’ಸಂಸ್ಕೃತದಲಿನ್ನೇನು?’ ಎಂದ ಕವಿ ಮಹಲಿಂಗರಂಗ

’ಸಂಸ್ಕೃತದಲಿನ್ನೇನು?’ ಎಂದ ಕವಿ ಮಹಲಿಂಗರಂಗ

ಬರಹ

  ’ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ, ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ, ಸಂಸ್ಕೃತದಲಿನ್ನೇನು?’

  ಹೀಗೆ ಕನ್ನಡನುಡಿಯ ಹಿರಿಮೆಯನ್ನು ೧೭ನೆಯ ಶತಮಾನದಲ್ಲೇ ಸಾರಿದ ಮಹಾನ್ ಕವಿ ಮಹಲಿಂಗರಂಗ.
 
  ೧೨ನೆಯ ಶತಮಾನದಿಂದ ಕನ್ನಡ ನೆಲದಲ್ಲಿ ವೀರಶೈವ ಪರಂಪರೆ ಮತ್ತು ಆ ಮತಧರ್ಮದ ಸಾಹಿತ್ಯ ಬೆಳಗತೊಡಗಿತು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅದು ಇನ್ನಷ್ಟು ಶೋಭಾಯಮಾನವಾಯಿತು. ಅದೇ ವೇಳೆ ’ಕೈವಲ್ಯ ಸಾಹಿತ್ಯ’ವೆಂಬ ಸಾಹಿತ್ಯ ಪ್ರಕಾರವು ಆರಂಭವಾಯಿತು. ಅದ್ವೈತ ಸಿದ್ಧಾಂತದ ಬೆಳಕಿನಲ್ಲಿ ಆಧ್ಯಾತ್ಮಿಕ ಜಿಜ್ಞಾಸೆ ’ಕೈವಲ್ಯ ಸಾಹಿತ್ಯ’ದ ಮುಖ್ಯಸ್ರೋತವಾಗಿತ್ತು. ಪರಮಾರ್ಥಸಾಧನೆಯ ಮಾರ್ಗದ ಶೋಧವೇ ’ಕೈವಲ್ಯ ಸಾಹಿತ್ಯ’ದ ಉದ್ದೇಶವಾಗಿತ್ತು. ’ಭಕ್ತಿಮಾರ್ಗ’ಕ್ಕಿಂತ ಭಿನ್ನವಾದ ’ಜ್ಞಾನಮಾರ್ಗ’ಕ್ಕೆ ಒತ್ತು ನೀಡಿದ ಸಾಹಿತ್ಯ ಈ ’ಕೈವಲ್ಯ ಸಾಹಿತ್ಯ’.

  ವೀರಶೈವ ತತ್ತ್ವವನ್ನು ಅದ್ವೈತ ಸಿದ್ಧಾಂತದೊಡನೆ ಸಮನ್ವಯಗೊಳಿಸಿ ಅರ್ಥೈಸಲೆತ್ನಿಸಿದ ನಿಜಗುಣ ಶಿವಯೋಗಿಗಳು ೧೫ನೆಯ ಶತಮಾನದಲ್ಲಿ ’ಕೈವಲ್ಯ ಸಾಹಿತ್ಯ’ಕ್ಕೆ ಶ್ರೇಷ್ಠ ಕೊಡುಗೆ ಸಲ್ಲಿಸಿದರು. ಈ ಸಾಹಿತ್ಯಪ್ರಕಾರದಲ್ಲಿ ಅನಂತರದ ಮಹತ್ತರ ಕೊಡುಗೆ ೧೭ನೆಯ ಶತಮಾನದ ಕವಿ ಮಹಲಿಂಗರಂಗನದು. ನಿಜಜೀವನದ ಅನುಪಮ ಉಪಮೆಗಳಿಂದ ಕೂಡಿದ ಷಟ್ಪದಿಗಳ ಮೂಲಕ ಮಹಲಿಂಗರಂಗ ಕವಿಯು ತನ್ನ ’ಅನುಭವಾಮೃತ’ ಕೃತಿಯಲ್ಲಿ ಆದಿಶಂಕರರ ಅದ್ವೈತ ತತ್ತ್ವವನ್ನು ಪ್ರಸ್ತುತಪಡಿಸಿರುವ ಬಗೆ ಅನನ್ಯವಾದುದಾಗಿದೆ. ಈ ಕೃತಿಯು ಕನ್ನಡದ ಶ್ರೇಷ್ಠ ಕೃತಿಗಳಲ್ಲೊಂದೆಂದು ಹೇಳಬಹುದಾಗಿದೆ.
 
  ’ಮಹಲಿಂಗರಂಗ - ಒಂದು ಅಧ್ಯಯನ’ ಮಹಾಪ್ರಬಂಧಕ್ಕಾಗಿ ಪ್ರೊ. ಗುರುಪಾದ ಘಿವಾರಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ೨೦೦೯ರ ಜನವರಿಯಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.

  ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕವು ಗೌರಮ್ಮ ಪಿ. ರಾಮರಾವ್ ದತ್ತಿನಿಧಿಯಡಿ ’ಮಹಲಿಂಗರಂಗ ಸಾಹಿತ್ಯ ಪ್ರಶಸ್ತಿ’ಯನ್ನು ೨೦೦೨ನೇ ಇಸವಿಯಿಂದ ಪ್ರತಿವರ್ಷ ನೀಡುತ್ತಬಂದಿದೆ. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಮತ್ತು ಜಿಲ್ಲೆಯವರಾದ ಸಾಹಿತಿಗಳಿಗೆ ಈ ಪ್ರಶಸ್ತಿ ಸಲ್ಲುತ್ತದೆ. ಇಂದು ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಇತರ ಅನೇಕ ಪ್ರಶಸ್ತಿಗಳಂತಲ್ಲದ ಈ ಪ್ರಶಸ್ತಿಗೆ ಅರ್ಹರನ್ನು ಸಾಹಿತ್ಯ ಪರಿಷತ್ತು ರಚಿಸುವ ಆಯ್ಕೆ ಸಮಿತಿಯು ನಿರ್ಧರಿಸುತ್ತದೆ. ಅನಂತರ ಪರಿಷತ್ತು ಸರ್ವಾನುಮತದಿಂದ ನಿರ್ಧಾರವನ್ನು ಸ್ವೀಕಾರ ಮಾಡುತ್ತದೆ. ಯಾವುದೇ ಅರ್ಜಿ, ಆಮಿಷ, ವಶೀಲಿಬಾಜಿಗಳಿಂದ ಹೊರತಾಗಿರುವ ಈ ಪ್ರಶಸ್ತಿಯು ಅಪ್ಪಟ ಗುಣಗ್ರಾಹಿಯಾಗಿದೆ. ವೃತ್ತಪತ್ರಿಕೆಗಳ ಸ್ಥಾನಿಕ ಆವೃತ್ತಿ ಮತ್ತು ಸ್ಥಳೀಯ ಪುಟಗಳೆಂಬ (ಅ)ವ್ಯವಸ್ಥೆಯಿಂದಾಗಿ ಈ ಪ್ರಶಸ್ತಿಗೆ ವ್ಯಾಪಕ ಪ್ರಚಾರ ಸಿಕ್ಕಿಲ್ಲ, ಅಷ್ಟೆ.

  ಕಳೆದ ಏಳು ವರ್ಷಗಳಲ್ಲಿ ಕ್ರಮವಾಗಿ ಲಲಿತಮ್ಮ ಡಾ. ಚಂದ್ರಶೇಖರ್, ಮುದೇನೂರು ಸಂಗಣ್ಣ, ಬಿದರಹಳ್ಳಿ ನರಸಿಂಹಮೂರ್ತಿ, ಕುಂ.ಬಾ. ಸದಾಶಿವಪ್ಪ, ಬಿ.ವಿ. ವೀರಭದ್ರಪ್ಪ, ಶ್ರೀನಿವಾಸ ಸುತ್ರಾವೆ ಮತ್ತು ಟಿ. ಗಿರಿಜ ಇವರು ಗಳಿಸಿರುವ ಈ ಪ್ರಶಸ್ತಿಯು ಈ ಬಾರಿ (೨೦೦೯ನೇ ಸಾಲಿಗೆ) ಈ ಲೇಖಕನಿಗೆ ಸಂದಿದೆ.

 ( ’ಸಂಪದ’ದ ಅನೇಕ ಮಿತ್ರರು ನನಗೆ ಮಿಂಚಂಚೆ ಕಳಿಸಿ ಮಾಹಿತಿ ಬಯಸಿದ್ದರಿಂದಾಗಿ ಇವಿಷ್ಟು ವಿವರಗಳು. ಸಂಪದಿಗರಿಗೆ ಸುದ್ದಿ ತಿಳಿಸಿದ ಲೋಹಿತ್ ಮತ್ತು ’ಸಂಪದ’ದಲ್ಲಿ ಕವನಾಭಿನಂದನೆ ಸಲ್ಲಿಸಿದ ಆತ್ರಾಡಿ ಸುರೇಶ್ ಹೆಗ್ಡೆ ಮೊದಲ್ಗೊಂಡು, ಪ್ರತಿಕ್ರಿಯಿಸಿ ಅಭಿನಂದಿಸುತ್ತಿರುವ ಎಲ್ಲ ಸಂಪದಿಗ ಮಿತ್ರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

  -ಎಚ್. ಆನಂದರಾಮ ಶಾಸ್ತ್ರೀ)