‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೯) - ಕಡೆಂಗೋಡ್ಲು ಶಂಕರಭಟ್ಟ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೯) - ಕಡೆಂಗೋಡ್ಲು ಶಂಕರಭಟ್ಟ

ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಥೆ-ಕಾದಂಬರಿಕಾರ ಪತ್ರಕರ್ತರಾದ ಶಂಕರಭಟ್ಟರು ಹುಟ್ಟಿದ್ದು ಆಗಸ್ಟ್ ೯, ೧೯೦೪ರಲ್ಲಿ ದ. ಕನ್ನಡ ಜಿಲ್ಲೆಯ ಪೆರುಮಾಯಿ ಗ್ರಾಮದಲ್ಲಿ. ತಂದೆ ಈಶ್ವರಭಟ್ಟ, ತಾಯಿ ಗೌರಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಮಂಗಳೂರಿನ ಕೆನರಾ ಶಾಲೆಯಲ್ಲಿ ಹೈಸ್ಕೂಲು ವಿದ್ಯಾಭ್ಯಾಸ. ಧಾರವಾಡದ ಶಿಕ್ಷಣ ಸಮಿತಿಯಿಂದ ಉನ್ನತ ಶ್ರೇಣಿಯಲ್ಲಿ ಸ್ನಾತಕ ಪದವಿ. ಕಾರ್ನಾಡ ಸದಾಶಿವರಾಯರಿಂದ ಪ್ರಭಾವಿತರಾಗಿ ಶಾಲೆಯನ್ನು ತೊರೆದು ಸೇರಿದ್ದು ಸ್ವಾತಂತ್ರ್ಯ ಚಳವಳಿ, ಸ್ವಯಂಸೇವಕರಾಗಿ ಸೇವೆ. ಉದ್ಯೋಗಕ್ಕಾಗಿ ಸೇರಿದ್ದು ಕಾರ್ನಾಡ ಸದಾಶಿವರಾಯರು ಸ್ಥಾಪಿಸಿದ್ದ ಮಂಗಳೂರಿನ ರಾಷ್ಟ್ರೀಯ ಪಾಠಶಾಲೆ. ತಿಲಕ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನಂತರ ಮಂಗಳೂರಿನ ಸೇಂಟ್ ಆಗ್ನೇಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ. ವಿದ್ಯಾರ್ಥಿಗಳಲ್ಲಿ ಕನ್ನಡದ ಒಲವನ್ನು ಮೂಡಿಸುವುದೇ ಇವರ ಅಧ್ಯಾಪನದ ಒಂದು ಅಂಗ. ಪತ್ರಿಕೋದ್ಯಮದಲ್ಲೂ ಆಸಕ್ತಿ. ಮಂಗಳೂರಿನ ನವಯುಗ, ಪತ್ರಿಕೆಯಲ್ಲಿ ಪತ್ರಕರ್ತರಾಗಿ, ರಾಷ್ಟ್ರಬಂಧು ವಾರಪತ್ರಿಕೆಯ ಪ್ರಥಮ ಸಂಪಾದಕರಾಗಿ, ರಾಷ್ಟ್ರಮತ ವಾರಪತ್ರಿಕೆಯನ್ನಾರಂಭಿಸಿ ತಮ್ಮ ಜೀವಿತಾವಯವರೆಗೂ ಸಂಪಾದಕರಾಗಿ ಸೇವೆ. ಹಲವಾರು ಕೃತಿ ರಚನೆ. ಕಾವ್ಯ-ವಿದ್ಯಾರ್ಥಿ ದೆಸೆಯಲ್ಲೇ ಕಾವ್ಯರಚನೆ ಪ್ರಾರಂಭ. ‘ಘೋಷಯಾತ್ರೆ’ ಸಂಕಲನ ಪ್ರಕಟಿತ. ಚೌಪದಿ, ಕುಸುಮ ಷಟ್ಪದಿ, ಮಂದಾನಿಲ ರಗಳೆಗಳ ಯಶಸ್ವಿ ಪ್ರಯೋಗ. ಗಾಂ ಸಂದೇಶ, ವಸ್ತ್ರಾಪಹರಣ, ಕಾಣಿಕೆ, ನಲ್ಮೆ, ಹಣ್ಣು-ಕಾಯಿ, ಪತ್ರ-ಪುಷ್ಪ ಮೊದಲಾದ ಕಾವ್ಯಕೃತಿಗಳು. ನಾಟಕ-ಉಷೆ, ಹಿಡಿಂಬೆ, ವಿರಾಮ, ಯಜ್ಞಕುಂಡ, ಅಜಾತ ಶತ್ರು, ಗುರುದಕ್ಷಿಣೆ, ಮಹಾಯೋಗಿ. ಕಾದಂಬರಿ-ದೇವತಾಮನುಷ್ಯ, ಧೂಮಕೇತು, ಲೋಕದ ಕಣ್ಣು, ಕಥಾಸಂಕಲನ-ಹಿಂದಿನ ಕಥೆಗಳು, ಗಾಜಿನ ಬಳೆ, ದುಡಿಯುವ ಮಕ್ಕಳು. ಸಾಹಿತ್ಯ  ವಿಮರ್ಶೆ-ವಾಙ್ಞಯ ತಪಸ್ವಿ. ಅನುವಾದ-ಸ್ವರಾಜ್ಯ ಯುದ್ಧ. ಇದಲ್ಲದೆ ಲಲಿತ ಪ್ರಬಂಧಗಳು, ಗ್ರಂಥ ವಿಮರ್ಶೆ, ಕಥೆ-ಕವನಗಳು ವಿಮರ್ಶಾ ಗ್ರಂಥಗಳು ಪ್ರಕಟಿತ. ಇವರ ಕೃತಿಯ ಬಗ್ಗೆ ಗೋಕಾಕ್, ಪು.ತಿ.ನ. ಎಂ.ವಿ.ಸೀ. ಅಡಿಗರು ಬರೆದ ವಿಮರ್ಶಾಗ್ರಂಥಗಳು ಪ್ರಕಟಿತ. ಸಂದ ಗೌರವಗಳು-೧೯೩೦ರಲ್ಲಿ ನಡೆದ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೩೨ರಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ. ೧೯೬೫ರಲ್ಲಿ ಕಾರವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಹಿತೈಷಿಗಳು ೧೯೬೫ರಲ್ಲಿ ಅರ್ಪಿಸಿದ ಗೌರವಗ್ರಂಥ ‘ಸಾಹಿತ್ಯಯೋಗಿ,’ ೧೯೭೭ರಲ್ಲಿ ಸಂಸ್ಮರಣ ಗ್ರಂಥ ‘ವಾಙ್ಞಯ ತಪಸ್ವಿ.’ ಶಂಕರ ಭಟ್ಟರು ನಿಧನರಾದದ್ದು ಮೇ ೧೭ರ ೧೯೬೮ರಲ್ಲಿ.   

ಶಂಕರ ಭಟ್ಟರ ಎರಡು ಕವನಗಳು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿದ್ದು, ಅವುಗಳಲ್ಲಿ ಒಂದನ್ನು ಈಗಾಗಲೇ ಆರಿಸಿ ಪ್ರಕಟ ಮಾಡಲಾಗಿದೆ. ಮತ್ತೊಂದು ಕವನವನ್ನು ಇಲ್ಲಿ ನೀಡಲಾಗಿದೆ.

ವೀರರ ಮಸಣ

ಕಾಲನ ಬುದ್ಧಭ್ರುಕುಟಿಯ ಕೋಪದ

ತಾಪದ ಮುಂಗಡೆ ಜನತೆಗಳು

ಸಿಂಹಾಸನಗಳು ಸಾಮ್ರಾಜ್ಯಂಗಳು

ಮಾನವ ಭುಜಬಲ ಘನತೆಗಳು

ಕರಗಿದುವೆನಿತೋ ಹಿಮರಾಶಿಯ ವೊಲು !

ನೆನಪಿನ ಕೇವಣವಾಗಿಹರು,

ಮಸಣದ ಅಂಚಿಂದಾಕಡೆ ಕೀರ್ತಿಯ

ನೆರಳಾಗುತೆ ಬಾಳಿದರಾರು?

 

ಯುಗಗಳ ಜಗಗಳ ಸುತ್ತದು ನೀರವಧಿ !

ಒಂದೆರಡೇ ಬೆರಳನು ನಡೆದು,

ಹೆಸರಿನ ಹೆಜ್ಜೆಯು ಬಳಲುವುದೆನ್ನಲು

ಜಸದ ದಾರಿಯೋ ! ಬಲು ಕಿರಿದು !

ಸೃಷ್ಟಿಯ ಹೊಲದಲಿ ಜಳ್ಳಿನ ತೆನೆಗಳೆ

ಹೆಚ್ಚಿವೆ ಕಸವಾಗಲು ಬಿದ್ದು ;

ಉಳುತಿದೆ ಉಳುತಿದೆ ಕರ್ಮದ ನೇಗಿಲು

ಫಲಹೊಂದದೆ ನೆಲವಳುತಿಹುದು !

 

ಆರ್ ನೂರ್ ವರ್ಷದ ಹಿಂಗಡೆ, ಹಬ್ಬಿದ

ಗಾಢತಮದ ಸೆರೆಮನೆಯೊಳಗೆ,

ಮರವೆಯ ಭೇದಿಸಿ ಮಿರುಗಿತು ನೋಡಾ

ಕನ್ನಡ ನಾಡಿನ ಜೀವಕಳೆ

ವಿಜಯ ನಗರವೋ ! ವೀರರ ತೊಟ್ಟಿಲು !

ಅಮೃತಸ್ತನ್ಯವನೂಡಿಸುತ…

ಮಕ್ಕಳ ಸಂತಸದಲಿ ನೀರೇರುವ

ಪುಣ್ಯವು ತುಂಗೆಗೆ ಸಂದಿತ್ತು.

 

ತುಂಗೆಯ ಸೈಪಿಗೆ ಗಂಗೆಯು ನೋಂತಳೆ?

ದೇವರ ಮೂರ್ತಿಯ ಪೂಜೆಯಲಿ

ಮಂದಾಕಿನಿ ಪಾವನೆಯೆಂದೆನಿಸಲು,

ಮನುಜರ ಕೀರ್ತಿಯ ಪೂಜೆಯಲಿ

ಪಾವನೆಯಾದಳು ನಮ್ಮೀ ಭದ್ರೆಯು…

ಕನ್ನಡನಾಡಿನ ಗುಂಡುಗಳ

ಕನ್ನಡ ನಾಡಿನ ಕಲಿಗಳ ಬಲಿಗಳ

ಪಡೆದಳು ಬೀರದ ಪಿಂಡಗಳು

 

ಆರ್ ನೂರ್ ಸುಗ್ಗಿಯ ಕೋಗಿಲೆ ಹಾಡಿನ 

ಕಡಲಿಂದಾಕಡೆ... ಮೌನದಲಿ,

ಸೀತಾರಾಮನ ಯೋಗಧ್ಯಾನವ

ಸಲಹಿದ ಮರಗಳ ನೆರಳಲಿ,

ಬ್ರಹ್ಮ ಸಮಾಧಿಯೊಳೊರಗಿದ ಮಹಿಮನ

ಕನಸಿನ ಚಿತ್ರವೆ, ಗೈಮೆಯಲಿ

ಚಿತ್ತರಗೊಂಡುದು, ಬಿತ್ತರಗೊಂಡುದು

ಕನ್ನಡಿಗರ ಸಾಮ್ರಾಜ್ಯದಲಿ.

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)