“ಸಿರಿವಂತನಾದರೂ”,,,, ಕನ್ನಡದ ಹಳೇ ಗೀತೆಗಳ ನೆನಪು

“ಸಿರಿವಂತನಾದರೂ”,,,, ಕನ್ನಡದ ಹಳೇ ಗೀತೆಗಳ ನೆನಪು

ಫೇಸ್ ಬುಕ್ಕಿನ “ಕನ್ನಡದ ಹಳೇ ಗೀತೆಗಳ ನೆನಪು” ಇಲ್ಲಿಂದ ತೆಗೆದುಕೊಂಡ ಬರಹ
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಚಿತ್ರ: ಸಂಗಮ. ಗೀತೆರಚನೆ: ಸಿ.ವಿ. ಶಿವಶಂಕರ್
ಸಂಗೀತ: ಸುಖದೇವ್. ಗಾಯನ: ಪಿ.ಬಿ. ಶ್ರೀನಿವಾಸ್-ಸಿ.ಕೆ. ರಮಾ.
ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೆ ಮೆರೆವೆ
ಭಿಕ್ಷುಕಿಯಾದರೂ ಕನ್ನಡ ನಾಡಲ್ಲೆ ಮಡಿವೆ ||ಪ||
ಸಂಗೀತ ಕಲೆ ಮೆಚ್ಚಿ ವೀಣೆಯ ಹಿಡಿದೊಡೆ
ಶೃಂಗೇರಿ ಶಾರದೆಯ ಮಡಿಲಲ್ಲಿ ನಲಿವೆ
ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ
ಚಾಮುಂಡಾಂಬೆಯ ಕರದಲ್ಲಿ ಹೊಳೆವೆ ||೧||
ಶರಣರಿಗೆ ವಂದಿಪ ಶರಣೆ ನಾನಾದೊಡೆ
ವಚನವೆ ಬದುಕಿನ ಮಂತ್ರವೆನುವೆ
ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ ಹಂಪೆಯಲಿ ಬಹುಕಾಲ ನಿಲುವೆ ||೨||
ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ಕನ್ನಡ ಸಾಹಿತ್ಯ ನನ್ನಾಸೆ ಎನುವೆ
ಪುಣ್ಯನದಿಯಲಿ ಮೀಯುವೆನಾದೊಡೆ
ಕಾವೇರಿ ತುಂಗೆಯ ಮಡಿಲಲ್ಲಿ ನಲಿವೆ ||೩||
ಇನ್ನೊಮ್ಮೆ ಮರುಜನ್ಮ ಪಡೆಯುವೆನಾದರೆ
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೆ.
ವಿಚಿತ್ರ, ಆದರೂ ಸತ್ಯ ಎಂದು ಹೇಳಬಹುದಾದ ಮೂರು ಸಂಗತಿ ಗಳಿವೆ. ಮೊದಲನೆಯದು- ಒಂದು ಹಾಡನ್ನು ಸಭೆ-ಸಮಾ ರಂಭಗಳಲ್ಲಿ ಎದೆತುಂಬಿ ಹಾಡಿದ ಗಾಯಕನೊಬ್ಬ, ಆ ಗಾಯ ನಕ್ಕೆ ಭಕ್ಷೀಸಿನ ರೂಪದಲ್ಲಿ ಬಂದ ಹಣದಿಂದಲೇ ಒಂದು ಮನೆ ಕಟ್ಟಿಕೊಂಡ! ಎರಡನೆಯದು-ಆ ಹಾಡು ಬರೆದ ಚಿತ್ರ ಸಾಹಿತಿ ಮಾತ್ರ ಬಡವನಾಗಿಯೇ ಉಳಿದ! ಮೂರನೆಯದು-ಕನ್ನಡದ ಸೂಪರ್‌ಹಿಟ್ ಗೀತೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಹಾಡನ್ನು ಒಳಗೊಂಡಿರುವ ಸಿನಿಮಾ ಇನ್ನೂ ಬಿಡುಗಡೆಯ ಭಾಗ್ಯವನ್ನೇ ಕಂಡಿಲ್ಲ!
ಅಮ್ಮನ ಜೋಗುಳದಂತೆ, ಗೆಳತಿಯ ಕಾಲ್ಗೆಜ್ಜೆ ದನಿಯಂತೆ, ಕಂದನ ನಗೆಯಂತೆ ಮತ್ತು ಅಪ್ಪ ಹೇಳಿದ ಕಥೆಯಂತೆ ಈ ವಾರ ನಿಮ್ಮೆದುರು ತೆರೆ ದುಕೊಳ್ಳಲಿರುವುದು-‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ/ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂಬ ಹಾಡಿನ ಚರಿತೆ. ಈ ಅಪರೂಪದ, ಅನುಪಮ ಗೀತೆ ಬರೆದವರು ಸಿ.ವಿ. ಶಿವಶಂಕರ್.
ಬಹುಮಂದಿಗೆ ಗೊತ್ತಿರಲಿಕ್ಕಿಲ್ಲ; ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಲಕ್ಷ್ಮಣರಾವ್ ಹೊಯಿಸಳ ಅವರ ಅಳಿಯ ಸಿ.ವಿ. ಶಿವಶಂಕರ್. ಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿಯವರ ಗರಡಿಯಲ್ಲಿ ಪಳಗಿದ ಶಿವಶಂಕರ್, ನಟ, ನಿರ್ಮಾಪಕ, ನಿರ್ದೇಶಕ, ಸಂಭಾಷಣೆಕಾರ, ಗೀತೆ ರಚನೆಕಾರ… ಹೀಗೆ ಎಲ್ಲ ಕ್ಷೇತ್ರದಲ್ಲೂ ಕೈಯಾಡಿಸಿ ಗೆದ್ದವರು. ಕನ್ನಡ ನಾಡು-ನುಡಿಯ ವೈಭವ ಸಾರುವ ಹಾಡುಗಳನ್ನು ಹೆಚ್ಚಾಗಿ ಬರೆದದ್ದು ಶಿವಶಂಕರ್ ಅವರ ಹೆಗ್ಗಳಿಕೆ. ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ’ ಗೀತೆಯನ್ನು ಬರೆದ ಸಂದರ್ಭ ಯಾವುದು? ಆ ಹಾಡು ಹುಟ್ಟಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಶಿವಶಂಕರ್ ಉತ್ತರಿಸಿದ್ದು ಹೀಗೆ:
‘ಇದು ೭೦ರ ದಶಕದ ಮಾತು. ನಾನಾಗ ‘ಕೂಡಲ ಸಂಗಮ’ ಹೆಸರಿನ ಸಿನಿಮಾ ನಿರ್ಮಾಣ-ನಿರ್ದೇಶನದ ಕನಸು ಕಂಡಿದ್ದೆ. ಕೂಡಲ ಸಂಗಮ ಕ್ಷೇತ್ರ ಸುತ್ತಮುತ್ತ ಶೂಟಿಂಗ್ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಅದಕ್ಕೂ ಮೊದಲು ಲೋಕೇಶನ್ ನೋಡಿಕೊಂಡು ಬರೋಣವೆಂದು ಅಂಬಾಸಿಡರ್ ಕಾರಿನಲ್ಲಿ ಐದಾರು ಮಂದಿ ಚಿತ್ರ ತಂಡದೊಂದಿಗೆ ಹೊರಟೆ. ಮಾರ್ಗ ಮಧ್ಯೆ ಕಾರಿನ ಟೈರ್ ಪಂಕ್ಚರ್ ಆಯಿತು. ಡ್ರೈವರ್ ಬಳಿ ಸ್ಟೆಫ್ನಿ ಇರಲಿಲ್ಲ. ಸಮೀಪದ ಹಳ್ಳಿಯಲ್ಲಿದ್ದ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕಿಸಿಕೊಂಡು ಪಯಣ ಮುಂದುವರಿಸಿ ದೆವು. ಕೂಡಲ ಸಂಗಮ ಕ್ಷೇತ್ರ ಅರ್ಧ ಕಿಲೋಮೀಟರ್ ದೂರವಿದೆ ಎನ್ನುವಾಗ ಮತ್ತೆ ಟೈರ್ ಪಂಕ್ಚರ್ ಆಯ್ತು. ಆದದ್ದಾಗಲಿ ಎಂದುಕೊಂಡು ನಡಿಗೆಯಲ್ಲೇ ದೇವಾಲಯ ತಲುಪಿದೆವು.
ದೇವರ ದರ್ಶನದ ನಂತರ ಒಂದು ಸ್ಥಳದಲ್ಲಿ ಒಬ್ಬನೇ ಕೂತೆ. ಆಗಲೇ, ಕೂಡಲ ಸಂಗಮ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಬಸವಣ್ಣನವರ ಬದುಕು, ಅವರ ಸರಳತೆ, ಒಂದು ಪಿಡುಗಾಗಿ ಕಾಡುತ್ತಿದ್ದ ಜಾತೀಯತೆ, ಅಸಮಾನತೆಯನ್ನು ತೊಡೆದುಹಾಕಲು ಅವರು ನಡೆಸಿದ ಹೋರಾಟ… ಇದೆಲ್ಲವೂ ಕಣ್ಮುಂದೆ ಬಂತು. ಅದೇ ಸಂದರ್ಭದಲ್ಲಿ ಕನ್ನಡ ನಾಡಿನ ಇತಿಹಾಸ, ವೈಭವವೆಲ್ಲ ಬಿಟ್ಟೂ ಬಿಡದೆ ನೆನಪಾಗತೊಡ ಗಿತು. ಆಗ ನನ್ನೊಳಗೆ ನಾನೇ ಅಂದುಕೊಂಡೆ: ‘ನಮ್ಮ ಕನ್ನಡ ನಾಡು ಯಾರೂ, ಎಂದೂ ಮರೆಯಲಾಗದಂಥ ಪುಣ್ಯಭೂಮಿ. ಮರುಜನ್ಮವೆಂಬುದಿದ್ದರೆ ಆಗಲೂ ಈ ಪುಣ್ಯಭೂಮಿಯಲ್ಲೇ ಹುಟ್ಟಬೇಕು…’
ಇಂಥದೊಂದು ಯೋಚನೆ ಬಂತಲ್ಲ? ಅದೇ ಕ್ಷಣಕ್ಕೆ ಇದ್ದಕ್ಕಿದ್ದಂತೆ ನನ್ನೊಳಗೆ ಈ ಹಾಡಿನ ಸಾಲುಗಳು ಹುಟ್ಟಿಬಿಟ್ಟವು: ‘ಸಿರಿವಂತನಾದರೂ ಕನ್ನಡನಾಡಲ್ಲೆ ಮೆರೆವೆ/ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ…’ ಹಾಡಿನ ಪಲ್ಲವಿಯ ಜತೆ ಜತೆಗೇ ಒಂದು ಚರಣಕ್ಕೆ ಆಗುವಷ್ಟು ಸಾಲು ಗಳೂ ಹೊಳೆದವು. ಹೀಗೆ ಹಾಡು -ಚರಣ ಬರೆದ ಹಾಳೆಯನ್ನು ಅರ್ಚಕರಿಗೆ ಕೊಟ್ಟು, ಇದನ್ನು ಸಂಗಮನಾಥನ ಲಿಂಗದ ಮೇಲಿಟ್ಟು ಅರ್ಚನೆ ಮಾಡಿಕೊಡಿ ಎಂದು ಬೇಡಿಕೊಂಡೆ. ಅವರು ಹಾಗೇ ಮಾಡಿ ದರು. ಸಿನಿಮಾದ ಹೆಸರನ್ನು ‘ಸಂಗಮ’ ಎಂದು ಬದಲಿಸಿಕೊಂಡೆ.
ಹೊಸ ಸಿನಿಮಾ ಹೇಗಿರಬೇಕು ಎಂದು ಲೆಕ್ಕಾಚಾರ ಹಾಕಿಕೊಂಡು ಬೆಂಗಳೂರಿಗೆ ಹಿಂದಿರುಗಿದೆ. ಆಗಲೇ ಚಿಕ್ಕಬಳ್ಳಾಪುರ ಮೂಲದ ಸುಖದೇವ್ ಎಂಬ ಯುವಕನ ಪರಿಚಯವಾಯಿತು. ಆತನಿಗೆ ಸಂಗೀತ ಸಂಯೋಜನೆ ಗೊತ್ತಿತ್ತು. ಚಿತ್ರರಂಗ ಸೇರ ಬೇಕೆಂಬ ಆಸೆಯೂ ಜತೆಗಿತ್ತು. ಆತನನ್ನು ಸಂಗಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಲು ನಿರ್ಧರಿಸಿದೆ. ಬೆಂಗಳೂ ರಿಗೆ ಬಾರಯ್ಯಾ ಅಂದೆ. ಆತ ತಕ್ಷಣವೇ ಬಂದ. ನನ್ನ ಸಿನಿಮಾ, ಅದರ ಉದ್ದೇಶ ಹಾಗೂ ಹಾಡಿನ ಬಗ್ಗೆ ವಿವರಿಸಿದೆ. ಈ ಹಿಂದೆ ಸಿದ್ಧವಾಗಿತ್ತಲ್ಲ, ಅಷ್ಟನ್ನೇ ಅವನ ಮುಂದಿಟ್ಟು, ‘ಈ ಹಾಡಿಗೆ ರಾಗ ಸಂಯೋಜನೆ ಮಾಡಪ್ಪಾ’ ಎಂದೆ. ಸುಖದೇವ್ ತುಂಬ ಶ್ರದ್ಧೆಯಿಂದ ರಾಗ ಸಂಯೋಜಿಸಿದ. ಆತನ ರಾಗ ಸಂಯೋಜನೆ ಕೇಳುತ್ತಿದ್ದಂತೆ, ಈತನಿಗೆ ಸಂಗೀತ ಶಾರದೆ ಒಲಿದಿದ್ದಾಳೆ ಎನ್ನಿಸಿತು. ಆ ಸಂತೋಷದಲ್ಲಿ ಶೃಂಗೇರಿ ಶಾರದೆಯ ಸ್ತುತಿಯಂತಿರುವ ಒಂದು ಚರಣ ಹೊಳೆಯಿತು. ಅದನ್ನು ಮೊದಲ ಚರಣವೆಂದು ಸೇರಿಸಿಕೊಂಡೆ.
ಈ ಗೀತೆಯನ್ನು ನಾಯಕ-ನಾಯಕಿ ಹಾಡುವುದೆಂದು ನಿರ್ಧರಿಸ ಲಾಗಿತ್ತು. ನಾಯಕನ ಪಾಲಿನದನ್ನು ಹಾಡಲು ಪಿ.ಬಿ. ಶ್ರೀನಿವಾಸ್ ಇದ್ದರು. ನಾಯಕಿಯ ಪಾಲಿನದನ್ನು ಯಾರಿಂದ ಹಾಡಿಸುವುದು ಎಂದುಕೊಂಡಾಗ ಹೊಳೆದದ್ದು ಉದಯೋನ್ಮುಖ ಗಾಯಕಿ ಸಿ.ಕೆ. ರಮಾ ಅವರ ಹೆಸರು. ಆಕೆಗಿದು ಮೊಟ್ಟ ಮೊದಲ ಸಿನಿಮಾ. ಕೇಳಿದವ ರೆಲ್ಲ ‘ವಾಹ್ ವಾಹ್’ ಎನ್ನಬೇಕು-ಹಾಗೆ ಹಾಡಿಬಿಟ್ಟಳು ರಮಾ. ಧ್ವನಿ ಮುದ್ರಣದ ನಂತರ ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲ; ಅಷ್ಟೊಂದು ಜನಪ್ರಿಯವಾಯಿತು ಹಾಡು. ರಾಜ್ಯೋತ್ಸವ ಕಾರ್ಯ ಕ್ರಮಗಳಲ್ಲಿ, ಮೆಚ್ಚಿನ ಚಿತ್ರಗೀತೆಗಳ ಸಂದರ್ಭದಲ್ಲಿ ಈ ಗೀತೆ ಮೊಳಗು ವುದು ಕಡ್ಡಾಯವೇ ಆಗಿಹೋಯಿತು. ಹೀಗಿದ್ದಾಗಲೇ, ಈ ಗೀತೆಯ ಜನಪ್ರಿಯತೆಯನ್ನು ಎನ್‌ಕ್ಯಾಷ್ ಮಾಡಿಕೊಳ್ಳುವ ಉದ್ದೇಶದಿಂದ ಕೊಲಂಬಿಯಾ ಕಂಪನಿಯವರು ಗ್ರಾಮಫೋನ್ ರೆಕಾರ್ಡ್‌ಗಳಲ್ಲಿ ಈ ಹಾಡನ್ನು ಹೊರ ತಂದರು. ಆದರೆ ನನಗೆ ನಯಾಪೈಸೆಯ ಸಂಭಾವನೆ ಕೊಡಲಿಲ್ಲ.
ವಿಪರ್‍ಯಾಸಗಳು ಹೇಗಿರುತ್ತವೋ ನೋಡಿ: ‘ಸಿರಿವಂತನಾದರೂ…’ ಹಾಡು ಕನ್ನಡಿಗರ ಮನೆ-ಮನವನ್ನು ಆವರಿಸಿಕೊಂಡಿತು. ರೇಡಿಯೋ ಸಿಲೋನ್‌ನಲ್ಲಿ ವಾರಕ್ಕೊಮ್ಮೆಯಂತೆ ವರ್ಷಗಳ ಕಾಲ ತಪ್ಪದೇ ಪ್ರಸಾರ ವಾಯಿತು. ಆದರೆ, ಅನಿವಾರ್ಯ ಕಾರಣಗಳಿಂದ ‘ಸಂಗಮ’ ಸಿನಿ ಮಾದ ಕೆಲಸ ಆರಂಭವಾಗಲೇ ಇಲ್ಲ. ಮುಂದೆ ನಾನು ಇಳಕಲ್‌ನ ಮಹಾಂತ ಶಿವಯೋಗಿಗಳ ಮಹಿಮೆ ಸಾರುವ ‘ಮಹಾತಪಸ್ವಿ’ ಹೆಸ ರಿನ ಸಿನಿಮಾ ತಯಾರಿಗೆ ನಿಂತೆ ನಿಜ. ಆದರೆ ಆ ಚಿತ್ರದಲ್ಲಿ ‘ಸಂಗಮ’ದ ಹಾಡಿಗೆ ‘ಸೂಕ್ತ ಸ್ಥಳ’ ಇರಲಿಲ್ಲ. ಈ ಬೇಸರದ ಮಧ್ಯೆ ನಾನಿದ್ದಾಗಲೇ, ಈ ಹಾಡನ್ನು ಆಕಾಶವಾಣಿ ಹಾಗೂ ವೇದಿಕೆಗಳಲ್ಲಿ ಹಾಡಿ ಜನರಿಂದ ಕಾಣಿಕೆ ಪಡೆದು, ಆ ಹಣದಿಂದಲೇ ಗುಲಬರ್ಗಾದ ಗಾಯಕನೊಬ್ಬ ಮನೆ ಕಟ್ಟಿಸಿಕೊಂಡ ಎಂಬ ಸುದ್ದಿ ಬಂತು. ಕೆಲದಿನಗಳ ನಂತರ ಆ ಗಾಯಕನೇ ನನ್ನನ್ನು ಹುಡುಕಿಕೊಂಡು ಬಂದ. ಒತ್ತಾಯದಿಂದ ತನ್ನ ಮನೆಗೆ ಕರೆದೊಯ್ದ. ತನ್ನ ಮನೆಗೆ ಆತ ‘ಸಿರಿವಂತ’ ಎಂದೇ ಹೆಸರಿಟ್ಟಿದ್ದ. ಮನೆಯ ಹೆಸರಿನ ಫಲಕದ ಮೇಲೆ ಕೈಯಾಡಿಸುತ್ತಾ- ‘ಸ್ವಾಮಿ, ನಿಮ್ಮ ಹಾಡಿಂದ ನಾನು ಬದುಕು ಕಟ್ಟಿಕೊಂಡೆ’ ಎಂದು ಕೈಮುಗಿದ. ನಾನು ತಕ್ಷಣವೇ ಹೇಳಿದೆ: ‘ಈ ಹಾಡಿನ ಮೊದಲ ಸಾಲು-ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ’-ಅದು ನಿನ್ನದು. ಎರಡನೇ ಸಾಲು- ‘ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ’ ಎಂದಿದೆ; ಅದು ನನ್ನದು!’
ಮುಂದೆ ಹಣಕಾಸಿನ ತೊಂದರೆಯ ಕಾರಣದಿಂದ ‘ಸಂಗಮ’ ಸಿನಿಮಾ ಶುರುವಾಗಲೇ ಇಲ್ಲ. ಆದರೆ ಹಾಡು ದಿನದಿನಕ್ಕೂ ಜನಪ್ರಿಯ ವಾಗುತ್ತಲೇ ಹೋಯಿತು. ಈ ಸಂದರ್ಭದಲ್ಲೇ ರೀಮಿಕ್ಸ್ ಕೆಲಸ ಶುರುವಾಯಿತಲ್ಲ? ಆಗ ಕೆಲ ಗಾಯಕರು-ಕ್ಯಾಸೆಟ್ ಕಂಪನಿಗಳು ಸೇರಿ ಕೊಂಡು ನನ್ನ ಹಾಡನ್ನು ಮತ್ತೆ ಧ್ವನಿಮುದ್ರಿಸಿಕೊಂಡು – ದುಡ್ಡು ಮಾಡಿಕೊಂಡರು. ಆದರೆ, ಯಾರೊಬ್ಬರೂ ಹಾಡಿನ ಪುನರ್ ಬಳಕೆಯ ಬಗ್ಗೆ ನನ್ನ ಅನುಮತಿ ಕೇಳಲಿಲ್ಲ. ಸಂಭಾವನೆ ಯನ್ನೂ ಕೊಡಲಿಲ್ಲ. ಹಾಡು ಅಮರವಾಯಿತು. ಹಾಡಿದವರು ಶ್ರೀಮಂತರಾದರು. ಆದರೆ ಹಾಡು ಬರೆದ ನಾನು ಬಡವನಾಗಿಯೇ ಉಳಿದುಹೋದೆ’. ಒಂದು ತೆರನಾದ ಸಂಕಟದಿಂದಲೇ ಮಾತು ನಿಲ್ಲಿಸಿದರು ಶಿವಶಂಕರ್.
***
ಒಂದು ಸ್ವಾರಸ್ಯ ಕೇಳಿ: ಈ ಎಲ್ಲ ನೋವು, ನಿರಾಸೆ, ಸಂಕಟಗಳಿಂದ ಶಿವಶಂಕರ್‌ನೊಂದಿದ್ದಾರೆ ನಿಜ. ಆದರೆ ಹತಾಶರಾಗಿಲ್ಲ. ‘ಸಿರಿವಂತನಾ ದರೂ…’ ಹಾಡನ್ನು ಹೇಗಾದರೂ ಮಾಡಿ ಕನ್ನಡಿಗರಿಗೆ ತೋರಿಸಬೇಕು ಎಂಬುದು ಅವರ ಮಹದಾಸೆ. ಅದಕ್ಕೆಂದೇ ಅವರು ‘ಕನ್ನಡ ಕುವರ’ ಹೆಸರಿನ ಸಿನಿಮಾ ತಯಾರಿಸಿದ್ದಾರೆ. ಅದರಲ್ಲಿ ಪಿ.ಬಿ.ಎಸ್.-ರಮಾ ದನಿಯಿರುವ ‘ಸಿರಿವಂತನಾದರೂ…’ ಗೀತೆಯನ್ನು ಬಳಸಿಕೊಂಡಿದ್ದಾರೆ. ಕನ್ನಡ ಭಾಷಾಭಿಮಾನದ ಕಥೆ ಹೊಂದಿರುವ ಈ ಚಿತ್ರ ಆರ್ಥಿಕ ಸಮಸ್ಯೆಯಿಂದ ‘ಡಬ್ಬಾ’ದಲ್ಲಿಯೇ ಉಳಿದುಹೋಗಿದೆ. ಕರ್ನಾಟಕ ಸರಕಾರದ ‘ಅನುಗ್ರಹ’ ಸಿಗದಿದ್ದರೆ ಈ ಸಿನಿಮಾ ತೆರೆಕಾಣಲು ಸಾಧ್ಯವೇ ಇಲ್ಲ. ನಾಡಿನ ಮಹಿಮೆ ಸಾರುವ ಈ ಅಪರೂಪದ ಗೀತೆಯನ್ನು ‘ಕಾಣುವ’ ನೆಪದಿಂದಾದರೂ ಈ ಸಿನಿಮಾಕ್ಕೆ ಆರ್ಥಿಕ ನೆರವು ನೀಡ ಬಾರದೆ? ವೇದಿಕೆಯ ಮೇಲೆ ಕನ್ನಡದ ಉದ್ಧಾರಕ್ಕೆ ಕೋಟಿ ಕೋಟಿ ಖರ್ಚು ಮಾಡುವುದಾಗಿ ಹೇಳುವ ನಮ್ಮ ಮಂತ್ರಿಗಳು, ಅಕಾರಿಗಳಿಗೆ ಈ ಹಾಡು ಮತ್ತು ಅದರ ಹಿಂದಿನ ಕತೆ ಈಗಲಾದರೂ ಕೇಳಿಸಲಿ. ಹಾಡು ಬರೆದಾತನ ಎದೆಯಾಳದ ಸಂಕಟ ಅರ್ಥವಾಗಲಿ.
ಹೌದಲ್ಲವಾ? ‘ಸಿರಿವಂತನಾದರೂ….’ ಹಾಡು ಕೇಳಿದಾಗೆಲ್ಲ ಖುಷಿ ಯಾಗುತ್ತದೆ. ಕಣ್ತುಂಬಿ ಬರುತ್ತದೆ. ಈ ಹಾಡು ಬರೆದಾತನನ್ನು ಒಮ್ಮೆ ಮಾತಾಡಿಸಬೇಕು, ಅಭಿನಂದಿಸಬೇಕು ಎಂಬ ಆಸೆಯಾಗುತ್ತದೆ. ಅಂಥ ದೊಂದು ಭಾವ ನಿಮ್ಮ ಕೈ ಹಿಡಿದರೆ ೯೯೦೧೮ ೦೪೦೦೬ (99018 04006) ಕ್ಕೆ ಪೋನ್ ಮಾಡಿ. ಈ ನಂಬರಿನಲ್ಲಿ ಶಿವಶಂಕರ್ ಸಿಗುತ್ತಾರೆ. ಒಂದು ಮೆಚ್ಚು ಮಾತು ಕೇಳಿದರೆ ಆ ಹಿರಿಯ ಜೀವಕ್ಕೆ ಖುಷಿಯಾಗುತ್ತದೆ. ಮಾತಾಡಿದ ನಂತರ ಆ ಖುಷಿ ನಿಮ್ಮದೂ ಆಗುತ್ತದೆ!

Comments

Submitted by Amaresh patil Sat, 12/19/2015 - 15:06

ನವೀನಜಿಯವರೇ ನಿಮ್ಮ ಲೇಖನ ನನ್ನನ್ನು ಒಂದು ಕ್ಷಣ ಭಾವುಕನನ್ನಾಗಿ ಮಾಡಿತು ಅದು 1981 ರ ನೇ ಸಾಲಿನಲ್ಲಿ ನಾನು ಐದನೇ ತರಗತಿಯ ವಿದ್ಯಾರ್ಥಿಯಾಗಿದ್ದೆ ಅಂದು ನವಂಬರ್-1 ರಂದು ನಾನು ಮೋದಲ ಸಲ "ಸಂಗಮಚಿತ್ರ" ಗೀತೆಯನ್ನು ರೇಡಿಯೋದಲ್ಲಿ ಕೆಳಿದ್ದೆ ಅಂದಿನಿಂದ ಇಂದಿನವರೆಗೆ ಈ ಚಲನಚಿತ್ರಗೀತೆಯನ್ನು ಕೆಳುವಾಗ ಅಂದಿನ ನನ್ನ ಬಾಲ್ಯದ ನೇನಪುಗಳು ಮರುಕಳಿಸುತ್ತವೆ, ಅದೇ ರೀತೆಯಾಗಿ ಅಂದು ನಾನು ಕೇಳಿದ್ದು ರೇಡಿಯೋದಲ್ಲಿ ಅಂದಿನ ದಿನಮಾನಗಳಲ್ಲಿ ರೇಡಿಯೋ ಒಂದು ಮನರಂಜಿಸುವ ಮತ್ತು ಮನಮುಟ್ಟುವ ಸಾದನವಾಗಿದ್ದು ಅಂದಿನ ದಿನದಲ್ಲಿ ಕೆಲಸದ ಜೋತೆಗೆ ರೇಡಿಯೋ ಆಲಿಸುವುದು ನಮ್ಮಂತ ಗ್ರಾಮೀಣರ ಹವ್ಯಾಸವಾಗಿತ್ತು ನೋಡಿ ಕಾಲ ಮನುಷ್ಯನನ್ನು ಎಲ್ಲಿ ತಂದು ನಿಲ್ಲಿಸಿದೆ ಇಂದು ಹಲವಾರು ರೀತಿಯ ಬಹುಮಾದ್ಯಮಗಳು ಹಾಗೂ ಸಂಗೀತ ಕೇಳಲು ಪರಿಕರಗಳು ಇದ್ದಾಗ್ಯೂ ಉತ್ತಮ ಸಂಗೀತ ಹಾಗೂ ಸಾಹಿತ್ಯವಿರುವ ಚಲನಚಿತ್ರಗೀತೆಗಳ ಕೊರತೆ ಬಹಳಷ್ಟಿರುವುದು ಶೋಚನಿಯವಾಗಿದೆ. ಇಂಥ ಸಮಯದಲ್ಲಿ ತಾವುಗಳು ಒಂದು ಉತ್ತಮ ಗೀತೆಯನ್ನು ಮೆಲಕು ಹಾಕಿರುವುದು ಹಾಗೂ ಅದರ ಸಾಹಿತಿಯ ದುರಂತ ಪರಿಸ್ಥಿತಿಯನ್ನು ವಿವರಿಸಿದ್ದಿರಿ ಅದು ಅಲ್ಲದೇ ನಾನು ಸಂಗಮ ಚಿತ್ರದ ದ್ವನಿಮುದ್ರಿಕೆ ಗೀತೆಯನ್ನು ಯು ಟೂಬ್ ನಲ್ಲಿ ನಿರಂತರವಾಗಿ ಶೋದಿಸುತ್ತಿರುತ್ತೇನೆ ಆದರೂ ಅದರ ಮೂಲ ಶುಶ್ರಾವ್ಯ ಸುಮದುರ ಗೀತೆ ಲಭ್ಯವಾಗಿಲ್ಲ, ತಮ್ಮ ಲೇಖನ ಓದಿದಾಗ ತಿಳಿಯಿತು "ಸಂಗಮ" ಚಿತ್ರ ಬಿಡುಗಡೆಯಾಗದೇ ಇರುವುದು ನಮ್ಮ ನಿಮ್ಮಂತ ಸಂಗೀತ ಪ್ರೇಮಿಗಳ ದುರ್ದೈವವೇ ಸರಿ ಹೇಗಿದೆ ನೋಡಿ ದುರಂತ ತಮ್ಮ ಲೇಖನ ಉತ್ತಮವಾಗಿದೆ ಪ್ರಸಕ್ತ ಸಮಯದಲ್ಲಿ ನಮ್ಮ ನಿಮ್ಮಂತ ಸಂಗೀತ ಪ್ರೇಮಿಗಳು ಹಾಗೂ ಅದರ ಹಿನ್ನೇಲೆ ತಿಳಿದುಕೊಳ್ಳಲು ಇಚ್ಚಿಸುವರಿಗೆ ಒಂದು ವೇದಿಕೆಯಾಗಿರುವ ಸಂಪದಕ್ಕೆ ಧನ್ನವಾದಗಳು