹಿಗಳ ಹೋಲಿ ;

ನೂತ್ನ ನಾಗರಿಕತೆಯ ಯಂತ್ರಾಸ್ಥಿಪಂಜರದಿ

ಕಬ್ಬಿಣದ ಹೃದಯಕ್ಕೆ ಹೊತ್ತು ರಕ್ತವ ಭರದಿ

ಪ್ರವಹಿಸುವ  ಲೌಹ ರೇಖಾ ನಾಳಗಳ ಹೋಲಿ ;

ಕರ್ಕಶದ ಕಟುನೀಲ ಕಾಂತಿಯನೆ ಕಾಣ್ಗೆಕಾರಿ 

ಹರಿಯುತಿದೆ ಕಂಬಿ ದಾರಿ !

 

ಬಡಕಲಾಗಿಹ ಹಸುವು ಬರಿಬಯಲ ಮೇಯುತಿದೆ ;

ತನ್ನ ನೆಳಲೂ ತನಗೆ ಕಾವಾಗಿ ಸಾಯುತಿದೆ !

ಎಲೆಯಿಲ್ಲದಾ ಮರವೊ ಮಳೆಯ ಹಾರೈಸುತಿದೆ ;

ಅದರ ನೆಳಲೆಲುಬು ಗೂಡನೆ ಬಿಸಲು ದಹಿಸುತಿದೆ !

ಶಬ್ದ ನಿಶ್ಯಬ್ಧವಾಗಿದೆ ಮಹಾ ಶೂನ್ಯತೆಯ ಶವದಂತೆ,

ವೈಶಾಖ ರುದ್ರನ ಸಮಾಧಿಯಂತೆ !

ಯಾವುದನು ಲೆಕ್ಕಿಸದೆ ಕಂಬಿದಾರಿ 

ಬಿಸಿಲ ಝಳದಲಿ ಇನಿತು ಕಂಪನವ ತೋರಿ,

ಕರ್ಕಶದ ಕಟುನೀಲ ಕಾಂತಿಯನು ಕಣ್ಗೆ ಕಾರಿ,

ಹರಿಯುತಿದೆ ರೈಲು ದಾರಿ !

 

ನೋಡುತಿಹುದ್ದಕಿದ್ದಂತೆ ಹಸು ಕೊರಳನೆತ್ತಿ ;

ತನ್ನ ಸದ್ದನೆ ತಾನು ಬಿಡದೆ ಬೆಂಬತ್ತಿ

ಬಂದಿತದೊ ನಾಗರಿಕತೆಯ ಮಾರಿ ಬೋರೆ ಹತ್ತಿ !

ರೈಲು ಬಂದಿತು, ರೈಲು !

ಜಾಗರಿತವಾಗುತಿದೆ ಪ್ರಜ್ಞೆಯಿಲ್ಲದ ರೈಲು !

 

ಕರಿಯ ತಲೆ, ಗಾಜುಗಣ್ಣು ;

ಬಾಯಲ್ಲಿ ಹೊಗೆ, ಮೂಗಿನಲ್ಲಿ ಕಿಡಿ, ‘ರೈಲಿನೆಂಜಿಣ್ಣು!’

ಹರಿಯುತಿದೆ ಗಡಗಡನೆ ಸದ್ದು ಮಾಡಿ,

ದೊಡ್ಡದೊಂದೊನಕೆ ಹುಳು ! ಹೊಟ್ಟಯೆಲ್ಲಾ ಗಾಡಿ !

ಸಿಳ್ಳು ಹಾಕುತಿದೆ, ಕಿಡಿಯ ಸೂಸುತಿದೆ;

ಹೊಗೆಯನೂದುತಿದೆ ; ನುಗ್ಗಿಯೋಡುತಿದೆ !

ಜನರು ಕೂತಿಹರೇನು?

ಸಾಗುತಿಹವೇನು ಸಾಮಾನು?

ಅಲ್ಲ ; ರೈಲೋಡುತಿದೆ.

ಮಾನವರೊ? ಸಾಮಾನೊ? ಏನಾದರೇನಂತೆ?

ಯಂತ್ರ ಕೇಕಾಚಿಂತೆ? ಅಂತು ರೈಲೋಡುತಿದೆ !

 

ಸದ್ದು ಸತ್ತಿತು, ಕಣ್ಣು ಮರೆಯಾಯ್ತು ರೈಲು ;

ಪ್ರಜ್ಞೆ ತಪ್ಪಿದೆ ಮತ್ತೆ ಬಿಸಿಲಿನಲಿ ಬೈಲು !

ಏನೊಂದು ಕ್ಷಣಕಾಲದಲಿ ಮಿಂಚಿ ಮರೆಯಾಯ್ತು ;

ಬಯಲು ನಿದ್ದೆಯು ಕಂಡ ಕೆಟ್ಟ ಕನಸಾಯ್ತು !

ಹಾ ! ಕತ್ತರಿಸಿದೊಂದು ನರವೆ ಸಾಕು

ನೆತ್ತರನು ಶೋಷಿಸಲು ! ಇನ್ನೇನು ಬೇಕು?

ಈ ಕಬ್ಬಿಣದ ಕಂಬಿ ದಾರಿ,

ಅಲ್ಲಿ ಮೇಯುವ ದನದ ರಕ್ತವನು ದಿನದಿನವು ಹೀರಿ

ಕೊಂಡೊಯ್ದನಾಗರಿಕತೆಯ ನಾಡಿ,

ಎನಲು ನಂಬುವರಾರು? ಆದರೂ ನಂಬದಿರಬೇಡಿ !

 

ಹದ್ದು ಸತ್ತಿದೆ ! ಎಲ್ಲಿ ಹೋಯ್ತೋ ಏನೊ ರೈಲು?

ಮೂರ್ಛೆ ಹೋಗಿದೆ ಮತ್ತೆ ಬಿಸಿಲಲ್ಲಿ ಬೋಲು ಬೈಲು !

ಕರ್ಕಶದ ಕಟುನೀಲ ಕಾಂತಿಯನು ಕಣ್ಗೆ ಕಾರಿ

ಹರಿಯುತಿದೆ, ಹರಿಯುತಿದೆ, ಹರಿಯುತಿದೆ ರೈಲುದಾರಿ,

ಕಂಪಿಸುವ ಕಬ್ಬಿಣದ ರೈಲು ದಾರಿ !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)