‘ಹೊಸಗನ್ನಡ ಕಾವ್ಯಶ್ರೀ (ಭಾಗ ೩೨) - ಬಿ ಎಚ್ ಶ್ರೀಧರ್

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ಒಂದರಲ್ಲಿ ಕೆಲಸ. ಎ.ಆರ್. ಕೃಷ್ಣಶಾಸ್ತ್ರಿ, ಎ.ಎನ್. ನರಸಿಂಹಯ್ಯ, ಸಿ.ಆರ್. ನರಸಿಂಹಶಾಸ್ತ್ರಿಗಳ ನೆರವಿನಿಂದ ಓದಿ ಎಂ.ಎ. ಪದವಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ. ಹದಿನಾಲ್ಕನೇ ವಯಸ್ಸಿನಲ್ಲಿ ಪದ್ಯ ಬರೆದು ಸೈ ಎನ್ನಿಸಿಕೊಂಡವರು.
ಅವರ ಮೊದಲ ಕವನ ಸಂಕಲನ ಮೇಘನಾದ, ನಂತರ ಕನ್ನಡ ಗೀತ, ಅಮೃತಬಿಂದು, ಮಂಜುಗೀತ, ರಸಯಜ್ಞ ಮುಂತಾದುವು. ವಿಮರ್ಶೆ- ಬೇಂದ್ರೆ, ಹೊಸಗನ್ನಡ ಸಾಹಿತ್ಯ ಶೈಲಿ, ಕವೀಂದ್ರ ರವೀಂದ್ರ, ಕಾವ್ಯಸೂತ್ರ, ಪ್ರತಿಭೆ, ಸಂಸ್ಕೃತ ಕನ್ನಡಗಳ ಬಾಂಧವ್ಯ. ವಿನೋದ-ವಿಡಂಬನೆ-ಬೇತಾಳ ಕುಣಿತ, ಭಾಷಣ ಭೈರವರ ಒಡ್ಡೋಲಗ. ವೈಚಾರಿಕ ಕೃತಿಗಳು-ಭಾರತೀಯ ವಾಙ್ಞಯ, ಸ್ವಾತಂತ್ರ ಮೀಮಾಂಸೆ, ಮಾತೃಶ್ರೀ, ವೇದ ರಹಸ್ಯ, ನೆಹರೂ ಉವಾಚ, ರಮಣ ಮಾರ್ಗ, ಕಾಳಿದಾಸನ ಕಾವ್ಯ ಸೌರಭ ಮುಂತಾದುವಲ್ಲದೆ ಯಕ್ಷಗಾನ, ಸಂಪಾದಿತ, ನಾಟಕ, ಆತ್ಮಕಥೆ, ಇತಿಹಾಸ ಕೃತಿ ರಚನೆ. ಸಂದ ಪ್ರಶಸ್ತಿ ಗೌರವಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ತೀನಂಶ್ರೀ ಸ್ಮಾರಕ ಬಹುಮಾನ, ಮೈಸೂರು. ವಿ.ವಿ. ಸುವರ್ಣ ಮಹೋತ್ಸವ, ಮೂರು ಸಾವಿರ ಮಠ ಹುಬ್ಬಳ್ಳಿ, ಲೋಕ ಶಿಕ್ಷಣ ಟ್ರಸ್ಟ್, ಕೇಂದ್ರ ಸರಕಾರದ ರಕ್ಷಣಾ ಶಾಖೆ, ದೇವರಾಜ ಬಹದ್ದೂರ್ ಬಹುಮಾನಗಳು, ಹಲವಾರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆ. ತಂದೆಯ ಹೆಸರನ್ನು ಶಾಶ್ವತಗೊಳಿಸುವಲ್ಲಿ ಮಗ ರಾಜಶೇಖರ ಹೆಬ್ಬಾರರು ಇತರರೊಡಗೂಡಿ ಬಿ.ಎಚ್. ಶ್ರೀಧರ ಪ್ರಶಸ್ತಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಉತ್ತಮ ಕೃತಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಿದ್ದಾರೆ.
ಬಿ ಎಚ್ ಶ್ರೀಧರ್ ಅವರ ಎರಡು ಕವನಗಳು ‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಲ್ಲಿವೆ. ಇದರಲ್ಲಿನ ಒಂದು ಕವನವನ್ನು (ನರನಾದೆನೇಕೆ) ನಾವು ಈಗಾಗಲೇ ಪ್ರಕಟಿಸಿದ್ದೇವೆ. ಅವರ ಇನ್ನೊಂದು ಕವನ ನಿಮ್ಮ ಓದಿಗಾಗಿ…
ಯುದ್ಧಾಯ ಯುಜ್ವಸ್ವ
ಎಲೈ ಹೃದಯ ನಿನ್ನ ಕಳವಳವ ಕಂಡು ನಗೆ
ಬರುವುದೆನಗೆ ಬಹಳ
ಎಲೆಲೇ ಎಂಥ ಮೃದು ಕುಸುಮವಾದೆ, ನೀ
ನಹಹ ! ಏನು ಸರಳ !
ಇದು ಏನು ದುಗುಡ ಮತ್ತೇನು ಮರುಕ
ಇದು ಯಾವ ಬಗೆಯ ನಡುಕ?
ಹೆಣ್ಣಾದೆಯೇನು, ಹುಣ್ನಾದೆಯೇನು? ತೆಗೆ
ನೂಕು ಇಂಥ ತೊಡಕ !
ಹುಲ್ಲಿಂಗೆ ಹೆದರುವರೆ ಸಾಕು ಸಾಕು ಮೇ
ಲೆತ್ತು ವಜ್ರಹಸ್ತ.
ಕಲ್ಲನ್ನೆ ನುಂಗಿ ನೀರ್ಕುಡಿದ ಬಂಟನಿಗು
ಕಲಿಸಬಹುದು ಶಿಸ್ತ!
ಮೂರ್ಖರಿಗೆ ಎತ್ತಿದರೆ ಮತ್ತೆದೇವನಿನ-
ಗೇಕೆ ಮುಷ್ಟಿಯಿತ್ತ?
ನೂರ್ಕಾಲ ಬದುಕಿ ಫಲವೇನು, ಹೇಡಿ ತಾ-
ನಿದ್ದು ಇದ್ದು ಸತ್ತ !
ಬದುಕಿನಲಿ ಬದುಕಬೇಕೆಂಬ ಬಯಕೆಯಿರಿ
ಆಗು ಶೂಲಪಾಣಿ -
ಎದುರಿಸುವ ಕುಜ್ಞತಾಮರಸನಿರಿದು ಕೊ
ಲ್ಲೆಂಬುದಮರವಾಣಿ
ವಿಧವಾದ ಶರಣತೆಯ ನಂಬಬೇಡ, ನಡೆ
ತಿಳಿವನೀಂಟ ತೇಗು-
ಅಧಿಕಾರದಿಂದ ಭಯವೃತ್ರವನ್ನು ಆರಿ-
ದೊಗೆದು ಇಂದ್ರನಾಗು !
ಈ ಆತ್ಮ ತಾನು ಬಲಹೀನ ಲಭ್ಯನ-
ಲ್ಲೆಂಬುದರಿಯೆಯೇನು?
ಕ್ಷುದ್ರಾತ್ಮರೆಂದುದಕ್ಕೆ ಹೆದರಿ ನಡೆಯ
ಧೀಶಕ್ತಿ ಸತ್ತಿತೇನು?
ಶ್ರೀಮಂತನಿಗಿಂತ ದುರ್ದಾಂತ ದೇಹಬಲ-
ವಂತನಾದರೇನು?
ಧೀಮಂತನಾಗಿ ವಿಕ್ರಾಂತ ಪಾದದಿಂ
ಮೆಟ್ಟಿ ಆಗುಭಾನು !
ಬಲು ಹೆದರಿಹೆದರಿ ನಡೆವಾತ ಸಾವನಕ
ಹೆದರಿ ಸಾಯಬೇಕು
ಮೈಮುದುರಿ ಕುಳಿತವನು ಮುದುರಿ ಮುದುರಿ ಮ-
ಣ್ಣಾಗಿ ಹೋಗಬೇಕು
ಈ ಪ್ರಕೃತಿಯನ್ನು ಗೆದ್ದಾಳ ಬಯಸುವಗೆ
ಪುರುಷಕಾರಬೇಕು ;
ಸ್ವಪ್ರಕೃತಿಯಾದ ದುರ್ದಮ್ಯತೇಜವನು
ಬೆಳಗಿ ತೋರಬೇಕು !
ಓದಿದೆಯ ಚಂದ್ರಹಾಸವನು ತುಡುಕು ತಡ
ಮಾಡಬೇಡ ಹೊಡು -
ಸಿಡಿದೆದ್ದು ಕಾಲದೀ ವಿರುದ್ಧ ಶಕ್ತಿಗಳ
ಕಡಿದು ಚೆಂಡನಾಡು !
ಪೈಶುನ್ಯ ಪಶುವನಾಶ್ರಯಿಸಲೇನು ಶನಿ
ತಾಗಿತೇನು ನಿನಗೆ?
ಬರಿಶೂನ್ಯವಲ್ಲದಿನ್ನೇನು ಸಿಕ್ಕದೈ
ಮಾಡಲಂತೂ ಕೊನೆಗೆ !
ಹಿಡಿಕೊಡುವ ವೀಳ್ಯ ‘ಯುದ್ಧಾಯ ಹೃದಯ
ಯುಜ್ವಸ್ವ' ದೈನ್ಯಬೇಡ-
ನಡೆ ಇರುವ ನಾನು ಮತಿಕೃಷ್ಣ ಕಾರ್ಯರಥ
ಮಡೆಸಲೀಗ ನೋಡ!
(‘ಹೊಸಗನ್ನಡ ಕಾವ್ಯಶ್ರೀ’ ಕೃತಿಯಿಂದ ಆಯ್ದ ಕವನ)