’ಚಿಕಾಗೋನಗರದ, ಸಿಯರ್ಸ್ ಟವರ್’ !

’ಚಿಕಾಗೋನಗರದ, ಸಿಯರ್ಸ್ ಟವರ್’ !

ಬರಹ

’ಅಕ್ಕ ವಿಶ್ವಕನ್ನಡ ಸಮ್ಮೇಳನ’, ಮುಗಿಸಿ, ನಡೆದೇ ಚಿಕಾಗೋ ನಗರದ ಲೋಕಲ್ ರೈಲು ನಿಲ್ದಾಣ ತಲುಪಿದೆವು. ಅಲ್ಲಿಂದ ಡೌನ್ ಟೌನ್ ಗೆ ಹೋಗಿ, ಕ್ಯಾಬ್ ತೆಗೆದುಕೊಂಡು ಸಿಯರ್ಸ್ ಟವರ್ ಹತ್ತಿರ ಇಳಿದೆವು. ನನ್ನ ತಮ್ಮನಮಗಳು ಆಗಲೇ ಅಲ್ಲಿ ನಮಗಾಗಿಕಾದಿದ್ದಳು. ಅವಳು ಚಿಕಾಗೋ ನಗರದ ಪ್ರಖ್ಯಾತ ’ನಾರ್ತ್ ವೆಸ್ಟ್ ಯೂನಿವರ್ಸಿಟಿ’ ಯಲ್ಲಿ ’ಜರ್ನಲಿಸಂ’ ಅಭ್ಯಾಸಮಾಡುತ್ತಿದ್ದಾಳೆ.

ಚಿಕಾಗೋ ನಗರಕ್ಕೆ ಬಂದು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಯಿತ್ತಮೇಲೆ ಅಲ್ಲಿನ ಭಾರತೀಯ ರೆಸ್ಟಾರೆಂಟ್ ಒಂದಕ್ಕೆ ಹೋದೆವು. ಉತ್ತರಭಾರತೀಯ ಊಟದ ವ್ಯಂಜನಗಳು ಅಲ್ಲಿನ ಊರಿನವರಿಗೆ ಬಹು-ಪ್ರಿಯ. ನಮಗೆ ಟೇಬಲ್ ಸಿಗಲು ಸ್ವಲ್ಪ ಸಮಯ ಲಾಬಿಯಲ್ಲಿ ಕಾಯಬೇಕಾಯಿತು. ಅಮೆರಿಕನ್ನರಿಗೆ ಚೈನೀಸ್ ಹಾಗೂ ಭಾರತೀಯ ಊಟೋಪಚಾರಗಳು ಅತಿಪ್ರಿಯವಂತೆ. ’ಹ್ಯಾಂಬರ್ಗರ್’, ’ಪೀಝ,’ ಗಳಂತೂ ಗಲ್ಲಿಗಲ್ಲಿಗಳಲ್ಲಿ ಸಿಗುತ್ತವೆ. ’ಮ್ಯಾಗ್ಡೊನಾಲ್ಡ್ ಹೋಟೆಲ್ ಗಳು ಅತಿಜನಪ್ರಿಯ. ಅಲ್ಲಿ ದೊರೆಯುವ ಕಾಫಿ-ಟೀಯಾಗಲೀ ಜ್ಯೂಸ್, ಐಸ್ ಕ್ರೀಂ ಗಳಾಗಲೀ ಪ್ರಮಾಣದಲ್ಲಿ ವಿಪರೀತ. ಕಾಫಿ ರುಚಿಯಂತೂ ದೇವರಿಗೇ ಪ್ರೀತಿ ! ಅಲ್ಲಿ ನಮ್ಮ ಒನ್ ಬೈಟೂ, ಫೋರ್ ಬೈ ಫೈವ್ ಇತ್ಯಾದಿ ವಿಚಾರ ಯಾರಿಗೂ ಪ್ರಿಯವಾಗುವುದಿಲ್ಲ.

'ಸಿಯರ್ಸ್ ಟವರ್,’ ೧೯೭೪-೧೯೯೮ ರ ವರೆಗೆ ಅನಭಿಶಕ್ತ ದೊರೆಯಂತೆ ವಿಶ್ವದಲ್ಲಿ ಅತಿ-ಎತ್ತರದ ಕಟ್ಟಡವೆಂದು ಹೆಸರುಪಡೆದಿತ್ತು. ಈ ಗಗನಚುಂಬಿತ ಆಕಾಶವನ್ನೇರಿದ ಕಟ್ಟಡ, ಇಲಿನಾಯ್ ರಾಜ್ಯದ, ಚಿಕಾಗೋನಗರದ ಶೋಭೆಯನ್ನು ೧೯೭೩ ರಿಂದಲೂ ಬೆಳಗುತ್ತಾಬಂದಿದೆ. ಮೊದಲೇ ನ್ಯೂಯಾರ್ಕ್ ನಗರದಲ್ಲಿ ಕಟ್ಟಿದ್ದ ’ವರ್ಲ್ಡ್ ಟ್ರೇಡ್ ಸೆಂಟರ್,’ ’ಎಂಪೈರ್ ಸ್ಟೇಟ್ ಬಿಲ್ಡಿಂಗ್,’ ಕಟ್ಟಡಗಳ ಎತ್ತರವನ್ನೂಮೀರಿಸಿ ತಲೆಯೆತ್ತಿನಿಂತಿದ್ದ, ’ಸಿಯರ್ಸ್ ಟವರ್,’ ಸಿಯರ್ಸ್ ರೋಬೆಕ್ ಕಂಪೆನಿಯ ವತಿಯಿಂದ ನಿರ್ಮಾಣಮಾಡಲಾಯಿತು.

ಬ್ರೂಸ್ ಗ್ರಹಾಮ್ ರವರು, ಪ್ರಮುಖ ಶಿಲ್ಪಕಾರರಾದರೆ, ಸ್ಟ್ರಕ್ಚರಲ್ ಇಂಜಿನಿಯರ್, ಸ್ಕಿಡ್ಮೋರ್ ನ ಫಝ್ಲೂರ್ ಖಾನ್ ಮತ್ತು ಓಇಂಗ್ಸ್ ಅಂಡ್ ಮೆರಿಲ್. ಕೆಲಸಆರಂಭವಾಗಿದ್ದು, ಆಗಸ್ಟ್, ೧೯೭೦, ಮೇ, ೩, ೧೯೭೩ ರ ಹೊತ್ತಿಗೆ ಅಂತಿಮ ಹಂತವನ್ನು ತಲುಪಿತ್ತು. ೧೦೮ ಮಹಡಿಗಳಿವೆಯೆಂದು ತಿಳಿದುಬಂದಿದೆ ಆದರೆ, ಕೆಲವು ಅಂಕಿ-ಅಂಶಗಳ ಪ್ರಕಾರ, ಮಹಡಿಗಳ ಸಂಖ್ಯೆ ೧೦೯ ಎಂದು ಅದರ ಮಾಲೀಕರ ಅಭಿಮತ. ’ಮೆಕ್ಯಾನಿಕಲ್ ಪೆಂಟ್ ಹೌಸ್’ ಲೆಕ್ಕಕ್ಕೆ ತೆಗೆದುಕೊಂಡರೆ, ಅದರ ಸಂಖ್ಯೆ ೧೧೦ ಕ್ಕೆ ಏರುತ್ತದೆ. ಒಟ್ಟು ಭೂಮಿಯ ಮಟ್ಟದಿಂದ ೧,೪೫೦ ಅಡಿ(೪೪೨ ಮೀ), ಪೂರ್ವದಿಕ್ಕಿನ ಒಳ-ಬಾಗಿಲಿನಿಂದ ಹೋದ ಫ಼ೆಬ್ರವರಿ, ೧೯೮೨ ರಲ್ಲಿ ಎರಡು ಆಂಟೆನ್ನಾ ಟವರ್ ಗಳನ್ನು ಕಟ್ಟಡ ಮೇಲಿನ ಭಾಗಕ್ಕೆ ಜೋಡಿಸಲಾಯಿತು.

ಭೂಮಿಯಿಂದ ’ಸಿಯರ್ಸ್’ ನ ಎತ್ತರ ೧,೭೦೫ ಅಡಿ (೫೨೦ ಮೀ) ಪಶ್ಚಿಮದಲ್ಲಿ ಪುನಃ ಒಂದು ಆಂಟೆನ್ನವನ್ನು ಸೇರಿಸಬೇಕಾಗಿಬಂತು. ಪ್ರಾದೇಶಿಕ 'ಎನ್. ಬಿ. ಸಿ', ಟೀವಿ ಸ್ಟೇಷನ್ ನ ಕಾರ್ಯಕ್ರಮಗಳನ್ನು ಉತ್ತಮಪಡಿಸುವ ದೃಷ್ಟಿಯಿಂದ ಜೂನ್, ೫, ೨೦೦೦ ರಲ್ಲಿ ಜೋಡಿಸಿ ಉತ್ತಮಪಡಿದರು.

ಆಗಸ್ಟ್, ೧೨, ೨೦೦೭, ರಂದು, ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದಲ್ಲಿ ನಿರ್ಮಿಸಿದ್ದ, ’ಬುರ್ಜ್ ದುಬಾಯ್’ ಎಂಬ ಬೃಹತ್ ಕಟ್ಟಡ, 'ಸಿಯರ್ಸ್ ಟವರ್’ ನ ದಾಖಲೆಗಳನ್ನು ಮುರಿದು ಹೊಸ ವಿಕ್ರಮವನ್ನು ಸ್ಥಾಪಿಸಿತು.