“ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ” – ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ

“ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ” – ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ

ಮಂಗಳೂರಿನ ಪುರಭವನದಲ್ಲಿ ನೆರೆದಿರುವ ನಿಮ್ಮಲ್ಲಿ ಭ್ರಷ್ಟಾಚಾರದ ಬಗ್ಗೆ ಆಕ್ರೋಶವಿದೆ. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಹಗರಣಗಳು ನಡೆಯುತ್ತಲೇ ಇವೆ. ೧೯೫೦ರ ದಶಕದಲ್ಲಿ ಜೀಪ್ ಹಗರಣ ಸುದ್ದಿಯಾಯಿತು. ಅನಂತರ ಸುದ್ದಿಯಾದದ್ದು ಮುಂದ್ರಾ ಹಗರಣ, ದಾಲ್ಮಿಯಾ ಹಗರಣ ಹಾಗೂ ನಗರ್ವಾಲಾ ಹಗರಣ. ಇವೆಲ್ಲದರ ಮೂಲ ಭ್ರಷ್ಟಾಚಾರ.
ಆದರೆ ಇವೆಲ್ಲ ಕೆಲವು ಲಕ್ಷ ರೂಪಾಯಿಗಳ ಹಗರಣ. ಅದಾದ ನಂತರ ೧೯೭೪ರಲ್ಲಿ ದೊಡ್ಡ ಸುದ್ದಿಯಾದ ಯುದ್ಧ ಸಾಮಗ್ರಿ ಹಗರಣದ ಮೊತ್ತ ೬೪ ಕೋಟಿ ರೂಪಾಯಿ.
ಇದಕ್ಕೆ ಹೋಲಿಸಿದಾಗ, ೨೦೧೦ರಲ್ಲಿ ಜಾಹೀರಾದ ಕಾಮನ್ವೆಲ್ತ್ ಗೇಮ್ಸ್ ಹಗರಣದ ಮೊತ್ತ ೭೦,೦೦೦ ಕೋಟಿ ರೂಪಾಯಿ, ಭಾರೀ ದೊಡ್ಡದು. ಇದಕ್ಕಿಂತಲೂ ದೊಡ್ಡದು ಅದೇ ಹೊತ್ತಿಗೆ ಬಹಿರಂಗವಾದ ೨-ಜಿ ಸ್ಪೆಕ್ಟ್ರಮ್ ಹಗರಣ; ಇದರ ಮೊತ್ತ ೧,೭೬,೦೦೦ ಕೋಟಿ ರೂಪಾಯಿ. ಅನಂತರ ಬೆಳಕಿಗೆ ಬಂದ ೨೦೧೨ರ ಕೋಲ್-ಗೇಟ್ ಹಗರಣದ ಮೊತ್ತ ಮತ್ತೂ ದೊಡ್ಡದು. ಅದು ೧,೮೬,೦೦೦ ಕೋಟಿ ರೂಪಾಯಿ.
ಒಂದು ಕಡೆ ಭ್ರಷ್ಟರು ಕೋಟಿಗಟ್ಟಲೆ ರೂಪಾಯಿ ಕೊಳ್ಳೆ ಹೊಡೆಯುತ್ತಿದ್ದರೆ, ಇನ್ನೊಂದು ಕಡೆ ಕಡುಬಡವರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಫೋಟೋ ನನಗೆ ಕಣ್ಣಿಗೆ ಕಟ್ಟಿದಂತಿದೆ; ಅದರಲ್ಲಿ ಬಡ ಮಹಿಳೆಯೊಬ್ಬಳು ನೀರಿಗಾಗಿ ಕೈಬೆರಳುಗಳಿಂದ ಮಣ್ಣನ್ನು ಬಗೆಯುತ್ತಿದ್ದಳು. ಅವಳು ಅಲ್ಲಿಗೆ ನಾಲ್ಕು ಕಿಲೋಮೀಟರ್ ನಡೆದು ಬಂದಿದ್ದಳು. ಐದು ಜನರಿರುವ ತನ್ನ ಕುಟುಂಬಕ್ಕೆ ಒಂದು ಕೊಡ ನೀರು ಒಯ್ಯಲಿಕ್ಕಾಗಿ ಅವಳು ಅಷ್ಟೆಲ್ಲ ಕಷ್ಟ ಪಡುತ್ತಿದ್ದಳು. ಕುಡಿಯುವ ನೀರಿಗೂ ಗತಿಯಿಲ್ಲದ ಸಾವಿರಾರು ಜನರು ನಮ್ಮ ದೇಶದಲ್ಲಿದ್ದಾರೆ.
ಅದೇ ವರುಷ ಲೆಕ್ಕ ಮಹಾಪರಿಶೋಧಕರ (ಸಿ.ಎ.ಜಿ.) ವರದಿ ಭ್ರಷ್ಟಾಚಾರದ ಕರಾಳ ಮುಖವೊಂದನ್ನು ದಾಖಲಿಸಿತ್ತು. ಈ ದೇಶದ ಬಡಜನರಿಗೆ ಕುಡಿಯುವ ನೀರು ಒದಗಿಸಲಿಕ್ಕಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹಣದಲ್ಲಿ ೫೬,೦೦೦ ಕೋಟಿ ರೂಪಾಯಿಗಳ ಲೆಕ್ಕವೇ ಸಿಗಲಿಲ್ಲ. ಬಡಜನರ ಕುಡಿಯುವ ನೀರಿನ ಕಾಮಗಾರಿಯ ಹಣವನ್ನೂ ನುಂಗಿದವರು ಇರುವ ಪುಣ್ಯವಂತ ದೇಶ ನಮ್ಮದು!
ಯಾಕೆ ಹೀಗೆ? ಎಂದು ಯೋಚನೆ ಮಾಡಿದಾಗ, ನನಗೆ ಕಾಣುವ ಕಾರಣ ದುರಾಶೆ. ಇನ್ನೂ ಬೇಕು, ಮತ್ತೂ ಬೇಕು ಎಂಬ ದುರಾಸೆ. ಹಲವು ಸರಕಾರಿ ಅಧಿಕಾರಿಗಳನ್ನು ಲೋಕಾಯುಕ್ತನಾಗಿ ನಾನು ವಿಚಾರಣೆ ಮಾಡಿದಾಗ, ಇದು ತಪ್ಪಲ್ಲವೇ ಎಂದು ಕೇಳಿದ್ದೆ; ಅವರು ಕೊಡುವ ಉತ್ತರ: “ನಾವು ಪುಕ್ಕಟೆ ಬಂದಿಲ್ಲ, ಈ ಕೆಲಸಕ್ಕೆ ಲಂಚ ಕೊಟ್ಟು ಬಂದಿದ್ದೇವೆ.”
ಭ್ರಷ್ಟಾಚಾರ ಈ ಹಂತಕ್ಕೆ ಬೆಳೆಯಲು ನಮ್ಮ ತಲೆಮಾರಿನವರೇ ಕಾರಣ. ಯಾಕೆಂದರೆ, ನಾವು ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಮಾತಾಡಲಿಲ್ಲ; ಚರ್ಚೆ ನಡೆಸಲಿಲ್ಲ; ಪ್ರತಿಭಟಿಸಲಿಲ್ಲ. ಅನ್ಯಾಯಗಳನ್ನು ಸಹಿಸಿಕೊಂಡೆವು; ಪರಿಸ್ಥಿತಿಗಳ ಜೊತೆ ರಾಜಿ ಮಾಡಿಕೊಂಡೆವು.
ಲೋಕಾಯುಕ್ತ ಕಾಯಿದೆಯನ್ನೇ ಗಮನಿಸಿ. ಈ ಕಾಯಿದೆ ಅನುಸಾರ, ಲೋಕಾಯುಕ್ತರಿಗೆ ಎರಡು ಪ್ರಧಾನ ಅಧಿಕಾರಗಳಿವೆ: ಒಂದನೆಯದು, ಭ್ರಷ್ಟ ಅಧಿಕಾರಿಗಳ ತನಿಖೆ ನಡೆಸಿ, ಅವರ ಸಂಪತ್ತನ್ನು ಲೆಕ್ಕ ಹಾಕಿ, ಅಕ್ರಮ ಸಂಪತ್ತು ಗಳಿಸಿದವರಿಗೆ ಶಿಕ್ಷೆಯಾಗಲು ಕಾನೂನು ಕ್ರಮ ಕೈಗೊಳ್ಳುವುದು. ಎರಡನೆಯದು, ಜನಸಾಮಾನ್ಯರ ದೂರುಗಳನ್ನು ಸ್ವೀಕರಿಸಿ, ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುವುದು.
ಈಗ ಕರ್ನಾಟಕ ಸರಕಾರವು ಲೋಕಾಯುಕ್ತರ ಎರಡನೇ ಅಧಿಕಾರವನ್ನೇ ಕಿತ್ತು ಹಾಕಲು ಸಜ್ಜಾಗಿದೆ; ಅದಕ್ಕಾಗಿ ಆ ಕಾಯಿದೆಗೆ ತಿದ್ದುಪಡಿ ತರಲು ಕರಡು ಮಸೂದೆ ಸಿದ್ಧ ಮಾಡಿದೆ. ಈ ತಿದ್ದುಪಡಿ ಬಂದರೆ, ಇದರ ಪರಿಣಾಮ ಏನಾದೀತು? ನಾನು ಲೋಕಾಯುಕ್ತ ಆಗಿದ್ದ ಅವಧಿಯಲ್ಲಿ, ಸಾರ್ವಜನಿಕರ ೨೬,೦೦೦ ದೂರುಗಳನ್ನು ಸ್ವೀಕರಿಸಿ, ಪರಿಹಾರ ಒದಗಿಸಿದ್ದೆ. ಇವೆಲ್ಲ ದೂರುಗಳ ಬಗ್ಗೆ ಕೋರ್ಟುಗಳಲ್ಲಿ ಮೊಕದ್ದಮೆ ಹೂಡಿದ್ದರೆ, ದೂರುದಾರರಿಗೆ ಪರಿಹಾರ ಸಿಗುತ್ತಿತ್ತೇ? ಅದಕ್ಕೆ ಎಷ್ಟು ವರುಷಗಳು ತಗಲಿತ್ತಿತ್ತು? ಯಾಕೆಂದರೆ, ಈಗಾಗಲೇ ಕೋರ್ಟುಗಳಲ್ಲಿ ಮೂರು ಕೋಟಿಗಿಂತ ಜಾಸ್ತಿ ಮೊಕದ್ದಮೆಗಳು ಇತ್ಯರ್ಥವಾಗದೆ ಬಾಕಿ ಇವೆ. ಆದ್ದರಿಂದ, ಸರಕಾರಗಳು ಇಂತಹ ಜನವಿರೋಧಿ ಧೋರಣೆ ಅನುಸರಿಸಿದರೆ, ತಕ್ಷಣವೇ ನಾವೆಲ್ಲರೂ ಸಂಘಟಿತರಾಗಿ ಪ್ರತಿಭಟಿಸಬೇಕು. ನಮ್ಮ ಸಂವಿಧಾನ ಹಾಗೂ ಕಾಯಿದೆಗಳು ನಮಗೆ ಕೊಟ್ಟಿರುವ ಜನಪರವಾದ ನ್ಯಾಯಪರವಾದ ಎಲ್ಲ ಹಕ್ಕುಗಳನ್ನೂ ನಾವು ಉಳಿಸಿಕೊಳ್ಳಲೇ ಬೇಕಾಗಿದೆ.
(ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರು ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ ೨೦೧೪ರಲ್ಲಿ “ಫೋರಮ್ ಫಾರ ಜಸ್ಟಿಸ್” ಸಂಘಟನೆಯನ್ನು ಉದ್ಘಾಟಿಸುತ್ತಾ ನೀಡಿದ ಉಪನ್ಯಾಸದ ಮೊದಲ ಭಾಗ.  ೮ ನವಂಬರ್ ೨೦೧೬ರಂದು ಪ್ರಧಾನ ಮಂತ್ರಿಯವರು ರೂ.೫೦೦ ಮತ್ತು ರೂ.೧,೦೦೦ದ ನೋಟುಗಳನ್ನು ಅಮಾನ್ಯಗೊಳಿಸಿದ ಬಳಿಕ ಕೋಟಿಗಟ್ಟಲೆ ರೂಪಾಯಿ ಕಾಳಧನದೊಂದಿಗೆ ನೂರಾರು ಭ್ರಷ್ಟರು ಸಿಕ್ಕಿಬಿದ್ದಿರುವ ಸನ್ನಿವೇಶದಲ್ಲಿ ಈ ಉಪನ್ಯಾಸ ಪ್ರಸ್ತುತ.)