“ಭಾರತ ಬಿಟ್ಟು ತೊಲಗಿ": ಆಗಸ್ಟ್ ೧೯೪೨ರ ಕ್ರಾಂತಿ ಕಹಳೆ
"ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ" ಎಂಬ ಮಹಾತ್ಮಾ ಗಾಂಧಿಯವರ ಘೋಷಣೆ, ೮ ಆಗಸ್ಟ್ ೧೯೪೨ರಂದು ಭಾರತದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇ ಬೇಕೆಂದು ಕೋಟಿಗಟ್ಟಲೆ ಭಾರತೀಯರು ಸಂಕಲ್ಪ ತೊಡಲು ಅದು ಕಾರಣವಾಯಿತು.
ಅಲ್ಲಿಯ ವರೆಗೆ, ಭಾರತೀಯರಿಗೆ ಆಡಳಿತದಲ್ಲಿ ಭಾಗಶಃ ಸ್ವಾತಂತ್ರ್ಯ ನೀಡುವ ಪ್ರಸ್ತಾಪಗಳನ್ನು ಚರ್ಚಿಸಲಾಗುತ್ತಿತ್ತು. ಆದರೆ, “ಕ್ವಿಟ್ ಇಂಡಿಯಾ" ಅಥವಾ “ಭಾರತ್ ಛೋಡೋ” ಆಂದೋಲನ ಭಾರತೀಯರಿಗೆ ಬೇಕಾದ್ದು ಸಂಪೂರ್ಣ ಸ್ವಾತಂತ್ರ್ಯ ಎಂಬುದನ್ನು ಇಡೀ ಜಗತ್ತಿಗೆ ಘೋಷಿಸಿ, ೧೫ ಆಗಸ್ಟ್ ೧೯೪೭ರಂದು ಭಾರತ ಸ್ವತಂತ್ರವಾಗಲು ಕಾರಣವಾಯಿತು.
"ಸಂಪೂರ್ಣ ಸ್ವರಾಜ್ಯ”ದ ಪರಿಕಲ್ಪನೆಯನ್ನು ೧೯೨೧ರಲ್ಲೇ ಅಖಿಲ ಭಾರತ ಕಾಂಗ್ರೆಸ್ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕ ಹಸ್‌ರತ್ ಮೊಹಾನಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ೧೯ ಡಿಸೆಂಬರ್ ೧೯೨೯ರಂದು ಠರಾವನ್ನೂ ಅನುಮೋದಿಸಲಾಗಿತ್ತು. “ಭಾರತ ಬಿಟ್ಟು ತೊಲಗಿ" ಎಂದು ಘೋಷಿಸಿದಾಕ್ಷಣ ಜನರೆಲ್ಲ ಒಂದಾಗಿ ಎದ್ದು ನಿಂತರು.
ಬ್ರಿಟಿಷ್ ಮುಕ್ತ ವಿಶ್ವವಿದ್ಯಾಲಯದ ದಾಖಲೆಗಳ ಅನುಸಾರ, ೧೯೪೨ರ ಮಧ್ಯಭಾಗದಲ್ಲಿ ಜಪಾನಿನ ಸೈನ್ಯ ಭಾರತದ ಈಶಾನ್ಯದ ಗಡಿಗಳತ್ತ ಬರ್ಮಾದಿಂದ ನುಗ್ಗುತ್ತಿತ್ತು. ಜೊತೆಗೆ, ಎರಡನೇ ಮಹಾಯುದ್ಧ ಮುಗಿಯುವ ಮುನ್ನ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಬ್ರಿಟಿಷ್ ಸರಕಾರದ ಮೇಲೆ ಬಲಾಢ್ಯ ದೇಶಗಳು ಒತ್ತಡ ಹೇರುತ್ತಿದ್ದವು.
ಆದ್ದರಿಂದ ಮಾರ್ಚ್ ೧೯೪೨ರಲ್ಲಿ ಬ್ರಿಟಿಷ್ ಯುದ್ಧದ ಕ್ಯಾಬಿನೆಟ್ ಸದಸ್ಯ ಸ್ಟಾಫೊರ್ಡ್ ಕ್ರಿಪ್ಸ್ ನೇತೃತ್ವದಲ್ಲಿ ಸಮಿತಿಯೊಂದನ್ನು ಭಾರತಕ್ಕೆ ಕಳಿಸಿ ಕೊಡಲಾಯಿತು. ಅದರ ಭೇಟಿಯ ಉದ್ದೇಶ: ಭಾರತೀಯ ಜನನಾಯಕರೊಂದಿಗೆ ಬ್ರಿಟಿಷ್ ಸರಕಾರದ ಕರಡು ಘೋಷಣೆಯನ್ನು ಚರ್ಚಿಸುವುದು. ಅದರಲ್ಲಿ ೨ನೇ ಮಹಾಯುದ್ಧದ ನಂತರ ಭಾರತಕ್ಕೆ ಪ್ರಭುತ್ವ ನೀಡುವ ಪ್ರಸ್ತಾಪವಿತ್ತು.
ಇದೇ ಸಮಯದಲ್ಲಿ, ಬ್ರಿಟನಿನ ಪರವಾಗಿ ಯುದ್ಧ ಮಾಡಲು ಭಾರತೀಯ ಸೈನಿಕರನ್ನು ಕಳಿಸಲು ಭಾರತದ ಬ್ರಿಟಿಷ್ ಗವರ್ನರ್- ಜನರಲ್ ಲಾರ್ಡ್ ಲಿನ್‌ಲಿತ್‌ಗೋ ಯೋಜಿಸಿದ್ದರು. ಈ ಯೋಜನೆಗೆ ಭಾರತೀಯ ಜನನಾಯಕರು ಒಪ್ಪಬೇಕೆಂದು ಆಗ್ರಹಿಸುವುದೂ ಕ್ರಿಪ್ಸ್ ಸಮಿತಿಯ ಉದ್ದೇಶವಾಗಿತ್ತು.
ಅದೇನಿದ್ದರೂ, ಆ ಕರಡು ಘೋಷಣೆಯಲ್ಲಿ ಪ್ರಸ್ತಾಪಿಸಲಾಗಿದ್ದ ಸ್ವಯಮಾಡಳಿತದ ಷರತ್ತುಗಳು ಕಾಂಗ್ರೆಸಿನ ಕಾರ್ಯಕಾರಿ ಸಮಿತಿಗೆ ಒಪ್ಪಿಗೆಯಾಗಲಿಲ್ಲ. ಯಾಕೆಂದರೆ, ಸಂಪೂರ್ಣ ಸ್ವಯಮಾಡಳಿತವನ್ನು ತಕ್ಷಣವೇ ನೀಡುವ ಪ್ರಸ್ತಾಪ ಅದರಲ್ಲಿ ಇರಲಿಲ್ಲ. ಅಂತೂ ಭಾರತೀಯ ಜನನಾಯಕರನ್ನು ಪುಸಲಾಯಿಸುವ ಕ್ರಿಪ್ಸ್ ಸಮಿತಿಯ ಹುನ್ನಾರ ಕೈಗೂಡಲಿಲ್ಲ.
ಬ್ರಿಟಿಷರನ್ನು ಭಾರತದಿಂದ ತೊಲಗಿಸಲು "ಮಾಡು ಇಲ್ಲವೆ ಮಡಿ”
೮ ಆಗಸ್ಟ್ ೧೯೪೨ರಂದು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಂಬೈ ಸಮಾವೇಶದಲ್ಲಿ “ಕ್ವಿಟ್ ಇಂಡಿಯಾ" ಆಂದೋಲನ ಆರಂಭಿಸುವ ಚಾರಿತ್ರಿಕ ಠರಾವನ್ನು ಮಹಾತ್ಮಾ ಗಾಂಧಿ ಮಂಡಿಸಿದಾಗ ಇದು ಅಲ್ಲಿ ಅನುಮೋದಿಸಲ್ಪಟ್ಟಿತು.
ಅನಂತರ ಮುಂಬೈಯ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮಹಾತ್ಮಾ ಗಾಂಧಿ ಹೋರಾಟದ ಜ್ವಾಲೆ ಪ್ರಜ್ವಲಿಸುವ ಭಾಷಣ ಮಾಡಿ, “ಭಾರತ ಬಿಟ್ಟು ತೊಲಗಿ" ಆಂದೋಲನಕ್ಕೆ ನಾಂದಿ ಹಾಡಿದರು (ಆ ಸ್ಥಳದಲ್ಲಿ ಈ ಘಟನೆಯ ಸ್ಮಾರಕ ಸ್ಥಾಪಿಸಲಾಗಿದೆ.)
ಅಂದು ಕ್ರಾಂತಿಯ ಕಿಚ್ಚು ಹಚ್ಚಿದ ಮಹಾತ್ಮಾ ಗಾಂಧಿಯವರು ತಮ್ಮ ಭಾಷಣದಲ್ಲಿ ದೇಶಬಾಂಧವರಿಗೆ ಅಂತಿಮ ಹೋರಾಟದ ಕರೆ ನೀಡಿದರು, “(ಹೋರಾಟದ) ಒಂದು ಮಂತ್ರವಿದೆ, ಆ ಚುಟುಕಾದ ಮಂತ್ರವನ್ನು ನಿಮಗೆ ಕೊಡುತ್ತಿದ್ದೇನೆ. ಅದನ್ನು ನಿಮ್ಮ ಹೃದಯದಲ್ಲಿ ಅಚ್ಚೊತ್ತಿಕೊಳ್ಳಿ ಮತ್ತು ನಿಮ್ಮ ಪ್ರತಿಯೊಂದು ಉಸಿರೂ ಅದನ್ನು ಅಭಿವ್ಯಕ್ತಿಸಲಿ. ಮಾಡು ಇಲ್ಲವೇ ಮಡಿ ಎಂಬುದೇ ಆ ಮಂತ್ರ. ನಾವು ಸ್ವತಂತ್ರರಾಗೋಣ ಅಥವಾ ಸ್ವಾತಂತ್ರ ಗಳಿಸುವ ಪ್ರಯತ್ನದಲ್ಲಿ ಬಲಿದಾನಗೈಯೋಣ.”
೮ ಆಗಸ್ಟ್ ೧೯೪೨ರ "ಭಾರತ ಬಿಟ್ಟು ತೊಲಗಿ" ಕ್ರಾಂತಿ ಕಹಳೆಯ ಅನುಸಾರ, ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಅರುಣಾ ಅಸಫ್ ಆಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಮರುದಿನ, ಆಗಸ್ಟ್ ೯ರಂದು ಜವಾಹರಲಾಲ್ ನೆಹರೂ, ಅಬ್ದುಲ್ ಕಲಾಂ ಅಜಾದ್, ಮಹಾತ್ಮಾ ಗಾಂಧಿ ಸಹಿತ ಎಲ್ಲ ಹಿರಿಯ ಕಾಂಗ್ರೆಸ್ ಮುಂದಾಳುಗಳನ್ನು ರಾಜದ್ರೋಹದ ಆಪಾದನೆ ಹೊರಿಸಿ ಬ್ರಿಟಿಷ್ ಆಡಳಿತ ಬಂಧಿಸಿ ಜೈಲಿನಲ್ಲಿಟ್ಟಿತು.
ಅಷ್ಟೇ ಅಲ್ಲ, ಬಂಧಿತ ಕಾಂಗ್ರೆಸ್ ಮುಂದಾಳುಗಳನ್ನೆಲ್ಲ ೨ನೇ ಮಹಾಯುದ್ಧ ೧೯೪೫ರಲ್ಲಿ ಮುಕ್ತಾಯವಾಗುವ ವರೆಗೆ ಯಾವುದೇ ವಿಚಾರಣೆ ನಡೆಸದೆ ಬ್ರಿಟಿಷ್ ಸರಕಾರ ಬಂಧನದಲ್ಲಿಟ್ಟಿತು. ಭಾರತೀಯ ರಾಷ್ಟ್ರೀಯ ಕಾಂಗೆಸನ್ನು ಕಾನೂನು- ಬಾಹಿರ ಸಂಸ್ಥೆಯೆಂದು ಬ್ರಿಟಿಷ್ ಸರಕಾರ ಘೋಷಿಸಿತು; ದೇಶದಲ್ಲಿದ್ದ ಕಾಂಗ್ರೆಸಿನ ಎಲ್ಲ ಕಚೇರಿಗಳ ಮೇಲೆ ಧಾಳಿ ನಡೆಸಿ, ಅದರ ಹಣಕಾಸಿನ ಖಾತೆಗಳನ್ನೆಲ್ಲ ನಿಷೇಧಿಸಲಾಯಿತು.
ಆದರೂ, ಜಯಪ್ರಕಾಶ್ ನಾರಾಯಣ್, ಅರುಣಾ ಅಸಫ್ ಆಲಿ, ಎಸ್.ಎಂ. ಜೋಷಿ, ರಾಮ್ ಮನೋಹರ್ ಲೋಹಿಯಾ ಮತ್ತಿತರ ಕಾರ್ಯಕರ್ತರು ೨ನೇ ಮಹಾಯುದ್ಧದ ಅವಧಿಯಲ್ಲಿ ಆಂದೋಲನವನ್ನು ಮುನ್ನಡೆಸಿದರು.
ಹಾಗಿದ್ದರೂ, ಹಿರಿಯ ಮುಂದಾಳುಗಳನ್ನೆಲ್ಲ ಸೆರೆಮನೆಯಲ್ಲಿಟ್ಟ ಬ್ರಿಟಿಷ್ ಆಡಳಿತಕ್ಕೆ ೧೯೪೪ರ ವರೆಗೆ ಸಾರ್ವಜನಿಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಸಾಧ್ಯವಾಯಿತು. ಆದರೆ, ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮಹಾತ್ಮ ಗಾಂಧಿ ಘೋಷಿಸಿದ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆಯ ಬೆಂಕಿಜ್ವಾಲೆಗಳನ್ನು ಹತ್ತಿಕ್ಕಲು ಬ್ರಿಟಿಷ್ ಆಡಳಿತಕ್ಕೆ ಸಾಧ್ಯವಾಗಲಿಲ್ಲ. ಕೋಟಿಗಟ್ಟಲೆ ಭಾರತೀಯರ ಹೃದಯದ ಅಗ್ನಿಕುಂಡದಲ್ಲಿ ಅಚ್ಚೊತ್ತಿದ್ದ "ಮಾಡು ಇಲ್ಲವೆ ಮಡಿ" ಎಂಬ ಮಂತ್ರ ಆ ಜ್ವಾಲೆಗಳನ್ನು ಭುಗಿಲೆಬ್ಬಿಸುತ್ತಿತ್ತು.
೨ನೇ ಮಹಾಯುದ್ಧ ಮುಗಿಯುವ ಹೊತ್ತಿಗೆ ಜಗತ್ತಿನ ಬಲಾಢ್ಯ ದೇಶಗಳಲ್ಲೊಂದು ಎಂಬ ಬ್ರಿಟನಿನ ಸ್ಥಾನ ಅಲುಗಾಡಿತ್ತು. ಭಾರತದ ಸ್ವಾತಂತ್ರ್ಯದ ಬೇಡಿಕೆಯನ್ನು ಕಡೆಗಣಿಸುವ ಸ್ಥಿತಿಯಲ್ಲಿ ಬ್ರಿಟನ್ ಇರಲಿಲ್ಲ. ಕೊನೆಗೂ ಸುಮಾರು ಎರಡು ಶತಮಾನಗಳ ಅವಧಿ ಭಾರತದ ಅಪಾರ ಸಂಪತ್ತನ್ನು ಲೂಟಿ ಮಾಡಿದ ಮತ್ತು ಇಲ್ಲಿನ ಕೋಟಿಗಟ್ಟಲೆ ಜನರನ್ನು ಶೋಷಣೆ ಮಾಡುತ್ತಾ, ಮೋಸದಿಂದ ಹಾಗೂ ದಬ್ಬಾಳಿಕೆಯಿಂದ ದುರಾಡಳಿತ ನಡೆಸುತ್ತಿದ್ದ ಬ್ರಿಟಿಷರನ್ನು ಒದ್ದೋಡಿಸಿ, ೧೫ ಆಗಸ್ಟ್ ೧೯೪೭ರಂದು ಭಾರತ ಸ್ವಾತಂತ್ರ್ಯ ಗಳಿಸಿತು. ಢೆಲ್ಲಿಯ ಕೆಂಪುಕೋಟೆಯಲ್ಲಿ ತಿವರ್ಣಧ್ವಜ ಅರಳಿತು. ಇದಕ್ಕೆ ಕಾರಣವಾದ “ಭಾರತ ಬಿಟ್ಟು ತೊಲಗಿ" ಆಂದೋಲನವು ಭಾರತದ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಘಟ್ಟ ಎಂದು ಗುರುತಿಸಲ್ಪಟ್ಟಿದೆ.
ಈ ಆಂದೋಲನದ ಬಗ್ಗೆ ವೈಸರಾಯ್ ಲಿನ್‌ಲಿತ್‌ಗೊ ಅವರಿಗೆ ರಾಮ್ ಮನೋಹರ್ ಲೋಹಿಯಾ ಬರೆದ ಪತ್ರ ಒಂದು ಚಾರಿತ್ರಿಕ ದಾಖಲೆ. ಅವರು ಅದರಲ್ಲಿ ಹೀಗೆ ದಾಖಲಿಸಿದ್ದರು: ಈ ಆಂದೋಲನದ ಅವಧಿಯಲ್ಲಿ ಬ್ರಿಟಿಷ್ ಸರಕಾರ ೫೦,೦೦೦ ಜನರ ಕಗ್ಗೊಲೆ ನಡೆಸಿದೆ ಮತ್ತು ಇನ್ನೂ ಸಾವಿರಾರು ಜನರನ್ನು ಅಂಗವಿಕಲರನ್ನಾಗಿಸಿದೆ. …. ರಷ್ಯಾದ ಕ್ರಾಂತಿಯಲ್ಲಿ ಜನಸಂಖ್ಯೆಯ ಕೇವಲ ಶೇಕಡಾ ಒಂದರಷ್ಟು ಜನರು ಭಾಗವಹಿಸಿದ್ದರೆ, ಭಾರತದ ಆಂದೋಲನದಲ್ಲಿ ಜನಸಂಖ್ಯೆಯ ಶೇಕಡಾ ೨೦ರಷ್ಟು ಜನರು ಭಾಗವಹಿಸಿದ್ದಾರೆ. ಭಾರತ ಬಿಟ್ಟು ತೊಲಗಿ ಆಂದೋಲನದ ನಿಜವಾದ ತಾಕತ್ತು ಕೋಟಿಗಟ್ಟಲೆ ಜನರ ಭಾಗವಹಿಸುವಿಕೆ.
ಭಾರತದ ೭೪ನೆಯ ಸ್ವಾತಂತ್ರ್ಯ ದಿನಾಚರಣೆಯ ಶುಭಸಂದರ್ಭದಲ್ಲಿ, ನಮ್ಮ ದೇಶ ಸ್ವಾತಂತ್ರ್ಯ ಗಳಿಸಲಿಕ್ಕಾಗಿ ಬಲಿದಾನಗೈದ ಹಾಗೂ ಅಪಾರ ಸಂಕಷ್ಟ ಅನುಭವಿಸಿದ ಲಕ್ಷಗಟ್ಟಲೆ ಜನರ ಮಹಾತ್ಯಾಗವನ್ನು ಮತ್ತೆಮತ್ತೆ ನೆನಪು ಮಾಡಿಕೊಳ್ಳೋಣ.
ಫೋಟೋ ಕೃಪೆ: “ಫಸ್ಟ್ ಪೋಸ್ಟ್” ಆನ್-ಲೈನ್ ಪತ್ರಿಕೆ