‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೭) - ಪಾಂಡೇಶ್ವರ ಗಣಪತಿ ರಾವ್

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೭) - ಪಾಂಡೇಶ್ವರ ಗಣಪತಿ ರಾವ್

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ೨೩ ಜುಲೈ ೧೯೦೮ರಲ್ಲಿ ಜನಿಸಿದರು. ಇವರ ತಂದೆ ರಾಮಚಂದ್ರ ರಾವ್ ಹಾಗೂ ತಾಯಿ ಸೀತಮ್ಮ. ಇಂಟರ್ ಮೀಡಿಯೆಟ್ ತನಕ ಶಿಕ್ಷಣ ಪಡೆದ ಇವರು ಸಾಹಿತ್ಯ ವಿಷಯಗಳಲ್ಲಿ ಬಹಳ ಚುರುಕಾಗಿದ್ದರು. ವೀರಕೇಸರಿ, ಲೋಕಮತ ದಿನಪತ್ರಿಕೆಗಳ ಸಂಪಾದಕರಾಗಿದ್ದರು. ತಮ್ಮ ೧೭ನೆಯ ವಯಸ್ಸಿನಲ್ಲೇ ‘ವಿವೇಕಾನಂದ ಚರಿತಮ್' ಎಂಬ ಕಾವ್ಯವನ್ನು ರಚಿಸಿದ್ದರು. ಸ್ವಲ್ಪ ಸಮಯ 'ಜಯ ಕರ್ನಾಟಕ' ಪತ್ರಿಕೆಗೆ ಸಂಪಾದಕರಾಗಿದ್ದರು. ೧೯೪೦-೪೨ರ ಅವಧಿಗೆ ಕರ್ನಾಟಕ ಹರಿಜನ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇವರು ಬಾಲ್ಯದಿಂದಲೇ ಸುಂದರ ಪರಿಸರ ಹಾಗೂ ಪ್ರಕೃತಿಯ ಬಗ್ಗೆ ಕವನಗಳನ್ನು, ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದರು. ‘ನಾಗರಿಕ’ ಎಂಬ ಪತ್ರಿಕೆಯ ಸಂಪಾದಕರೂ, ಪ್ರಕಾಶಕರೂ ಆಗಿದ್ದರು. 

ಗಣಪತಿ ರಾವ್ ಅವರು ಪ್ರಥಮ ಕರ್ನಾಟಕ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೆಲಕಾಲ ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯ ಕನ್ನಡ ವಿಭಾಗಕ್ಕೆ ಸಂಪಾದಕರಾಗಿದ್ದರು. ಇವರಿಗೆ ಪಿ.ಆರ್. ರಾಮಯ್ಯ ಪ್ರಶಸ್ತಿ ದೊರೆತಿದೆ. ಜಿ. ಆರ್. ಪಾಂಡೇಶ್ವರ ಎಂಬ ಪ್ರತಿಷ್ಟಾನ ಇವರ ಸ್ಮರಣಾರ್ಥ ಉತ್ತಮ ಸಂಪಾದಕರೊಬ್ಬರಿಗೆ ‘ಪಾಂಡೇಶ್ವರ ಪ್ರಶಸ್ತಿ’ಯನ್ನು ಪ್ರತೀ ವರ್ಷ ಕೊಡಮಾಡುತ್ತಿದ್ದಾರೆ. 

ಇವರು ರಚಿಸಿದ ಪ್ರಮುಖ ಕೃತಿಗಳು: ವಿವೇಕಾನಂದ ಚರಿತಮ್, ಕೊಳಲು ಕೃಷ್ಣ, ಚೆಂಗಲವೆ, ಸುಪಂಥ, ಯಕ್ಷಗಾನ ಕಲಾಲೋಕ ಇತ್ಯಾದಿ. 

ಹೊಸಗನ್ನಡ ಕಾವ್ಯಶ್ರೀ ಕೃತಿಯಲ್ಲಿ ಇವರ ಎರಡು ಕವನಗಳು ಪ್ರಕಟವಾಗಿವೆ. ಆ ಕವನಗಳಲ್ಲಿ ಒಂದು ಕವನವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಮತ್ತೊಂದು ಕವನವನ್ನು ಈಗ ಪ್ರಕಟಿಸಲಾಗಿದೆ.

ಕೀರ್ತಿ

ಒಡಲಿಗೆಂತುಡುಗೆಯೋ ಹೆಸರಿಗಂತೆಯೆ ಕೀರ್ತಿ,

ನಾಮರೂಪಗಳೆ ಜೀವಾರ್ಷಕಣಕೆ ಸ್ಪೂರ್ತಿ !

ಸ್ವಚ್ಛ ಸುಂದರವೇಷ ಕಣ್ಗಂದ ಕೈಗಂದ,

ಹೆಸರ ಹೂವಿನ ಗಂಧ - ಜೀರ್ತಿ - ಶ್ರವಣಾನಂದ,

ಹಳತಿರಲಿ, ಹರಕಿರಲಿ, ಬಟ್ಟೆ ಕೊಳೆಗಳೆದಿರಲಿ,

ಬಳಿಗೈವ ಜನಕೆ ನಿರ್ಮಲ ಸುಖವ ಕೊಡುತಿರಲಿ.

ಊರಕೇರಿಯ ದಾಟದಿಹ ಪುಟ್ಟ ಪೆಸರಿರಲಿ,

ಒಳ್ಳೆಯವನೆಂಬ ಸತ್ಕೀರ್ತಿಯನೆ ತಳೆದಿರಲಿ!

 

ತನ್ನಂತೆ ಪರರ ಬಗೆಯುತ ಲೋಕಹಿತಕಾಗಿ

ತನ್ನೆಲ್ಲ ಕೃತಿಯ ಗಂಧವ ಕೊರಡ ತೇದಿರಲಿ !

ದಿನದಿನಂ ದುಡಿದುಡಿದು ಒಡಲು ಕಿರಿಕಿರಿದಾಗಿ

ಕರಗೆ ಕೀರ್ತಿಸುಗಂಧ ಸಜ್ಜನರ ಸೇರಿರಲಿ !

 

ಉಡುಗೆಯಿಲ್ಲದ ಒಡಲು ಬೆತ್ತಲೆಯ ಹಸುಗೂಸು,

ಕೀರ್ತಿ ಇಲ್ಲದ ಸುಜನ ಹಸುಗೂಸಿನೊಲು ಲೇಸು !

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)