’ಸ್ಯಾನ್ ಬಾರ್ನ್ -ಮೆಕ್ಕೆಜೋಳದ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !

’ಸ್ಯಾನ್ ಬಾರ್ನ್ -ಮೆಕ್ಕೆಜೋಳದ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !

ಬರಹ

'Sanborn Agricultural Experiment Farm’ (UMC). Columbia.

ಕೊಲಂಬಿಯಾನಗರದ ಮಿಸ್ಸೂರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಸ್ಥಾಪಿಸಲ್ಪಟ್ಟ ’ ಸ್ಯಾನ್ ಬರ್ನ್ ಕೃಷಿ ಪ್ರಾಯೋಗಿಕಾ ಹೊಲ,’ ವಿದೆ. ಇದು ಅಸ್ತಿತ್ವಕ್ಕೆ ಬಂದಿದ್ದು ೧೮೮೮ ರಲ್ಲಿ. ಅಮೆರಿಕದಲ್ಲೇ ಪ್ರಪ್ರಥಮವಾಗಿ ಮಣ್ಣಿನ ಕೊಚ್ಚಿಕೊಂಡುಹೋಗುವಿಕೆ, ಪ್ರತಿಬೆಳೆಯಲ್ಲೂ ಅದಕ್ಕೆ ಬೇಕಾದ ಸಮಯವನ್ನು ನಿರ್ಧರಿಸಿ ಬಿತ್ತನೆ, ಕಟಾವುಮಾಡುವ ಪದ್ಧತಿಗಳ ಅಭ್ಯಾಸ, ಮತ್ತು ಬೇಸಾಯದಲ್ಲಿ ಅವಲಂಭಿಸಬೇಕಾದ ಕೆಲವೊಂದು ನಡುವಳಿಕೆಗಳು ಇತ್ಯಾದಿಗಳನ್ನು ತಿಳಿಯುವಸಲುವಾಗಿ ಅನುಸಂಧಾನವನ್ನು ಮಾಡುವ ಪ್ರಯತ್ನ ಶುರುವಾದದ್ದೇ ಈ ಜಾಗದಲ್ಲಿ ! ’ಸಾಯಿಲ್ ಕನ್ಸರ್ವೇಶನ್,’ ಪಾಲಿಸಿಯನ್ನು ಜಾರಿಗೆತಂದು ಸುವ್ಯವಸ್ಥಿತಗೊಳಿಸಿದ ವಿಶೇಷತೆಗೆ ಇದು ಪ್ರಸಿದ್ಧಿಯಾಗಿತ್ತು. ದೇಸಿ-ಗೊಬ್ಬರ, ರಸಗೊಬ್ಬರಗಳ ಮೇಲೆ ಸಂಶೋಧನೆಗಳು ನಡೆದವು. ೧೯೧೪ ರಲ್ಲಿ ರಸಗೊಬ್ಬರಗಳ ಬಳಕೆಗೆ ಹೆಚ್ಚಿನ ಗಮನಹರಿಸಲಾಯಿತು. ಆಹಾರ ಧಾನ್ಯಗಳ ಗುಣಸಂವರ್ಧನೆ, ಹಾಗೂ ಹೆಚ್ಚು ಇಳುವರಿಯನ್ನು ಸಾಧಿಸುವ ನಿಟ್ಟಿನಲ್ಲಿ ಹಲವಾರು ಮೂಲ ಪ್ರಯೋಗಗಳನ್ನು ಈ ಹೊಲದಲ್ಲಿ ಮಾಡಲಾಯಿತು. ಈ ಪ್ರಾಯೋಗಿಕ ಕೃಷಿಕ್ಷೇತ್ರವನ್ನು ಅದರ ಪ್ರಥಮ ನಿರ್ದೇಶಕರಾಗಿದ್ದ ’ಡಾ. ಸ್ಯಾನ್ ಬಾರ್ನ್,’ ರ ಗೌರವಾರ್ಥವಾಗಿ ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ. ಅಮೆರಿಕದ ಪ್ರಮುಖ ಬೆಳೆಯಾಗಿದ್ದ, ಮೆಕ್ಕೇಜೋಳದ ಫಸಲನ್ನು (Corn) ಉತ್ತಮಪಡಿಸುವ ಗುರಿಯಿಂದಲೇ ಸ್ಥಾಪಿಸಲ್ಪಟ್ಟ ಹೊಲವಿದು. ಅಂದಿನದಿನಗಳಲ್ಲಿ ಅತಿಹೆಚ್ಚಿನ ತಂತ್ರಜ್ಞಾನ, ಹಾಗೂ ವೈಜ್ಞಾನಿಕ ಪದ್ಧತಿಗಳು ಲಭ್ಯವಾಗದಿದ್ದರೂ, ಸಸ್ಯ ಸಂರಕ್ಷಣೆ ಮತ್ತು ಸಸ್ಯಗಳಲ್ಲಿ ಅಧಿಕ ಉತ್ಪಾದನೆಯನ್ನು ಪಡೆಯಲು ಮಾಡಿದ ಪ್ರಯತ್ನಗಳು, ಕ್ರಮೇಣ ಆಹಾರಧಾನ್ಯಗಳ, ಎಣ್ಣೆಕಾಳುಗಳ, ಹತ್ತಿ, ಸೆಣಬು, ಮುಂತಾದ ವಸ್ತ್ರನಿರ್ಮಾಣವಲಯದಲ್ಲಿ ಇಂದು ನಾವುಕಾಣುವ ಪ್ರಚಂಡ ಉತ್ಪಾದನಾ ಸಾಮರ್ಥ್ಯಗಳಿಗೆ ನಾಂದಿಯಾಯಿತು. ತರಕಾರಿ, ಹಣ್ಣು-ಹಂಪಲುಗಳು ವರ್ಷವಿಡೀ ದೊರೆಯುವಂತಾದವು !

ವಿಶ್ವದ ಕೃಷಿಉತ್ಪಾದನೆಯಲ್ಲಿ ಆಧುನಿಕ ತಂತ್ರಜ್ಞಾನದಪಾತ್ರ !

೧೯೦೨ ರಲ್ಲಿ ’ಅಂಗಾಂಗಕೃಷಿ’ ಅಥವಾ ಅಭಿವೃದ್ಧಿ, ವಿಧಾನವನ್ನು ’ಹೇಬರ್ ಲ್ಯಾಂಡ್,’ ಎಂಬ ಜರ್ಮನ್ ವಿಜ್ಞಾನಿಯು, ಪ್ರತಿಯೊಂದು ಸಸ್ಯಜೀವಕೋಶವೂ ನಿರ್ದಿಷ್ಟ ಪೋಶಕಾಂಷಯುಕ್ತ ಮಾಧ್ಯಮದಮೇಲೆ ನಿಯಂತ್ರಿತ ವಾತಾವರಣದಲ್ಲಿ ಪೂರ್ಣಸಸ್ಯವಾಗಿಬೆಳೆಯಬಲ್ಲದು, ಎಂದು ಸಿದ್ಧಪಡಿಸಿದನು. (Theory of Toti Potency) ಈ ವಿಧಾನದ ಬಳಕೆಯಿಂದ ಲಕ್ಷಾಂತರ ’ಆರ್ಕಿಡ್’ ಗಳನ್ನು ಬೆಳೆಯಬಹುದೆಂದು, ’ಮೋರೆಲ್,’ ಎಂಬ ಫ್ರಾನ್ಸ್ ದೇಶದ ವಿಜ್ಞಾನಿ ೧೯೬೦ ರಲ್ಲಿ, ಕಂಡುಹಿಡಿದನು. ಹೀಗೆಯೇಮುಂದುವರೆದು, ವಿಶ್ವದ ಸಂಶೋಧಕರು ಬೇರೆ-ಬೇರೆ ಜಾತಿಯ ಸಸ್ಯಗಳನ್ನೂ, ಪುನರುತ್ಪಾದಿಸುವಲ್ಲಿ ಸಫಲರಾಗಿದ್ದಾರೆ. ಇದು ವಾಣಿಜ್ಯೋದ್ಯಮದ ಮಟ್ಟದಲ್ಲಿ ಬೆಳೆದು, ಭಾರತದಲ್ಲೂ ಅನೇಕ ಖಾಸಗೀಕಂಪೆನಿಗಳು ಸ್ಥಾಪಿಸಲ್ಪಟ್ಟಿವೆ.

ತದನಂತರದ ಕೃಷಿಯಲ್ಲಿ ಮಹತ್ವದ ಶೋಧನೆಗಳಿಗೆ ಈ ಕಾರ್ಯ ಸ್ಪೂರ್ತಿದಾಯಕವಾಯಿತು. ಮೆಕ್ಕೆಜೋಳದ ಬೆಳೆಯಮೇಲೆ ನಡೆಸಿದ ಪ್ರಯೋಗಗಳು ಬಹಳ ಯಶಸ್ವಿಯಾದವು. ಈಗ ಕೃಷಿಸಂಸಂಶೋಧನೆಯ ಕ್ಷೇತ್ರದಲ್ಲಿ ಹಲವಾರು ಮೈಲುಗಲ್ಲುಗಳುಸ್ಥಾಪನೆಯಾಗಿವೆ. ಜೈವಿಕ ಮಾಹಿತಿತಂತ್ರಜ್ಞಾನ, ಬಯೋಟೆಕ್ನಾಲಜಿ, ಸಸ್ಯ-ಪ್ರಾಣಿಕೋಶದ ಕಲ್ಚರ್, ಮ್ಯುಟೇಶನ್, ಬಿಟಿ ಟೆಕ್ನಾಲೊಜಿ, ಗಳು ತಳಿದಲ್ಲಿ ಹಾಗೂ ಉತ್ಪಾದನಾಕ್ಷೇತ್ರದಲ್ಲಿ ದಾಪುಗಾಲುಹಾಕಿ ಯಶಸ್ಸನ್ನು ಸ್ಥಾಪಿಸಿವೆ.

ಅಂಗಾಂಶ ಕೃಷಿ, ಟ್ರಾನ್ಸ್ ಜನಿಕ್ ಸಸ್ಯಗಳು, ಅನುವಂಶಿಕ ಅಭ್ಯಂತಿಕೆ, ಆಹಾರ ರಕ್ಷಣೆಯಲ್ಲಿ ಕಾಪಾಡುವ ವಿಧಾನಗಳಲ್ಲಿ ಬಳಸಲಾಗುತ್ತಿದೆ. ಆಹಾರವಿಕಿರಿಣಿಕರಣ ತಂಪಿಸುವಿಕೆ, ಜೈವಿಕ ತಂತ್ರಜ್ಞಾನವು ಕೃಷಿಯ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳವನ್ನು ತಂದಿದೆ. ಇದರ ವಿಭಾಗಗಳಲ್ಲಿ ಒಂದಾದ, ಸಸ್ಯ ಅಂಗಾಂಗ ಕೃಷಿ, ಸಸ್ಯ ಅಂಗಾಂಗಕೃಷಿಯನ್ನು ಬೆಳಸಿದ ಟ್ರಾನ್ಸ್ ಜೆನಿಕ್ ಸಸ್ಯಗಳು ಕೃಷಿಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳನ್ನುತಂದಿವೆ. ಪ್ರಥಮ ಪ್ರಯತ್ನ, ’ಕಸಿಕಟ್ಟುವಿಕೆಯಿಂದ ಆರಂಭವಾಯಿತು. ಎರಡು ವಿವಿಧ ಸಸ್ಯಗಳನ್ನು ಸೇರಿಸಿಬೆಳೆಸಿದಾಗ ಆಗುವ ಮಾರ್ಪಾಡುಗಳಲ್ಲಿ ಹಲವು ಬೇಡದ ಗುಣಗಳೂ ಸೇರಿಬರುತ್ತಿದ್ದವು. ಸಮಯ ಅತಿವ್ಯಯವಾಗುತ್ತಿತ್ತು. ಜೈವಿಕತಂತ್ರಜ್ಞಾನ ಆ ಎಲ್ಲಾಎಲ್ಲೆಗಳನ್ನೂ ಮೀರಿ ತಲೆಯೆತ್ತಿನಿಂತಿದೆ.

ಬ್ರಿಟಿಷ್ ಸಸ್ಯವಿಜ್ಞಾನಿ, ಡಾ. ಡಬ್ಲ್ಯೂ. ಎಲ್. ಬಾಲ್ಸ್, ಈಜಿಪ್ಟ್ ನಹೊಲಗಳಲ್ಲಿ ಹಲವಾರು ವರ್ಷಗಳಕಾಲ ಹತ್ತಿಹೊಲಗಳಲ್ಲಿ ಅನುಸಂಧಾನಕ್ರಿಯೆಯನ್ನು ಮಾಡಿ ಗುಣಮಟ್ಟದಲ್ಲಿ ಸುಧಾರಣೆಯನ್ನುತಂದರು. ಇದಕ್ಕಿಂತ ಮೊದಲೇ, ಭಾರತದಲ್ಲಿ ವೈದ್ಯರಾಗಿ ನೌಕರಿಮಾಡುತ್ತಿದ್ದ ಸರ್ ಜಾರ್ಜ್ ವ್ಯಾಟ್ ಸನ್, ತಮ್ಮ ಕೆಲಸದಸಮಯದಲ್ಲೇ ನಡೆಸಿದ ಹತ್ತಿಬೆಳೆಯ ತಿಳುವಳಿಕೆಯ ಬಗ್ಗೆ ಕಲೆಹಾಕಿದ ಮಾಹಿತಿಗಳನ್ನೆಲ್ಲಾ ಒಂದು ಪುಸ್ತಕರೂಪದಲ್ಲಿ ಹೊರತಂದರು. ’'The Wild and cultivated Cotton Plants of the World,' [1907] ಮತ್ತು ಅವರು ಸಂಗ್ರಹಿಸಿದ ’ಹತ್ತಿ ಬೆಳೆ ನಿಘಂಟು,” ಬಹಳಕಾಲ ಯುವವಿಜ್ಞಾನಿಗಳ ಮಾರ್ಗದರ್ಶನಕ್ಕೆ ಹೆಸರಾಗಿತ್ತು.

ಸರ್ ಜಾರ್ಜ್ ವ್ಯಾಟ್ ಸನ್, ಜೋಸೆಫ್ ಹುಚಿನ್ಸನ್, ಡಾ. ಎಸ್. ಸಿ. ಹಾರ್ಲ್ಯಾಂಡ್, ಜೆ. ಒ. ಬೀಸ್ಲಿ, ಜಿ. ಎಸ್. ಝೈಟ್ ಝೇವ್, ಎನ್. ಐ. ವಾವ್ ಲೋವ್, ಟೀ. ಎಚ್.ಕಿಯರ್ನೆ, ಸ್ಕೋವ್ ಸ್ಟೆಡ್, ಜೆ. ಎಮ್. ವೆಬ್ಬರ್, ಡಾ. ಆರ್.ಎಲ್. ಎನ್.ಐಯಂಗಾರ್, ಸ್ಟೀಫ ನ್ಸ್, ಮೆನ್ಝೆಲ್, ಬ್ರೌನ್, ಗೆರ್ ಸ್ಟೆಲ್ , ಸರ್ವೆಲ್ಲ, ಫಿಲಿಪ್ಸ್, ಡಾ. ಸಿ. ಟಿ. ಪಟೇಲ್, ಫ್ರೈಕ್ಸೆಲ್, ಡಾ. ವಿ. ಸಂತಾನಮ್, ಡಾ. ಕಟಾರ್ಕಿ, ಡಾ. ಮುನ್ಷೀ ಸಿಂಗ್, ಇತ್ಯಾದಿ, ಮಹನೀಯರು ಹತ್ತಿಬೆಳೆಯ ಗುಣ-ಸುಧಾರಣೆಯಲ್ಲಿ ತಮ್ಮ ಅಪಾರ ಕೊಡುಗೆಯನ್ನು ಕೊಟ್ಟಿರುತ್ತಾರೆ.

ವಿಶ್ವದ ಹತ್ತಿತಳಿಗಳ ಗುಣಮಟ್ಟವನ್ನು ಉತ್ತಮಪಡಿಸಲು, "ದ ಸ್ಟಡಿ ಆಫ್ ದ ಎವೆಲ್ಯೂಶನ್ ಆಫ್ ಗಾಸಿಪಿಯಮ್ " ಎಂಬ ಒಂದು ಅಭಿಯಾನ ನಡೆಸಿದಾಗ, ೪ ಪ್ರಜಾತಿಹತ್ತಿಗಳನ್ನು ಗುರುತಿಸಿದರು. ಶರ್ಲಿ ಇನ್ಸ್ಟಿಟ್ಯೂಟ್ ನ ವಿಜ್ಞಾನಿ, ಡೆನ್ ಹಮ್, ನಡೆಸಿದಪ್ರಕಾರ, ಪುರಾತನಹತ್ತಿಬೆಳೆಯುವಸ್ಥಳದ ತಳಿಗಳು ೧೩ ಕ್ರೋಮೋಸೋಮ್ ಗಳನ್ನೂ ಹಾಗೂ ಆಧುನಿಕಪದ್ಧತಿಯಲ್ಲಿ ೨೬ ಕ್ರೋಮೋಸೋಮ್ ಗಳನ್ನೂ ಹೊಂದಿವೆಯೆಂದು ವರದಿಮಾಡಿದ್ದರು. ವಿಶ್ವದಲ್ಲೆಲ್ಲಾ ಬೆಳೆಯುತ್ತಿದ್ದ ಹತ್ತಿನಮೂನೆಗಳನ್ನು ಸಂಗ್ರಹಿಸಿ ಕೈಗೊಂಡ ಅಭ್ಯಾಸಗಳು ಸುಮಾರು ೫ ದಶಕಗಳೇ ಆದವು.

ಸಾಂಪ್ರದಾಯಿಕ ತಂತ್ರಜ್ಞಾನವು, ಯಾವುದೇ ವೈಜ್ಞಾನಿಕತತ್ವಗಳನ್ನು ಹೆಚ್ಚಾಗಿ ಅವಲಂಭಿಸಿಲ್ಲ. ಆದರೆ [Genetics] ವಂಶವಾಹಿ ಶಾಸ್ತ್ರದ ತತ್ವಗಳು ಇಂದಿನ ಆಧುನಿಕತಂತ್ರಜ್ಞಾನವಾದ ಜೈವಿಕವಿಜ್ಞಾನದಲ್ಲಿ ಅಳವಡಿಸಿಕೊಂಡು ಸುಧಾರಣೆಯನ್ನು ಮಾಡಲಾಗುತ್ತಿದೆ. ಸಸ್ಯದ ಯಾವುದೇಭಾಗವನ್ನು (ಎಲೆ, ಕಾಂಡ, ಕುಡಿ, ಬೇರು ಇತ್ಯಾದಿ) ಬೇರ್ಪಡಿಸಿ ಪ್ರಯೋಗಾಲಯದಲ್ಲಿ ಕೃತಕ ಪೋಷಕಾಂಷಯುಕ್ತ ಮಾಧ್ಯಮದ ಮೇಲೆ ನಿಗದಿಪಡಿಸಿದ ಕೃತಕ ಆತಾವರಣದಲ್ಲಿ ಪೂರ್ಣಸಸ್ಯವಾಗಿ ಬೆಳಸುವ ವಿಧಾನವೇ ಅಂಗಾಂಷ ಕೃಷಿ, ಅಥವಾ ಅಭಿವೃದ್ಧಿ. ೧೯೮೩ ರಲ್ಲಿ ಸಸ್ಯಾಂಗಾಂಶಕೃಷಿ ಮತ್ತು ಅನುವಂಶಿಕ ಅಭಿಯಂತಿಕೆಯ ತತ್ವವನ್ನು ಅಳವಡಿಸಿಕೊಂಡು ತಂಬಾಕಿನ ಟ್ರಾನ್ಸ್ ಜೆನಿಕ್ ಗಿಡಗಳನ್ನು ಉತ್ಪಾದಿಸುವಲ್ಲಿ ವಿಶ್ವದ ವಿಜ್ಞಾನಿಗಳು ಯಶಸ್ಸುಪಡೆದರು. ಈ ಮಾದರಿಯನ್ನು ಬಳಸಿಕೊಂಡು ಬ್ಯಾಕ್ಟೀರಿಯ, ವೈರಸ್ ಅಥವಾ ಪ್ರಾಣಿಗಳ ವಿಶಿಷ್ಟಗುಣ ಹೊಂದಿರುವ ವಂಶವಾಹಿನಿಯನ್ನು ಬೇರ್ಪಡಿಸಿ ನಮಗೆ ಬೇಕಾಗಿರುವ ಜೀವಕೋಶದ ಮೂಲವರ್ಣ ತಂತುಗಳಿಗೆ ಸಂಯೋಜಿಸಿ, ಆ ಸಂಯೋಜಿಸಲ್ಪಟ್ಟ ಜೀವಕೋಶದಿಂದ ವಿಶಿಷ್ಟಗುಣಹೊಂದಿರುವ ಸಸ್ಯಗಳನ್ನು (Transgenic crops ) ಬೆಳೆಸಬಹುದು. ಆಲೂಗೆಡ್ಡೆ, ಅಕ್ಕಿ, ಹತ್ತಿ, ಟೊಮ್ಯಾಟೋ, ಸೋಯಾಬೀನ್, ಮೆಕ್ಕೇಜೋಳ, ಅತ್ಪಟ್ಲೆಕಾಯಿ, ಆಲ್ಫಾಲ್ಫಾ, ಕನೋಲಾ, ಸ್ವೀಟ್ ಪೆಪ್ಪರ್, ಬೆಳೆಗಳನ್ನು ಟ್ರಾನ್ಸ್ ಜೆನಿಕ್ ರೀತಿಯಲ್ಲಿ ಮಾರ್ಪಾಡುಮಾಡಲಾಗಿದೆ.

’ಹಸಿರುಕ್ರಾಂತಿ :

ಇದೊಂದು ಸುಂದರವಿಚಾರ. ಮೆಕ್ಸಿಕೋ ದೇಶದಲ್ಲಿ ’ರಾಕ್ ಫಲ್ಲರ್ ಫೌಂಡೇಶನ್,’ ಅಡಿಯಲ್ಲಿ ಅಲ್ಲಿ ಬೆಳೆಯುತ್ತಿದ್ದ ಗೋಧಿಬೆಳೆಯ ಗುಣಮಟ್ಟ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಾರಂಭದಲ್ಲಿ ಅಪಾರ ಯಶಸ್ಸನ್ನು ಪಡೆಯಲು ಹೆಣಗಿದ ಸಸ್ಯವಿಜ್ಞಾನಿ, ಡಾ. ನಾರ್ಮನ್ ಬೋರ್ಲಾಗ್ ರ ಹೆಸರು, ಸುವರ್ಣಾಕ್ಷರಗಳಲ್ಲಿ ಕೆತ್ತುವಂತಹದು. ಗೋಧಿ, ಮೆಕ್ಕೆಜೋಳಗಳ ಕೃಷಿವಲಯದಲ್ಲಿ ಅತಿ-ಹೆಚ್ಚಿನ ಇಳುವರಿಯನ್ನು ಒದಗಿಸಿ, ವಿಶ್ವದಬಡಜನರ ಆವಶ್ಯಕತೆಗಳನ್ನು ಪುರೈಸುವ ದಿಕ್ಕಿನಲ್ಲಿ ಮಾಡಿದ ವೈಜ್ಞಾನಿಕ ಪ್ರಯತ್ನವೇ ಇದರಮೂಲಮಂತ್ರ ! ಡಾ. ’ನಾರ್ಮನ್ ಬೋರ್ಲಾಗ್,’ ಇದನ್ನು ಯಶಸ್ವಿಯಾಗಿ ತಂದವರಲ್ಲಿ ಮೊದಲಿಗರು. ಪ್ರಪ್ರಥಮವಾಗಿ ಉಣ್ಣುವ ಬೆಳೆಗಳ ಉತ್ಪಾದನೆಯನ್ನು ಹಲವಾರು ಪಟ್ಟು ಹೆಚ್ಚಿಸಿ ವಿಶ್ವದ ಜನರ ಹಸಿವನ್ನು ನಿವಾರಿಸಲು ಮಾಡಿದ ಸಮರ್ಥ ಕಾರ್ಯವನ್ನು ಗುರುತಿಸಿ, ಡಾ. ನಾರ್ಮನ್ ಬೋರ್ಲಾಗ್ ರನ್ನು ’ಹಸಿರುಕ್ರಾಂತಿಯ ಜನಕ,’ ನೆಂದು ಹೆಸರಿಸಿದರು. ಅವರ ಕಾರ್ಯಕ್ಕೆ ನೋಬೆಲ್ ಪ್ರಶಸ್ತಿಯೂ ದೊರೆಯಿತು.

ಅಮೆರಿಕದ ’ಮೈಕ್ರೋಬಯಾಲಜಿ,’ ಶಾಖೆಯಲ್ಲಿ ಪರಿಣಿತರಾಗಿದ್ದ ಅವರು ೧೯೪೪ ರಲ್ಲಿ ಮೆಕ್ಸಿಕೋದೇಶದ ಗೋಧಿಬೆಳೆಯನ್ನು ಸುಧಾರಿಸಿ ಅದರ ಉತ್ಪನ್ನವನ್ನು ಹೆಚ್ಚಿಸಲು ಕೈಗೊಂಡ ಕಾರ್ಯಕ್ರಮದ ಮುಖ್ಯಸ್ಥರಾಗಿ ನೇಮಕಗೊಂಡರು. ೨೦ ವರ್ಷಗಳಲ್ಲಿ ಅವರು ಅಲ್ಲಿನ ರೈತರಿಗೆ, ಅಧಿಕಾರಿಗಳಿಗೆ, ಸಂಶೋಧಕರಿಗೆ ಚೆನ್ನಾಗಿತರಪೇತಿನೀಡಿ, ಬೆಳೆಗಳಬಗ್ಗೆ ವಿಶೇಷ ಮಾಹಿತಿ ತಂತ್ರಜ್ಞಾನಗಳಬಗ್ಗೆ ತಿಳುವಳಿಕೆ ನೀಡಿದರು. ಬೋರ್ಲಾಗ್ ಮಾಡಿದ ಮೊಟ್ಟ-ಮೊದಲ ಕಾರ್ಯವೆಂದರೆ, ಗೋಧಿಸಸ್ಯಗಳ ಎತ್ತರವನ್ನು ಕಡಿಮೆಮಾಡಿ, ಅವನ್ನು ಗಿಡ್ಡ-ಗಿಡಗಳವರ್ಗಕ್ಕೆ ಸೀಮಿತಗೊಳಿಸಿದ್ದು. ಇದರಿಂದ ಯಾಂತ್ರಿಕ ಕಾರ್ಯಾಚರಣೆಗಳಿಗೆ ಅಂದರೆ-ಟ್ರ್ಯಾಕ್ಟರ್, ಮುಂತಾದವಾಹನಗಳ ಚಾಲನೆಗೆ ಸಹಾಯವಾಯಿತು. [High yielding Varieties] ಗಳ ಆವಿಷ್ಕಾರಮಾಡಿದ್ದು. ಮೆಕ್ಕೆಜೋಳದ ಬೆಳೆಯ (Corn) ಗುಣ ಹಾಗೂ ಇಳುವರಿಯನ್ನು ಹೆಚ್ಚಿಸಲು ಮಾಡಿದ ಪ್ರಯತ್ನಗಳೂ ಯಶಸ್ಸನ್ನು ಕಂಡವು.

ಇನ್ನೊಂದು ಸಂಗತಿ. ಕೇವಲ ೧೦ ವರ್ಷಗಳಲ್ಲಿ ಗೋಧಿಯನ್ನು ಆಮದುಮಾಡ್ಕೊಳ್ಳುತ್ತಿದ್ದ ಮೆಕ್ಸಿಕೋ, ರಫ್ತು ಮಾಡುವಷ್ಟು ಪ್ರಗತಿಯನ್ನು ಸಾಧಿಸಿತು.ಮೆಕ್ಸಿಕೋ ದೇಶದ ಗೋಧಿಬೆಳೆಯಲ್ಲಿ ಸಾಧಿಸಿದ ಗಮನಾರ್ಹ ಹೆಚ್ಚುವರಿಯಿಂದ ತೃಪ್ತರಾದ ಜನರು, ಬೋರ್ಲಾಗ್ ರವರ ಕಾರ್ಯವನ್ನು ಶ್ಲಾಗಿಸಿ, ಅವರನ್ನು ’ ಹಸಿರುಕ್ರಾಂತಿಯ ಜನಕ,’ ”ಹರಿಕಾರ,’ ನೆಂದು ಕರೆದು ಕೊಂಡಾಡಿದರು. ಹೀಗೆ, ಕೃಷಿಯಲ್ಲಿ ಸಫಲತೆಯನ್ನು ಹಾಸಲುಮಾಡಿದ ಬೋರ್ಲಾಗರಿಗೆ, ಅನೇಕ ರಾಷ್ಟ್ರಗಳು ತಮ್ಮದೇಶ ಆಹಾರದ ಫಸಲುಗಳನ್ನು ಉತ್ತಮಪಡಿಸಲು ಕರೆಕೊಟ್ಟರು. ಅದರಲ್ಲಿ ಭಾರತ, ಪಾಕೀಸ್ತಾನಗಳೂ ಸೇರಿದ್ದವು. ಮಾಜೀ ಪ್ರಧಾನಿ ಶ್ರೀಮತಿ. ಇಂದಿರಾಗಾಂಧಿಯವರ ಕಾರ್ಯಾವಧಿಯಲ್ಲಿ ಹಸಿರು ಕ್ರಾಂತಿಯ ಕಾರ್ಯಕ್ರಮಗಳು ಬಹಳ ಯಶಸ್ಸನ್ನು ದಾಧಿಸಿದವು. ಆಹಾರಧಾನ್ಯಗಳು, ಹತ್ತಿ, ಸೆಣಬು, ತರಕಾರಿಗಳು ಹೇರಳವಾಗಿ ಬೆಳೆದು, ಭಾರತದ ರೈತರು ವರ್ಷದಕೊನೆಯಲ್ಲಿ ದವಸ-ಧಾನ್ಯ, ಕಾಳು-ಕಡಿಗಳನ್ನು ದಾಸ್ತಾನುಮಾಡುವಷ್ಟು ಕ್ಷಮತೆಯನ್ನು ಸಾಧಿಸಿದರು.

ಸುಮಾರು ೩೦ ವರ್ಷಗಳಿಂದ ಪ್ರಚಲಿತದಲ್ಲಿರುವ ಜೈವಿಕ ಮಾಹಿತಿ ತಂತ್ರಜ್ಞಾನದಿಂದಲೇ ಇವೆಲ್ಲಾಸಾಧ್ಯವಾಗಿವೆ. ಇದರಜೊತೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ವಲ್ಲದೆ ಸಂಖ್ಯಾಶಾಸ್ತ್ರ, ವಿವಿಧ ತರಹದ ಗಣಕಯಂತ್ರವಿಜ್ಞಾನದ ತಿಳುವಳಿಕೆ ಅತಿಮುಖ್ಯ. ’ಮ್ಯುಟೇಶನ್,’ ನಲ್ಲಿ ಅಣುಶಕ್ತಿಯನ್ನು ಬಳಸಿ ಹೊಸತಳಿಯನ್ನು ಅಭಿವೃದ್ಧಿಪಡಿಸುವ ಅಣುಶಕ್ತಿಯ ವಿವಿಧ ವಿಕರಣಗಳಲ್ಲಿ ಕ್ಷ-ಕಿರಣ, ಗಾಮಾಕಿರಣ, ಫಾಸ್ಟ್ ನ್ಯೂಟ್ರಾನ್ ಗಳನ್ನು ಮುಖ್ಯವಾಗಿ ಉಪಯೋಗಿಸಿ, ಹೊಸ ಮ್ಯೂಟೇಶನ್ ತಯಾರಿಸಲಾಗುವುದು. ಈ ಮ್ಯೂಟೇಶನ್ ಗಳನ್ನು ಇತರೆ ’ಮ್ಯೂಟೆಂಟ್,’ಗಳ ಜೊತೆ ಬೆರೆಸಿ ನಮಗೆ ಬೇಕಾದ ಗುಣಗಳನ್ನು ಪಡೆಯಬಹುದು. ತಳಿ ಸಂಕರಣಮಾಡಿ ಹೆಚ್ಚು ಉತ್ಪನ್ನಕೊಡುವ ಬೇಗಮಾಗುವ, ರೋಗನಿರೋಧಕ, ಸಸ್ಯಗಳನ್ನು ಕಂಡುಹಿಡಿಯಬಹುದು. ಈಗ ಇವೆಲ್ಲಾ ಸಾಧ್ಯವಾಗಿದೆ.

ಭಾರತದ ರೈತಾಪಿ-ಜನರು ನಿಧಾನವಾಗಿ ಹೊಸ-ತಂತ್ರಜ್ಞಾನಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ :

೨೦೦೨ ನೇ ಇಸವಿಯಲ್ಲಿ ೫೪,೦೦೦ ಜನ ರೈತರು ೫೦,೦೦೦ ಹೆಕ್ಟೇರ್ ಭೂಮಿಯಲ್ಲಿ ಬೀಟಿಹತ್ತಿಯನ್ನುನಾಟಿದ್ದರು. ಈಗ ೨೦೦೭ ರಲ್ಲಿ ೩.೮ ಮಿಲಿಯನ್ ವ್ಯವಸಾಯಗಾರರು, ೬.೨ ಮಿಲಿಯನ್ ಹೆಕ್ಟೇರ್ ಜಮೀನಿನಲ್ಲಿ ಹತ್ತಿಯನ್ನು ಸಾಗುವಳಿಮಾಡಿದ್ದಾರೆ. ಈ ಯಶಸ್ಸಿನಹಿಂದೆ ರೈತಬಾಂಧವರ ಪರಿಶ್ರಮ ಎದ್ದುಕಾಣಿಸುತ್ತದೆ. ಆದರೆ ಅವರಿಗೆ ಸರಿಯಾದ ಬೀಜ, ತಾಂತ್ರಿಕ ಸಹಾಯ, ಆರ್ಥಿಕ ನೆರವು ಕೊಟ್ಟಾಗಮಾತ್ರಾ ಆಹಾರೋತ್ಪಾದನೆಯಲ್ಲಿ ನಾವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

**
ಈ ಹೊಲದ ಚಿತ್ರವನ್ನು ತೆಗೆಯಲು ಸ್ವಲ್ಪ ಹೆಣಗಬೇಕಾಗಿ ಬಂತು. ನಾವು ನಮ್ಮ ಕಾರನ್ನು ಇಲ್ಲಿ, ಪಾರ್ಕ್ ನ ಮುಂದೆ ಪಾರ್ಕ್ ಮಾಡಲು ಆಗಲಿಲ್ಲ. ಸುಮಾರು ಒಂದು ಕಿ. ಮೀಟರ್ ದೂರದಿಂದ ನನಗೆ ನಡೆದೇ ಬಂದು ಇದರ ಚಿತ್ರವನ್ನು ತೆಗೆಯಬೇಕಾಗಿ ಬಂತು. ನಾನು, ರಾಹುರಿ, ಧಾರವಾಡ, ಪಂಜಾಬ್, ಬೆಂಗಳೂರಿನ ಕೃಷಿಫಾರಂಗಳನ್ನು ನೋಡಿದ್ದೆನಾದ್ದರಿಂದ ಇದರಲ್ಲಿ ಅತಿಹೆಚ್ಚಿನ ಆಸಕ್ತಿಬಂತು. ನನ್ನ ಪರಿವಾರದವರಿಗೆ ಆಶ್ಚರ್ಯ. ಬಹುಶಃ ಇದರ ಚಿತ್ರವನ್ನು ತೆಗೆಯದೇ ಹೋಗಿದ್ದಿದ್ದರೆ, ಮುಂದೆ ಕೊರಗಬೇಕಾದ ಪ್ರಸಂಗದಿಂದ ಪಾರಾದೆ !

-ಚಿತ್ರ.ವೆಂ