“ನಮ್ಮ ಹೆಮ್ಮೆಯ ಭಾರತ" ಪುಸ್ತಕ ಲೋಕಾರ್ಪಣೆ

“ನಮ್ಮ ಹೆಮ್ಮೆಯ ಭಾರತ" ಪುಸ್ತಕ ಲೋಕಾರ್ಪಣೆ

 “ಸಾವಿರಾರು ವರುಷಗಳ ಪರಂಪರೆ ಇರುವ ನಮ್ಮ ದೇಶದ ಬಗ್ಗೆ ನಾವು ಅಭಿಮಾನ ಪಡಬಹುದಾದ ಸಂಗತಿಗಳು ಸಾವಿರಾರು. ಉದಾಹರಣೆಗೆ, ಭಾರತೀಯ ಸಮಾಜದಲ್ಲಿ ಇದ್ದಂತಹ ಮೌಲ್ಯಶಿಕ್ಷಣದ ವ್ಯವಸ್ಥೆ.  “ಸತ್ಯವನ್ನೇ ಹೇಳು, ಸುಳ್ಳು ಹೇಳಬೇಡ” ಎಂದು ಕಿರಿಯರಿಗೆ ಹಿರಿಯರು ಮತ್ತೆಮತ್ತೆ ಹೇಳುತ್ತಿದ್ದರು. ಸುಳ್ಳು ಹೇಳಿದರೆ ಏನಾಗುತ್ತದೆ ಎಂಬುದನ್ನು ಸತ್ಯ ಘಟನೆಗಳ ಮತ್ತು ಕತೆಗಳ ಮೂಲಕ ಮಕ್ಕಳ ಮನಸ್ಸಿಗೆ ನಾಟುವಂತೆ ವಿವರಿಸುತ್ತಿದ್ದರು. ಬಾಲ್ಯದಲ್ಲೇ ಕಲಿತ ಇಂತಹ ಸಂಗತಿಗಳು ಮಕ್ಕಳ ಮನಸ್ಸಿನಲ್ಲಿ ಗಾಡವಾಗಿ ಅಚ್ಚೊತ್ತಿ, ಅವರು ಬೆಳೆದು ದೊಡ್ಡವರಾದಾಗ ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುತ್ತಿದ್ದವು. ಇವತ್ತು ಅಂತಹ ವ್ಯವಸ್ಥೆಯೇ ಇಲ್ಲವಾಗಿದೆ. ನಾವು ಈಗ ಸಮಾಜದಲ್ಲಿ ಕಾಣುತ್ತಿರುವ ಹಲವು ಅನಿಷ್ಠಗಳಿಗೆ ಇದುವೇ ಕಾರಣ” ಎಂದು ಡಾ. ರಾಘವೇಂದ್ರ ಹೊಳ್ಳ, ಚೇರ್ಮನ್, ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಅವರು "ನಮ್ಮ ಹೆಮ್ಮೆಯ ಭಾರತ” ಪುಸ್ತಕವನ್ನು ಲೋಕಾರ್ಪಣೆ ಮಾಡಿದ ನಂತರ ಮಾತನಾಡುತ್ತಾ ಹೇಳಿದರು.

ಮಂಗಳೂರು ಹಿರಿಯ ನಾಗರಿಕರ ಅಸೋಸಿಯೇಷನಿನ ವತಿಯಿಂದ ಕರ್ನಾಟಕ ಬ್ಯಾಂಕಿನ ಕೊಡಿಯಾಲಬೈಲಿನ ಸಭಾಭವನದಲ್ಲಿ 23 ಜುಲಾಯಿ 2022ರಂದು ಸಂಜೆ 4 ಗಂಟೆಗೆ ಜರಗಿದ ಕಾರ್ಯಕ್ರಮದಲ್ಲಿ ಅಸೋಸಿಯೇಷನಿನ ಸದಸ್ಯರಾದ ಅಡ್ಡೂರು ಕೃಷ್ಣರಾಯರು ರಚಿಸಿದ "ನಮ್ಮ ಹೆಮ್ಮೆಯ ಭಾರತ” ಕೃತಿಯ ಲೋಕಾರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ತಮ್ಮ ಮಾತನ್ನು ಮುಂದುವರಿಸುತ್ತಾ, ಈ ಪುಸ್ತಕದಲ್ಲಿ ನಮ್ಮ ದೇಶದ ಬಗ್ಗೆ ಹೆಮ್ಮೆ ಪಡಬಹುದಾದ ಒಂದು ನೂರು ವಿಶೇಷ ಸಂಗತಿಗಳನ್ನು ಆಯ್ದು, ಪ್ರತಿಯೊಂದರ ಬಗ್ಗೆ ಒಂದೆರಡು ಪುಟಗಳಲ್ಲಿ ವಿವರಣೆ ನೀಡಲಾಗಿದೆ. ಯಾವುದೇ ಸಂಗತಿಯ ಬಗ್ಗೆ ಪುಟಗಟ್ಟಲೆ ಬರೆದರೆ ಅದನ್ನು ಓದುವಷ್ಟು ವ್ಯವಧಾನ ಇಲ್ಲದಿರುವ ಇಂದಿನ ಕಾಲಮಾನದಲ್ಲಿ, ಅಡ್ಡೂರು ಕೃಷ್ಣ ರಾಯರು ಚುಟುಕಾದ ಮಾಹಿತಿ ನೀಡಿರುವುದು ಸೂಕ್ತ. ಇಲ್ಲಿರುವಷ್ಟು ವಿಷಯಗಳನ್ನು ಗ್ರಹಿಸಿಕೊಂಡರೂ, ನಮ್ಮ ದೇಶದ ಬಗ್ಗೆ ಇರಬಹುದಾದ ತಪ್ಪು ಕಲ್ಪನೆಗಳೆಲ್ಲ ಮಾಯವಾಗಿ, ಭಾರತದ ವಿರಾಟ್ ದರ್ಶನವಾಗುತ್ತದೆ ಎಂದು ಡಾ. ರಾಘವೇಂದ್ರ ಹೊಳ್ಳರು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಪುಸ್ತಕದ ಲೇಖಕರೂ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಗೌರವಾಧ್ಯಕ್ಷರೂ ಆದ ಅಡ್ದೂರು ಕೃಷ್ಣ ರಾಯರು "ನಮ್ಮ ಹೆಮ್ಮೆಯ ಭಾರತ” ಪುಸ್ತಕ ರಚನೆಗೆ ಪ್ರೇರಣೆ ಏನೆಂಬುದನ್ನು ಸಭಿಕರ ಮುಂದಿಟ್ಟರು. "ನಮ್ಮ ಅಮ್ಮ ಮತ್ತು ಅಪ್ಪನನ್ನು ನೆನೆದಾಗ ನಮ್ಮ ಮನಸ್ಸಿನಲ್ಲಿ ಅಭಿಮಾನ ಮೂಡುತ್ತದೆ. ನಮ್ಮ ಮಾತೃಭೂಮಿಯನ್ನು ನೆನೆದಾಗಲೂ ನಮ್ಮಲ್ಲಿ ಅದೇ ರೀತಿಯಲ್ಲಿ ಅಭಿಮಾನ ಮೂಡಬೇಕು. ಇಲ್ಲವಾದರೆ, ನಮ್ಮ ಚಿಂತನೆಯನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಈ ಮಹಾನ್ ದೇಶದ ಮಣ್ಣು, ನೀರು, ಗಾಳಿ, ಶಿಕ್ಷಣ ವ್ಯವಸ್ಥೆಯ ಅನುಕೂಲ ಎಲ್ಲವನ್ನೂ ಪಡೆದುಕೊಂಡು ಜೀವನ ಸಾಗಿಸುತ್ತಿರುವ ನಾವು “ಈ ದೇಶ ನನಗೇನು ಕೊಟ್ಟಿದೆ?” ಎಂದು ಪ್ರಶ್ನೆ ಮಾಡುತ್ತೇವೆ ಎಂದಾದರೆ, ನಮ್ಮ ಯೋಚನಾ ಪ್ರವೃತ್ತಿಯಲ್ಲೇ ದೋಷವಿದೆ ಎಂದರ್ಥ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ಅದನ್ನು ಪರಿಹರಿಸಿಕೊಳ್ಳಬೇಕಾಗಿದೆ. ಅದಕ್ಕೊಂದು ದಾರಿ ನಮ್ಮ ಭವ್ಯ ಭಾರತದ ಕುರಿತಾದ ಬೆರಗಿನ ಸಂಗತಿಗಳನ್ನು ತಿಳಿದುಕೊಳ್ಳುವುದು. ಎರಡು ವರುಷಗಳ ಮುಂಚೆ, ಈ ನಿಟ್ಟಿನಲ್ಲಿ ಶುರು ಮಾಡಿದ ನನ್ನ ಅಧ್ಯಯನದ ಫಲ ಈಗ ಪುಸ್ತಕದ ರೂಪದಲ್ಲಿ ನಿಮ್ಮ ಮುಂದಿದೆ” ಎಂದು ನುಡಿದರು.

ಪುಸ್ತಕದ ಮುಖಪುಟದಲ್ಲಿ “ಬಂಗಾರದ ಪರ್ವತ ಶ್ರೇಣಿ” ಹಿಮಾಲಯ, ವಿವೇಕಾನಂದರ ಪ್ರತಿಮೆ ಮತ್ತು ಸರ್ದಾರ ವಲ್ಲಭ ಭಾಯಿ ಪಟೇಲರ ಏಕತಾ ಪ್ರತಿಮೆಗಳ ಛಾಯಾಚಿತ್ರ ಅಳವಡಿಸಿಕೊಂಡದ್ದರ ಹಿನ್ನೆಲೆ ವಿವರಿಸಿದರು ಅಡ್ಡೂರು ಕೃಷ್ಣ ರಾಯರು. ಭಾರತದ ಉತ್ತರದಲ್ಲಿರುವ ಹಿಮಾಲಯ ಜಗತ್ತಿನ ಅತ್ಯಂತ ಉದ್ದದ ಪರ್ವತ ಶ್ರೇಣಿ. ಅದರ ಉದ್ದ ಸುಮಾರು 2,300 ಕಿಮೀ ಹಾಗೂ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 6,100 ಮೀ. ಡೆಹ್ರಾಡೂನಿನ ಹತ್ತಿರದ ಒಂದು ಜಾಗದಲ್ಲಿ ಉಷಾಕಾಲದಲ್ಲಿ  ಸೂರ್ಯೋದಯದ ದೃಶ್ಯ ಕಣ್ತುಂಬಿಕೊಳ್ಳಲು ಕಾದು ನಿಂತದ್ದನ್ನು ನೆನಪಿಸಿಕೊಂಡರು. ಸೂರ್ಯ ದಿಗಂತದಲ್ಲಿ ಮೇಲೇರುತ್ತಿದ್ದಂತೆ ಹಿಮ ಮುಚ್ಚಿದ ಪರ್ವತ ಶಿಖರಗಳು ಚಿನ್ನದ ಬಣ್ಣದಿಂದ ಕಂಗೊಳಿಸಿದ್ದನ್ನು ಕಣ್ಣಾರೆ ಕಂಡಾಗಿನ ರೋಮಾಂಚನವೇ ಆ ಅದ್ಭುತ ನೋಟವನ್ನು ಪುಸ್ತಕದ ಮುಖಪುಟದ ತಳಭಾಗದಲ್ಲಿ ಮುದ್ರಿಸಲು ಕಾರಣ ಎಂದರು.

ಸ್ವಾಮಿ ವಿವೇಕಾನಂದ ಮತ್ತು ಸರ್ದಾರ್ ವಲ್ಲಭಬಾಯ್ ಪಟೇಲರ ಪ್ರತಿಮೆಗಳ ಚಿತ್ರಗಳು ಪುಸ್ತಕದ ಮುಖಪುಟದಲ್ಲಿರಲು ಕಾರಣ ಅವರಿಬ್ಬರ ಮೇರು ವ್ಯಕ್ತಿತ್ವ ಮತ್ತು ನವಭಾರತವನ್ನು ರೂಪಿಸುವಲ್ಲಿ ಅವರಿಬ್ಬರ ಪಾತ್ರ ಎಂದರು. ಸ್ವಾಮಿ ವಿವೇಕಾನಂದರು ಕೇವಲ ನಾಲ್ಕು ದಶಕಗಳು ತುಂಬುವ ಮೊದಲೇ ತಮ್ಮ ಬದುಕು ಮುಗಿಸಿದವರು. ಅಷ್ಟರಲ್ಲೇ ಭಾರತದ ಅಗಾಧ ಪಾರಂಪರಿಕ ಜ್ನಾನವನ್ನು ಅರೆದು ಕುಡಿದವರು. ಸಪ್ಟಂಬರ್ 1893ರಲ್ಲಿ ಅಮೇರಿಕಾದ ಚಿಕಾಗೋದ “ವಲ್ಡ್ ಪಾರ್ಲಿಮೆಂಟ್ ಆಫ್ ರಿಲಿಜಿಯನ್ಸ್”ನಲ್ಲಿ ಭಾರತದ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದ ಪಾಶ್ಚಾತ್ಯರಿಗೆ ತಮ್ಮ ಅಸ್ಖಲಿತ ಉಪನ್ಯಾಸದ ಮೂಲಕ ಭಾರತದ ನಿಜ ಸ್ವರೂಪದ ದರ್ಶನ ಮಾಡಿಸಿದವರು. ಅಂದಿನಿಂದ ಇತರ ದೇಶಗಳು ಜನರು ಭಾರತವನ್ನು ಗೌರವದಿಂದ ಕಾಣುವಂತಾಯಿತು. ಸರ್ದಾರ ವಲ್ಲಭಬಾಯಿ ಪಟೇಲರಂತೂ ಭಾರತ ಭೌಗೋಲಿಕವಾಗಿ ಚಿಂದಿಯಾಗದಿರಲು ಮುಖ್ಯ ಕಾರಣಕರ್ತರು. ಹರಿದು ಹಂಚಿ ಹೋಗಿದ್ದ ಐನೂರಕ್ಕೂ ಅಧಿಕ ಸಂಸ್ಥಾನಗಳ ರಾಜಮಹಾರಾಜರ ಮನವೊಲಿಸಿ, ಅವನ್ನು ಭಾರತವೆಂಬ ಒಕ್ಕೂಟದಲ್ಲಿ ಸೇರ್ಪಡೆಗೊಳಿಸಿದವರು. ಇವತ್ತು ಐದಾರು ಸದಸ್ಯರಿರುವ ಕುಟುಂಬದಲ್ಲೇ ಒಮ್ಮತ ಇಲ್ಲದಿರುವುದನ್ನು ಕಾಣುವಾಗ, ಅವರ ಅಸಾಮಾನ್ಯ ಸಾಧನೆ ನಮಗೆ ಅರ್ಥವಾಗುತ್ತದೆಂದು ವಿವರಿಸಿದರು.

ಸ್ವಾತಂತ್ರ್ಯಾನಂತರ ನಮ್ಮ ಮಹಾನ್ ಭಾರತದ ಅಪ್ರತಿಮ ಸಾಧನೆಗಳ ಹಿನ್ನೆಲೆಯಲ್ಲಿ, ಕಳೆದ ನಾಲ್ಕು ವರುಷಗಳಲ್ಲಿ ನಾಲ್ಕು ಲಕ್ಷ ಭಾರತೀಯರು ಭಾರತದ ಪೌರತ್ವವನ್ನು ತ್ಯಜಿಸಿರುವುದನ್ನು ಪ್ರಸ್ತಾಪಿಸಿದ ಅಡ್ಡೂರು ಕೃಷ್ಣ ರಾಯರು ಇದಕ್ಕೆ ಕಾರಣವೇನೆಂದು ಪ್ರಶ್ನಿಸಿದರು. ಮಾತೃಭೂಮಿಯ ಬಗ್ಗೆ ಅಭಿಮಾನ ಇಲ್ಲದಿರುವುದು ಇದಕ್ಕೆ ಕಾರಣವಾಗಿದ್ದರೆ, ಹಿರಿಯ ತಲೆಮಾರಿನ ಪ್ರತಿಯೊಬ್ಬರೂ ಇದಕ್ಕೆ ಜವಾಬ್ದಾರಿ ಎಂದರು. 140 ಕೋಟಿ ಮಿಕ್ಕಿದ ಜನಸಾಗರಕ್ಕೆ ದಿನದಿನವೂ ಆಹಾರ ಒದಗಿಸುತ್ತಿರುವುದು ಮತ್ತು ಪುಟ್ಟ ದೇಶಗಳೂ ದಿವಾಳಿ ಆಗಿರುವ ಕಾಲಘಟ್ಟದಲ್ಲಿ ಈ ದೊಡ್ಡ ದೇಶದ ಆರ್ಥಿಕತೆಯನ್ನು ನಮ್ಮ ಸರಕಾರ ಸಮರ್ಥವಾಗಿ ನಿರ್ವಹಿಸುತ್ತಿರುವುದು - ನಮ್ಮ ಕಣ್ಣು ತೆರೆಸಲು ಜಗತ್ತಿನಲ್ಲೇ ಸಾಟಿಯಿಲ್ಲದ ಇವೆರಡೇ ಸಾಧನೆಗಳು ಸಾಕು. ಆದ್ದರಿಂದ, ನಮ್ಮ ಭಾರತದ ಬಗ್ಗೆ ಹೆಮ್ಮೆ ಪಡಬೇಕಾದಂತಹ ಸಂಗತಿಗಳನ್ನು ಚೆನ್ನಾಗಿ ತಿಳಿದುಕೊಂಡು, ನಮ್ಮ ಮನೆಯ ಮಕ್ಕಳು-ಮೊಮ್ಮಕ್ಕಳಿಗೆ ಅವನ್ನು ಮನದಟ್ಟು ಮಾಡಿಸಬೇಕಾದ ಹೊಣೆಗಾರಿಕೆ ನಮಗಿದೆ. ಆ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ, "ನಮ್ಮ ಹೆಮ್ಮೆಯ ಭಾರತ” ಪುಸ್ತಕದಲ್ಲಿ ದಾಖಲಿಸಿರುವ ಒಂದು ನೂರು ಸತ್ಯಾಂಶಗಳು ಪ್ರೇರಣೆಯಾಗಲಿ ಎಂದು ಅವರು ಹಾರೈಸಿದರು.    

ಪುಸ್ತಕ ಲೋಕಾರ್ಪಣೆಯ ಅಧ್ಯಕ್ಷತೆಯನ್ನು ವಹಿಸಿದ್ದವರು ಅಸೋಸಿಯೇಷನಿನ ಅಧ್ಯಕ್ಷರಾದ ಕೆ. ಜೈರಾಜ್ ರೈ. ತಮ್ಮ ಅಧ್ಯಕ್ಷ ಭಾಷಣದಲ್ಲಿ ಅವರು “ಇಂತಹ ಪುಸ್ತಕವೊಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವಶ್ಯವಿತ್ತು. ಅಡ್ಡೂರು ಕೃಷ್ಣ ರಾಯರು ಅದನ್ನು ಸೂಕ್ತ ಸಮಯದಲ್ಲಿ ಬರೆದು, ನವ್ಯ ಸಂಪದ ಪ್ರಕಾಶನದವರು ಪ್ರಕಟಿಸಿರುವುದು ಸ್ತುತ್ಯರ್ಹ” ಎಂದರು. ಉಪಾಧ್ಯಕ್ಷರಾದ ರಮೇಶ ರಾಯರು ಸ್ವಾಗತಿಸಿ, ಕಾರ್ಯದರ್ಶಿ ಶಶಿಧರ್ ಧನ್ಯವಾದ ಸಮರ್ಪಿಸಿದರು.

ಫೋಟೋ 1: ಪುಸ್ತಕ ಲೋಕಾರ್ಪಣೆಯ ಕ್ಷಣ (ಎಡದಿಂದ ಬಲಕ್ಕೆ) ಮಂಗಳೂರು ಹಿರಿಯ ನಾಗರಿಕರ ಅಸೋಸಿಯೇಷನಿನ ಕಾರ್ಯದರ್ಶಿ ಕೆ.ಎನ್. ಶಶಿಧರ, ಉಪಾಧ್ಯಕ್ಷ ಕೆ. ರಮೇಶ ರಾವ್, ಡಾ. ರಾಘವೇಂದ್ರ ಹೊಳ್ಳ ಎನ್., ಅಧ್ಯಕ್ಷ ಕೆ. ಜೈರಾಜ್ ರೈ ಮತ್ತು ಅಡ್ಡೂರು ಕೃಷ್ಣ ರಾವ್  
ಫೋಟೋ 2: "ನಮ್ಮ ಹೆಮ್ಮೆಯ ಭಾರತ” ಪುಸ್ತಕದ ಮುಖಪುಟ

Comments

Submitted by addoor Fri, 08/05/2022 - 23:34

"ನಮ್ಮ ಹೆಮ್ಮೆಯ ಭಾರತ” ಪುಸ್ತಕ ಬೇಕಾಗಿದೆ; ನಮ್ಮ ವಿಳಾಸಕ್ಕೆ ತರಿಸುವುದು ಹೇಗೆ? ಎಂದು ಹಲವರು ವಿಚಾರಿಸಿದ್ದಾರೆ. ಹಾಗಾಗಿ ಪುಸ್ತಕ ಕಳಿಸುವ ವ್ಯವಸ್ಥೆ ಬಗ್ಗೆ 5-8-2022ರಂದು "ಸಂಪದ"ದಲ್ಲಿ ಪ್ರಕಟಿಸಲಾಗಿದೆ.