“ಹೂವು ಹಣ್ಣು" ಚಿತ್ರ ಸೋತದ್ದು ಏಕೆ?
“ಪತ್ರಕರ್ತರೆಲ್ಲಾ ಸೇರಿ ನನ್ನ ಮಹತ್ವಾಕಾಂಕ್ಷೆಯ ಹೂವು ಹಣ್ಣು ಚಿತ್ರವನ್ನು ಕೊಂದು ಹಾಕಿದರು..." ಎಂದು ಪತ್ರಕರ್ತರ ಮೇಲೆ ರೋಷ ವ್ಯಕ್ತ ಪಡಿಸಿದ್ದು ಚಿತ್ರದ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು. ‘ಹೂವು ಹಣ್ಣು' ಖ್ಯಾತ ಸಾಹಿತಿ ತ್ರಿವೇಣಿಯವರ ಕಾದಂಬರಿ ಆಧಾರಿತ ಚಿತ್ರ. ನಿರ್ದೇಶಕರಾಗಿ ರಾಜೇಂದ್ರ ಸಿಂಗ್ ಬಾಬು, ಖ್ಯಾತ ನಟಿ ಲಕ್ಷ್ಮಿ, ಛಾಯಾಗ್ರಾಹಕರಾಗಿ ವಿ ಕೆ ಮೂರ್ತಿ, ಸಂಗೀತಗಾರ ಹಂಸಲೇಖ, ಸಂಕಲನಕಾರ ಸುರೇಶ್ ಅರಸ್, ನೃತ್ಯ ಉಡುಪಿ ಜಯರಾಂ.. ಹೀಗೆ ಘಾಟಾನುಘಾಟಿ ವ್ಯಕ್ತಿಗಳೇ ಈ ಚಿತ್ರಕ್ಕಾಗಿ ದುಡಿದಿದ್ದರು. ಎಲ್ಲರೂ ಪ್ರಶಸ್ತಿ ವಿಜೇತರು ಹಾಗೂ ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆಗಳನ್ನು ಮಾಡಿದವರು. ಆದರೂ ದುರಾದೃಷ್ಟವಶಾತ್ ಚಿತ್ರ ಸೋತಿತು. ಸೋತ ಕೋಪದಲ್ಲಿ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಕೋಪವನ್ನು ಪತ್ರಕರ್ತರ ಮೇಲೆ ತೋಡಿಕೊಂಡರು.
ಹಿಂದಿ ಚಿತ್ರರಂಗದ ದಂತ ಕತೆಯಾಗಿಯೇ ಹೋಗಿರುವ ನಿರ್ದೇಶಕ, ನಟ ಗುರುದತ್ ಅವರ ಅಚ್ಚುಮೆಚ್ಚಿನ ಛಾಯಾಗ್ರಾಹಕರಾದ ವಿ ಕೆ ಮೂರ್ತಿ (ವೆಂಕಟರಮಣ ಪಂಡಿತ ಕೃಷ್ಣಮೂರ್ತಿ) ಯವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಲು ಹೋದಾಗ ರಾಜೇಂದ್ರ ಸಿಂಗ್ ಬಾಬು ಅವರಲ್ಲಿ ಬಹಳಷ್ಟು ಆಕಾಂಕ್ಷೆಗಳಿದ್ದವು. ಕಪ್ಪು ಬಿಳುಪು ಚಿತ್ರಗಳಲ್ಲಿ ಬಣ್ಣವನ್ನು ಅರಳಿಸಿದವರು ವಿ ಕೆ ಮೂರ್ತಿ ಅವರು. ಅವರ ಕ್ಯಾಮರಾದಲ್ಲಿ ಮೂಡಿ ಬರುತ್ತಿದ್ದ ನೆರಳು ಬೆಳಕಿನ ಚಿತ್ರಗಳು ಮನಮೋಹಕವಾಗಿರುತ್ತಿದ್ದವು. ವಹೀದಾ ರೆಹಮಾನ್, ಮಧುಬಾಲಾ ಮೊದಲಾದವರಿಗೆ ಒಂದು ವ್ಯಕ್ತಿತ್ವವನ್ನು ಕಲ್ಪಿಸಿಕೊಟ್ಟವರೇ ವಿ ಕೆ ಮೂರ್ತಿಯವರು. ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ ಮೂರ್ತಿ ಅವರು ಅಪ್ಪಟ ಕನ್ನಡಿಗರು. ಮೈಸೂರು ಇವರ ಹುಟ್ಟೂರು. ತಮ್ಮ ಬದುಕಿನ ಸಂಧ್ಯಾಕಾಲವನ್ನು ಬೆಂಗಳೂರಿನಲ್ಲಿ ಕಳೆದವರು. ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ತಂತ್ರಜ್ಞರು.
ವಿ ಕೆ ಮೂರ್ತಿ ಇವರು ಅದಾಗಲೇ ಹಿಂದಿ ಚಿತ್ರರಂಗದಲ್ಲಿ ಅತ್ಯುತ್ತಮ ಛಾಯಾಗ್ರಾಹಕರೆಂದು ಹೆಸರುವಾಸಿಯಾಗಿದ್ದರು. ಅವರನ್ನು ಕನ್ನಡಕ್ಕೆ ತರಬೇಕೆಂಬ ಆಸೆಯಿಂದ ರಾಜೇಂದ್ರಸಿಂಗ್ ಬಾಬು ಅವರು ಮೂರ್ತಿಯವರನ್ನು ಸಂಪರ್ಕಿಸಿದರು. ಮೂರ್ತಿಯವರಿಗೆ ಬಾಬು ಅವರ ತಂದೆ ಡಿ.ಶಂಕರ್ ಸಿಂಗ್ ಅವರ ಪರಿಚಯವಿತ್ತು, ಅದೇ ಪರಿಚಯದ ಮುಖಾಂತರ ಸಂಪರ್ಕಿಸಿ, ಚಿತ್ತ ಕಥೆಯನ್ನು ಹೇಳಿ ಅದರಲ್ಲಿ ನೆರಳು ಬೆಳಕಿನ ವಿನ್ಯಾಸದ ಛಾಯಾಗ್ರಹಣದ ಅಗತ್ಯ ಇದೆ ಎಂದಾಗ ಬಹಳ ಸಂತೋಷದಿಂದ ಮೂರ್ತಿಯವರು ಒಪ್ಪಿದರು. ವೇಶ್ಯೆಯೊಬ್ಬಳು ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ‘ಜೂಲಿ' ಲಕ್ಷ್ಮಿ ನಟಿಸುತ್ತಾರೆ ಎಂದಾಗ ಇನ್ನೂ ಖುಷಿ ಪಟ್ಟರು. ಲಕ್ಷ್ಮಿ ಅವರೂ ವಿ ಕೆ ಮೂರ್ತಿ ಅವರು ಛಾಯಾಗ್ರಹಣ ಮಾಡುತ್ತಾರೆ ಎಂದಾಗ ಖುಷಿಯಿಂದ ನಲಿದಾಡಿದ್ದರಂತೆ.
ಚಿತ್ರ ಸೆಟ್ಟೇರಿ, ಚಿತ್ರೀಕರಣ ನಡೆದು ೧೯೯೩ರಲ್ಲಿ ತೆರೆಕಂಡಿತು. ಚಿತ್ರದ ನಿರ್ದೇಶಕರು ಜೈಜಗದೀಶ್ ಮತ್ತು ದುಷ್ಯಂತ್ ಸಿಂಗ್. ಮಾಜಿಮುಖ್ಯಮಂತ್ರಿಯಾದ ಗುಂಡೂ ರಾವ್ ಅವರ ಪುತ್ರ ಅಜಯ್ ಗುಂಡೂ ರಾವ್ ನಾಯಕರಾಗಿ ಹಾಗೂ ರಾಜಕಾರಣಿ ಹೆಚ್ ಕೆ ಶ್ರೀನಿವಾಸ್ ಅವರ ಪುತ್ರಿ ವೈಜಯಂತಿ ನಾಯಕಿಯಾಗಿ ನಟಿಸಿದ್ದರೂ, ಪ್ರಮುಖ ಭೂಮಿಕೆಯಲ್ಲಿ ಇದ್ದವರು ಲಕ್ಷ್ಮಿ. ಈ ಚಿತ್ರದ ಮೂಲಕ ಹಿರಿಯ ನಟ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಬೆಳಕಿಗೆ ಬಂದರು. ಛಾಯಾಗ್ರಾಹಕರಾದ ವಿ ಕೆ ಮೂರ್ತಿ ಅವರೂ ಈ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು ಎನ್ನುವುದು ಅಚ್ಚರಿಯ ಸಂಗತಿ. ಬಾಲ ನಟಿಯಾಗಿ ಬೇಬಿ ಶ್ಯಾಮಿಲಿಯ ನಟನೆಯೂ ಅದ್ಭುವಾಗಿತ್ತು.
ಬಡ ಮಧ್ಯಮ ವರ್ಗದ ಮಹಿಳೆಯೊಬ್ಬಳು ತನ್ನ ಪತಿಯ ಅಕಾಲ ಮೃತ್ಯುವಿನ ನಂತರ ಬಹಳ ಸಂಕಷ್ಟಕ್ಕೀಡಾಗುತ್ತಾಳೆ. ಪುಟ್ಟ ಮಗುವನ್ನು ಸಾಕಲಾರದೇ ಅನಿವಾರ್ಯವಾಗಿ ಆ ಮಗುವನ್ನು ಕಾನ್ವೆಂಟ್ ಶಾಲೆಗೆ ಸೇರಿಸಿ ಆಕೆ ವೇಶ್ಯಾವೃತ್ತಿಗಿಳಿಯುತ್ತಾಳೆ. ಮಗುವಿನ ಸಂಪರ್ಕವನ್ನೂ ಬಿಟ್ಟು ಏಕಾಂಗಿಯಾಗಿ ಬದುಕುತ್ತಾಳೆ. ಆ ಮಗು ಓದಿ ದೊಡ್ಡವಳಾಗಿ ಮದುವೆಯೂ ಆಗಿ ಈ ವೇಶ್ಯೆಯ ಮನೆಯ ಬಳಿಯಲ್ಲೇ ವಾಸಿಸಲು ಬರುತ್ತಾಳೆ. ನಂತರದ ಘಟನಾವಳಿಗಳನ್ನು ಚಿತ್ರದಲ್ಲೇ ನೋಡಿದರೆ ಚೆನ್ನ. ಸಮಾಜದಲ್ಲಿ ವೇಶ್ಯೆಯರನ್ನು ಕಾಣುವ ರೀತಿ, ತಾಯಿ ಮಗಳ ಪ್ರೀತಿ ವಾತ್ಸಲ್ಯದ ಬಂಧ ಮೊದಲಾದುವುಗಳನ್ನೆಲ್ಲಾ ಈ ಚಿತ್ರದಲ್ಲಿ ಸೊಗಸಾಗಿ ತೋರಿಸಲಾಗಿದೆ.
ಉತ್ತಮ ಕಥಾ ಹಂದರ ಹಾಗೂ ಚಿತ್ರ ತಂಡವನ್ನು ಹೊಂದಿದ್ದರೂ ಸಿನೆಮಾ ಹಿಟ್ ಆಗಲಿಲ್ಲ. ಚಿತ್ರ ಸೋತ ಬಳಿಕ ರಾಜೇಂದ್ರ ಸಿಂಗ್ ಬಾಬು ನೋವಿನಿಂದ “ವೇಶ್ಯೆ ಕೂಡಾ ಓರ್ವ ತಾಯಿ ಎನ್ನುವ ದೃಷ್ಟಿಯಿಂದ ಆಕೆಯ ಪಾತ್ರಪೋಷಣೆಯನ್ನು ಮಾನವೀಯ ಸಂಬಂಧಗಳ ನೆಲೆಯಲ್ಲಿ ಚಿತ್ರಿಸಲು ಪ್ರಯತ್ನಿಸಿದೆ. ತಾನು ಬದುಕುತ್ತಿರುವ ಸಮಾಜದ ರೂಢಿಗತ ನಂಬಿಕೆಗಳಿಗಿಂತ ಭಿನ್ನವಾಗಿ ಪಾತ್ರ ಪೋಷಣೆ ಮಾಡಿದರೆ ಪ್ರೇಕ್ಷಕ ಒಪ್ಪುತ್ತಾನೋ ಇಲ್ಲವೋ ಎನ್ನುವ ದ್ವಂದ್ವ ಮತ್ತು ಆತಂಕ ಮೊದಲಿನಿಂದಲೂ ಇತ್ತು. ಚಿತ್ರದ ಸೋಲಿನಿಂದ ನನ್ನ ಆತಂಕ ನಿಜವಾಯಿತು" ಎಂದಿದ್ದರು. ಪತ್ರಿಕೆಗಳಲ್ಲಿ ಈ ಚಿತ್ರದ ಬಗೆ ಮೂಡಿ ಬಂದ ಕಟು ವಿಮರ್ಶೆಯು ಪ್ರೇಕ್ಷಕರನ್ನು ಸಿನೆಮಾ ಮಂದಿರಕ್ಕೆ ಬಾರದಂತೆ ಮಾಡಿತು ಎನ್ನುವುದು ಬಾಬು ಅವರ ಅಭಿಮತ. ಈ ಕಾರಣದಿಂದಲೇ ಅವರು ಪತ್ರಕರ್ತರ ಮೇಲೆ ಸಿಟ್ಟಾಗಿದ್ದರು. ಬಾಬು ಅವರ ಸಿಟ್ಟನ್ನು ಸ್ವಲ್ಪ ಮಟ್ಟಿಗೆ ತಣಿಸಿದ್ದು ರಾಜ್ಯ ಸರಕಾರ ನಟಿ ಲಕ್ಷ್ಮಿ ಅವರಿಗೆ ನೀಡಿದ ಅತ್ಯುತ್ತಮ ನಟಿ (೧೯೯೩-೯೪) ರಾಜ್ಯ ಪ್ರಶಸ್ತಿ. ಆದರೂ ಬಾಬು ಅವರು ಹಲವಾರು ಸಮಯದವರೆಗೆ ಪತ್ರಕರ್ತರನ್ನು ಕಂಡರೆ ಮುಗುಮ್ಮಾಗಿರುತ್ತಿದ್ದರು.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ