“ವಿಶ್ವದ ಅತಿ ದೊಡ್ಡ ವೈಯಕ್ತಿಕ ಲೈಬ್ರರಿಯನ್ನು ಹೊಂದಿದ ವ್ಯಕ್ತಿ- ಡಾ.ಅಂಬೇಡ್ಕರ್"

“ವಿಶ್ವದ ಅತಿ ದೊಡ್ಡ ವೈಯಕ್ತಿಕ ಲೈಬ್ರರಿಯನ್ನು ಹೊಂದಿದ ವ್ಯಕ್ತಿ- ಡಾ.ಅಂಬೇಡ್ಕರ್"

ಈ ಮೇಲಿನ ಮಾತನ್ನು ಹೇಳಿದವರು ದತ್ತೋಪಂತ ಠೇಂಗಡಿ ಇವರು. ಏಪ್ರಿಲ್ 23, ವಿಶ್ವ ಪುಸ್ತಕದ ದಿನ. ಇದನ್ನು ಹೇಳಲಿಲ್ಲ ಎಂದರೆ ಪುಸ್ತಕ ಲೋಕಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. "ಲಂಡನ್ ಮ್ಯುಸಿಯಮ್ ಲೈಬ್ರರಿ" ಯಲ್ಲಿ ಅತಿ ಹೆಚ್ಚು ಪುಸ್ತಕ ಓದಿದ ವಿದ್ಯಾರ್ಥಿ. ಅಷ್ಟೇ ಅಲ್ಲ, ಭಾರತೀಯ ಸಂಸತ್ ಭವನದ ಲೈಬ್ರರಿಯಲ್ಲಿ ಕೂಡಾ ಅತಿ ಹೆಚ್ಚು ಪುಸ್ತಕಗಳನ್ನೋದಿದ ರಾಜಕಾರಣಿ ಎಂಬ ಈ ಎರಡೂ ದಾಖಲೆಗಳೂ ಅಂಬೇಡ್ಕರ್ ರವರ ಹೆಸರಿನಲ್ಲಿಯೇ ಇದ್ದು ಇಂದಿಗೂ ಯಾರಿಂದಲು ಸರಿಗಟ್ಟಲು ಸಾಧ್ಯವಾಗಿಲ್ಲ.

“ಎಲ್ಲರೂ ದೂರ ತಳ್ಳಿದಾಗ ಪುಸ್ತಕಗಳು ಮಾತ್ರ ನನ್ನನ್ನು ತಮ್ಮ ಎದೆಗೆ ಅಪ್ಪಿಕೊಂಡವು" ಎಂದು ಹೇಳಿಕೊಳ್ಳುತ್ತಿದ್ದ ಅವರು ಪುಸ್ತಕಗಳಿಗಾಗಿಯೇ "ರಾಜಗೃಹ" ಎಂಬ ಬೃಹತ್ ಬಂಗಲೆಯನ್ನು ನಿರ್ಮಾಣ ಮಾಡಿಕೊಂಡಿದ್ದರು. 50 ಸಾವಿರಕ್ಕೂ ಹೆಚ್ಚು ವಿದ್ವತ್ಪೂರ್ಣ ಪುಸ್ತಕಗಳನ್ನು ಅಧ್ಯಯನ ನಡೆಸಿದ್ದರು. 9 ಭಾರತೀಯ ಭಾಷೆಗಳನ್ನೂ ಸೇರಿದಂತೆ ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಉರ್ದು, ಪರ್ಷಿಯನ್, ಭಾಷೆಗಳ ಮೇಲೆ ಕೇವಲ ಕಲಿಕೆ ಮಾತ್ರವಲ್ಲ ಪಾಂಡಿತ್ಯವನ್ನೇ ಸಾಧಿಸಿದ್ದರು. ಪಾಳಿ (ಪಾಲಿ) ಭಾಷೆಗೊಂದು ನಿಘಂಟನ್ನೂ ರೂಪಿಸಿದ್ದರು.

ಅರ್ಥಶಾಸ್ತ್ರ, ಕಾನೂನು ಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಇತಿಹಾಸ, ಭೂಗೋಳ ಜಗತ್ತಿನ ಎಲ್ಲಾ  ಧರ್ಮ ಗ್ರಂಥಗಳು, ವಿಶ್ವದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ವಿವಿಧ ದೇಶದ ಸಂವಿಧಾನಗಳೂ ಸೇರಿದಂತೆ ಪ್ರಪಂಚದಲ್ಲಿ ಆ ಕಾಲಕ್ಕೆ ಲಭ್ಯವಿದ್ದ ಜಗತ್ತಿನ ಎಲ್ಲ ಶ್ರೇಷ್ಠ ಪುಸ್ತಕಗಳನ್ನು ಅಧ್ಯಯನ ಮಾಡಿ ಸಂಗ್ರಹಿಸಿಟ್ಟಿದ್ದರು.

ಶಾಲಾ ದಿನಗಳಲ್ಲಿ ಅಂಬೇಡ್ಕರ್ ಅವರಿಗೆ ಸಂಸ್ಕೃತ ಕಲಿಸುವುದನ್ನು ನಿಷೇಧಿಸಲಾಗಿತ್ತು. ಹೀಗಾಗಿ ಅವರು ಪಾರ್ಸಿ ಭಾಷೆಯನ್ನು ಐಚ್ಛಿಕ ವಿಷಯವನ್ನಾಗಿ ತಗೆದುಕೊಂಡಿದ್ದರು. 1935 ರಲ್ಲಿ ಸಂಸ್ಕೃತವನ್ನು ಕಲಿಯಲೇಬೇಕು ಅಂತ ಹಠ ತೊಟ್ಟು ನಾಗಪ್ಪ ಶಾಸ್ತ್ರಿ ಎಂಬ ಸಂಸ್ಕೃತ ಪಂಡಿತರನ್ನು ಮನೆಗೆ ಕರೆಸಿಕೊಂಡು ಸಂಸ್ಕೃತವನ್ನು ಕಲಿತರು. ಆ ಮುಖಾಂತರ ಅಂಬೇಡ್ಕರವರು ಮಹಾಭಾರತ, ರಾಮಾಯಣ, ವೇದೋಪನಿಷತ್, ಗೀತೆ, ಭಾಷ್ಯಗಳನ್ನು, ಶಾಸ್ತ್ರಗಳನ್ನು ಅಲ್ಪ ಕಾಲದಲ್ಲೇ ಅಧ್ಯಯನ ಮಾಡಿ, ಆ ಕಾಲದ ಸಂಸ್ಕೃತ ಪ್ರಕಾಂಡ ಪಂಡಿತರಲ್ಲಿ ಒಬ್ಬರಾಗಿಬಿಟ್ಟರು. ಬೌದ್ಧ ಧರ್ಮದ ಮೂಲ ಕೃತಿಗಳನ್ನು ಅಧ್ಯಯನ ಮಾಡಲು ಅವರು ಪಾಳಿ ಭಾಷೆಯನ್ನು ಕಲಿತು ಕೊನೆಗೆ 2500 ಪದಗಳ ಇಂಗ್ಲಿಷ್ -ಪಾಳಿ ನಿಘಂಟನ್ನು ರೂಪಿಸಿದರು. ಇವತ್ತಿಗೂ ಇಂಗ್ಲಿಷ್ ಮತ್ತು ಪಾಳಿ ಭಾಷೆಗಳ ಅಧ್ಯಯನಕ್ಕೆ ಈ ಬೃಹತ್ ನಿಘಂಟು ಸೇತುವೆಯಾಗಿದೆ.

ಇದನ್ನು ನೋಡಿಯೇ ವಿಶ್ವದ ಖ್ಯಾತ ವಿದ್ವಾಂಸರಾದ 'ಬೆವರ್ಲಿ' ಇವರು ಅಂಬೇಡ್ಕರರನ್ನು "ಈ  ಭೂಮಿಯ ಮೇಲಿನ ಜೀವಂತ ವಿದ್ಯಾದೇವತೆ" ಎಂದರೆ 'ಬಟ್ಲರ್' ಇವರು "ಜ್ಞಾನ ಭಂಡಾರದ ಒಡೆಯ" ಎಂದು ಕರೆದರು. 'ಲಾರ್ಡ್ ಮೌಂಟ್ ಬ್ಯಾಟನ್', "ಇವರ ಪಾಂಡಿತ್ಯವನ್ನು ನೋಡಿ ನಾನು ಬೆರಗಾದೆ" ಎಂದರು. ದತ್ತೋಪಂತ ಠೇಂಗಡಿಯವರು, "ಪ್ರಪಂಚದಲ್ಲಿ ಡಾ. ಅಂಬೇಡ್ಕರ್ ಒಬ್ಬರನ್ನು ಬಿಟ್ಟರೆ 50,000 ಪುಸ್ತಕಗಳನ್ನು ಸಂಗ್ರಹಿಸುವ ಮತ್ತು ಅಧ್ಯಯನ ನಡೆಸಿರುವ ಇನ್ನೊರ್ವ ಹುಡುಕಿದರೂ ಸಿಗಲಾರ" ಎಂದು ಹೇಳಿದ್ದರು.

ಅಮೇರಿಕಾದ ಅವರ ಸಹಪಾಠಿ 'ನವೆಲ್ ಬತೇನ' "ನಾವುಗಳು ಪುಸ್ತಕದ ಹಾಳೆಗಳನ್ನು ಒಂದೊಂದಾಗಿ ನಿಧಾನವಾಗಿ ತಿಂದರೆ, ಅಂಬೇಡ್ಕರವರು ಇಡೀ ಪುಸ್ತಕ ಪುಸ್ತಕಗಳನ್ನೇ ಬಕಬಕನೆ ನುಂಗುತ್ತಿದ್ದರು" ಎನ್ನುತ್ತಾರೆ. "ನಾನು ಪುಸ್ತಕಗಳನ್ನು ನನ್ನ ಪತ್ನಿ ಮತ್ತು ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ. ಓದು ಬರಹಗಳೇ ನನ್ನ ಚೈತನ್ಯ ಶಕ್ತಿ" ಎನ್ನುತ್ತಿದ್ದ ಅಂಬೇಡ್ಕರ್ ರವರು 1913 ರಲ್ಲಿ ಅಮೇರಿಕಾಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದಾಗ ಅಲ್ಲಿ 2000 ಪುಸ್ತಕಗಳನ್ನು ಖರೀದಿಸಿದ್ದರು. ಇದಕ್ಕಾಗಿ ಅವರು ಪ್ರತಿದಿನ ಒಂದು ಹೊತ್ತಿನ ಊಟವನ್ನು ತ್ಯಜಿಸಿದ್ದರು ಮತ್ತು ಆ ಊಟದ ಹಣದಿಂದ ಪುಸ್ತಕಗಳನ್ನು ಖರೀದಿಸುತ್ತಿದ್ದರು. ಆಗ ಅವರಿಗೆ ವಯಸ್ಸು ಕೇವಲ 22 ವರ್ಷಗಳಾಗಿದ್ದವು.

ಲಂಡನ್ ಮ್ಯೂಸಿಯಂ ಲೈಬ್ರರಿಯಿಂದ ಅತಿ ಹೆಚ್ಚು ಪುಸ್ತಕಗಳನ್ನು ಪಡೆದುಕೊಂಡು ಓದಿದ ವಿದ್ಯಾರ್ಥಿ ಅಂಬೇಡ್ಕರ್ ಎಂದು ವಿದೇಶಿಯರಿಂದ ದಾಖಲಿಸಲ್ಪಟ್ಟರು. ಆ ದಾಖಲೆಯನ್ನು ಯಾರೂ ಇಂದಿಗೂ ಸರಿಗಟ್ಟಿಲ್ಲ. ಲಂಡನ್ ಸ್ಕೂಲ್ ಆಫ್ ಎಕನಾಮಿಯು ತನ್ನ ಕಾಲೇಜಿನಲ್ಲಿ ಅತಿ ಹೆಚ್ಚು ಗ್ರಂಥಗಳನ್ನು ಓದಿ ಮಹಾನ್ ವ್ಯಕ್ತಿಯಾದ ಸವಿನೆನಪಿಗಾಗಿ ತನ್ನ  ಪ್ರಮುಖ ಉಪನ್ಯಾಸ ಕೊಠಡಿಯಲ್ಲಿ ಮುಂದಿನ ಪೀಳಿಗೆಯ ಸ್ಪೂರ್ತಿಗಾಗಿ ಅಂಬೇಡ್ಕರ್ ರವರ ಭಾವಚಿತ್ರವನ್ನು ನಿರ್ಮಿಸಿ ಗೌರವಿಸಿದೆ.

1913 ರಲ್ಲಿಅಮೇರಿಕದಲ್ಲಿ ವಿದ್ಯಾರ್ಥಿಯಾಗಿ ಪ್ರಖರ ಪಾಂಡಿತ್ಯವನ್ನು ಪಡೆದ ತನ್ನ ವಿದ್ಯಾರ್ಥಿಯ ಸವಿ ನೆನಪಿಗಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯವು 1952 ರಲ್ಲಿ ಡಿ.ಲಿಟ್. ಪದವಿ ನೀಡಿ ತನ್ನ ಐತಿಹಾಸಿಕ ವಿದ್ಯಾರ್ಥಿ ಎಂದು ಘೋಷಿಸಿಕೊಂಡಿದೆ. ಒಮ್ಮೆ 78 ಗಂಟೆಗಳು ಸತತವಾಗಿ ಓದಿ, 300 ಪುಟಗಳನ್ನು ಬರೆದ ದಾಖಲೆ ಅಂಬೇಡ್ಕರ್ ರವರ ಹೆಸರಿನಲ್ಲಿದೆ ಇದನ್ನು ರತ್ತು ದಾಖಲಿಸಿದ್ದಾರೆ. 

1942 ರಿಂದ 1946 ಬ್ರಿಟಿಷ್ ಭಾರತದ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ-ಇಂಧನ- ಲೋಕೋಪಯೋಗಿ-ನೀರಾವರಿ ಹಾಗೂ ಗಣಿ ಖಾತೆಗಳ ಮಂತ್ರಿಯಾಗಿದ್ದಾಗಲೇ ಆ ಸಂದರ್ಭದಲ್ಲಿ 121 ಟ್ರಂಕುಗಳ ತುಂಬಾ ಅಪಾರ ಪುಸ್ತಕಗಳನ್ನು  ಮುಂಬೈಯಿಂದ ಸಾಗಿಸಿದ್ದರು. ಇವುಗಳ ಉಸ್ತುವಾರಿಯನ್ನು ಜೀವನಪೂರ್ತಿ ನೋಡಿಕೊಂಡವರು ಅವರ ಸೇವಕರಾದ ಶ್ರೀ ದೇವಿ ದಯಾಳ್ ಮತ್ತು ಶ್ರೀ ಚಗನ್ ಲಾಲ್ ಮೋದಿ ಎಂಬುವವರು.  

ಬ್ರಿಟಿಷ್ ಭಾರತದಲ್ಲಿ ವೈಸ್ ರಾಯ್ ಗಳಾಗಿದ್ದವರು ಇಂಗ್ಲೆಂಡಿನಿಂದ  ಬರುತ್ತಿದ್ದಂಥ ಪ್ರತಿಯೊಬ್ಬರೂ ಕೂಡ ಅಂಬೇಡ್ಕರವರ ಗ್ರಂಥಾಲಯ ಜ್ಞಾನಭಂಡಾರಕ್ಕೆ ಭೇಟಿನೀಡುತ್ತಿದ್ದರು. ಶ್ರೀ ಜೆ.ಕೆ. ಬಿರ್ಲಾ ರವರು ಅಂಬೇಡ್ಕರವರ ಪುಸ್ತಕ ಭಂಡಾರವನ್ನು 2 ಲಕ್ಷ ರೂಪಾಯಿಗಳಿಗೆ ಖರೀದಿಸಲು ಕೇಳಿದ್ದರು. ಅಂಬೇಡ್ಕರವರು; "ಪುಸ್ತಕಗಳಿಲ್ಲದೆ, ಓದುಬರಹಗಳಿಲ್ಲದೆ, ನಾನು ಬದುಕಿರಲಾರೆ." ಎಂದು ಹೇಳುವುದರ ಮೂಲಕ "ಹಣಕ್ಕಿಂತ ನನಗೆ ಅಮೂಲ್ಯ ಪುಸ್ತಕಗಳೇ ಮುಖ್ಯ, ಶ್ರೀಮಂತಿಕೆಗಿಂತ ಜ್ಞಾನವೇ ಮುಖ್ಯ" ಎಂದು ಬಿರ್ಲಾ ರವರಿಗೆ ಉತ್ತರಿಸಿದ್ದರು.

ಒಂದು ಪ್ರಸಂಗ: ದೆಹಲಿಯಿಂದ ಲಕ್ನೋಗೆ ಅಂಬೇಡ್ಕರ್ ರವರು ತೆರಳುವಾಗ ರೈಲಿನಲ್ಲಿಯೇ ತಮ್ಮ ಜೊತೆಗೆ ಪುಸ್ತಕಗಳ ರಾಶಿಯನ್ನು ಕೊಂಡೊಯ್ದಿದ್ದರು. ಲಕ್ನೋ ತಲುಪಿದಾಗ ಮಂತ್ರಿಯಾಗಿ ಅತಿಥಿ ಗೃಹದಲ್ಲಿ ವಿಶ್ರಮಿಸದೆ ರೈಲಿನ ಸೆಲ್ಯೂನ್ ನಲ್ಲಿಯೇ ರಾತ್ರಿಯೆಲ್ಲಾ ಉಳಿದು ಪುಸ್ತಕಗಳ ಸುರಕ್ಷೆ ಮತ್ತು ಅಧ್ಯಯನದಲ್ಲಿ ಮುಳುಗಿದ್ದರು. ಇಂದಿಗೂ ಕೇಂದ್ರ ಸಚಿವರ ಹೆಸರಿನಲ್ಲಿರುವ ಅಪರೂಪದ ಪ್ರಸಂಗವಿದು.

ಬ್ರಿಟನ್ನಿನ ಮಹಾರಾಣಿ, ಬ್ರಿಟಿಷ್ ರಾಜಕುಮಾರ, ಬ್ರಿಟನ್ನಿನ ಪ್ರಧಾನ ಮಂತ್ರಿಗಳು ಅಂಬೇಡ್ಕರವರ ಎಕ್ಸಲೆಂಟ್ ಇಂಗ್ಲಿಷಿಗೆ ಮನಸೋಲುತ್ತಿದ್ದರು. ಅವರಿಗಿದ್ದ ಇಂಗ್ಲಿಷ್ ಪಾಂಡಿತ್ಯ, ವಿಷಯ ಮಂಡನೆ, ಭಾಷೆಯ ಮೇಲಿದ್ದ ಹಿಡಿತ ಈ ನೆಲದ ಶೋಷಿತರ ನೋವನ್ನು ಬ್ರಿಟನ್ ರಾಣಿಗೆ ಮನವರಿಕೆ ಮಾಡುವಷ್ಟು ಪ್ರಬುದ್ಧವಾಗಿತ್ತು. ಅದಕ್ಕಾಗಿಯೇ ಡಾ. ಅಂಬೇಡ್ಕರ್ ಅವರು "ಭಾಷೆಗಳು ಜ್ಞಾನ ಭಂಡಾರದ ಬಾಗಿಲುಗಳು; ಅದರಲ್ಲೂ ಇಂಗ್ಲಿಷ್ ಭಾಷೆಯು ಸಿಂಹದ ಹಾಲು ಇದ್ದಂತೆ" ಎಂದು ಹೇಳುತ್ತಿದ್ದರು. 

45 ವರ್ಷಗಳ ಕಾಲ ಅವರು ಸುದೀರ್ಘ ಓದು ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಲೆಕ್ಕಕ್ಕೆ ಸಿಕ್ಕಿರುವಂತೆ 27,000 ಪುಟಗಳಿಗೂ ಅಧಿಕ ಬರವಣಿಗೆ ಅವರ ಹೆಸರಿನಲ್ಲಿದೆ. ಭಾರತೀಯ ಸಂಸತ್ ಭವನದೊಳಗಿರುವ ಲೈಬ್ರರಿಯಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಓದಿದ, ಅಧ್ಯಯನ ನಡೆಸಿದ; ಮೊದಲ ಮತ್ತು ಕೊನೆಯ ರಾಜಕಾರಣಿ- ಡಾ. ಅಂಬೇಡ್ಕರ್ ಅವರೇ ಆಗಿದ್ದಾರೆ.

ವೈದ್ಯರ ಸಲಹೆಯನ್ನು ಲೆಕ್ಕಿಸದೆ ಹಿಂದು ಕೋಡ್ ಬಿಲ್ಲಿನ ಸಮರ್ಥನೆಗಾಗಿ ರಾಶಿ ರಾಶಿ ಪುಸ್ತಕಗಳನ್ನು ತಮ್ಮ ಸುತ್ತ ಗುಡ್ಡೆ ಹಾಕಿಕೊಂಡಿದ್ದ ಅವರು ಬದುಕಿನ ಒಂದೇ ಒಂದು ದಿನವನ್ನೂ ಕೂಡ ಓದಿನಿಂದ ವಂಚಿಸಲಿಲ್ಲ. ಅವರು  ನಿಧನವಾಗುವ ಕೊನೆಯ ಕ್ಷಣವೂ ಕೂಡ, ಓದಿನಲ್ಲಿಯೇ ತಮ್ಮ ಪ್ರಾಣವನ್ನು ಬಿಟ್ಟರು. ಇಂಥ ಅಪರೂಪದ ಪ್ರಸಂಗ ಜಗತ್ತಿನಲ್ಲಿ ಅತಿ ವಿರಳ.

"ಲೈಫ್ ಆಫ್ ಲಿಯೊ ಟಾಲ್ ಸ್ಟಾಯ್", ವಿಕ್ಟರ್ ಹ್ಯೂಗೋನ "ಲೇ ಮಿಸರೇಬಲ್ಸ್", ಹಾರ್ಡಿಯ "ಫಾರ್ ಫ್ರಮ್ ದಿ ಮ್ಯಾಡಿಂಗ್ ಕ್ರೌಡ್" ಎಂಬ ಈ ಮೂರು ಪುಸ್ತಕಗಳು ಅಂಬೇಡ್ಕರ್ ರನ್ನು ಅವರ ಬದುಕಿನಲ್ಲಿ ಕಾಡಿದ ಪುಸ್ತಕಗಳು ಇದನ್ನು ನಾನಕ್ ಚಂದ್ ರತ್ತು ದಾಖಲಿಸುತ್ತಾರೆ. ತನ್ನ ಬದುಕನ್ನು ಪುಸ್ತಕಗಳ ನಡುವೆಯೇ ಕಳೆದು. ಜಗತ್ತಿನಲ್ಲಿ ಗ್ರಂಥಾಲಯದ ಮಹೋನ್ನತಕ್ಕೆ ಪ್ರೇರಣೆಯಾದ "ಜಗದ್ವಿದ್ಯಾರ್ಥಿ"ಯನ್ನು  ಈ ವಿಶ್ವ ಪುಸ್ತಕದ ದಿನ ನೆನೆಯದೇ ಇದ್ದರೆ. ಜಗದ ಜ್ಞಾನ ನೀಡುವ ಪುಸ್ತಕಕ್ಕೆ ಅನ್ಯಾಯವೆಸಗಿದಂತೆ.

ಕೃಪೆ : ಅಜೋ 

ಸಂಗ್ರಹ: ಜನಾರ್ದನ ದುರ್ಗಾ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ