“ಸತ್ಯವೇ ಬಲಿಷ್ಠ ಮಾನವೀಯತೆ…!”

“ಸತ್ಯವೇ ಬಲಿಷ್ಠ ಮಾನವೀಯತೆ…!”

ಎಲ್ಲರಂತೆ ನನ್ನ ಹುಟ್ಟು ಸಹ ಆಕಸ್ಮಿಕ. ಹಾಗು ಹೀಗೂ ಹೇಗೋ ಬಾಲ್ಯ ಕಳೆದು ಶಿಕ್ಷಣ ಒಂದು ಹಂತ ತಲುಪಿತು. ‌ಹಾಗೆಯೇ ವಿದೇಶದಲ್ಲಿ ಲಾ ಓದುವ ಆಸೆಯಾಯಿತು. ಹೇಗೋ ಕಷ್ಟ ಪಟ್ಟು ಇಂಗ್ಲೇಂಡಿನಲ್ಲಿ ಬ್ಯಾರಿಸ್ಟರ್ ಮಾಡಿದೆ. ಮತ್ತೆ ಭಾರತಕ್ಕೆ ವಾಪಸ್ಸಾಗಿ ಒಂದಷ್ಟು ದಿನ ನ್ಯಾಯಾಲಯಗಳಲ್ಲಿ ವಕೀಲಿಕೆ ಮಾಡಿದೆ. ಹೀಗೆ ಒಮ್ಮೆ ಕಕ್ಷಿದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲು ದಕ್ಷಿಣ ಆಫ್ರಿಕಾಗೆ ಹೋದೆ. ಅಲ್ಲಿ ಏನೇನೋ ಗಲಾಟೆಗಳು. ಬಿಳಿ ಕರಿಯರ ನಡುವೆ ವರ್ಣಭೇದ ನೀತಿ.

ಅಲ್ಲೊಂದಿಷ್ಟು ಹೋರಾಟ ಮತ್ತೆ ಭಾರತಕ್ಕೆ ವಾಪಸ್ಸು. ಮುಂದೆ ಮತ್ತೆ ದಕ್ಷಿಣ ಆಫ್ರಿಕಾ ಪ್ರವಾಸ. ದೀರ್ಘಕಾಲ ಅಲ್ಲಿಯೇ ವಾಸ. ಬ್ರಿಟೀಷರ ದೌರ್ಜನ್ಯದ ವಿರುದ್ಧ ತೀವ್ರ ಹೋರಾಟ. ಆ ಮಾಹಿತಿ ಪಡೆದ ಗೋಪಾಲಕೃಷ್ಣ ಗೋಖಲೆಯವರಿಂದ ಭಾರತಕ್ಕೆ ಆಹ್ವಾನ. ಒಲ್ಲದ ಮನಸ್ಸಿನಿಂದ ಭಾರತಕ್ಕೆ ಹಿಂತಿರುಗಿದೆನು. ಅಧ್ಯಯನಕ್ಕಾಗಿ ಇಡೀ ಭಾರತದ ಪ್ರವಾಸ. ಹೋರಾಟದ ಒಂದೊಂದೇ ಹಾದಿಗಳು ತೆರೆದು ಕೊಳ್ಳತೊಡಗಿದವು. ಅಲ್ಲಿಯವರೆಗೂ ನಡೆದ ಚಳವಳಿಗಳ ದಿಕ್ಕು ಗಮನಿಸಿ ಹೊಸ ಪ್ರಯೋಗ ಮಾಡುತ್ತಾ ಸಾಗಿದೆ.‌ ಹೊಸ ಹೊಸ ಬೇಡಿಕೆಗಳನ್ನು ಮಂಡಿಸುತ್ತಾ ಕೊನೆಗೆ ಪೂರ್ಣ ಸ್ವರಾಜ್ಯ ಮತ್ತು ಸಂಪೂರ್ಣ ಸ್ವಾತಂತ್ರ್ಯದ ಹಕ್ಕು ಮಂಡಿಸಲಾಯಿತು.

ಅನೇಕ ಹೋರಾಟಗಾರರು ನನ್ನ ಜೊತೆಗೂಡಿದರು. ಒಂದಷ್ಟು ಜನ ನನ್ನ ಕಾರ್ಯವೈಖರಿಯನ್ನು ಒಪ್ಪದೆ ಅಸಮಾಧಾನಗೊಂಡು ವಿರೋಧಿಸಿದರು. ಶಾಂತಿ, ಅಹಿಂಸೆ, ಸರಳತೆ, ಸತ್ಯ, ಸತ್ಯಾಗ್ರಹ ಹೀಗೆ ನನ್ನ ನಿಲುವುಗಳನ್ನು ಸಾಕಷ್ಟು ಜನ ಬೆಂಬಲಿಸಿದರು ಹಾಗೆಯೇ ಒಂದಷ್ಟು ಆಕ್ರಮಣಕಾರಿ ಮನೋಭಾವದ ಹೋರಾಟಗಾರರು ತಮ್ಮದೇ ರೀತಿಯಲ್ಲಿ ಹೋರಾಡುತ್ತಿದ್ದರು.

ಅಂತಿಮವಾಗಿ ದೀರ್ಘ ಹೋರಾಟದ ನಂತರ ಸಂಘರ್ಷ ಸಮನ್ವಯ ಬೆದರಿಕೆ ಎಚ್ಚರಿಕೆಯ ನಂತರ ಸ್ವಾತಂತ್ರ್ಯ ಲಭಿಸಿತು. ಆ ಹೊತ್ತಿಗಾಗಲೇ ಆಳವಾಗಿ ವಿಭಜನೆ ಹೊಂದಿದ್ದ ಹಿಂದೂ ಮುಸ್ಲಿಂ ಮನಸ್ಸುಗಳಿಂದಾಗಿ ತೀರಾ ಅನಿವಾರ್ಯವಾಗಿ ದೇಶ ವಿಭಜನೆಯಾಯಿತು. ಆಗ ಭುಗಿಲೆದ್ದ ಹಿಂಸಾಚಾರ ಕೊನೆಗೆ ನನ್ನ ಕೊಲೆಯಲ್ಲಿ ಅಂತಿಮ ಹಂತ ತಲುಪಿತು.

ಇದು ಸಂಭವಿಸಿ ಸುಮಾರು ‌76 ವರ್ಷಗಳು ಕಳೆದಿವೆ. ಭಾರತವೆಂಬ ಬೃಹತ್ ದೇಶದ ಇತಿಹಾಸದಲ್ಲಿ ನಾನೊಬ್ಬ ಸಾಮಾನ್ಯ ಮನುಷ್ಯ. ಸ್ವಾತಂತ್ರ್ಯ ನಂತರದಲ್ಲಿ ನನ್ನ ನೆನಪು ಸಹ ನಿಧಾನವಾಗಿ ಮಾಸುತ್ತಿದೆ. ಸ್ವಾತಂತ್ರ್ಯ ಹೋರಾಟದ ಆಗಿನ ಘಟನೆಗಳನ್ನು ಹೊಸ ಹೊಸ ನೋಟಗಳೊಂದಿಗೆ ವಿಮರ್ಶಿಸಲಾಗುತ್ತಿದೆ. ಹೊಸ ವ್ಯಕ್ತಿಗಳನ್ನು ಮರು‌ ಸೃಷ್ಟಿ ಮಾಡಲಾಗುತ್ತಿದೆ. ನನ್ನದೇ ಚಿಂತನೆಗಳು ಅಪ್ರಯೋಜಕ ಎಂದೂ ಹೇಳಲಾಗುತ್ತಿದೆ.

ಇರಲಿ ದೇಶಕ್ಕೆ ಯಾವುದೋ ಒಬ್ಬ ವ್ಯಕ್ತಿ ಮುಖ್ಯವಲ್ಲ. ಸ್ವಾತಂತ್ರ್ಯ ನಂತರ ದೇಶದ ಜನರ ಬದುಕು ಉತ್ತಮವಾಗಿದೆಯೇ ಎಂಬುದಷ್ಟೇ ಮುಖ್ಯ. ಎಲ್ಲರಿಗೂ ಕನಿಷ್ಠ ಮಟ್ಟದ ಊಟ ವಸತಿ ಶಿಕ್ಷಣ ಉದ್ಯೋಗ ಆರೋಗ್ಯ ಸಿಗುತ್ತಿದೆಯೇ, ಎಲ್ಲರಿಗೂ ಸ್ವಾತಂತ್ರ್ಯ ಸಮಾನತೆ ಗೌರವ ರಕ್ಷಣೆ ತೃಪ್ತಿಕರವಾಗಿದೆಯೇ, ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಗಾತ್ರಕ್ಕೆ ಅನುಗುಣವಾಗಿ ದೇಶದ ಘನತೆ ಹೆಚ್ಚುತ್ತಿದೆಯೇ, ಮಾನವೀಯ ಮೌಲ್ಯಗಳು ಹೆಚ್ಚು ಆಪ್ತವಾಗಿ ಜೀವಂತವಾಗಿವೆಯೇ ಎಂಬುದು ಬಹಳ ಮುಖ್ಯ.

ಪೀಳಿಗೆಯಿಂದ ಪೀಳಿಗೆಗೆ ಈ ವಿಷಯಗಳು ಉತ್ತಮ ಗುಣಮಟ್ಟ ಹೊಂದುತ್ತಾ ಸಾಗುವುದೇ ನಾಗರಿಕ ಸಮಾಜದ ಬಹುಮುಖ್ಯ ಗುಣಲಕ್ಷಣಗಳು. ಅವುಗಳ ಬೆಳವಣಿಗೆಯನ್ನು ಗಮನಿಸುತ್ತಾ, ಪ್ರೋತ್ಸಾಹಿಸುತ್ತಾ ಸಾಗುವುದೇ ಯಾವುದೇ ಆಡಳಿತ ವ್ಯವಸ್ಥೆಯ ಜವಾಬ್ದಾರಿ. ಇದನ್ನು ಯಾರೋ ಒಬ್ಬ ವ್ಯಕ್ತಿಯ ದೃಷ್ಟಿಕೋನದಿಂದ ಅಳೆಯಬಾರದು. ಸಮಗ್ರವಾಗಿ ಚಿಂತನೆ ಮತ್ತು ಅಧ್ಯಯನಗಳಿಂದ ನಿರ್ಧರಿಸಬೇಕು.

ಇದರ ಬಗೆಗೆ ನಾನು ಯಾವುದೇ ತೀರ್ಮಾನ ನೀಡುವುದಿಲ್ಲ. ವಿದ್ಯಾವಂತ ಬುದ್ದಿವಂತ ಅನಕ್ಷರಸ್ಥರಾದ ನಿಮ್ಮ ವಿವೇಚನೆಗೆ ಬಿಡುತ್ತಾ… ಇಂದು ನನ್ನ ಜನ್ಮದಿನ. ನನ್ನನ್ನು ಪ್ರೀತಿಸುವ, ಗೌರವಿಸುವ, ತಿರಸ್ಕರಿಸುವ, ದ್ವೇಷಿಸುವ, ಮತ್ತೆ ಕೊಲ್ಲ ಬಯಸುವ ಎಲ್ಲರಿಗೂ ಶುಭ ಕೋರುತ್ತಾ… 

ನನಗಾಗಿ ಈ ದೇಶದ ಜನ ಏನನ್ನೂ ಮಾಡುವ ಅವಶ್ಯಕತೆ ಇಲ್ಲ. ಯಾವ ರೀತಿಯ ಸ್ಪಂದನೆಯು ನನಗೆ ಬೇಡ. ಆದರೆ ನಾನು ಮಾತ್ರ ಈ ದೇಶ ಮತ್ತು ಇಲ್ಲಿನ ಜನರಿಗಾಗಿ ಪರೋಕ್ಷವಾಗಿ ನೈತಿಕವಾಗಿ ಸದಾ ಸ್ಪಂದಿಸುತ್ತಲೇ ಇರುತ್ತೇನೆ. ನೋಡೋಣ ಭವಿಷ್ಯದ ಭಾರತ ಬಲಿಷ್ಠ ಭಾರತವಾಗಿ  ಬೆಳೆಯುವ ಪರಿಯನ್ನು. ಬಹುತ್ವ ಭಾರತವೇ ಬಲಿಷ್ಠ ಭಾರತ. ಗ್ರಾಮ ಸ್ವರಾಜ್ಯವೇ ನಿಜವಾದ ಸ್ವಾತಂತ್ರ್ಯ. ಅಹಿಂಸೆಯೇ ಬಲಿಷ್ಠ ಆಯುಧ. ಸರಳತೆಯೇ ಬಲಿಷ್ಠ ಬದುಕು.  ಸತ್ಯವೇ ಬಲಿಷ್ಠ ಮಾನವೀಯತೆ. ಎಲ್ಲರಿಗೂ ಒಳ್ಳೆಯದಾಗಲಿ.

ಮೋಹನದಾಸ ಕರಮಚಂದ ಗಾಂಧಿಯ ಆತ್ಮ....ಅಕ್ಟೋಬರ್ 2 - 2022...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ:ಇಂಟರ್ನೆಟ್ ತಾಣ