“ನೆರಳು”

“ನೆರಳು”

ಕವನ

ನೆರಳು  ನೀಡುತ್ತಿದ್ದ ಮರಗಳೆಲ್ಲವೂ . . .
ಮಾನವನ ದುರಾಸೆಗೆ ಬಲಿಯಾಗಿ
ಧರಾಶಾಯಿಯಾಗಿರಲು
ಇನ್ನೆಲ್ಲಿದೆ ನೆರಳು ? ಬರೀ ಒಣ ಬಿಸಿಲು !
ಭಣಗುಡುವ ಬಯಲಲ್ಲೇ . . . ಉರುಳು - ಹೊರಳು
ಬೇಯುತಿದೆ ಭೂ ಮಾತೆಯ ಒಡಲು .                                                                                  ॥೧॥ 

 

ಮನೆಯ ಕಳೆದುಕೊಂಡ ಹಕ್ಕಿಗಳ
ಬದುಕೆಲ್ಲಾ. . . ಇನ್ನು ಬರೀ  ಗೋಳು 
ಎದೆ  ತುಂಬಿ ಇಂಪಾಗಿ ಹಾಡಲು
ಎಲ್ಲಿದೆ ಹಸಿರು ತುಂಬಿದ ಸುಂದರ ವನಗಳು ?
ಮನದ ತುಂಬಾ ... ಅರಿಯದ ದಿಗಿಲು .                                                                               ॥೨॥ 

 

ಮೇಯಲು  ಹೋದ ದನ-ಕರುಗಳಿಗೆ 
ವಿಶ್ರಮಿಸಲು ಮರದ ನೆರಳಿನ ಆಶ್ರಯವಿಲ್ಲ !
ಗೂಡಂಗಡಿಗಳ ಬಳಿಯಲ್ಲೇ ನಿಲ್ಲುತ್ತಿವೆ
ಜೊಲ್ಲು ಸುರಿಸುತ್ತ ... ನಿಟ್ಟುಸಿರು ಬಿಡುತ್ತಾ ...
ತಪ್ಪು ಯಾರದೋ ... ಶಿಕ್ಷೆ ಯಾರಿಗೋ ... ?                                                                         ॥೩॥ 

 

ಸುಡುವ ಬಿಸಿಲಿಗೆ ತಂಪು ನೀಡಲು
ತಂಗಾಳಿ ... ಬೀಸಿ ಬರಲು ಮರಗಳು ಬೇಕೇ ಬೇಕು
ಅದಕ್ಕಾಗಿ ನಾವು ಗಿಡಗಳನ್ನು ನೆಡಲೇಬೇಕು
ನಮ್ಮ ಮಕ್ಕಳಿಗಾದರೂ ... ಸಿಗಲಿ
ಮರದಡಿಯ ನೆರಳು !                                                                                                     ॥೪॥ 

 

ನಾವು ಮಾಡಿದ ಮಹಾ ಪಾಪಕೆ
ಪ್ರಾಣಿ, ಪಕ್ಷಿಗಳಿಗೆ ಸಿಗದಿರಲಿ 'ಉರಿ ಶಾಪ'
ಕಡಿಮೆಯಾಗಲಿ ಈ ಉರಿ ಬಿಸಿಲಿನ ತಾಪ
ನಿಂತು ಹೋಗಲಿ ಮರಗಳನು ಕಡಿದು
ಉರುಳಿಸುವ ಮಾನವನ ಪ್ರತಾಪ !!!                                                                                ॥೫॥