“ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ” ಪುಸ್ತಕ ಪರಿಚಯ
ಸಿ.ಎಸ್.ಎಲ್.ಸಿ
Smrti-Vismrti : Bharatiya Samskriti
ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ Research Centre Vergelijkende Cultuurwetenschap (Comparative Science of Cultures) ನ ನಿರ್ದೇಶಕರಾಗಿರುವ ಹಾಗೂ ಬಾಲು ಎಂದು ಪರಿಚಿತರಾಗಿರುವ ಪ್ರೋ. ಬಾಲಗಂಗಾಧರ ಅವರ The Heathen in his Blindness…Asia the West and the Dynamics of Religion ಪ್ರಸ್ತುತ ಸಮಾಜ ವಿಜ್ಞಾನಗಳ ಚರ್ಚೆಯಲ್ಲಿ ಪ್ರಮುಖವಾಗಿ ಕಂಡುಬರುವ ಕೃತಿಯಾಗಿದೆ . ಕರ್ನಾಟಕದ ಸಮಾಜಶಾಸ್ತ್ರೀಯ ಬೌದ್ಧಿಕ ವಲಯದಲ್ಲೂ ಕೂಡ ಈ ಪುಸ್ತಕವು ಗಂಭೀರವಾಗಿ ಚರ್ಚೆಗೊಳಗಾಗುತ್ತಿರುವ ಕೃತಿ. ಬಾಲು ಅವರ ಚಿಂತನೆಗಳು ಕನ್ನಡಿಗರಿಗೂ ಪರಿಚಯವಾಗಲಿ ಇಲ್ಲೂ ಕೂಡ ಒಳ್ಳೆಯ ಚರ್ಚೆಗಳು ನಡೆಯಲಿ ಎಂಬ ಉದ್ದೇಶ ಹೊತ್ತು ಮೂಲ ಆಂಗ್ಲ ಭಾಷೆಯಲ್ಲಿರುವ ಕೃತಿಯನ್ನು “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ ಎಂಬ ಶೀರ್ಷಿಕೆಯ ಅಡಿ ಕನ್ನಡಕ್ಕೆ ಅನುವಾದಿಸಲಾಗಿದೆ. . ಕನ್ನಡಕ್ಕೆ ಅನುವಾದಿಸಿ ಪರಿಚಯಿಸುವ ಕಾರ್ಯವನ್ನು ಕುವೆಂಪು ವಿಶ್ವವಿದ್ಯಾನಿಲದಲ್ಲಿನ ಸ್ಥಳೀಯ ಸಂಸ್ಕೃತಿಗಳ ಅದ್ಯಯನ ಕೆಂದ್ರದ ನಿರ್ದೇಶಕರಾಗಿರುವ ಪ್ರೊ. ರಾಜಾರಾಮ ಹೆಗಡೆಯವರು ಮಾಡಿದ್ದಾರೆ.
ಇಂದಿನವರೆಗೆ ಬಂದಿರುವ ಸಮಾಜ ವಿಜ್ಞಾನಗಳಲ್ಲಿನ ಪುಸ್ತಕಗಳಿಗಿಂತ ಈ ಪುಸ್ತಕವು ಭಿನ್ನವೇ ಎಂದು ಹೇಳಬಹುದು.. ತೀರಾ ಚುಟುಕಾಗಿ ಈ ಗ್ರಂಥದ ವಾದದ ತಿರುಳನ್ನು ತಿಳಿಸುವುದಾದರೆ, ಇಲ್ಲಿಯವರೆಗೂ ಬಂದಿರುವ ರಿಲಿಜನ್ ಅಧ್ಯಯನಗಳು/ಪಾಶ್ಚಿಮಾತ್ಯರು ತಿಳಿಸುವಂತೆ ಎಲ್ಲಾ ಸಂಸ್ಕೃತಿಗಳು ಒಂದಿಲ್ಲೊಂದು ಪ್ರಕಾರದ ರಿಲಿಜನ್ಗಳನ್ನು ಹೊಂದಿವೆ, ರಿಲಿಜನ್ಗಳಿಲ್ಲದ ಸಂಸ್ಕೃತಿಗಳೆ ಇಲ್ಲ ಎಂಬುದಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರೊ. ಬಾಲಗಂಗಾಧರ ಅವರು ವಾದಿಸುವುದೆನೆಂದರೆ, ‘ರಿಲಿಜನ್ ಸಾಂಸ್ಕೃತಿಕ ಸಾರ್ವತ್ರಿಕವಲ್ಲ’, ಆದರೆ ಎಲ್ಲ ಸಂಸ್ಕೃತಿಗಳು ರಿಲಿಜನ್ ಹೊಂದಿವೆ ಎಂಬ ಪಾಶ್ಚಿಮಾತ್ಯರ ಗ್ರಹಿಕೆಯ ಬೇರುಗಳು ಪಾಶ್ಚಿಮಾತ್ಯರಲ್ಲಿಯೇ ಇವೆ ಎಂದು ವಾದಿಸಿದ್ದಾರೆ. ಅವರ ವಾದವು ಮುಂದುವರೆದು ಹೇಗೆ ಕ್ರಿಶ್ಚಿಯನ್ ಥಿಯಾಲಜಿಯು ಎಲ್ಲಾ ಸಂಸ್ಕೃತಿಗಳು ಒಂದಿಲ್ಲೊಂದು ಪ್ರಕಾರದ ರಿಲಿಜನ್ಗಳು ಹೊಂದಿವೆ ಎಂದು ಪಾಶ್ಚಿಮಾತ್ಯರು ಗ್ರಹಿಸಿಕೊಳ್ಳುವಂತೆ ಮಾಡಿತು ಹಾಗು ಅದರಿಂದುಟಾದ ಪರಿಣಾಮಗಳು ಏನು? ಎಂಬ ಪ್ರಶ್ನೆಯ ಕುರಿತು ತೀರಾ ತರ್ಕಬದ್ಧವಾಗಿ, ಹಾಗೂ ವಿವರಣಾತ್ಮಕವಾಗಿ ಚರ್ಚಿಸಿದ್ದಾರೆ. ಭಾರತದ ಇಂದಿನ ಸಂದರ್ಭದಲ್ಲಿ ಹಲವಾರು ಬಗೆಹರಿಯದ ಸಮಸ್ಯೆಗಳಿಗೂ ಕೂಡ ಈ ಪುಸ್ತಕವೂ ನೆರವಾಗುತ್ತದೆ.
ಪ್ರಸ್ತುತ ಗ್ರಂಥವು ಈ ನಿಟ್ಟಿನಲ್ಲಿ ಪ್ರಾರಂಭಿಕ ಪ್ರಯತ್ನ. ಇದು ರಿಲಿಜನ್ನಿನ ಕಥೆಯೇ ಆದರೂ ಇದನ್ನು ಕೇವಲ ರಿಲಿಜನ್ನಿನ ಕಥೆ ಎಂದುಕೊಂಡರೆ ತಿರುಳನ್ನು ಬಿಸುಟು ಸಿಪ್ಪೆಯನ್ನು ತಿಂದಂತಾಗುತ್ತದೆ. ಇದರ ತಿರುಳು ಭಾರತೀಯರ ಸಂದರ್ಭದಲ್ಲಿ ಪರ್ಯಾಯ ಸಮಾಜ ವಿಜ್ಞಾನದ ಸಾಧ್ಯತೆಗಳನ್ನು ಶೋಧಿಸುತ್ತದೆ. ಕೃತಿಯಲ್ಲಿ ನಡೆಯುವ ಸಂವಾದವು ಒಂದು ನಿರ್ದಿಷ್ಟವಾದ ಗುಂಪಿನ ಜೊತೆಗೆ ಅಂದರೆ ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನನ್ನು ಕಾಣುವ ಅಥವಾ ಹುಡುಕುವ ಗುಂಪಿನ ಜೊತೆ ನಡೆಯುತ್ತದೆ. ಸಂಖ್ಯೆಯಲ್ಲಿ ಇದು ತೀರಾ ಸಣ್ಣ ಗುಂಪಾಗಿದ್ದರೂ ಇಂದಿನ ಸಮಾಜದ ಬದುಕಿನ ಕ್ರಮಗಳನ್ನು ಕಟ್ಟಿಕೊಡುತ್ತಿರುವ ಹಾಗೂ ಅದನ್ನು ರೂಪಿಸುವ ಕುರಿತು ಮಾತನಾತ್ತಿರುವ ಗುಂಪಾಗಿರುವುದರಿಂದ ಈ ಕೃತಿಯಲ್ಲಿ ನಡೆಯುವ ಸಂವಾದಕ್ಕೆ ಸಾಮಾಜಿಕ ಪರಿಣಾಮಗಳಿವೆ.
ಇಂಥಹ ಒಂದು ವಿದ್ವತ್ಪೂರ್ಣ ಕೃತಿ “ಹೆಗ್ಗೋಡು ಅಕ್ಷರ ಪ್ರಕಾಶನ”ದಿಂದ ಪ್ರಕಟವಾಗಿದೆ. ಇದರ ಬಿಡುಗಡೆ ಸಮಾರಂಭ ೨೯-೦೮-೨೦೧೦ ರವಿವಾರ ಬೆಳಗ್ಗೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಸಭಾಂಗಣದಲ್ಲಿ ನಡೆಯಲಿದೆ.