“ವೃಕ್ಷ ಮಾತೆ” ಸಾಲುಮರದ ತಿಮ್ಮಕ್ಕ

“ವೃಕ್ಷ ಮಾತೆ” ಸಾಲುಮರದ ತಿಮ್ಮಕ್ಕ

ಪರಿಸರ ಎಂದರೆ ಕರ್ನಾಟಕದಲ್ಲಿ ತಕ್ಷಣ ನೆನಪಾಗುವ ಹೆಸರು ಸಾಲುಮರದ ತಿಮ್ಮಕ್ಕ. “ವೃಕ್ಷಮಾತೆ” ಎಂದು ಸಹ ಇವರನ್ನು ಕರೆಯುತ್ತಾರೆ. ವರ್ಷಗಳ ಹಿಂದೆ ನೂರಾರು ಸಸಿಗಳನ್ನು ನೆಟ್ಟು ಪರಿಸರಕ್ಕೆ ಕೊಡುಗೆ ನೀಡಿರುವ ತಿಮ್ಮಕ್ಕ, ತಾವು ನೆಟ್ಟ ಸಾಲು ಸಸಿಗಳಿಂದಲೇ “ಸಾಲು ಮರದ ತಿಮ್ಮಕ್ಕ” ಎಂಬ ಹೆಸರು ಪಡೆದುಕೊಂಡರು. ಪರಿಸರಕ್ಕೆ ಸಾಲುಮರದ ತಿಮ್ಮಕ್ಕ ನೀಡಿರುವ ಕೊಡುಗೆಯ ಬಗ್ಗೆ ತಿಳಿದು ಅದೆಷ್ಟೋ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅವರನ್ನು ಗೌರವಿಸಿವೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ತಿಮ್ಮಕ್ಕ ಅವರು ಜನಿಸಿದರು. ತಂದೆ ಚಿಕ್ಕರಂಗಯ್ಯ, ತಾಯಿ ವಿಜಯಮ್ಮ. ಶಾಲೆಗೆ ಹೋಗಲು ಸಾಧ್ಯವಾಗದಿದ್ದ ಕಾರಣ ತಿಮ್ಮಕ್ಕ ಮೊದಲು ದನಕರುಗಳನ್ನು ಮೇಯಿಸುತ್ತಿದ್ದರು. ನಂತರ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಸುಮಾರು ೧೨ ವರ್ಷದ ವಯಸ್ಸಿನಲ್ಲಿ ಮದುವೆಯಾದರು. ಚಿಕ್ಕಯ್ಯ ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರು. 

ಮದುವೆಯಾಗಿ ಅದೆಷ್ಟೋ ವರ್ಷಗಳಾದರೂ ತಿಮ್ಮಕ್ಕ ಅವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ತಿಮ್ಮಕ್ಕ ಮಕ್ಕಳಿಲ್ಲದ ದುಃಖವನ್ನು ಮರೆಯಲು ರಸ್ತೆಯ ಬದಿಗಳಲ್ಲಿ ಆಲದ ಸಸಿಗಳನ್ನು ನೆಡಲು ಆರಂಭಿಸಿದರು.ಕುದೂರಿನಿಂದ ಹುಲಿಕಲ್ ತನಕ ಇರುವ ರಾಜ್ಯ ಹೆದ್ದಾರಿ ೯೪ರಲ್ಲಿ ತಿಮ್ಮಕ್ಕರವರು ಆಲದ ಸಸಿಗಳನ್ನು ನೆಟ್ಟರು. ತಿಮ್ಮಕ್ಕ ಅವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಈ ಮರಗಳಿಂದ ಸಸಿಗಳನ್ನು ಕಸಿ ಮಾಡಲು ಆರಂಭಿಸಿದರು. ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ ೪ ಕಿ.ಮೀ.

ಉದ್ದಳತೆಯಲ್ಲಿ ಸಸಿಗಳನ್ನು ನೆಟ್ಟರು ೨ನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ ೨೦ ಸಸಿಗಳನ್ನು ನೆಟ್ಟರು. ತಿಮ್ಮಕ್ಕ ದಂಪತಿ ಈ ಸಸಿಗಳನ್ನು ನೆಡಲು ತಮ್ಮ ಅತ್ಯಲ್ಪ ಆದಾಯವನ್ನೇ ಬಳಸಿದರು. ಗಂಡ-ಹೆಂಡತಿ ಇಬ್ಬರೂ ಸಸಿಗಳಿಗೆ ನೀರುಣಿಸಲು ಬಿಂದಿಗೆ ಕೊಳಗಗಳಲ್ಲಿ ನಾಲ್ಕು ಕಿ.ಮೀ ವರೆಗೆ ನೀರನ್ನು ಹೊತ್ತು ಕೊಂಡೊಯ್ಯುತ್ತಿದ್ದರು. ಸಸಿಗಳನ್ನು ಮೇವಿನ ಜಾನುವಾರುಗಳ ಕಾಟದಿಂದ ತಪ್ಪಿಸಲು ಅವುಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸುತ್ತಿದ್ದರು.

ನೀರಿನ ಅಭಾವ ಉಂಟಾಗಿ ಗಿಡಗಳಿಗೆ ತೊಂದರೆಯಾಗುತ್ತದೆ ಎಂದು ಅನಿಸಿದಾಗ, ಮತ್ತೆ ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ಗಿಡವನ್ನು ನೆಡಲು ಶುರು ಮಾಡಿದರು. ತಿಮ್ಮಕ್ಕ ಅವರ ಪತಿ ೧೯೯೧ರಲ್ಲಿ ಮೃತಪಟ್ಟರು. ದುಃಖದಿಂದ ಹೊರಬಂದ ತಿಮ್ಮಕ್ಕ ಅವರು ಮತ್ತೆ ಮರಗಳಲ್ಲಿ ಸಾಂತ್ವನವನ್ನು ಕಂಡುಕೊಂಡರು. ಬಳಿಕ ಹೊಸ ಚೈತನ್ಯದಿಂದ ಅವುಗಳನ್ನು ಪೋಷಿಸುವುದನ್ನು ಮತ್ತೆ ಮುಂದುವರೆಸಿದರು.

ಸಾಲು ಮರದ ತಿಮ್ಮಕ್ಕ ಈ ರೀತಿ ತಮ್ಮ ಸ್ವಂತ ಖರ್ಚಿನಲ್ಲಿ ೮೦೦೦ ಸಸಿಗಳನ್ನು ನೆಟ್ಟಿದ್ದಾರೆ. ಇಂದಿಗೆ ಅವುಗಳ ಮೌಲ್ಯವು ಸುಮಾರು ೧೫ ಲಕ್ಷಕ್ಕೂ ಅಧಿಕ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ. ಅನಕ್ಷರಸ್ಥೆಯಾಗಿದ್ದರೂ ತಿಮ್ಮಕ್ಕ ಪರಿಸರ ಸಂರಕ್ಷಣೆಯಲ್ಲಿ ಮಹತ್ಕಾರ್ಯ ಮಾಡಿದರು.

ಮುಂದಿನ ಪೀಳಿಗೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮರಗಳಿಗೆ ನೀರುಣಿಸಿ ಬೆಳೆಸಿದರು. ಪರಿಸರ ಸಮಸ್ಯೆಗಳತ್ತಲೂ ಮುಖ ಮಾಡಿದ ತಿಮ್ಮಕ್ಕ ಅವರು ಈ ಕುರಿತ ಹಲವು ಪ್ರತಿಭಟನೆಗಳಲ್ಲೂ ಪಾಲ್ಗೊಂಡಿದ್ದಾರೆ. ೨೦೧೯ರಲ್ಲಿ ಎಚ್ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಾಗೇಪಲ್ಲಿ-ಹಲಗೂರು ರಸ್ತೆಯಲ್ಲಿ (ಮಂಡ್ಯ ಜಿಲ್ಲೆ) ಹೆದ್ದಾರಿ ಅಗಲೀಕರಣಕ್ಕಾಗಿ ಮರಗಳನ್ನು ಕಡಿಯುವ ಪ್ರಸ್ತಾಪವಿತ್ತು (ಈ ಸ್ಥಳದಲ್ಲಿ ತಿಮ್ಮಕ್ಕ ಮತ್ತು ಅವರ ಪತಿ ೩೮೫ ಆಲದ ಮರಗಳನ್ನು ನೆಟ್ಟಿದ್ದರು). ಹೆದ್ದಾರಿ ಅಗಲೀಕರಣಕ್ಕೆ ತಿಮ್ಮಕ್ಕ ಅವರು ವಿರೋಧ ವ್ಯಕ್ತಪಡಿಸಿದ್ದರು.

ತಿಮ್ಮಕ್ಕ ಅವರ ಒತ್ತಡಕ್ಕೆ ಮಣಿದ ಸರ್ಕಾರವು ಪರ್ಯಾಯ ಮಾರ್ಗಗಳತ್ತ ಮುಖ ಮಾಡಿತು, ಇದರಿಂದ ೭೦ ವರ್ಷಗಳ ಕಾಲ ಸಾಕಿದ್ದ ಮರಗಳ ಜೀವ ಉಳಿದಂತಾಯಿತು. 

ಪರಿಸರಕ್ಕೆ ತಿಮ್ಮಕ್ಕ ನೀಡಿರುವ ಕೊಡುಗೆಯನ್ನು ಗಮನಿಸಿ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ. ಭಾರತ ಸರ್ಕಾರ ೨೦೧೯ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಾಗಳಲ್ಲಿ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಗೆ ತಿಮ್ಮಕ್ಕ ಹೆಸರನ್ನು ಇಡಲಾಗಿದೆ. ೧೯೯೫ರಲ್ಲಿ ರಾಷ್ಟ್ರೀಯ ಪೌರ ಪ್ರಶಸ್ತಿ, ೧೯೯೭ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ೧೯೯೭ರಲ್ಲಿ ವೀರಚಕ್ರ ಪ್ರಶಸ್ತಿ. ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಇವರಿಂದ ಮಾನ್ಯತೆಯ ಪ್ರಮಾಣ ಪತ್ರ, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು ಇವರಿಂದ ಶ್ಲಾಘನೆಯ ಪ್ರಮಾಣ ಪತ್ರ ತಿಮ್ಮಕ್ಕ ಅವರಿಗೆ ಲಭಿಸಿದೆ.

(ಆಧಾರ) - ಸಂತೋಷ್ ಕುಮಾರ್, ಸುರತ್ಕಲ್

ಚಿತ್ರ ಕೃಪೆ: ಅಂತರ್ಜಾಲ ತಾಣ