’ಶ್ರೀ ಶ್ರೀ’ ಬಗ್ಗೆ ಕೆಲವು ಪ್ರಶ್ನೆಗಳು
(ಈ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ತೆಗೆದುಕೊಂಡರೆ ನನ್ನ ಆಕ್ಷೇಪವಿಲ್ಲ.)
ಎಲ್ಲಿಂದಲೋ ತೂರಿಬಂದ ಗುಂಡಿಗೆ
ಅದಿರಿತು ರವಿಶಂಕರರ ಗುಂಡಿಗೆ
ಶ್ವಾನಪುರಾಣ ಕೇಳಿದಮೇಲೆ
ಮರಳಿತು ಅವರ ಮುಖದ ಕಳೆ
ಅದುವರೆಗೂ ನಗುತ್ತಿದ್ದರೂ ಅವರು
ಕಳವಳ ಸ್ಫುಟವಾಗಿತ್ತು ಮುಖದಲ್ಲಿ
ನಿಜ ತಿಳಿಸಿದರಲ್ಲ ಪೋಲೀಸರು
ಆಗ ಮೂಡಿತು ನೈಜ ನಗು ಅಲ್ಲಿ
ಶ್ರೀ ಶ್ರೀಗಳ ಈ ಅವಸ್ಥೆ ಗಮನಿಸಿದಾಗ
ನನ್ನನ್ನೊಂದು ಪ್ರಶ್ನೆ ಕಾಡುತ್ತಿದೆ ಈಗ:
ಆರ್ಟ್ ಆಫ್ ಲಿವಿಂಗ್ ಕಲಿಸುವವರೇ
ಬದುಕುವ ಕಲೆಯನ್ನು ಅರಿಯರೇ?!
ಇನ್ನೂ ಕೆಲವು ಪ್ರಶ್ನೆಗಳು:
* "ಗುಂಡು ಹಾರಿಸಿದವರು ನಮ್ಮ ’ಸತ್ಸಂಗ’ ಕಾರ್ಯಕ್ರಮಕ್ಕೆ ಸೇರಲಿ. ಅವರ ಮನಃಪರಿವರ್ತನೆ ಮಾಡುತ್ತೇನೆ", ಎಂದಿದ್ದರು ಶ್ರೀಗಳು, ಕ್ಷಮಿಸಿ, ಶ್ರೀ ಶ್ರೀಗಳು. ಈಗ ಅವರು ಮಹದೇವಪ್ರಸಾದರ ಮನಃಪರಿವರ್ತನೆ ಮಾಡುತ್ತಾರೆಯೇ? ಅಥವಾ ಆ ನಾಯಿಗಳ ಮನಃಪರಿರ್ತನೆ....?
* ಪ್ರಕರಣ ತಿಳಿಗೊಳಿಸಿದ ಪೋಲೀಸರಿಗೆ "ಅಭಿನಂದನೆಗಳು" ಎಂದು ಹೇಳಲು ಹೊರಟ ಶ್ರೀ ಶ್ರೀ ಶ್ರೀಗಳು, ಕ್ಷಮಿಸಿ, ಶ್ರೀ ಶ್ರೀಗಳು ’ಅಭಿನಂದನೆ’ ಪದವನ್ನು ಅರ್ಧಕ್ಕೇ ಕ್ಯಾನ್ಸಲ್ ಮಾಡಿ, "ಆಶೀರ್ವಾದಗಳು" ಎಂದರು. ಪೋಲೀಸರು ಇವರ ಆಶೀರ್ವಾದ ಬೇಡಿದ್ದರೇ? ಹೌದಾದರೆ ಸರಿ; ಇಲ್ಲವಾದರೆ, ಬೇಡಿರದವರಿಗೆಲ್ಲ ಆಶೀರ್ವಾದ ನೀಡುವ ಅಧಿಕಾರ ಸ್ವಯಂಘೋಷಿತ ಗುರುವಾಗಿರುವ ರವಿಶಂಕರರಿಗೆ ಎಲ್ಲಿದೆ?
* ಆಶ್ರಮದೊಳಗೆ ಗುಂಡು ಹಾರಿಬಂದರೂ ಅಲ್ಲಿ ಗಲಾಟೆಗೆ ಆಸ್ಪದ ನೀಡದೆ, ಪ್ರಪಂಚದಲ್ಲಿ ಎಲ್ಲೂ ತಮ್ಮ ಭಕ್ತಕೋಟಿಯು ಹಿಂಸಾಚಾರಕ್ಕಿಳಿಯದಂತೆ ನೋಡಿಕೊಂಡು, ತಾವೂ ಗುಂಡುಕಲ್ಲಿನಂತೆ ಗಟ್ಟಿಯಾಗಿ ನಿಂತು ಗುಂಡಿನ ಪ್ರಕರಣವನ್ನು ಶಾಂತವಾಗಿ ತಿಳಿಗೊಳಿಸಿದ್ದಕ್ಕಾಗಿ ಶ್ರೀ ಶ್ರೀ ಅವರು ಈ ಸಲದ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಲ್ಲವೆ?