“ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ” – ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ (ಭಾಗ ೨)

“ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ” – ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ (ಭಾಗ ೨)

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ನಾವು ಪಾಠ ಕಲಿಯಬೇಕಾಗಿದೆ. ಡಿಸೆಂಬರ್ ೨೦೧೧ರಲ್ಲಿ ಮುಂಬೈಯ ಜುಹೂ ಬೀಚಿನಿಂದ ಕೇಂದ್ರ ಮೈದಾನಕ್ಕೆ ಮೆರವಣಿಗೆ ಸಾಗಿದಾಗ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತು, ಹೂವು ಹಾಕಿ, ಬೆಂಬಲ ಸೂಚಿಸಿದರು. ಆದರೆ, ಮೆರವಣಿಗೆ ಮೈದಾನ ತಲಪಿದಾಗ ಅಲ್ಲಿ ಇದ್ದದ್ದು ಕೆಲವೇ ಜನರು. ಯಾಕೆ ಹೀಗಾಯಿತೆಂದು ನಾವು ಅರ್ಥ ಮಾಡಿಕೊಳ್ಳಬೇಕು.
ಈ ದೇಶದ ಮಧ್ಯಮ ವರ್ಗದ ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆ ಈಗಲೂ ಇದೆ. ಅದನ್ನು ಭ್ರಷ್ಟಾಚಾರ ವಿರೋಧಿ ಸಂಘಟನೆಗಳು ಸಮರ್ಥವಾಗಿ ಬಳಸಿಕೊಳ್ಳಬೇಕು. ಮಧ್ಯಮ ವರ್ಗದವರಿಗೆ ಸಮಯವಿಲ್ಲ. ಪ್ರತಿ ತಿಂಗಳು ಪ್ರತಿಭಟನಾ ಸಭೆಗೆ ಬಂದು ಭಾಗವಹಿಸಲು ಅವರಿಂದ ಸಾಧ್ಯವಿಲ್ಲ. ಆದ್ದರಿಂದ ಅವರು ತಮ್ಮ ಪ್ರತಿಭಟನೆ ವ್ಯಕ್ತಪಡಿಸಲು ಹೊಸ ದಾರಿಗಳನ್ನು ಸಂಘಟನೆಗಳು ಒದಗಿಸಬೇಕು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಿರಂತರವಾಗಿ ಸಾಗಬೇಕು. ಇದು ದೊಡ್ಡ ಯುದ್ಧ. ಇದಕ್ಕೆ ಯೋಧರನ್ನು ತಯಾರು ಮಾಡಬೇಕಾಗಿದೆ.
ನಮ್ಮ ಯುವಜನರೇ ಆ ಯೋಧರು. ಅವರಲ್ಲಿ ಪರಿವರ್ತನೆ ತರಬೇಕಾಗಿದೆ. ಅವರ ಯೋಚನೆಗಳನ್ನು ಬದಲಾಯಿಸ ಬೇಕಾಗಿದೆ. ಅದು ಸಾಧ್ಯ. ನಾನು ಈಗಾಗಲೇ ೭೪೦ ವಿದ್ಯಾಲಯಗಳಲ್ಲಿ ಯುವಜನರೊಂದಿಗೆ ಮಾತನಾಡಿದ್ದೇನೆ. ನಮ್ಮ ಯುವಜನರ ಬಗ್ಗೆ ನನಗೆ “ಹೋಪ್” ಇದೆ.  
ಅವರಲ್ಲಿ ಮಾನವೀಯತೆ ಬೆಳೆಸುವ ಕೆಲಸ ಆಗಬೇಕಾಗಿದೆ. ನನಗೆ ೨೦೦೮ರ ಒಂದು ಘಟನೆ ಮತ್ತೆಮತ್ತೆ ನೆನಪಾಗುತ್ತದೆ. ಬಾಗಲಕೋಟೆಯಿಂದ ಒಬ್ಬ ವ್ಯಕ್ತಿ ತನ್ನ ಅಂಗವಿಕಲ ಮಗುವಿನೊಂದಿಗೆ ಬಂದಿದ್ದ. ಅವನು “ಈ ಮಗುವನ್ನು ನೀವೇ ನೋಡಿಕೊಳ್ಳಿ” ಎಂದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಆ ಮಗುವಿಗೆ ವಿಚಿತ್ರ ಸಮಸ್ಯೆ – ಹುಟ್ಟುವಾಗಲೇ ಅದರ ಹೊಟ್ಟೆ ಸರಿಯಿಲ್ಲ. ಅದರಿಂದಾಗಿ ತಿಂದದ್ದು ಜೀರ್ಣವಾದ ನಂತರ, ಮಗುವಿನ ಬಾಯಿಯಿಂದಲೇ ಮಲ ಹೊರಗೆ ಬರುತ್ತಿತ್ತು. ಅದನ್ನು ಆಪರೇಷನ್ ಮಾಡಿ ಸರಿಪಡಿಸಬಹುದು; ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗು ಎಂದು ಅವನಿಗೆ ಸಲಹೆ ಕೊಟ್ಟರು.
ಆ ಬಡವ ಎಲ್ಲಿಗೆ ಹೋದಾನು? ಅವನು ಸರಕಾರಿ ಆಸ್ಪತ್ರೆಗೆ ಆರು ತಿಂಗಳ ಆ ಮಗುವನ್ನು ಒಯ್ದ. ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷೆ ಮಾಡಿ, “ಆಪರೇಷನಿಗೆ ಇಷ್ಟು ಹಣ ಕೊಡಬೇಕು” ಎಂದರು. ಮಗುವಿನ ತಂದೆ, “ನನ್ನ ಹತ್ತಿರ ಇಷ್ಟೇ ಹಣ ಇರೋದು” ಎಂದ. ಆಗ, ಆ ಡಾಕ್ಟರ್ ಹೇಳಿದ ಮಾತು, “ಅಷ್ಟು ಹಣಕ್ಕೆ ಮಗುವಿನ ಪಕ್ಕೆಯಲ್ಲಿ ಒಂದು ತೂತು ಮಾಡಿ ಕೊಡ್ತೇನೆ. ಅದರಿಂದ ಮಲ ಹೊರಗೆ ಬರುತ್ತದೆ.”
ನೀವೆಲ್ಲರೂ ಸರಿಯಾಗಿ ಯೋಚನೆ ಮಾಡಿ. ಹಾಗೆ ಹೇಳಿದ ವ್ಯಕ್ತಿ ಡಾಕ್ಟರ್ ಆದದ್ದು ಹೇಗೆ? ಆದ ನಂತರ ಪೋಸ್ಟ್ ಗ್ರಾಜ್ಯುವೇಷನ್ ಕಲಿತದ್ದು ಹೇಗೆ? ಅದೆಲ್ಲ ಸಮಾಜದ ಹಣದಿಂದಲೆ ಆದದ್ದು. ಸಮಾಜದ ಅಷ್ಟೆಲ್ಲ ಸವಲತ್ತು ಪಡೆದು ಮೆಡಿಕಲ್ ಕಲಿತರೂ ಆ ಡಾಕ್ಟರ್ ಮಾನವೀಯತೆ ಕಲಿಯಲಿಲ್ಲ.
ಅದಕ್ಕಾಗಿಯೇ ಇಂದಿನ ಯುವಜನರಿಗೆ ಮಾನವೀಯತೆ ಕಲಿಸಬೇಕಾಗಿದೆ. ಕವಿಯೊಬ್ಬರು ಹೇಳಿದ್ದಾರೆ, “ಏನಾದರೂ ಆಗು, ಮೊದಲು ಮಾನವನಾಗು” ಎಂದು. ಮಾನವೀಯತೆ ಕಲಿತರೆ, ದುರಾಸೆ ಬಿಡಲು ಸಾಧ್ಯವಾದೀತು.
ಜೊತೆಗೆ, “ತೃಪ್ತಿ” ಎಂಬುದನ್ನು ನಾವು ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿದೆ. ಆ ಭಾವನೆಯೇ ಇವತ್ತು ಮಾಯವಾಗಿದೆ. ಹಣ ಮತ್ತು ಸಂಪತ್ತು ಎಷ್ಟಿದ್ದರೂ ನಮಗೆ ಸಾಲದಾಗಿದೆ.
ಈ ಪರಿಸ್ಥಿತಿಗೆ ಮುಖ್ಯ ಕಾರಣ ಸಮಾಜ. ಇವತ್ತು ಸಮಾಜದಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲ. ಪ್ರಾಮಾಣಿಕ ಅಧಿಕಾರಿಯೊಬ್ಬ ಸಂಪತ್ತು ಕೂಡಿ ಹಾಕದಿದ್ದರೆ “ಅವನೇನೂ ಪ್ರಯೋಜನವಿಲ್ಲ; ಅವನೇನೂ ಮಾಡಿಕೊಳ್ಳಲಿಲ್ಲ” ಅಂತಾರೆ. ಭ್ರಷ್ಟರಿಗೆ ಭಾರೀ ಗೌರವ ನೀಡುವ ಈ ಸಮಾಜ ಬದಲಾಗ ಬೇಕಾಗಿದೆ. ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಮಗೆ ಬೇಕಾಗಿದೆ.
ಅಂತಹ ಸಮಾಜದ ನಿರ್ಮಾಣಕ್ಕಾಗಿ ಶುದ್ಧ ಮನಸ್ಸಿನ, ಶುದ್ಧ ಚಾರಿತ್ರ್ಯದ ವ್ಯಕ್ತಿಗಳು ಮುಂದೆ ಬರಬೇಕಾಗಿದೆ. ಭ್ರಷ್ಟಾಚಾರ ವಿರೋಧಿ ಸಂಘಟನೆಗಳನ್ನು ನಾವು ಬಲಪಡಿಸಬೇಕಾಗಿದೆ.
ನಾನು ಹೇಳಿದ ಎಲ್ಲ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿ. ಭ್ರಷ್ಟಾಚಾರವನ್ನು ನಿರ್ಮೂಲ ಮಾಡಲು ಸಾಧ್ಯವಿಲ್ಲ. ಆದರೆ ಭ್ರಷ್ಟಾಚಾರವನ್ನು ಖಂಡಿತವಾಗಿ ನಿಯಂತ್ರಿಸಬಹುದು.
ಅದಕ್ಕಾಗಿ ಹೆಚ್ಚೆಚ್ಚು ಜನರು ಮನಸ್ಸು ಮಾಡಲಿ.
(ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರು ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ ೨೦೧೪ರಲ್ಲಿ “ಫೋರಮ್ ಫಾರ ಜಸ್ಟಿಸ್” ಸಂಘಟನೆಯನ್ನು ಉದ್ಘಾಟಿಸುತ್ತಾ ನೀಡಿದ ಉಪನ್ಯಾಸದ ಎರಡನೇ ಭಾಗ.  ೮ ನವಂಬರ್ ೨೦೧೬ರಂದು ಪ್ರಧಾನ ಮಂತ್ರಿಯವರು ರೂ.೫೦೦ ಮತ್ತು ರೂ.೧,೦೦೦ದ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಕೋಟಿಗಟ್ಟಲೆ ರೂಪಾಯಿ ಕಾಳಧನದೊಂದಿಗೆ ನೂರಾರು ಭ್ರಷ್ಟರು ಸಿಕ್ಕಿಬಿದ್ದಿರುವ ಸನ್ನಿವೇಶದಲ್ಲಿ ಈ ಉಪನ್ಯಾಸ ಪ್ರಸ್ತುತ.)