“ನನಗಿತ್ತ ದನ ಜಿಲ್ಲಾಧಿಕಾರಿಯೇ ಸಾಕಿಕೊಳ್ಳಲಿ"

“ನನಗಿತ್ತ ದನ ಜಿಲ್ಲಾಧಿಕಾರಿಯೇ ಸಾಕಿಕೊಳ್ಳಲಿ"

“ಸರಕಾರ ಆರನೇ ವೇತನ ಆಯೋಗದ ಶಿಫಾರಸ್ ಜ್ಯಾರಿ ಮಾಡಿ ಅಧಿಕಾರಿಗಳಿಗೆ ಹೆಚ್ಚುವರಿ ಸಂಬಳ ಪಾವತಿಸಿದೆ. ಅವರೆಲ್ಲರಿಗೂ ಸರಕಾರ ನನಗೆ ಕೊಟ್ಟಂತಹ ದನವನ್ನೇ ಕೊಟ್ಟು ಸಾಕಲು ಹೇಳಲಿ. ಪ್ರತಿಯೊಬ್ಬರಿಗೂ ಒಂದೆಕ್ರೆ ಒಣ ಜಮೀನನ್ನೂ ಕೊಡಲಿ. ಈ ಸರಕಾರಿ ಅಧಿಕಾರಿಗಳೂ ನಮ್ಮಂತೆಯೇ ದನ ಸಾಕಿ ಬದುಕಲಿ. ಇದರ ಆದಾಯವೇ ಅವರಿಗೆ ಸಾಕಲ್ಲ? ಇನ್ನು ಮುಂದೆ ಅವರ ಸಂಬಳ ಹೆಚ್ಚಿಸಬಾರದು” - ಇವು ವಿದರ್ಭದ ವಿದ್ಯಾವಂತ ರೈತ ವಾಂಜಿರಿ ಆಕ್ರೋಶದಿಂದ ನುಡಿಯುವ ಮಾತುಗಳು.

ಸರಕಾರ ತನಗಿತ್ತ ದನದಿಂದಾಗಿ ತನ್ನ ಸರ್ವನಾಶ ಆಗುತ್ತಿದೆ ಎಂಬುದೇ ಅವನ ಆಕ್ರೋಶಕ್ಕೆ ಕಾರಣ. “ಸರಕಾರಿ ಅಧಿಕಾರಿಗಳು ನನ್ನ ಮನೆಗೆ ಬಂದು, ಈ ದನ ಕೊಳ್ಳಬೇಕೆಂದು ಒತ್ತಾಯಿಸಿದರು. ಅವರ ಮಾತು ಕೇಳಿ, ದನ ತಗೊಂಡು ನಾನು ಕಷ್ಟಕ್ಕೆ ಬಿದ್ದೆ” ಎಂದು ವಾರ್ಧಾದ ಲೋನ್ಸಾವಾಲಾದ ಕಮಲಾಭಾಯಿ ಗುಧೆ ಸಂಕಟ ಪಡುತ್ತಾಳೆ. ಈ ದಲಿತ  ಮಹಿಳೆಯ ಗಂಡ ಕೆಲವು ತಿಂಗಳ ಮುಂಚೆ ಆತ್ಮಹತ್ಯೆ ಮಾಡಿಕೊಂಡಾಗ ಅಧಿಕಾರಿಗಳ ದಂಡು ಅವಳ ಮನೆಗೆ ಬಂದಿಳಿಯಿತು. ಅವಳಿಗೊಂದು ಜೆರ್ಸಿ ದನ ಕೊಟ್ಟು ಕೈತೊಳೆದುಕೊಂಡಿತು.

“ದನ ನೋಡಿಕೊಳ್ಳುವ ಕೆಲಸವಿಲ್ಲದಿದ್ದರೆ, ನನ್ನ ಮಗ ಕೂಲಿ ಮಾಡಿ ದಿನಕ್ಕೆ ೫೦ ರೂಪಾಯಿ ಸಂಪಾದಿಸುತ್ತಿದ್ದ. ನಾವು ಮನೆಮಂದಿಯೆಲ್ಲ ತಿನ್ನುವುದಕ್ಕಿಂತ ಜಾಸ್ತಿ ಇದೊಂದೇ ದನ ತಿನ್ನುತ್ತದೆ. ಆದರೆ ಯಾವ ದಿನವೂ ನಾಲ್ಕು ಲೀಟರಿಗಿಂತ ಜಾಸ್ತಿ ಹಾಲು ಕೊಟ್ಟಿಲ್ಲ. ಇದರ ಹೊಟ್ಟೆಗೆ ಹಾಕಲು ಎಲ್ಲಿಂದ ತರೋಣ?” ಎಂಬುದು ಅವಳ ಸಂಕಟ.

ವಿದರ್ಭದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರು. ಅಲ್ಲಿಗೆ ಧಾವಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ರೈತರ ಉದ್ಧಾರಕ್ಕಾಗಿ ಯೋಜನೆಗಳನ್ನು ಘೋಷಿಸಿದರು. ೪೦,೦೦೦ ರೈತರಿಗೆ ಉತ್ತಮ ದನಗಳನ್ನು ಒದಗಿಸುವುದು ಅಂತಹ ಯೋಜನೆಗಳಲ್ಲೊಂದು.

ವಿದರ್ಭದ ದಾರುಣ ವಾಸ್ತವದ ತಿಳುವಳಿಕೆಯಿದ್ದ ವ್ಯಕ್ತಿಗಳೂ ರೈತರ ಮುಂದಾಳುಗಳೂ “ಇದು ಹುಚ್ಚು ಯೋಜನೆ" ಎಂದು ಟೀಕಿಸಿದ್ದರು. ಅವರಲ್ಲೊಬ್ಬರು ವಿಜಯ ಜವಾಂಡಿಯಾ. “ಸಾಕಷ್ಟು ನೀರು ಮತ್ತು ಮೇವು ಇಲ್ಲದ ಜಾಗದಲ್ಲಿ ಬಡರೈತರಿಗೆ ದುಬಾರಿ ದನಗಳನ್ನು ಕೊಡುವುದು ಜಾಣತನವಲ್ಲ” ಎಂಬುದವರ ಸ್ಪಷ್ಟ ಅಭಿಪ್ರಾಯ. ಬರದಿಂದ ಬಸವಳಿದಿರುವ ವಿದರ್ಭದಲ್ಲಿ ನೀರೂ ಇಲ್ಲ, ಮೇವೂ ಇಲ್ಲ. ಹಾಗಿರುವಾಗ, ದನಗಳನ್ನು ಸಾಕಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಮುಖ್ಯಮಂತ್ರಿಗಳ ಯೋಜನೆ ನೆಲಕಚ್ಚಿತು.

ಕಮಲಾಭಾಯಿ ಗುಧೆಗೆ (೨೦೦೭ರಲ್ಲಿ) ಕೊಟ್ಟಿರುವ ದನದ ಬೆಲೆ ರೂಪಾಯಿ ೧೭,೫೦೦. “ಅದು ಅರ್ಧ ಜೆರ್ಸಿ ದನ” ಎನ್ನುತ್ತಾಳೆ ಅವಳು. ಇಂತಹ ದನಗಳನ್ನು ಒದಗಿಸಲು ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡುವ ಬದಲು, ಅದೇ ಹಣವನ್ನು ಸಣ್ಣ ಜೋಳದ ಕೃಷಿಗೆ ಬಳಸ ಬೇಕಾಗಿತ್ತೆಂಬುದು ಜವಾಂಡಿಯಾ ಅವರ ಅಭಿಪ್ರಾಯ.

ಅಹಾರ ಬೆಳೆಗಳ ಕೃಷಿಯ ಕುಸಿತದೊಂದಿಗೆ ವಿದರ್ಭದ ಹೈನುಗಾರಿಕೆಯ ದುರಂತ ಶುರುವಾಯಿತು. ಸಣ್ಣಜೋಳ ಬೆಳೆಸಿದರೆ ರಾಸುಗಳಿಗೆ ಆಹಾರ ಸಿಗುತ್ತದೆ. ದಶಕದ ಮುನ್ನ ಅಲ್ಲಿಯ ಜಿಲ್ಲೆಗಳಲ್ಲಿ ಶೇಕಡಾ ೩೦ ಜಮೀನಿನಲ್ಲಿ ಸಣ್ಣಜೋಳ ಬೆಳೆಯಲಾಗುತ್ತಿತ್ತು. ಈಗ ಶೇಕಡಾ ೫ರಷ್ಟು ಜಮೀನಿನಲ್ಲಿಯೂ ಅದನ್ನು ಬೆಳೆಸುತ್ತಿಲ್ಲ. ಇದೊಂದು ವಿಷವರ್ತುಲ. ಜೋಳದ ಉತ್ಪಾದನೆ ಕಡಿಮೆಯಾದಾಗ ರಾಸುಗಳ ಸಂಖ್ಯೆ ಕಡಿಮೆ. ಇದರಿಂದಾಗಿ ಕಡಿಮೆ ಹಾಲು ಮತ್ತು ಕಡಿಮೆ ಸಾವಯವ ಗೊಬ್ಬರ. ಇದರ ನೇರ ಪರಿಣಾಮ ಮಣ್ಣಿನ ಫಲವತ್ತತೆಯ ನಾಶ.

ಈ ಪ್ರದೇಶದಲ್ಲಿ ಹಾಲಿನ ಉತ್ಪಾದನೆ ಶೇಕಡಾ ೮೦ರಷ್ಟು ಕುಸಿದಿದೆ. ಮೇವಿನ ಕೊರತೆ ಮತ್ತು ಹವಾಗುಣ ಇದಕ್ಕೆ ಕಾರಣ. ಇಲ್ಲಿ ವರುಷದ ನಾಲ್ಕು ತಿಂಗಳು ಉರಿ ಬೇಸಗೆ. ನೀರಾವರಿ ಸೌಕರ್ಯವೂ ಇಲ್ಲಿಲ್ಲ.

ಪುನಃ ಸಣ್ಣಜೋಳ ಬೆಳೆಯಲು ಸಾಧ್ಯವಾದರೆ, ಸ್ಥಳೀಯ ತಳಿಯ ದನಗಳನ್ನು ಸಾಕಬಹುದು ಎಂಬುದು ರೈತರ ಅಭಿಪ್ರಾಯ. ಈಗಂತೂ ದನ ಪಡೆದವರು ಅವನ್ನು ಸಾಕಲಾಗದೆ ಮಾರುತ್ತಿದ್ದಾರೆ. ಈ ದನಗಳಿಗೆ ಶೇ. ೫೦ರಿಂದ ಶೇ. ೭೫ ಸಹಾಯಧನ ಲಭಿಸಿತ್ತು. ಆದರೂ ದನಗಳನ್ನು ಮಾರುವಾಗ ಅವರಿಗೆ ನಷ್ಟವೇ ಆಗುತ್ತಿದೆ.

ಶ್ರೀಮತಿ ಗುಧೆಯ ಪ್ರಕರಣವನ್ನೇ ಗಮನಿಸಿ. ಸರಕಾರದ ಸಹಾಯಧನ ಸಿಕ್ಕರೂ ಅವಳು ದನ ಖರೀದಿಗೆ ಹೆಚ್ಚುವರಿ ರೂಪಾಯಿ ೫,೦೦೦ ಪಾವತಿಸ ಬೇಕಾಯಿತು. ಅದಲ್ಲದೆ ಪಶುಸಂಗೋಪನಾ ಇಲಾಖೆಯ ಅಧಿಕಾರಿ ಅವಳಿಂದ ರೂ.೫೦೦ ಲಂಚ ಕಿತ್ತುಕೊಂಡ. ಸರಕಾರಿ ಯೋಜನೆಯಂತೆ ದನ ಖರೀದಿಸಿದವರ ಗೋಳಿನ ಕತೆ ಹೀಗಿದೆ.

ಆ ದನಗಳು "ಅರ್ಧ ಜೆರ್ಸಿ” ಆಗಿದ್ದರೂ, ಅವುಗಳ ಹಸಿವು ಪೂರ್ತಿ. ಅವುಗಳ ಹೊಟ್ಟೆಗೆ ಪ್ರತಿ ದಿನ ರೂ.೪೫ ಬೆಲೆಯ ೫ ಕಿಗ್ರಾ ಹಿಂಡಿ ಅಗತ್ಯ. ಹಸುರುಹುಲ್ಲಂತೂ ಬೇಕೇ ಬೇಕು. ದನ ನೋಡಿಕೊಳ್ಳುವ ಕೆಲಸ ಬೇರೆ. ಅಂತೂ ಒಂದು ದನ ಸಾಕಲು ದಿನಕ್ಕೆ ರೂ.೮೫ರಿಂದ ರೂ.೧೫೦ ವೆಚ್ಚ. ಯಾವ ರೀತಿಯಲ್ಲಿ ಲೆಕ್ಕ ಹಾಕಿದರೂ ಇದು ನಷ್ಟದ ವ್ಯವಹಾರ. ಯಾಕೆಂದರೆ, ಗುಧೆಯ ದನ ದಿನಕ್ಕೆ ೪ ಲೀಟರ್ ಹಾಲು ಕೊಡ್ತಿದೆ. ಇನ್ನೊಬ್ಬ ಮನ್‌ಚಲ್‌ವಾರ್ ಎಂಬಾತನ ದನದಿಂದ ದಿನಕ್ಕೆ ೮ ಲೀಟರ್ ಹಾಲು. ಇದನ್ನು ಲೀಟರಿಗೆ (ಆಗಿನ) ರೂ.೯ ದರದಲ್ಲಿ ಮಾರಿದರೆ ದಿನಕ್ಕೆ ರೂ.೩೬ರಿಂದ ರೂ.೭೦ ಆದಾಯ.

ಕಮಲಾಭಾಯಿ ಗುಧೆಯ ಮಗ ಭಾಸ್ಕರ ಆವೇಶದಿಂದ ಹೇಳುತ್ತಾನೆ, "ನಾನು ಈ ದನವನ್ನು ಒಯ್ದು ಜಿಲ್ಲಾಧಿಕಾರಿಯ ಮನೆಯಲ್ಲಿ ಕಟ್ಟಿ ಬರುತ್ತೇನೆ. ಇದನ್ನು ಅವರೇ ಸಾಕಿಕೊಳ್ಳಲಿ.”

ಸಂಕಟದಿಂದ ತತ್ತರಿಸುವ ಜನರ ಸಂಕಟ ಪರಿಹರಿಸುವ ಬದಲಾಗಿ ಸರಕಾರ ಹಾಗೂ ಅಧಿಕಾರಶಾಹಿ ಅವರನ್ನು ಇನ್ನಷ್ಟು ಸಂಕಟಕ್ಕೆ ತಳ್ಳುವುದು ಅಮಾನವೀಯ ಕೆಲಸ. ಅಭಿವೃದ್ಧಿಯ ಹೆಸರಿನಲ್ಲಿ ಬಡವರ ಬದುಕಿಗೆ ಕೊಳ್ಳಿ ಇಡುವವರು, ಬಡವರ ರೋಷ ಸ್ಫೋಟಿಸುವ ಮುನ್ನ ಎಚ್ಚೆತ್ತುಕೊಳ್ಳಲಿ.

ಸಾಂದರ್ಭಿಕ ಫೋಟೋ: ಲೇಖಕರು ಕ್ಲಿಕ್ಕಿಸಿದ್ದು