“ಬದುಕು ಬೆಳಗಿಸುವ ಕತೆಗಳು” ಮತ್ತು “ಜಲ ಜಾಗೃತಿ: ಯಾಕೆ? ಹೇಗೆ?”ಪುಸ್ತಕಗಳ ಲೋಕಾರ್ಪಣೆ

“ಬದುಕು ಬೆಳಗಿಸುವ ಕತೆಗಳು” ಮತ್ತು “ಜಲ ಜಾಗೃತಿ: ಯಾಕೆ? ಹೇಗೆ?”ಪುಸ್ತಕಗಳ ಲೋಕಾರ್ಪಣೆ

“ಇದೀಗ ಲೋಕಾರ್ಪಣೆಯಾದ ಅಡ್ಡೂರು ಕೃಷ್ಣ ರಾಯರ “ಜಲ ಜಾಗೃತಿ: ಯಾಕೆ? ಹೇಗೆ?” ಪುಸ್ತಕವನ್ನು ಹೈಸ್ಕೂಲು ಮತ್ತು ಪಿಯುಸಿ ತರಗತಿಗಳಿಗೆ ಪಠ್ಯಪುಸ್ತಕವನ್ನಾಗಿ ಮಾಡಬೇಕು. ಯಾಕೆಂದರೆ ಜೀವಜಲದ ಬಗ್ಗೆ ನಮ್ಮ ಕಣ್ಣು ತೆರೆಸುವ ಹಲವಾರು ಸಂಗತಿಗಳು ಹಾಗೂ ಅಂಕೆಸಂಖ್ಯೆಗಳು ಅದರಲ್ಲಿವೆ” ಎಂದು ಸತೀಶ್ ರಾವ್ ಇಡ್ಯಾ, ಅಧ್ಯಕ್ಷ, ಅಸೋಸಿಯೇಷನ್ ಆಫ್ ವಾಲ್ಯುವರ್ಸ್ (ರಿ.) ತಿಳಿಸಿದರು.

ಮಂಗಳೂರಿನ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಬರಹಗಾರ, ಅಂಕಣಕಾರ, ಬಳಕೆದಾರರ ಅಂದೋಲನ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ, ಸಾವಯವ ಕೃಷಿಕ ಹಾಗೂ ವಿಷಮುಕ್ತ ಆಹಾರ ಆಂದೋಲನದ ಮುಂದಾಳು ಅಡ್ಡೂರು ಕೃಷ್ಣ ರಾಯರ “ಜಲ ಜಾಗೃತಿ: ಯಾಕೆ? ಹೇಗೆ?” ಮತ್ತು “ಬದುಕು ಬೆಳಗಿಸುವ ಕತೆಗಳು” ಎಂಬ ಎರಡು ಪುಸ್ತಕಗಳನ್ನು 2 ಆಗಸ್ಟ್ 2025ರಂದು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಸತೀಶ್ ರಾವ್ ಇಡ್ಯಾ ಅವರು ತಮ್ಮ ಮಾತನ್ನು ಸಮರ್ಥಿಸಿ ಮಾತನಾಡುತ್ತಾ, “ನೀರಿನ ಬಗ್ಗೆ ನಮಗೆ ಗೊತ್ತಿಲ್ಲದ ಆದರೆ ಒಪ್ಪಿಕೊಳ್ಳಲೇ ಬೇಕಾದ ಹಲವು ಸಂಗತಿಗಳು ಈ ಪುಸ್ತಕದಲ್ಲಿವೆ. ಉದಾಹರಣೆಗೆ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ 100 ಲೀಟರ್ ನೀರು ಬಳಸುತ್ತಾರೆ. ಅಂದರೆ ವರುಷಕ್ಕೆ ಸುಮಾರು 36,500 ಲೀಟರ್ ನೀರು! ಭೂಮಿಗೆ ಕನಿಷ್ಠ ಇಷ್ಟು ನೀರನ್ನು ಮರುಪೂರಣ ಮಾಡುವ ಜವಾಬ್ದಾರಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇಲ್ಲವೇ? ಈ ಜವಾಬ್ದಾರಿ ನಿರ್ವಹಿಸದಿದ್ದರೆ, 2050ರಲ್ಲಿ ನಮ್ಮ ಮಕ್ಕಳಿಗೆ ದಿನಕ್ಕೆ ತಲಾ 100 ಲೀಟರ್ ನೀರು ಹೇಗೆ ಸಿಕ್ಕೀತು? ಎಂದು ಅಡ್ಡೂರು ಕೃಷ್ಣ ರಾಯರು ಪ್ರಶ್ನಿಸುತ್ತಾರೆ. ತಾನು ಬಳಸುವಷ್ಟು ನೀರಿನ ಮರುಪೂರಣದ ಮಾತು ಹಾಗಿರಲಿ. ನಮ್ಮ ಪರಿಚಿತರು ಹಾಗೂ ಸುತ್ತಮುತ್ತಲಿನವರಲ್ಲಿ ಅಂಗಳ ತೊಳೆಯಲು, ಕಾರು ತೊಳೆಯಲು ಶುದ್ಧ ಕುಡಿಯುವ ನೀರನ್ನು ಪೋಲು ಮಾಡುವವರು ಎಷ್ಟು ಜನರಿದ್ದಾರೆ? ಎಂದು ಪ್ರಶ್ನಿಸುವ ಮೂಲಕ ನಮ್ಮನ್ನು ಜಲಸಂರಕ್ಷಣೆಗಾಗಿ ಕ್ರಿಯಾಶೀಲರಾಗಲು ಪ್ರೇರೇಪಿಸುತ್ತಾರೆ” ಎಂದು ನುಡಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಬ್ಯಾಂಕಿನ ನಿವೃತ್ತ ಸಿ.ಇ.ಓ. ಮಹಾಬಲೇಶ್ವರ ಎಂ.ಎಸ್. ಅವರು ತಮ್ಮ ಮಾತಿನಲ್ಲಿ, ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ಅಡ್ಡೂರು ಕೃಷ್ಣ ರಾಯರು ತಮಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದುದನ್ನು ನೆನಪಿಸಿಕೊಂಡರು. ಅಂದಿನಿಂದಲೂ ಅಡ್ಡೂರು ಕೃಷ್ಣ ರಾವ್ ಸಮಾಜಮುಖಿ ಆಂದೋಲನಗಳಲ್ಲಿ ಸಕ್ರಿಯರಾಗಿದ್ದಾರೆ ಎಂಬುದನ್ನು ತಿಳಿಸುತ್ತಾ, “ಇವರು ಏನೇ ಬರೆದರೂ ಅಧ್ಯಯನ ಮಾಡಿಯೇ ಬರೆಯುತ್ತಾರೆ. ಉದಾಹರಣೆಗೆ 46 ಬಿಲಿಯನ್ ವರುಷಗಳ ಮುಂಚೆ ಈ ಭೂಮಿ ರೂಪುಗೊಂಡಾಗ ಇಲ್ಲಿ ಎಷ್ಟು ನೀರು ಇತ್ತೋ ಈಗಲೂ ಅಷ್ಟೇ ಇದೆ. ಆದರೆ ಜನಸಂಖ್ಯೆ ಮಾತ್ರ ವೇಗವಾಗಿ ಬೆಳೆಯುತ್ತಿದೆ. 2024ರ ಆರಂಭದಲ್ಲಿ ಭೂಮಿಯ ಜನಸಂಖ್ಯೆ 800 ಕೋಟಿ ದಾಟಿದೆ ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಇದನ್ನು ಯಾರು ಬೇಕಾದರೂ ಮಾಹಿತಿ ಮೂಲಗಳಲ್ಲಿ ತಾಳೆ ನೋಡಬಹುದು. ಅದು ಸರಿಯಾಗಿಯೇ ಇರುತ್ತದೆ. ಇದು ಬರವಣಿಗೆಯ ಬಗ್ಗೆ ಅವರ ಶ್ರದ್ಧೆ. ಅಷ್ಟೇ ಅಲ್ಲ, ಜನಸಂಖ್ಯಾ ಸ್ಫೋಟದ ಪರಿಣಾಮವಾಗಿ ನೀರಿನ ತಲಾ ಲಭ್ಯತೆ ಎಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಿ ಎನ್ನುವ ಮೂಲಕ ಕೃಷ್ಣ ರಾಯರು ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ. ಹೀಗೆ ಸರಳವಾಗಿ ವಿಷಯ ನಿರೂಪಣೆ ಮಾಡುತ್ತಾ, ನಮ್ಮನ್ನು ಜಾಗೃತರನ್ನಾಗಿಸಿ, ಜಲಸಂರಕ್ಷಣೆಯ ಕೆಲಸಕ್ಕೆ ಕಾರ್ಯೋನ್ಮುಖರಾಗುವಂತೆ ಮಾಡುವುದು ಅವರ ಬರಹಗಳ ವಿಶೇಷತೆ” ಎಂದರು.

“ಜಲ ಜಾಗೃತಿ: ಯಾಕೆ? ಹೇಗೆ?” ಪುಸ್ತಕದ ಪ್ರವರ್ತಕರಾದ ನೆಲಮಂಗಲದ ರಾಶಿ ಗೇಟ್-ವೇ ಬಡಾವಣೆಯ “ಸಾವಯವ ಜೀವನ ಪ್ರತಿಷ್ಠಾನ”ದ ಹರಿಪ್ರಸಾದ್ ನಾಡಿಗ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ “ಕನ್ನಡ ಇಂಡಿಯಾ ವಾಟರ್ ಪೋರ್ಟಲ್” ಚಟುವಟಿಕೆಗಳ ಮೂಲಕ ತನಗೆ ಅಡ್ಡೂರು ಕೃಷ್ಣ ರಾಯರ ಪರಿಚಯ ಆದದ್ದನ್ನು ತಿಳಿಸಿದರು. ಅಂದಿನಿಂದ ಇಂದಿನ ವರೆಗೂ ತಮ್ಮ ತರಬೇತಿ ಕಾರ್ಯಕ್ರಮಗಳು, ಉಪನ್ಯಾಸಗಳು, ಬರಹಗಳು, ಅಂಕಣ ಬರಹಗಳು ಮತ್ತು ಪುಸ್ತಕಗಳ ಮೂಲಕ ಜಲ ಸಾಕ್ಷರತೆಯಿಂದ ತೊಡಗಿ, ಜಲ ಜಾಗೃತಿ ಮತ್ತು ಜಲಸಂರಕ್ಷಣೆಯ ಕಾಯಕಕ್ಕೆ ಕೃಷ್ಣ ರಾಯರ ಬದ್ಧತೆಯನ್ನು ಪ್ರಸ್ತಾಪಿಸಿದರು. “ಈ ಪುಸ್ತಕದ ಮೊದಲ ಲೇಖನದ ಶೀರ್ಷಿಕೆ “ನೀರಿಂಗಿಸೋಣ, ಒಂದಿಷ್ಟು ಜಾಗ ಕೊಡಿ, ನಿಮ್ಮ ಮನದಾಳದಲ್ಲಿ!’ ಇದು ನಮ್ಮನ್ನು ಬಡಿದೆಬ್ಬಿಸುವ ಬರಹ. ಜಲಸಂರಕ್ಷಣೆಗಾಗಿ ನಮ್ಮ ಮನಃಪರಿವರ್ತನೆ ಅಗತ್ಯ ಎಂದು ವಿವರಿಸುವ ಬರಹ. “ಕೊಳವೆ ಬಾವಿ: ಅಂತರ್ಜಲಕ್ಕೆ ಕನ್ನ” ಎಂಬ ಎರಡನೆಯ ಲೇಖನದಲ್ಲಿ, ಮಣ್ಣಿನ ಆಳದಲ್ಲಿ ಪ್ರಕೃತಿ ಶೇಖರಿಸಿಟ್ಟಿರುವ ನೀರು ಮುಂದಿನ ತಲೆಮಾರುಗಳ ಉಳಿವಿಗಾಗಿ ಎಂಬ ಅರಿವು ನಮಗಿರಲಿ ಎಂದು ಪ್ರತಿಪಾದಿಸುತ್ತಾರೆ. ಒಂದು ಬಡಾವಣೆ ಅಥವಾ ಒಂದು ಗ್ರಾಮದಲ್ಲಿ ಒಂದು ನೂರು ಕೊಳವೆ ಬಾವಿಗಳಿವೆ ಎಂದಾದರೆ ಅದರೆ ನಿಜವಾದ ಅರ್ಥವೇನೆಂದು ವಿವರಿಸುತ್ತಾರೆ. ಮೂರನೇ   ಬರಹ “ನೀರು ಹಾಳು ಮಾಡುವಾಗ ಅಮ್ಮಂದಿರನ್ನು ನೆನೆಯೋಣ” ಎಂಬುದಂತೂ ನೀರು ಹಾಳು ಮಾಡುವವರ ಪ್ರಜ್ಞೆಗೆ ತಟ್ಟುವ ಬರಹ. ಇಂತಹ ಪರಿಣಾಮಕಾರಿ ಬರಹಗಳ ಮೂಲಕ ಪುಸ್ತಕದ ಮೊದಲನೆಯ ಭಾಗದಲ್ಲಿ “ಜಲ ಜಾಗೃತಿ ಯಾಕೆ?” ಎಂಬುದನ್ನು ಸಮರ್ಥವಾಗಿ ತಿಳಿಸಿದ್ದಾರೆ. ಪುಸ್ತಕದ ಎರಡನೆಯ ಭಾಗ “ಜಲ ಜಾಗೃತಿ ಹೇಗೆ?” ಇದರಲ್ಲಿ, “ಇಂಗುಗುಂಡಿಗಳ ಇಂದ್ರಜಾಲ, ಅಂತರ್ಜಲದ ಅಂತರ್ಜಾಲ”, “ಕನಿಷ್ಠ ನೀರಿನಿಂದ ಕೃಷಿ - ಜಲಸಂರಕ್ಷಣೆಯ ಗುಟ್ಟು”, “ನೀರುಳಿಸುವ ಪಾಠ ಮನೆಯಲ್ಲೇ ಶುರುವಾಗಲಿ” ಇತ್ಯಾದಿ ಮಾಹಿತಿಪೂರ್ಣ ಲೇಖನಗಳ ಮೂಲಕ ಜಲ ಜಾಗೃತಿ ಹೇಗೆ ಮಾಡಬೇಕೆಂಬುದನ್ನು ವಿವರಿಸಿದ್ದಾರೆ. ಪ್ರತಿಯೊಂದು ಲೇಖನದ ಜೊತೆಗಿರುವ ಸೂಕ್ತ ಫೋಟೋಗಳು ಅದರ ಮಾಹಿತಿಗೆ ಪೂರಕವಾಗಿವೆ” ಎಂದು ಹೇಳಿದರು.  

“ಬದುಕು ಬೆಳಗಿಸುವ ಕತೆಗಳು” ಪುಸ್ತಕದ ಪ್ರಕಾಶಕರಾದ ಮಂಗಳೂರಿನ “ಆಕೃತಿ ಆಶಯ ಪಬ್ಲಿಕೇಷನ್ಸಿ”ನ ಕಲ್ಲೂರು ನಾಗೇಶ್ ಅವರು ಮಾತನಾಡುತ್ತಾ, ಕಳೆದ ನಲುವತ್ತು ವರುಷಗಳಲ್ಲಿ ತನ್ನ ಹಾಗೂ ಅಡ್ಡೂರು ಕೃಷ್ಣ ರಾಯರ ಒಡನಾಟವನ್ನು ಪ್ರಸ್ತಾಪಿಸಿದರು. ತಾನು ಕೃಷ್ಣ ರಾಯರ ಬದುಕಿನ ಕಥನ “ಬಹುಮುಖಿ ಆಂದೋಲನಗಳ ರೂವಾರಿ” ಪುಸ್ತಕದಲ್ಲಿ  ಅವರ ಜೀವನದ ಬಹುಮುಖಗಳನ್ನು ದಾಖಲಿಸಿದ್ದನ್ನು ತಿಳಿಸಿದರು. “ಇದೀಗ ಕತೆಗಾರ ಕೃಷ್ಣ ರಾವ್ ಈ ಪುಸ್ತಕದ ಮೂಲಕ ನಮಗೆ ಮುಖಾಮುಖಿಯಾಗಿದ್ದಾರೆ. ಇದರಲ್ಲಿರುವ ಐವತ್ತು ಕತೆಗಳಲ್ಲಿ ಪ್ರತಿಯೊಂದರಲ್ಲಿಯೂ ಒಂದು ಸಕಾರಾತ್ಮಕ ಸಂದೇಶವಿದೆ. ಇವರಲ್ಲಿ ಒಬ್ಬ ಕತೆಗಾರ ಹೇಗೆ ಬೆಳೆದು ಬಂದ ಎಂಬುದೇ ಕುತೂಹಲದ ವಿಷಯ. ತಂದೆ ದಿವಂಗತ ಅಡ್ಡೂರು ಶಿವಶಂಕರ ರಾಯರು ಅವರಿಗೆ ಬಾಲ್ಯದಲ್ಲಿ ಕತೆ ಪುಸ್ತಕಗಳನ್ನು ತಂದು ಕೊಡುತ್ತಿದ್ದರಂತೆ. ಮಂಗಳೂರಿನ ಬೊಕ್ಕಪಟ್ಟಣದ ಸರಕಾರಿ ಹಿರಿಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅವರ ತಾಯಿ ದಿವಂಗತ ಶ್ರೀಮತಿ ಬಿ. ಸುಶೀಲಾ ಟೀಚರ್ ಬಾಲ್ಯದಲ್ಲಿ ಕಥೆಗಳನ್ನು ಹೇಳುತ್ತಿದ್ದರಂತೆ. ಹೀಗೆ ಬಾಲ್ಯದಿಂದಲೇ ಕತೆಗಳ ಓದು ಮತ್ತು ಕೇಳುವಿಕೆ ಇವರಲ್ಲೊಬ್ಬ ಕತೆಗಾರನನ್ನು ಹುಟ್ಟುಹಾಕಿರಬೇಕು” ಎಂದರು.

ಲೋಕಾರ್ಪಣೆಯಾದ ಎರಡು ಪುಸ್ತಕಗಳ ಲೇಖಕರಾದ ಅಡ್ಡೂರು ಕೃಷ್ಣ ರಾವ್ ಮಾತನಾಡುತ್ತಾ, ತಾನು 37 ವರುಷ ಸೇವೆ ಸಲ್ಲಿಸಿದ ಅಂದಿನ ಕಾರ್ಪೊರೇಷನ್ ಬ್ಯಾಂಕಿನಲ್ಲಿ ಒಂದೂವರೆ ದಶಕಗಳ ಅವಧಿಯಲ್ಲಿ ಬ್ಯಾಂಕಿನ ಸಿಬ್ಬಂದಿ ತರಬೇತಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿದ್ದಾಗ ಮತ್ತು ಚಿಕ್ಕಮಗಳೂರಿನ ಸ್ವ-ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕನಾಗಿದ್ದಾಗ ತಾನು ಎದುರಿಸಿದ ದೊಡ್ಡ ಸವಾಲು ತರಬೇತಿ ಕಾರ್ಯಕ್ರಮಗಳ ಭಾಗಿಗಳಿಗೆ ಕಲಿಸಿದ ವಿಷಯಗಳು ಅರ್ಥವಾಗಲಿಕ್ಕಾಗಿ  ಮತ್ತು ನೆನಪಿರಲಿಕ್ಕಾಗಿ ಏನು ಮಾಡಬೇಕು? ಎಂಬುದು. ಇದಕ್ಕೆ ತಾನು ಕಂಡುಕೊಂಡ ಒಂದು ಪರಿಹಾರ, ಪಾಠದ ನಡುನಡುವೆ ಮತ್ತು ಮುಕ್ತಾಯದಲ್ಲಿ ಸೂಕ್ತವಾದ ಕಥೆಗಳನ್ನು ಹೇಳುವುದು. ಅದಕ್ಕಾಗಿ ಶುರುವಾದ ಕತೆಗಳ ಹುಡುಕಾಟ ಮತ್ತು ರೂಪಾಂತರದ ಗೀಳು ಈಗಲೂ ಮುಂದುವರಿದಿದೆ. “ಬದುಕು ಬೆಳಗಿಸುವ ಕತೆಗಳು” ಪುಸ್ತಕದಲ್ಲಿ ಇರುವುದು ಕಳೆದ ನಲುವತ್ತು ವರುಷಗಳಲ್ಲಿ ನನ್ನೊಳಗೇ ಬೆಳೆದ ಕತೆಗಳು. ಈಗಿನ ಕಾಲಮಾನದಲ್ಲಿ ಕತೆ ಬರೆಯುವವರು ಮತ್ತು ಹೇಳುವವರು ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಅವನ್ನು ದಾಖಲಿಸಲು ನಿರ್ಧರಿಸಿದೆ. ಇಲ್ಲಿನ ಬಹುಪಾಲು ಕತೆಗಳಿಗೆ ಪ್ರಸಿದ್ಧ ಕಲಾಕಾರ ಗಣೇಶ ಸೋಮಯಾಜಿ ಅವರು ಚಂದದ ಚಿತ್ರಗಳನ್ನು ಬರೆದು ಕೊಟ್ಟು ಉಪಕರಿಸಿದ್ದಾರೆ ಎಂದರು. ಹೆತ್ತವರು ತಮ್ಮ ಮಕ್ಕಳಿಗೆ ಕತೆ ಹೇಳುವುದನ್ನೂ ಕಲಿಯಬೇಕಾಗಿದೆ; ಅದಕ್ಕೆ ಇಲ್ಲಿನ ಕತೆಗಳು ಸಹಕಾರಿ ಎಂದು ತಿಳಿಸಿದರು.  “ಜಲ ಜಾಗೃತಿ: ಯಾಕೆ? ಹೇಗೆ?” ಪುಸ್ತಕದ ಬರಹಗಳು, ಕಳೆದ ನಲುವತ್ತು ವರುಷಗಳಲ್ಲಿ ನನ್ನ ಅಧ್ಯಯನ ಮತ್ತು ಅನುಭವಗಳನ್ನು ಭಟ್ಟಿಯಿಳಿಸಿ ಬರೆದ ಬರಹಗಳು” ಎಂಬ ಸಂಗತಿಯನ್ನು ಹಂಚಿಕೊಂಡರು.

ಮಂಗಳೂರಿನ ಅಸೋಸಿಯೇಷನ್ ಆಫ್ ವ್ಯಾಲ್ಯುವರ್ಸ್ (ರಿ.) ಆಯೋಜಿಸಿದ್ದ ಕಾರ್ಯಕ್ರಮದ ಆರಂಭದಲ್ಲಿ ಜಯಲಕ್ಷ್ಮಿ ಮತ್ತು ಲೀಲಾ ಹೊಳ್ಳ ಪ್ರಾರ್ಥನೆ ಹಾಡಿದ್ದರು. “ಬದುಕು ಬೆಳಗಿಸುವ ಕತೆಗಳು” ಪುಸ್ತಕದ ಕತೆಗಳಿಗೆ ಅರ್ಥಪೂರ್ಣ ಚಿತ್ರಗಳನ್ನು ರಚಿಸಿದ ಕಲಾಕಾರ ಗಣೇಶ ಸೋಮಯಾಜಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಲೋಕಾರ್ಪಣೆಯಾದ ಎರಡು ಪುಸ್ತಕಗಳ ಲೇಖಕರಾದ ಅಡ್ಡೂರು ಕೃಷ್ಣ ರಾಯರು ಸ್ವಾಗತಿಸಿ, ವಂದನಾರ್ಪಣೆಗೈದರು. “ಜಲ ಜಾಗೃತಿ: ಯಾಕೆ? ಹೇಗೆ?” ಪುಸ್ತಕಕ್ಕೆ ಮುನ್ನುಡಿ ಬರೆದ ಪ್ರಖ್ಯಾತ ಸಾಹಿತಿ ಮತ್ತು ಜಲಕಾರ್ಯಕರ್ತ ಶಿವಾನಂದ ಕಳವೆ ಹಾಗೂ “ಬದುಕು ಬೆಳಗಿಸುವ ಕತೆಗಳು” ಪುಸ್ತಕಕ್ಕೆ ಮುನ್ನುಡಿ ಬರೆದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರನ್ನು ವಿಶೇಷವಾಗಿ ಸ್ಮರಿಸಿದರು.

ಫೋಟೋ 1: ಅಡ್ಡೂರು ಕೃಷ್ಣ ರಾವ್ ಅವರ ಎರಡು ಪುಸ್ತಕಗಳ ಲೋಕಾರ್ಪಣೆ
ಫೋಟೋ 2: ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃಷ್ಣ ರಾವ್ ಅವರ ಮಾತು