‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪) - ಶ್ರೀನಿವಾಸ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪) - ಶ್ರೀನಿವಾಸ

‘ಶ್ರೀನಿವಾಸ' ಎಂಬುದು ‘ರಾಜಸೇವಾಸಕ್ತ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯನಾಮ. ಮಾಸ್ತಿಯವರು ಎಂ ಎ ಪದವೀಧರರು. ಮೈಸೂರು ಸರಕಾರದ ದೊಡ್ದ ಹುದ್ದೆಯಲ್ಲಿದ್ದವರು. ಹೊಸಗನ್ನಡ ಸಾಹಿತ್ಯದ ಹೊಸ ಹಾದಿ ಹಾಕಿಕೊಟ್ಟ ಹಿರಿಯರಲ್ಲಿ ಅವರು ಅಗ್ರಪಂಕ್ತಿಗೆ ಸೇರಿದವರು. ಸಣ್ಣ ಕತೆಗಳು, ಕವನಗಳು, ನಾಟಕಗಳು, ಗೀತ ನಾಟಕಗಳು, ಕಾದಂಬರಿಗಳು, ಪ್ರಬಂಧಗಳು, ಜೀವನ ಚರಿತ್ರೆಗಳು, ವಿಮರ್ಶೆಗಳು - ಹೀಗೆ ಅವರ ಕೃತಿಗಳು ನೂರಾರು. ಎಲ್ಲವೂ ಮೇಲ್ಮಟ್ಟದವುಗಳೆಂದು ವಿದ್ವನ್ಮಣಿಗಳಿಂದ ಪ್ರಶಂಸಿತವಾಗಿವೆ. ಅವರ ಕೃತಿಗಳ ಸಂಕಲನವು ೧೦ ದೊಡ್ಡ ಸಂಪುಟಗಳಾಗಿ ಪ್ರಕಟವಾಗಿದೆ. ಒಟ್ಟು ೫ ಸಾವಿರ ಪುಟಗಳಾಗುತ್ತವೆ. ಅವರು ೧೯೨೯ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ನ ಬೆಳಗಾವಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ‘ಜೀವನ' ಎಂಬ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು.

ಕಾವ್ಯಶ್ರೀ ಸಂಕಲನದಲ್ಲಿ ‘ಶ್ರೀನಿವಾಸ' ಅವರ ಒಂದು ಕವನ ಪ್ರಕಟವಾಗಿದೆ. ಅದನ್ನು ಸಂಗ್ರಹಿಸಿ ಪ್ರಕಟಿಸುತ್ತಿದ್ದೇವೆ,

ಕೋಗಿಲೆ

ಕೋಗಿಲೆ ! ಕೋಗಿಲೆ !

ಎಂಥ ಹೆಸರು ಊರಿಗೆ !

ಹೇಗೆ ಇಹುದೊ, ಎನಿತು ಸೊಗಸೊ,

ಇಂಥ ಹೆಸರ ಊರದು !

 

ಕೊಟಿಗೆಹರ ತೆರುವಿಗೆ

ಏಳುಕೂಗು ದೂರದೆ,

ಎಟುಕಿಸಿಕೊಳಬಹುವೊಲಿರುವ

ಮಾಲೆಯಾದ ಮಲೆಯೆಡೆ;

 

ಮೂರು ನೀರನುಳಿಯುತ

ಮಲೆಯ ತಲೆಯ ಮುಟ್ಟುತ

ಧೀರವಾಗಿ ಪಡುವಣಿಂದ

ಸುಳಿಯುವೆಲರೊಳಾಡುತ ;

 

ತಳಿರು ಹೂವು ಸೊಗಯಿಸೆ

ಪರಿಮಳಿಸುವ ವನದಲಿ ;

ಮಳೆಯ ನೀರು ಸೇರಿ ನಡೆವ

ಸರಳಿನೊಂದು ಬದಿಯಲಿ ;

 

ಅಲ್ಲಿ ಇಹುದು ಕೋಗಿಲೆ

ಎಂಥ ಸೊಗಸ ಊರದು !

ಮೆಲ್ಲನುಸುರು ಹೆಸರನು;

ಅಂತ ಸೊಗಸ ಹೆಸರದು.

 

ತಳಿರ ಮರೆಯೊಳಿರುತ ಕರೆದು

ಕಾಣದಿಹುದೆ ಕೋಗಿಲೆ ;

ಸಲುವಿದಿದೇ ಬಣ್ಣನೆ

ಜಾಣು ನಮ್ಮ ಊರಿಗೆ,

 

ಉಳಿದ ಊರು ಮನೆಯ ಗುಂಪು,

ಕಡೆಗೆ ಎರಡು ಮರಗಳು,

ಮಲೆಯೆ ವನವೆ ಊರು ಇಲ್ಲಿ;

ನಡುವೆ ಎಲ್ಲೊ ಮನೆಗಳು,

 

ಉಳಿದ ಊರು ಬರಿಯ ಜನವ

ಬಾಳು ಬೀಳು ಕೋಗಿಲೆ

ಎಲರ ಮಲರ ಕಂಪು ಸೊಂಪು

ಮೇಳವಿಸಿದ ತೋಂಟವು.

 

ಪಾರಿವಗಳ ಕೂಜನದ

ಗಿಳಿಯ ನೆಲವ ಕೂಗಿನ,

ನೂರು ತೆರನ ಹಕ್ಕಿಯ

ಉಲಿವ ಮೇಳ ಕೋಗಿಲೆ,

 

ಹೇರಿಳೆ ಮಲ್ಲಿಗೆ

ಜೇನುಹೂವ ಬಳ್ಳಿಯ 

ಬೇರಿನಿಂದ ಕಾವ ಕಲಸ

ತಾಣ ನಮ್ಮ ಕೋಗಿಲೆ.

 

ನನ್ನ ಜನದ ಮನದ ನಯ

ಸಂತಸವನು ಸಾರುವ

ಚಿನ್ನದಂತ ಹೆಸರ ಮೆರೆವ

ಶಾಂತಿಯೋಣಿ ಕೋಗಿಲೆ.

 

ಕೋಗಿಲೆ ! ಕೋಗಿಲೆ !

ಎಂತ ಹೆಸರು ಊರಿಗೆ !

ಹೋಗಿ ನೋಡು ಊರನು

ಶಾಂತಿಯೊಂದು ನೆಲೆಯನು.

(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)