“ಸುರಂಗಗಳ ಸರದಾರ” ಅಮೈ ಮಹಾಲಿಂಗ ನಾಯ್ಕರಿಗೆ “ಪದ್ಮಶ್ರೀ

“ಸುರಂಗಗಳ ಸರದಾರ” ಅಮೈ ಮಹಾಲಿಂಗ ನಾಯ್ಕರಿಗೆ “ಪದ್ಮಶ್ರೀ

ಕೃಷಿಗೆ ನೀರಿಗಾಗಿ ಮತ್ತೆಮತ್ತೆ ಸುರಂಗ ತೋಡಿದಾಗಲೂ ನೀರು ಸಿಗಲಿಲ್ಲ. ಸುತ್ತಮುತ್ತಲಿನವರೆಲ್ಲ ಗುಡ್ಡದೊಳಗೆ ಅಡ್ಡಸುರಂಗ ಕೊರೆದು ನೀರು ದಕ್ಕಿಸಿಕೊಳ್ಳುವ ಅವರ ಪ್ರಯತ್ನ ಕಂಡು ನಗುತ್ತಿದ್ದರು. ಆದರೆ ಅಮೈ ಮಹಾಲಿಂಗ ನಾಯ್ಕರು ಇದರಿಂದೆಲ್ಲ ಎದೆಗುಂದಲಿಲ್ಲ. ಅವರಿಗೆ ಅಡ್ಡಸುರಂಗದಲ್ಲಿ ನೀರು ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ.

ಕೊನೆಗೂ ಅವರಿಗೆ ಗುಡ್ಡದಲ್ಲಿ ಕೊರೆದ ಏಳನೆಯ ಅಡ್ಡಸುರಂಗ (ಅಡ್ಡಬೋರ್)ದಲ್ಲಿ ನೀರು ಸಿಕ್ಕಿತು. ಅವರ ತೋಟ ಹಸುರಿನಿಂದ ನಳನಳಿಸಿತು. ಇದೀಗ ಅವರಿಗೆ ಕೇಂದ್ರ ಸರಕಾರದಿಂದ 2022ನೇ ವರುಷದ "ಪದ್ಮಶ್ರೀ" ಪುರಸ್ಕಾರ. ಅಂದು ನಕ್ಕವರೆಲ್ಲ ಈಗ ಬೆರಗಾಗಿದ್ದಾರೆ. ಇದು ಶಾಲೆಗೆ ಹೋಗಿ ಕಲಿಯದಿದ್ದರೂ, ಜೀವನದಿಂದಲೇ ಪಾಠ ಕಲಿತು, ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾದ 70 ವರುಷ ವಯಸ್ಸಿನ ರೈತ ಅಮೈ ಮಹಾಲಿಂಗ ನಾಯ್ಕರ ಯಶೋಗಾಥೆ.

ಮಂಗಳೂರಿನಿಂದ 50 ಕಿಮೀ ದೂರದ ಅಡ್ಯನಡ್ಕ ಹತ್ತಿರದ ಕೇಪು ಗ್ರಾಮದ ಗುಡ್ಡದಲ್ಲಿ ಮಹಾಲಿಂಗ ನಾಯ್ಕರದು ಎರಡೆಕ್ರೆ ಜಮೀನು. ಅಲ್ಲಿ ಅಡಿಕೆ ತೋಟ ಬೆಳೆಸಬೇಕೆಂಬುದು ಅವರ ಕನಸು. ಕಾಯಕದ ಬಲದಿಂದಲೇ ತನ್ನ ಕನಸು ನನಸು ಮಾಡಿಕೊಂಡವರು ಮಹಾಲಿಂಗ ನಾಯ್ಕರು. ಇದೇನು ಸುಲಭದ ಕೆಲಸವಾಗಿರಲಿಲ್ಲ. ಯಾಕೆಂದರೆ, ಅಡಿಕೆ ಬೆಳೆಗೆ ನೀರು ಬೇಕೇ ಬೇಕು. ಆ ಬೋಳುಗುಡ್ಡದಲ್ಲಿ ಅಡಿಕೆ ಬೆಳೆಗೆ ಬೇಕಾದಷ್ಟು ನೀರು ಸಿಗುವ ಲಕ್ಷಣವೇ ಇರಲಿಲ್ಲ. ಆದರೆ, ಬೇರೆಯವರು ಅಂತಹ ಗುಡ್ಡದಲ್ಲಿ ಅಡ್ಡಸುರಂಗ ತೋಡಿ ನಿರಂತರ ನೀರು ಪಡೆದದ್ದನ್ನು ಕಂಡಿದ್ದರು ಮಹಾಲಿಂಗ ನಾಯ್ಕರು.

ತನ್ನ ಜಮೀನಿನಲ್ಲಿ ತಾನೇ ಅಡ್ಡಸುರಂಗ ತೋಡಲು ನಿರ್ಧರಿಸಿದರು. ಯಾಕೆಂದರೆ, ಮಜೂರಿ ಕೊಟ್ಟು ಅಡ್ಡಸುರಂಗ ಮಾಡಿಸುವ ಸ್ಥಿತಿಯಲ್ಲಿ ಅವರ ಕುಟುಂಬ ಇರಲಿಲ್ಲ. ಹಾಗಾಗಿ, ಅವರು ಕಂಡುಕೊಂಡ ಹಾದಿ: ಹಗಲು ಮಜೂರಿಗಾಗಿ ಇತರರ ತೋಟಗಳಲ್ಲಿ ದುಡಿಯುವುದು; ರಾತ್ರಿ ತನ್ನದೇ ಜಮೀನಿನಲ್ಲಿ ಅಡ್ಡಸುರಂಗ ತೋಡುವುದು. ಆದರೆ, ನಾಲ್ಕು ಅಡ್ಡಸುರಂಗ ತೋಡಿದರೂ ನೀರು ಸಿಗಲಿಲ್ಲ. ಅವರ ನಾಲ್ಕು ವರುಷಗಳ ಶ್ರಮ ವ್ಯರ್ಥವಾಗಿತ್ತು. ಬೇರೆ ಯಾರೇ ಆದರೂ ಕೈಚೆಲ್ಲುತ್ತಿದ್ದರು. ಮಹಾಲಿಂಗ ನಾಯ್ಕರಿಗೆ ಅದೇನೋ ಭರವಸೆ. ಐದನೆಯ ಅಡ್ಡಸುರಂಗವನ್ನು 50 ಅಡಿ ಉದ್ದಕ್ಕೆ ಕೊರೆದಾಗ ತೇವಾಂಶ ಕಂಡಿತು. ಕೊನೆಗೆ 315 ಅಡಿ ಉದ್ದದ ಆರನೆಯ ಅಡ್ಡಸುರಂಗದಲ್ಲಿ ನೀರು ಜಿನುಗಿತು. ಅನಂತರ ಕೊರೆದ ಏಳನೆಯ ಸುರಂಗದಲ್ಲಿಯೂ ಮನೆ ಬಳಕೆಗಾಗಿ ನೀರು ಸಿಕ್ಕಿತು. ಮುಂದೆ ಅವರ ಬದುಕೇ ಬದಲಾಯಿತು.

ತನ್ನ ತೋಟದಲ್ಲಿ ಅಡಿಕೆ (300 ಮರಗಳು), ತೆಂಗು, ಕರಿಮೆಣಸು, ಕೊಕ್ಕೋ ಮತ್ತು ಬಾಳೆ ಬೆಳೆದಿದ್ದಾರೆ ಮಹಾಲಿಂಗ ನಾಯ್ಕರು. ಅಡ್ಡಸುರಂಗದಿಂದ ಇಳಿದು ಬರುವ ನೀರನ್ನು ಟ್ಯಾಂಕಿನಲ್ಲಿ ಸಂಗ್ರಹಿಸಿ, ಅದರಿಂದ ತನ್ನ ತೋಟಕ್ಕೆ ನೀರು ಹಾಯಿಸುತ್ತಾರೆ ಅವರು. ಅಂದರೆ ನೀರು ಹಾಯಿಸಲು ಪಂಪ್‌ಸೆಟ್ ಬಳಸುತ್ತಿಲ್ಲ. ತನ್ನ ತೋಟದ ಗಿಡಮರಗಳಿಗೆ ಯಾವುದೇ ರಾಸಾಯನಿಕ ಹಾಕದೆ, ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿರುವುದು ಅವರ ಹೆಗ್ಗಳಿಕೆ. “ಮನಸ್ಸಿದ್ದರೆ ಮಾರ್ಗವಿದೆ" ಎಂಬುದನ್ನು ಕಠಿಣ ಶ್ರಮದ ಬದುಕಿನಿಂದ ತೋರಿಸಿಕೊಟ್ಟಿರುವ ಮಹಾಲಿಂಗ ನಾಯ್ಕರು ಕರ್ನಾಟಕದ ಹೆಮ್ಮೆಯ ಕೃಷಿಕ.

ಫೋಟೋ ಕೃಪೆ: ನಿವ್ಸ್ 18; ಸಿಎಸ್‌ಆರ್ ಜರ್ನಲ್ ಮತ್ತು ಉದಯವಾಣಿ ಜಾಲತಾಣಗಳು