“ಇನ್ನು ವನ್ಯಜೀವಿಗಳ ಕಳೇಬರವನ್ನು ಸುಡುವಂತಿಲ್ಲ, ಹೂಳುವಂತಿಲ್ಲ"

“ಇನ್ನು ವನ್ಯಜೀವಿಗಳ ಕಳೇಬರವನ್ನು ಸುಡುವಂತಿಲ್ಲ, ಹೂಳುವಂತಿಲ್ಲ"

ಹೀಗೊಂದು ಪ್ರಕಟಣೆ ಒಂದೆರಡು ದಿನಗಳ ಹಿಂದೆ ಅರಣ್ಯ ಇಲಾಖೆಯಿಂದ ಸುತ್ತೋಲೆಯಾಗಿ ಹೊರಬಂದಿದೆ. ಏನಿದರ ಮರ್ಮ? ಯಾವ ಕಾರಣಗಳಿಗಾಗಿ ವನ್ಯ ಜೀವಿಗಳ ಮೃತ ದೇಹಗಳನ್ನು ಹೂಳುವಂತಿಲ್ಲ ಹಾಗೂ ಸುಡುವಂತಿಲ್ಲ? ಹಾಗಾದರೆ ಇವುಗಳ ವಿಲೇವಾರಿ ಹೇಗೆ? ಇದರ ಹಿಂದೆ ಹಲವಾರು ನೈಸರ್ಗಿಕವಾಗಿ ಸಿಗುವ ಲಾಭಗಳಿವೆ. ಬಹಳ ದಶಕಗಳ ಹಿಂದೆ ದಟ್ಟ ಕಾಡುಗಳು ಇದ್ದ ಸಮಯದಲ್ಲಿ ಅರಣ್ಯದಲ್ಲಿ ವಾಸಿಸುತ್ತಿದ್ದ ಯಾವುದೇ ಜೀವಿ ಮೃತ ಪಟ್ಟರೆ, ಅವುಗಳ ಮೃತ ದೇಹವು ಅಲ್ಲೇ ಕೊಳೆಯುತ್ತಿತ್ತು. ಇದರಿಂದಾಗಿ ಆ ಕೊಳೆಯುತ್ತಿರುವ ದೇಹವನ್ನು ಅವಲಂಬಿಸಿಕೊಂಡಿದ್ದ ಹಲವಾರು ಸೂಕ್ಷ್ಮಾಣು ಜೀವಿಗಳಿಂದ ಹಿಡಿದು, ಪ್ರಾಣಿ ಪಕ್ಷಿಗಳಿಗೆ ಆಹಾರದ ಆಸರೆಯಾಗುತ್ತಿತ್ತು. 

ದೇಶದಲ್ಲಿ ೧೯೭೨ರ ತನಕ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಯಾವುದೇ ನಿರ್ಬಂಧವಿರಲಿಲ್ಲ. ಇದರಿಂದಾಗಿ ನಿಧಾನವಾಗಿ ನಶಿಸುತ್ತಿರುವ ವನ್ಯಜೀವಿಗಳ ಪ್ರಮಾಣವನ್ನು ಗಮನಿಸಿದ ಸರಕಾರವು ವನ್ಯಜೀವಿಗಳ ಬೇಟೆ ಹಾಗೂ ಕೊಲ್ಲುವುದರ ಮೇಲೆ ನಿರ್ಬಂಧವನ್ನು ವಿಧಿಸಿತು. ಆದರೂ ಆಸೆಬುರುಕ ಮಾನವ, ಪ್ರಾಣಿಗಳ ಕಳ್ಳಸಾಗಣೆ ಮಾಡಲು ಪ್ರಾರಂಭಿಸಿದ. ಅಪರೂಪದಲ್ಲಿ ಅಪರೂಪವಾಗಿರುವ ಹಲವಾರು ಪ್ರಾಣಿ ಪಕ್ಷಿಗಳು ಮಾನವನ ಈ ಆಸೆಯ ಬಲೆಗೆ ಬಿದ್ದು ನಿರ್ನಾಮವಾಗಿ ಹೋದುವು. ಲಕ್ಷಗಟ್ಟಲೆ ಸಂಖ್ಯೆಯಲ್ಲಿದ್ದ ಹಲವಾರು ಜೀವಿಗಳ ಸಂಖ್ಯೆ ಸಾವಿರಕ್ಕೂ ಕೆಳಗಿಳಿಯಿತು. ಆನೆ, ಹುಲಿಗಳಂತಹ ಪ್ರಾಣಿಗಳ ದಂತ, ಚರ್ಮ, ಹಲ್ಲು ಮೊದಲಾದ ಭಾಗಗಳಿಗಾಗಿ ಅವುಗಳನ್ನು ಅವ್ಯಾಹತವಾಗಿ ಕೊಲ್ಲಲಾಯಿತು. ಕ್ರಮೇಣ ಈ ಪ್ರಾಣಿಗಳ ಸಂಖ್ಯೆ ಇಳಿಮುಖವಾಗತೊಡಗಿತು. ಇವುಗಳ ಸಂರಕ್ಷಣೆಗಾಗಿ ಈಗ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಸಹಜವಾಗಿ ಸಾಯುತ್ತಿದ್ದ ಪ್ರಾಣಿಗಳು ಕಾಡಿನ ಮಣ್ಣಿನಲ್ಲಿ ಕೊಳೆತು ಹೋಗುತ್ತಿದ್ದವು. ಕೊಳೆಯುವ ಮೊದಲು ಅವುಗಳು ಬೇರೆ ಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತಿದ್ದವು. ಕ್ರಮೇಣ ಅರಣ್ಯ ಇಲಾಖೆಯು ಸತ್ತ ಪ್ರಾಣಿಗಳನ್ನು ಸಹಜವಾಗಿ ಕೊಳೆಯಲು ಬಿಡದೇ ಹೂಳಲು ಅಥವಾ ಸುಡಲು ಪ್ರಾರಂಭಿಸಿತು. ಇದರಿಂದಾಗಿ ಹಲಾವಾರು ಪ್ರಾಣಿ ಪಕ್ಷಿಗಳಿಗೆ ಸುಲಭವಾಗಿಯೇ ಸಿಗುತ್ತಿದ್ದ ಆಹಾರವು ಸಿಗದೇ ಬಳಲತೊಡಗಿದವು. ಈ ಬಗ್ಗೆ ಅಧ್ಯಯನ ನಡೆಸಿದ ಖ್ಯಾತ ವನ್ಯ ಜೀವಿ ತಜ್ಞ ಡಾ. ಸಂಜಯ ಗುಬ್ಬಿ ಇವರು ಅರಣ್ಯ ಇಲಾಖೆ ಹಾಗೂ ಸರಕಾರಕ್ಕೆ ಒಂದು ವರದಿಯನ್ನು ಸಲ್ಲಿಸಿದರು. ಸತ್ತ ವನ್ಯ ಜೀವಿಗಳನ್ನು ಸುಟ್ಟರೆ ಅಥವಾ ಹೂಳಿದರೆ ನೈಸರ್ಗಿಕವಾಗಿ ಆಗುವ ನಷ್ಟಗಳ ಬಗ್ಗೆ ಪಟ್ಟಿಯನ್ನು ಮಾಡಿ ಮಾಹಿತಿ ನೀಡಿದ್ದರು. ಇದರ ಸತ್ಯಾಂಶವನ್ನು ಪರಿಗಣಿಸಿದ ಅರಣ್ಯ ಇಲಾಖೆ ಇನ್ನು ಸತ್ತು ಹೋದ ಪ್ರಾಣಿಗಳ ಕಳೇಬರಗಳನ್ನು ಸುಡುವಂತಿಲ್ಲ ಮತ್ತು ಹೂಳುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. 

ಡಾ. ಸಂಜಯ್ ಗುಬ್ಬಿಯವರ ವರದಿಯ ಪ್ರಕಾರ “ ವನ್ಯ ಜೀವಿಗಳ ಕಳೇಬರ ಹಲವಾರು ಕಶೇರುಕ ಮತ್ತು ಅಕಶೇರುಕ ಪ್ರಾಣಿಗಳಿಗೆ ಆಹಾರ. ಕಾಡಿನ ಪರಿಸರವನ್ನು ಸ್ವಚ್ಛವಾಗಿಡಲು ಸಹಾಯ ಮಾಡುವ ರಣಹದ್ದುಗಳಿಗೂ ಕಳೇಬರಗಳೇ ಆಹಾರ. ಈ ಪಕ್ಷಿಗಳು ಬೇಟೆಯಾಡಿ ಆಹಾರ ಪಡೆಯುವುದಿಲ್ಲ. ಕಳೆದ ಎರಡು ದಶಕಗಳಲ್ಲಿ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಅವುಗಳು ನಶಿಸುವ ಹಂತ ತಲುಪಿವೆ. ಆದರೆ, ಹಲವು ಸಂರಕ್ಷಣಾ ಕಾರ್ಯಗಳಿಂದ ಅವುಗಳ ಸಂಖ್ಯೆ ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಹಿಂದೆ ಹಳ್ಳಿಗಳ ಸುತ್ತಮುತ್ತ ಜಾನುವಾರುಗಳ ಕಳೇಬರಗಳ ಬಳಿ ಹತ್ತಾರು ರಣಹದ್ದುಗಳನ್ನು ಕಾಣಬಹುದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಜಾನುವಾರುಗಳ ಕಳೇಬರಗಳನ್ನು ವಿಲೇವಾರಿ ಮಾಡುವ ರೀತಿ ಬದಲಾಗಿರಬಹುದು ಅಥವಾ ಜಾನುವಾರುಗಳ ಚರ್ಮ ತೆಗೆದು ಮಾರುತ್ತಿದ್ದ ಸಮುದಾಯ ಅವರ ಮೂಲ ಕಸುಬನ್ನು ಮಾರ್ಪಡಿಸಿಕೊಂಡಿರಬಹುದು. 

ಕತ್ತೆ ಕಿರುಬಗಳು ಸಹ ರಣಹದ್ದುಗಳಂತೆ ಸತ್ತ ಪ್ರಾಣಿಗಳ ಆಹಾರದ ಮೇಲೆ ಅವಲಂಬಿತವಾಗಿದೆ. ಗುಳ್ಳೆ ನರಿ, ಮುಂಗುಸಿ ಮತ್ತಿತರ ಸಣ್ಣ ಮಾಂಸಹಾರಿ ಪ್ರಾಣಿಗಳಿಗೆ ಕೂಡ ಸತ್ತ ವನ್ಯಜೀವಿಯ ಕಳೇಬರವೇ ಆಹಾರದ ಬಹುಮುಖ್ಯ ಮೂಲ. ಸಾರಂಗ ಮುಂತಾದ ಸಸ್ಯಹಾರಿ ಪ್ರಾಣಿಗಳು, ಆಮೆಗಳು ಸಹ ಸತ್ತ ಪ್ರಾಣಿಗಳ ಮೂಳೆಗಳನ್ನು ಮೆಲ್ಲುವುದರ ಮೂಲಕ ತಮಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ರಂಜಕವನ್ನು ಪಡೆಯುತ್ತವೆ.”

ಹೀಗೆ ಹತ್ತು ಹಲವಾರು ವಿಧಗಳಲ್ಲಿ ಸತ್ತ ಕಳೇಬರದ ಮೇಲೆ ಅವಲಂಬಿತವಾದ ವನ್ಯಜೀವಿಗಳಿವೆ. ಇವುಗಳಿಗೆ ಸಹಜವಾಗಿ ಈ ಆಹಾರವು ದೊರೆಯದೇ ಹೋದಲ್ಲಿ ಅವುಗಳು ನಶಿಸಿಹೋಗುವ ಸಾಧ್ಯತೆಗಳಿವೆ. ಈ ಎಲ್ಲಾ ವಿವರಗಳು ಡಾ. ಸಂಜಯ್ ಗುಬ್ಬಿಯವರ ವರದಿಯಲ್ಲಿ ಅಡಕವಾಗಿದ್ದುವು. ಆ ವರದಿಯಲ್ಲಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ರಾಜ್ಯ ಸರಕಾರ ಮತ್ತು ಅರಣ್ಯ ಇಲಾಖೆಯು ನೂತನ ಆದೇಶವೊಂದನ್ನು ಹೊರಡಿಸಿ “ಇನ್ನು ಮುಂದೆ ಸತ್ತ ಪ್ರಾಣಿಗಳ ಕಳೇಬರಗಳನ್ನು ಸುಡುವಂತಿಲ್ಲ ಮತ್ತು ಹೂಳುವಂತಿಲ್ಲ" ಎಂದಿದೆ. 

ಈ ಆದೇಶದ ಅನುಸಾರ ಇನ್ನು ಮುಂದೆ ಅರಣ್ಯದಲ್ಲಿ ನೈಸರ್ಗಿಕವಾಗಿ ಸತ್ತ ಅಥವಾ ಪ್ರಾಣಿಗಳು ಕೊಂಡು ಬಿಟ್ಟು ಹೋದ ಜೀವಿಗಳ ಮೃತದೇಹಗಳನ್ನು ಸುಡುವ ಅಥವಾ ಹೂಳುವ ಪದ್ಧತಿಯನ್ನು ಕೈಬಿಡಲಾಗುತ್ತದೆ. ಈ ಮೃತದೇಹಗಳನ್ನು ಅವಲಂಬಿಸಿ ಬದುಕು ಸಾಗಿಸುತ್ತಿರುವ ಹಲವಾರು ಪ್ರಾಣಿ ಪಕ್ಷಿಗಳನ್ನು ಈ ಕ್ರಮದ ಮೂಲಕ ಸಂರಕ್ಷಣೆ ಮಾಡಲಾಗುವುದು. ಆದರೆ ಈ ಮಾರ್ಗಸೂಚಿಗಳು ನಮ್ಮ ದೇಶದ ರಾಷ್ಟ್ರೀಯ ಪ್ರಾಣಿಯಾದ ಹುಲಿಗೆ ಅನ್ವಯಿಸುವುದಿಲ್ಲ ಎಂದು ಆದೇಶವು ತಿಳಿಸುತ್ತದೆ. ಏಕೆಂದರೆ ಹುಲಿ ರಾಷ್ಟ್ರೀಯ ಪ್ರಾಣಿಯಾಗಿರುವುದರಿಂದ ಅದು ಮೃತ ಪಟ್ಟರೆ ಗೌರವ ಪೂರ್ವಕವಾಗಿ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ. 

ಸತ್ತ ವನ್ಯಜೀವಿಗಳ ಕಳೇಬರ ಕೊಳೆಯಲು ಪ್ರಾರಂಭವಾಗುತ್ತಿದ್ದಂತೆ ಅವುಗಳ ಮೇಲೆ ಅವಲಂಬಿತವಾದ ಪ್ರಾಣಿ ಪಕ್ಷಿಗಳು ಮಾತ್ರವಲ್ಲ ಹಲವಾರು ಸಸ್ಯಗಳಿಗೂ ಆಹಾರ ದೊರೆಯುತ್ತದೆ. ಕೊಳೆತ ನಂತರ ಮಣ್ಣಿಗೆ ಸೇರಿಕೊಳ್ಳುವ ಈ ಜೀವಿಗಳ ಅಂಶವು ಮಣ್ಣನ್ನೂ ಫಲವತ್ತಾಗಿಸುತ್ತದೆ. ಇವೆಲ್ಲಾ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆಗಳಾಗಿರುವುದರಿಂದ ಪರಿಸರ ಸಂರಕ್ಷಣೆಯ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಮಾನವರಾದ ನಾವು ಹೇಗೆ ಕಾಲಕಾಲಕ್ಕೆ ತಮ್ಮ ಆಹಾರ ಕ್ರಮ, ಜೀವನ ಕ್ರಮವನ್ನು ಬದಲಾಯಿಸುತ್ತಾ ಸಾಗುತ್ತಿದ್ದೇವೋ ಅದೇ ರೀತಿ ನಿಸರ್ಗದಲ್ಲಿರುವ ಪ್ರಾಣಿ ಪಕ್ಷಿಗಳನ್ನು ಉಳಿಸಿ ಬೆಳೆಸಲು ನೈಸರ್ಗಿಕವಾಗಿ ಲಭ್ಯವಿರುವ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ವನ್ಯಜೀವಿಗಳ ಕಳೇಬರಗಳ ನಿರ್ವಹಣೆಯನ್ನು ನಿಸರ್ಗಕ್ಕೇ ಬಿಟ್ಟು ನಾವು ನೆಮ್ಮದಿಯಿಂದ ಇರುವುದು ವಾಸಿ. ಡಾ. ಸಂಜಯ್ ಗುಬ್ಬಿಯವರ ಈ ವರದಿಯಿಂದ ಹಾಗೂ ಅರಣ್ಯ ಇಲಾಖೆಯವರ ಈ ಸುತ್ತೋಲೆಯಿಂದ ಪರಿಸರ ರಕ್ಷಣೆ ಹಾಗೂ ಪ್ರಾಣಿ ಪಕ್ಷಿಗಳ ಸಂಖ್ಯೆಯಲ್ಲಿ ವೃದ್ಧಿಯಾದರೆ ಅದಕ್ಕಿಂತ ದೊಡ್ದ ಪ್ರಯೋಜನ ಬೇರೆ ಇಲ್ಲ. 

ಚಿತ್ರ ಕೃಪೆ: ಅಂತರ್ಜಾಲ ತಾಣ