‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೮) - ಕಡೆಂಗೋಡ್ಲು ಶಂಕರಭಟ್ಟ

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೮) - ಕಡೆಂಗೋಡ್ಲು ಶಂಕರಭಟ್ಟ

ಶಂಕರಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಹೊಸಗನ್ನಡ ಕವಿಗಳಲ್ಲಿ ಬಹು ಮೇಲ್ಮಟ್ಟದವರೆಂದು ಖ್ಯಾತಿ ಪಡೆದವರು. ೧೯೨೯ರಲ್ಲಿ ಇವರ ಪ್ರಥಮ ಕಾವ್ಯಕೃತಿ “ಕಾಣಿಕೆ"ಯು ಪ್ರಕಟವಾದಾಗ, ಎಲ್ಲಾ ಭಾಗದ ವಿದ್ವದ್ರಸಿಕರಿಂದಲೂ ಪ್ರಶಂಸಿಸಲ್ಪಟ್ಟಿತ್ತು. ೧೯೩೦ರಲ್ಲಿ ಮಡಿಕೇರಿಯಲ್ಲಿ ಜರುಗಿದ ಅಖಿಲ ಕರ್ನಾಟಕ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು. “ಹಣ್ಣು ಕಾಯಿ", “ನಲ್ಮೆ", ಎಂಬ ಕವನ ಸಂಕಲನಗಳನ್ನೂ, “ಧೂಮಕೇತು", “ದೇವತಾ ಮನುಷ್ಯ" ಎಂಬ ಕಾದಂಬರಿಗಳನ್ನೂ ಅನೇಕ ಸಣ್ಣ ಕಥೆಗಳನ್ನೂ ರಚಿಸಿದ್ದಾರೆ. “ರಾಷ್ಟ್ರಮತ"ಎಂಬ ವಾರ ಪತ್ರಿಕೆಯ ಸಂಪಾದಕರಾಗಿದ್ದ ಇವರು ೧೯೨೫ರಿಂದಲೂ ಪತ್ರಿಕೋದ್ಯಮದಲ್ಲಿ ನಿರತರಾಗಿದ್ದರು. ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಸಾಹಿತ್ಯ ವಿಮರ್ಶೆಯ ಅನೇಕ ಪ್ರಬಂಧಗಳನ್ನು ಬರೆದು ಪ್ರಕಟಿಸಿದ್ದಾರೆ. “ಹಿಡಿಂಬೆ" ಎಂಬ ನಾಟಕವನ್ನೂ ಬರೆದಿದ್ದಾರೆ. ೧೯೩೬ರಲ್ಲಿ ಧಾರವಾಡದಲ್ಲಿ ಜರುಗಿದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿ ಪ್ರಕಟವಾಗಿರುವ ಇವರ ಒಂದು ಕವನವನ್ನು ಆರಿಸಿ ಪ್ರಕಟ ಮಾಡುತ್ತಿದ್ದೇವೆ.

ಈ ಕಾಡೆ ಸ್ವರ್ಗನಂದನವಲ್ಲವೆ?

ಮುನಿಸು ಹೊಗೆ ಸೂಸುವುದೆ ಕಾನನದ ಮೌನದಲಿ ?

ಮನವ ದಹಿಸುವ ಮೋಡಿ ದಳ್ಳುರಿವುದೇ?

ಹುಸಿ ಬೆಸುಗೆಯಿಕ್ಕಿಹುದೆ ಎಳಲತೆಯ ಹಾಸದಲಿ?

ಕಟ್ಟು ಬಣ್ಣದ ಬೆಡಗು ಮಿರುಗುತಿಹುದೆ?

ಜೀವನವನುಕ್ಕಿಸುವ ಕೀರ್ತಿ ಮದಿರಾನಂದ

ಕೋಗಿಲೆಯ ಕಲರವದಿ ಹೊಮ್ಮುತಿಹುದೆ?

ಸೃಷ್ಟಿಯಾ ಸೋಗಿಲಿದು ; ಶಾಂತಿಯಾ ಬಾಗಿಲಿದು,

ಕವಡಿರದ ಬಾಳುವೆಯ ಹಂದರಿದುವೆ.

 

ಆರಾರ ದೂರು, ಮತ್ತಾರಾರ ನಿಟ್ಟುಸಿರು,

ಆರಾರ ನೀಳ್ದನಿಯ ರೋದನಗಳು ;

ಈ ದಡದಿ ವಿಷಮ ವೀಚಿಗಳ ತುಳಿದೆಬ್ಬಿಸವು

ಎರೆಯ ಕೊರೆಯದು ಕೊಚ್ಚಿ ಹರಿಯುವಳಲು,

ತನ್ನ ದೇಹವೆ ದೋಣಿ, ತನ್ನ ಶಕ್ತಿಯೆ ಹುಟ್ಟು,

ತನಗೆ ತಾನೇ ಕರ್ಣಧಾರೆನೆನಿಸಿ,

ತೇಲುತೇಲುತೆ ನಡೆದು ಎಂತೆಂತೊ ಸೇರುವೆವು

ಸಚ್ಚಿದಾನಂದ ಶಾಂತಿಯ ತೀರದಿ.

 

ಮುಕುಟಧಾರಣವೊಂದೆ ಬಾಳುವೆಯ ತೋರಣವೆ?

ರಾಜದಂಡವನಲೆವುದೊಂದೆ ಬಲವೆ?

ಸೀಗುರಿಯ ತಂಗಾಳಿಯೊಂದೆ ಜೀವನದುಸಿರೆ?

ಬೆಳ್ಗೊಡೆಯ ನೆಳಲೊಂದೆ ಸೊಗದ ತಂಪೆ?

ಬಿನ್ನಣವ ಮಾರಿ ಬೆಲೆಗೊಂಬ ಹರದರ ಗಾನ

ಆತ್ಮಕ್ಕೆ ಜತಿಗೊಡುವ ತಾನವೇನೈ?

“ಜಯ!” ಎಂಬ “ಜೀ” ಎಂಬ ಬೆಲೆಯಾಳ ಕಲಿತ ನುಡಿ 

ಸಗ್ಗದಿಂ ಸಿಡಿವ ಸೊದೆ ತುಂತುರೇನೈ?

 

ಅರಸು ಗೆಯ್ಮೆಯ ಭರದಿ ಆತ್ಮತತ್ವವ ತಿಳಿವ

ಪರಿಯ ಮರೆವೆವು, ಮೊರೆದು ಗರ್ಜಸುವೆವು.

ರಾಜ್ಯಗಳನೊತ್ತೊತ್ತಿ ಗೆಲ್ಲವರೆ ಮೊಳಗಿಪೆವು,

ಬಗೆಗರಸನಿಹನೆಂಬುದನೆ ಮರೆವೆವು

ಇಂತು ಗಳಿಸುವ ಬಾಳ ಆಳ್ಕೆಯೆಂಬರೆ? ಹೇಳ !

ಪಚ್ಚೆ ಹಸುರಿನ ಹೊಲದಿ ಮೇವ ಮುಂದೆ

ಒಂದು ಗಳಿಗೆಯ ಮೇವ ತಿಂದು ಮರೆಯದೆ ಸಾವ?

ಅದರಂತೆ ನಮ್ಮ ಬಾಳ್ ಮರವೆ-ಮಾಯೆ !

 

ತಾನೆ ಕುಡಿಬಿಟ್ಟು ಚಿಗುರಿಟ್ಟು ಅರಲಾಗಿ ಮಿಡಿ

ಯಾಗಿ ಬಿಸಿಲುಂಡು ಕೆಂಪಾಗಿ ಬೀಗಿ,

ತೂಗಿ ತೆಂಬೆಲರಿಂದ ನಸುಜಗುಳಿ ತೊಟ್ಟಿಂದ

ಜಾರಿ ಬೀಳುವ ಹಣ್ಣಿನಂತೆ ಮಾಗಿ,

ಜೀವವಿದು ತನ್ನೊಳಗೆ ತನ್ನ ಮೌನವನುಂಡು

ತೀವಿ ರಸದಲಿ ಬಣ್ಣವೇರಿ ಮೀರಿ,

ತನ್ನ ನೆಲೆಯನು ಕಂಡು ಸೇರಲದುವೇ ಬದುಕು ;

ಹಲವುದೋಹಳದಿಂದಲಾವ ಸೊಗಸು?

 

ಬೆದರುವೆನು ಹುಸಿನಗೆಗೆ- ನಾಚುವೆನು ಘೋಷಣೆಗೆ,

ಕೂಳ್ಕುದಿವೆ ರಾಜತೆಯ ಬಲಕೆ ಚಲಕೆ

ಆಳೆಂಬ ಅರಸೆಂಬ ಭೇದದಿಂ ಗರ್ಜಿಸುವ

ಜಂತು ಜೀವನ ಬೇಡ ಜಗದ ಸೊಗಕೆ,

ಇಲ್ಲಿ ಹುಸಿಬೆಡಗಿಲ್ಲ-ವಂದಿಗಳ ಮೊರೆಯಿಲ್ಲ.

ಘನಮಾರ್ಗದಿಂ ಬಿದ್ದ ತುಂತುರಂತೆ

ಸೃಷ್ಟಿ ದೇವಿಯ ಮಡಿಲೊಳಿಷ್ಟಸುಖಗಳ ಪಡೆದು

ಬಿದ್ದೆಡೆಯೊಳಾರಿಕಣ್ಮರೆಯಪ್ಪೆವು.

(ಹೊಸಗನ್ನಡ ಕಾವ್ಯಶ್ರೀ ಕೃತಿಯಿಂದ ಆರಿಸಿದ ಕವನ)