‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೬) - ಅಂಬಿಕಾತನಯದತ್ತ

‘ಅಂಬಿಕಾತನಯದತ್ತ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ. ರಾ. ಬೇಂದ್ರೆ) ಇವರು ಎಂ ಎ ಪದವೀಧರರು. ಅಂದಿನ ಕನ್ನಡ ಭಾವಗೀತ ಕವಿಗಳಲ್ಲಿ ಅಗ್ರಗಣಿಗಳಾಗಿರುವವರು. ಇವರು ಕಳೆದ ಶತಮಾನದ ೨ನೇಯ ದಶಕದಿಂದಲೇ ಹೊಸ ಸಾಹಿತ್ಯ ನಿರ್ಮಿತಿಯನ್ನು ಮಾಡುತ್ತ ಬಂದ ಹಿರಿಯ ಕವಿಗಳು. ೧೯೪೦ರಲ್ಲಿ ಶಿವಮೊಗ್ಗೆಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸೊಲ್ಲಾಪುರದ ಡಿ ಎ ವಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ರಾಗಿ ನಿವೃತ್ತರಾಗಿ ನಂತರ ಧಾರವಾಡ ರೇಡಿಯೋ ಕೇಂದ್ರದಲ್ಲಿ ಪ್ರಮುಖ ವಾಗ್ಮಯ ನಿರ್ದೇಶಕರಾಗಿದ್ದರು. ‘ಗರಿ', ನಾದಲೀಲೆ, ಮೂರ್ತಿ, ಗಂಗಾವತರಣ, ಹೃದಯ ಸಮುದ್ರ, ಸಖೀಗೀತ ಮೊದಲಾದ ಅನೇಕಾನೇಕ ಕಾವ್ಯಕೃತಿಗಳನ್ನು ಪ್ರಕಟಿಸಿದ್ದಾರೆ. ಗದ್ಯದಲ್ಲಿಯೂ ‘ಸಾಹಿತ್ಯ ವಿಮರ್ಶೆ' ನಿರಾಭರಣ ಸುಂದರಿ, ವಿಚಾರ ಮಂಜರಿ ಮೊದಲಾದ ಅಮೋಘ ಪ್ರಬಂಧ ಸಂಕಲನಗಳನ್ನು ಹೊರತಂದಿದ್ದಾರೆ. ಅನೇಕ ಏಕಾಂಕ ನಾಟಕಗಳನ್ನೂ ಪ್ರಹಸನಗಳನ್ನೂ ಬರೆದಿದ್ದಾರೆ. “ವಿಚಿತ್ರ ಪ್ರಪಂಚ" ಎಂಬ ಚಲನಚಿತ್ರ ಕಥಾ ಲೇಖಕರೂ ಆಗಿದ್ದ ಇವರು ದೊಡ್ದ ವಾಗ್ಮಿಗಳೂ ಹೌದು.
‘ಕಾವ್ಯಶ್ರೀ’ ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆಯ್ದು ಇಲ್ಲಿ ನೀಡಲಾಗಿದೆ.
ಗಂಗಾವತರಣ
ಇಳಿದು ಬಾ ತಾಯಿ
ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ
ನಿನಗೆ ಪೊಡಮಡುವೆ
ನಿನ್ನ ನುಡುತೊಡುವೆ
ಏಕೆ ಎಡೆತಡೆವೇ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ
ನನ್ನ ತಲೆಯೊಳಗೆ
ನನ್ನ ಬೆಂಬಳಿಗೆ
ನನ್ನ ಒಳಕೆಳಗೆ
ನುಗ್ಗಿ ಬಾ
ಕಣ್ಣ ಕಣ್ ತೊಳಸಿ
ಉಸಿರ ಎಳೆ ಎಳಸಿ
ನುಡಿಯ ಸಸಿ ಮೊಳೆಸಿ
ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನೆಲೆಸಿ ಬಾ
ಜೀವ ಜಲದಲ್ಲಿ ಚಲಿಸಿ ಬಾ
ಮೂಲ ತೊಲದಲ್ಲಿ ನೆಲೆಸಿ ಬಾ
ಇಳಿದು ಬಾ ತಾಯಿ
ಇಳಿದು ಬಾ.
ಕಂಚು ಮಿಂಚಾಗಿ ತೆರಳಿ ಬಾ
ನೀರು ನೀರಾಗಿ ಉರುಳಿ ಬಾ
ಮತ್ತೆ ಹೊಡೆಮರಳಿ ಹೊರಳಿ ಬಾ
ದಯೆಯಿರದ ದೀಪ
ಹರೆಯಳಿದ ಹೀನ
ನೀರಿರದ ಮೀನ
ಕರೆಕರೆವ ಬಾ
ಇಳಿದು ಬಾ ತಾಯಿ
ಇಳಿದು ಬಾ
ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ
ಶಿವಶುಭ್ರಕರುಣೆ
ಅತಿಕಿಂಚಿದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.
ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು, ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ.
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್ ದುಮ್ ಎಂದಂತೆ
ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ
ದುಡುಕಿ ಬಾ.
ಹರಣ ಹೊಸದಾಗೆ ಹೊಳೆದು ಬಾ
ಬಾಳು ಬೆಳಕಾಗೆ ಬೆಳೆದು ಬಾ
ಕೈ ತೊಳೆದು ಬಾ
ಮೈ ತಳೆದು ಬಾ
ಇಳೆಗಿಳಿದು ಬಾ ತಾಯೀ
ಇಳಿದು ಬಾ ತಾಯಿ
ಇಳಿದು ಬಾ
ಶಂಭು ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮತೆ ಬಾ
ಅಂಬಿಕಾತನಯದತ್ತೆ ಬಾ
ಇಳಿದು ಬಾ ತಾಯಿ
ಇಳಿದು ಬಾ.
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)