“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!

“ಪದ್ಮಶ್ರೀ” ರೈತ ರಾಮ್ ಶರಣ್ ವರ್ಮಾರ ವಾರ್ಷಿಕ ಆದಾಯ ರೂ.೪೮ ಲಕ್ಷ!

“ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‍ಪುರ ಗ್ರಾಮದಲ್ಲಿದೆ.
ಅಲ್ಲಿ ಅವರ ಕುಟುಂಬದ ಹಿಂದಿನ ಮೂರು ತಲೆಮಾರುಗಳದ್ದು ಬಡತನದ ಬದುಕು. ಹತ್ತನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದರು ರಾಮ್ ಶರಣ್ ವರ್ಮಾ. ಆದರೆ ಕುಟುಂಬದ ಬಡತನದಿಂದಾಗಿ ಅವರೂ ಕೃಷಿಯಲ್ಲಿ ತೊಡಗಬೇಕಾಯಿತು.
“ಬಾಳೆ ರಾಜ” ಎಂಬ ಹೆಸರಿಗೆ ತಕ್ಕಂತೆ ೧೫೦ ಎಕ್ರೆ ವಿಸ್ತಾರದ ಜಮೀನಿನಲ್ಲಿ ಈಗ ರಾಮ್ ಶರಣ್ ವರ್ಮಾರ (೫೦ ವರುಷ) ಕೃಷಿ. ತಿಂಗಳಿಗೆ ರೂ.೩ ಲಕ್ಷದಿಂದ ರೂ.೪ ಲಕ್ಷ ತನಕ ಆದಾಯ. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ೨೦ ಪ್ರಶಸ್ತಿ ಗಳಿಸಿರುವ ರಾಮ್ ಶರಣರ ಜಮೀನು ನೋಡಲು ದೇಶವಿದೇಶಗಳ ರೈತರು ಬರುತ್ತಲೇ ಇದ್ದಾರೆ.
ರಾಮ್ ಶರಣ್ ವರ್ಮಾರ ತಂದೆ ಬೆಳೆಯುತ್ತಿದ್ದದ್ದು ಗೋಧಿ, ಭತ್ತ, ಕಬ್ಬು ಮತ್ತು ಸಾಸಿವೆ. ಅವರದು ಸಾಂಪ್ರದಾಯಿಕ ಕೃಷಿ. ಆ ವಿಧಾನದಲ್ಲಿ ಉತ್ಪಾದನಾ ವೆಚ್ಚವೂ ಅಧಿಕ, ಕೆಲಸಗಾರರ ಅವಲಂಬನೆಯೂ ಅಧಿಕ; ಅದರಿಂದಾಗಿ ಲಾಭ ಅತ್ಯಲ್ಪ ಎಂಬುದನ್ನು ಗಮನಿಸಿದರು.
ಹಾಗಾಗಿ, ಹೊಸ ಬೆಳೆಗಳನ್ನು ಹೊಸ ವಿಧಾನದಲ್ಲಿ ಬೆಳೆಯಬೇಕೆಂಬ ಯೋಜನೆ ಯುವಕ ರಾಮ್ ಶರಣ್ ಅವರದು. ೧೯೮೪ರಲ್ಲಿ ಮಹಾರಾಷ್ಟ್ರ, ಗುಜರಾತ್, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಅವರ ಭೇಟಿ. ಅಲ್ಲಿನ ಪ್ರಗತಿಪರ ರೈತರು ಹಾಗೂ ಕೃಷಿ ವಿಜ್ನಾನಿಗಳಿಂದ ಮಾಹಿತಿ ಸಂಗ್ರಹ.
ಅನಂತರ ೧೯೮೮ರಲ್ಲಿ ರಾಮ್ ಶರಣ್ ಒಂದೆಕ್ರೆಯಲ್ಲಿ ಅಂಗಾಂಶ ಕಸಿಯ ಬಾಳೆ ತೋಟ ಎಬ್ಬಿಸಿದರು. ಮೊದಲ ಪ್ರಯತ್ನದಲ್ಲೇ ಅವರ ಇಳುವರಿ ೪೦೦ ಕ್ವಿಂಟಾಲ್ ಬಾಳೆಗೊನೆಗಳು. ೧೪ ತಿಂಗಳ ಅವಧಿಯ ಆ ಬೆಳೆಗೆ  ಅವರ ವೆಚ್ಚ ಒಂದು ಲಕ್ಷ ರೂಪಾಯಿ ಹಾಗೂ ಆದಾಯ ನಾಲ್ಕು ಲಕ್ಷ ರೂಪಾಯಿ.
ಅವರು ೨೦೧೨ರಲ್ಲಿ ಕೆಂಪು ಬಾಳೆಯ ೧,೦೦೦ ಸಸಿ ನೆಟ್ಟರು. ಅಧಿಕ ಪ್ರೊಟೀನ್ ಮತ್ತು ನಾರಿನಂಶ ಹೊಂದಿರುವ ಕೆಂಪು ಬಾಳೆಯಲ್ಲಿ ಸಕ್ಕರೆಯಂಶ ಕಡಿಮೆ. ಈ ತಳಿಯ ಅವಧಿ ೧೮ ತಿಂಗಳು. ಇದರ ಬಾಳೆಹಣ್ಣಿನ ಸಗಟು ಮಾರಾಟ ಬೆಲೆ ಕಿಲೋಕ್ಕೆ ರೂ.೮೦ - ೧೦೦. ಸಾಂಪ್ರದಾಯಿಕ ಬಾಳೆ ತಳಿಗಳ ಅವಧಿ ೧೪ ತಿಂಗಳಾಗಿದ್ದು, ಫಸಲಿನ ಬೆಲೆ ಕಿಲೋಕ್ಕೆ ಕೇವಲ ರೂ.೧೫. ಹಾಗಾಗಿ, ಕೆಂಬಣ್ಣದ ಬಾಳೆ ತಳಿಯ ಇಳುವರಿ ಕಡಿಮೆಯಾದರೂ ಅದರಿಂದ ಸಿಗುವ ಎಕ್ರೆವಾರು ಆದಾಯ ಅಧಿಕ.
ಬಾಳೆ ಕೃಷಿಯ ಯಶಸ್ಸಿನಿಂದ ಉತ್ಸಾಹಿತರಾದ ರಾಮ್ ಶರಣ್ ಕೃಷಿಯಲ್ಲಿ ತನ್ನ ಪ್ರಯೋಗಗಳನ್ನು ಮುಂದುವರಿಸಿದರು. ಮಣ್ಣಿನ ಫಲವತ್ತತೆ ಮತ್ತು ಬೆಳೆಗಳ ಇಳುವರಿ ಹೆಚ್ಚಳಕ್ಕೆ ಬೆಳೆ ಪರಿವರ್ತನೆ ಅಗತ್ಯವೆಂದು ಅವರು ತಿಳಿದಿದ್ದರು. ಆದ್ದರಿಂದ, ಬಾಳೆ ಬೆಳೆದ ನಂತರ, ೯೦-ದಿನ ಅವಧಿಯಲ್ಲಿ ಆಲೂಗಡ್ಡೆ, ಬಳಿಕ ೧೨೦-ದಿನ ಅವಧಿಯಲ್ಲಿ ಹೈಬ್ರಿಡ್ ಟೊಮೆಟೊ, ಅದಾದ ನಂತರ ಮುಂದಿನ ೯೦-ದಿನಗಳಲ್ಲಿ ಮೆಂತೆ ಬೆಳೆಯುತ್ತಾರೆ. ಇದು ಅವರು ಅನುಸರಿಸುವ ಬೆಳೆಗಳ “ವರ್ತುಲ”.
೧೯೯೦ರಲ್ಲಿ ರಾಮ್ ಶರಣ್ ಒಂದೆಕ್ರೆಯಲ್ಲಿ ನೆಟ್ಟದ್ದು ೮,೦೦೦ ಟೊಮೆಟೊ ಸಸಿ. ಅವುಗಳಿಗೆ ಕೋಲುಗಳ ಆಧಾರ ಕೊಟ್ಟು ಆರಡಿ ಎತ್ತರಕ್ಕೆ ಬೆಳೆಸಿದರು. ಈ ವಿಧಾನದಿಂದ ಅವರಿಗೆ ಅಧಿಕ ಇಳುವರಿ ಗಳಿಸಲು ಸಾಧ್ಯವಾಯಿತು. ಸಾಂಪ್ರದಾಯಿಕ ವಿಧಾನದಲ್ಲಿ ಇಳುವರಿ ಎಕ್ರೆಗೆ ೨೦೦ ಕ್ವಿಂಟಾಲ್ ಆಗಿದ್ದರೆ, ಸುಧಾರಿತ ವಿಧಾನದಲ್ಲಿ ಎಕ್ರೆಗೆ ೪೦೦ರಿಂದ ೫೦೦ ಕ್ವಿಂಟಾಲ್. ಆ ಮೂಲಕ ಎಕ್ರೆಗೆ ರೂ.೪ ಲಕ್ಷ ಆದಾಯ.
ರಾಮ ಶರಣ್ ವರ್ಮಾರ ಯಶಸ್ಸಿನ ಸುದ್ದಿ ಉತ್ತರಪ್ರದೇಶದ ೫೦ ಜಿಲ್ಲೆಗಳ ಹಲವು ರೈತರ ಗಮನ ಸೆಳೆಯಿತು. ರೈತರು ತಂಡತಂಡವಾಗಿ ಅವರ ಜಮೀನಿಗೆ ಭೇಟಿ ನೀಡಲು ಶುರುವಿಟ್ಟರು. ತನ್ನ ಅನುಭವ ಹಾಗೂ ಯಶಸ್ಸಿನ ಸೂತ್ರಗಳನ್ನು ಎಲ್ಲ ರೈತರೊಂದಿಗೆ ಹಂಚಿಕೊಳ್ಳಲು ರಾಮ್ ಶರಣ್ ಮುಂದಾದರು.
೧೯೮೬ರಲ್ಲಿ ಒಂದೆಕ್ರೆಯಲ್ಲಿ ಕೃಷಿ ಶುರು ಮಾಡಿದ್ದ ರಾಮ್ ಶರಣ್ ಅವರ ಕೃಷಿ ಇದೀಗ ೧೫೦ ಎಕ್ರೆಗಳಿಗೆ ವ್ಯಾಪಿಸಿದೆ. ಯಾಕೆಂದರೆ, ಅವರ ಹಳ್ಳಿಯ ಅನೇಕ ರೈತರು ತಮ್ಮ ಜಮೀನನ್ನು ಇವರಿಗೆ ಲೀಸಿಗೆ ಕೊಟ್ಟಿದ್ದಾರೆ.
ರೈತರಿಗೆ ತರಬೇತಿ ನೀಡಲಿಕ್ಕಾಗಿ ಕಾರ್ಯಾಗಾರಗಳನ್ನು ನಡೆಸುತ್ತಾರೆ ರಾಮ್ ಶರಣ್. “ಈ ವರೆಗೆ ಸುಮಾರು ಹತ್ತು ಲಕ್ಷ ರೈತರು ನನ್ನ ತೋಟ ನೋಡಿ ಹೋಗಿದ್ದಾರೆ. ನನಗೆ ಅದಕ್ಕಿಂತಲೂ ಹೆಚ್ಚಿನ ಹೆಮ್ಮೆಯ ಸಂಗತಿ ಏನೆಂದರೆ, ನನ್ನ ಹಳ್ಳಿಯ ಜನರು ಕೆಲಸ ಹುಡುಕಿಕೊಂಡು ಈಗ ನಗರಗಳಿಗೆ ಹೋಗುತ್ತಿಲ್ಲ. ಬದಲಾಗಿ, ನಗರಗಳ ಜನರೇ ಕೆಲಸಕ್ಕಾಗಿ ನಮ್ಮ ಹಳ್ಳಿಗೆ ಬರುತ್ತಿದ್ದಾರೆ. ನಾನು ಕೃಷಿ ಮಾಡುತ್ತಿರುವ ೧೫೦ ಎಕ್ರೆ ಜಮೀನಿನಲ್ಲಿ ದಿನದಿನವೂ ದುಡಿದು ಮಜೂರಿ ಪಡೆಯುತ್ತಿರುವ ಜನರು ಸಾವಿರಾರು. ಜೊತೆಗೆ, ನನ್ನ ಸುಧಾರಿತ ಕೃಷಿ ವಿಧಾನಗಳನ್ನು ಅನುಸರಿಸುತ್ತಾ ಲಾಭ ಗಳಿಸುತ್ತಿರುವ ರೈತರೂ ಸಾವಿರಾರು” ಎನ್ನುತ್ತಾರೆ ರಾಮ್ ಶರಣ್.
ರೈತರು ಪ್ರಯೋಗಶೀಲರಾಗಿದ್ದರೆ ಮತ್ತು ನೂರಕ್ಕೆ ನೂರು ತೊಡಗಿಸಿಕೊಂಡರೆ, ಕೃಷಿಯಿಂದ ಲಾಭ ಖಂಡಿತ ಎಂಬುದು ರಾಮ್ ಶರಣ್ ವರ್ಮಾರ ವಿಶ್ವಾಸ.
ಫೋಟೋ ಕೃಪೆ: ದ ಬೆಟರ್ ಇಂಡಿಯಾ ವೆಬ್-ಸೈಟ್