ಗುಂಪುಗುಳಿಗಳಿಗೆ ಬೆಲೆ ಕಡಿತ
ಗುಂಪುಗುಳಿಗಳಿಗೆ ಬೆಲೆ ಕಡಿತ
ಗುಂಪಾಗಿ ಉತ್ಪನ್ನಗಳನ್ನು ಖರೀದಿಸಿದರೆ ಬೆಲೆಯಲ್ಲಿ ಕಡಿತ ಮಾಡುವ ಯೋಜನೆಗಳಿರುವ http://www.groupon.com/ನಂತಹ ತಾಣಗಳು ಅಂತರ್ಜಾಲದಲ್ಲಿ ಜನಪ್ರಿಯವಾಗುತ್ತಿವೆ.ಇಲ್ಲಿ ಗುಂಪಾಗಿ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವವರಿಗೆ ಶೇಕಡಾ ಐವತ್ತರಿಂದ ತೊಂಭತ್ತು ಕಡಿತ ಸಿಗುತ್ತದೆ.ಇಂತಹ ತಾಣಗಳು ನೀಡುವ ಕೊಡುಗೆಗಳ ಬಗ್ಗೆ ನೀವು ನಿಮ್ಮ ಮಿತ್ರರಿಗೆ ಮಿಂಚಂಚೆ,ಟ್ವಿಟರ್,ಫೇಸ್ಬುಕ್ ಅಂತಹ ಮಾಧ್ಯಮಗಳ ಮೂಲಕ ಪ್ರಚಾರ ನೀಡಿ,ಕಡಿತದ ಬೆಲೆಯಲ್ಲಿ ವಸ್ತುವನ್ನು ಖರೀದಿಸುವ ಅವಕಾಶ ಪಡೆಯಬಹುದು.http://livingsocial.com/ ಮತ್ತು http://www.valuup.com ತಾಣಗಳೂ ಇಂತದ್ದೇ ಯೋಜನೆಗಳನ್ನು ಹೊಂದಿರುವ ಇತರ ತಾಣಗಳು.ಕೊಡುಗೆಗಳು ವ್ಯಕ್ತಿಯಿರುವ ಊರಿನ ಆಧಾರದ ಮೇಲೆ ಆತನಿಗೆ ನೀಡುವುದು ಸಾಮಾನ್ಯ ಕ್ರಮ.ಹಾಗಾಗಿ ಬಳಕೆದಾರನು ನೋಂದಾವಣೆಯಾಗುವ ವೇಳೆ ತಾನಿರುವ ಊರಿನ ವಿವರಗಳನ್ನು,ತನ್ನ ಮಿಂಚಂಚೆಯನ್ನೂ ತಿಳಿಸಬೇಕಾಗುತ್ತದೆ.ಹೀಗೆ ಬಂದ ಕೊಡುಗೆಗಳಿಗೆ ಸಾಮಾಜಿಕ ಜಾಲತಾಣದ ಮೂಲಕವಾಗಲಿ,ಮಿಂಚಂಚೆ ಮುಖಾಂತರವಾಗಲಿ ತನ್ನ ಮಿತ್ರರಿಗೆ ತಿಳಿಸಿ,ಕೂಪನ್ ಪಡೆಯಬಹುದು.ಕೂಪನ್ ಮುದ್ರಿಸಿ,ಇಲ್ಲವೆ ಅವನ್ನು ತನ್ನ ಮೊಬೈಲಿನಲ್ಲಿ ಪಡೆದುಕೊಳ್ಳುವ ಆಯ್ಕೆ ಬಳಕೆದಾರನಿಗಿದೆ.ನಂತರ ಅಂಗಡಿಗೆ ಹೋಗಿ ಮುದ್ರಿತ ಕೂಪನ್ ನೀಡಿ ರಿಯಾಯಿತಿ ದರದಲ್ಲಿ ವಸ್ತುವನ್ನು ಖರೀದಿಸಬಹುದು.ಇಲ್ಲವೇ ಮೊಬೈಲ್ ಸಾಧನದ ಮೂಲಕ,ಇದನ್ನು ಅಂಗಡಿಯಾತನ ಮೊಬೈಲ್ಗೆ ಎಸೆಮೆಸ್ ಮಾಡಿ ರಿಯಾಯಿತಿ ಪಡೆಯಬಹುದು.ಗ್ರೂಪಾನ್ ಅಂತಹ ಕಂಪೆನಿಯ ಮೇಲೆ ಗೂಗಲ್ ಕಂಪೆನಿಯ ಕಣ್ಣು ಬಿದ್ದಿದೆ.ಆರು ಬಿಲಿಯನ್ ನೀಡಿ ಕಂಪೆನಿ ಖರೀದಿಸಲು ಗೂಗಲ್ ಅಸಕ್ತಿ ಪ್ರಕಟಿಸಿದೆ.ಗ್ರೂಪಾನ್ ಕಂಪೆನಿ ಈ ಕೊಡುಗೆಯನ್ನು ತಿರಸ್ಕರಿಸಿ, ಧೈರ್ಯ ಪ್ರಕಟಿಸಿದೆಯಂತೆ.
-----------------------------------
ಹೊಸ ಸ್ಪರ್ಶ ಸಂವೇದಿ ಟ್ಯಬ್ಲೆಟ್ಗಳು ಬರಲಿವೆ
ಹೊಸ ವರ್ಷದಲ್ಲಿ ಮೊಟೊರೊಲಾ,ಎಲ್ಜಿಯೂ ಸೇರಿ ಕಂಪೆನಿಗಳು ಹೊಸ ಸ್ಪಶಸಂವೇದಿ ಟ್ಯಾಬ್ಲೆಟ್ಗಳನ್ನು ಬಿಡುಗಡೆ ಮಾಡಲಿವೆ.ಲಾಸ್ವೇಗಸ್ನಲ್ಲಿ ನಡೆದಿರುವ ಸಿಇಎಸ್ ಎನ್ನುವ ಪ್ರದರ್ಶನದ ವೇಳೆ ಈ ಸುದ್ದಿಗಳು ಲಭ್ಯವಾಗಿವೆ.ಇಲ್ಲಿ ಕಂಪೆನಿಗಳು ತಮ್ಮ ಹೊಸ ಉತ್ಪನ್ನಗಳನ್ನು ಪ್ರದರ್ಶಿಸುವುದು ವಾಡಿಕೆ. ಹೆಚ್ಚಿನ ಕಂಪೆನಿಗಳು ಆಂಡ್ರಾಯಿಡ್ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಬಳಸಿಕೊಳ್ಳುವ ನಿರೀಕ್ಷೆಯಿದೆ.ಈ ಆವೃತ್ತಿ ಟ್ಯಾಬ್ಲೆಟ್ ಸಾಧನಗಳಿಗೇ ಮೀಸಲಾದ ತಂತ್ರಾಂಶ ವ್ಯವಸ್ಥೆ.ಅದಿನ್ನೂ ಪೂರ್ತಿ ವಿಕಸಿತವಾಗಿಲ್ಲ ಎನ್ನುವುದು ಸತ್ಯ.ಕ್ಸೂಮ್ ಎನ್ನುವ ಸ್ಪರ್ಶಸಂವೇದಿ ಟ್ಯಾಬ್ಲೆಟ್ಗಳನ್ನು ಮೊಟೊರೊಲಾ ಘೋಷಿಸಿದೆ.ಎಲ್ಜಿಯೂ ಹೊಸ ಆಂಡ್ರಾಯಿಡ್ ಆವೃತ್ತಿಯನ್ನಾಧರಿಸಿದ ಜಿ-ಸ್ಲೇಟ್ ಎನ್ನುವ ಸಾಧನವನ್ನು ತಯಾರಿಸಲಿದೆ.ಸ್ಯಾಮ್ಸಂಗ್ ಕಂಪೆನಿಯು ವೈ-ಫೈಯಲ್ಲಿ ಮಾತ್ರಾ ಕೆಲಸ ಮಾಡುವ ನಿಸ್ತಂತು ಟ್ಯಾಬ್ಲೆಟನ್ನು ತನ್ನ ಗ್ಯಾಲಕ್ಸಿ ಸರಣಿಯ ಐದನೆಯ ಉತ್ಪನ್ನವಾಗಿ ಹೊರತರುವ ಯೋಚನೆಯಲ್ಲಿರುವುದೂ ಪ್ರದರ್ಶನದ ವೇಳೆ ವ್ಯಕ್ತವಾಯಿತು.ಗೂಗಲ್ ಕಂಪೆನಿಯು ತನ್ನ ಟ್ಯಾಬ್ಲೆಟ್-ಸ್ನೇಹಿ ಆಂಡ್ರಾಯಿಡ್ ಆವೃತ್ತಿಯನ್ನಿಲ್ಲಿ ಪ್ರಕಟಿಸಿದೆ.ಆಪಲ್ ಕಂಪೆನಿಯು ಇಲ್ಲಿ ಹೊಸ ಉತ್ಪನ್ನಗಳ ಪ್ರಕಟನೆಯ ಗೋಜಿಗೇ ಹೋಗಿಲ್ಲ.ಉತ್ಪನ್ನಗಳನ್ನು ಪ್ರಕಟಿಸುವ ವೇಳೆ ಪ್ರದರ್ಶಿಸಿದರೆ ಉತ್ತಮ.ಅದರೆ ಕಂಪೆನಿಗಳ ಉತ್ಪನ್ನಗಳ ಮಾದರಿಯನ್ನು ತೋರಿಸುವುದೇ ಹೆಚ್ಚು.ಈ ಸಲ ಉತ್ಪನ್ನದ ವಿಡಿಯೋ ತೋರಿಸಿ,ವಿವರಿಸಿದವರದ್ದೇ ಬಹುಮತ.
-------------------------------------
ಟೂಜಿ ಹಗರಣದಲ್ಲಿ ಸರಕಾರಕ್ಕೆ ನಷ್ಟವಾಗಿಲ್ಲವೇ?
ತ್ರೀಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ದೊರೆತ ಹಣದ ಪ್ರಕಾರ ಲೆಕ್ಕ ಹಾಕಿದಾಗ ಟೂಜಿ ಸ್ಪೆಕ್ಟ್ರಮ್ನ್ನೂ ಹರಾಜು ಹಾಕಿದ್ದರೆ ಸರಕಾರಕ್ಕೆ ಒಂದುಮುಕ್ಕಾಲು ಲಕ್ಷಕೋಟಿ ರೂಪಾಯಿಗಳು ಬರುತ್ತಿತ್ತೆಂಬ ಲೆಕ್ಕಾಚಾರ ಸರಿಯೇ?ಕಪಿಲ್ ಸಿಬಾಲ್ ಅವರ ಪ್ರಕಾರ,ಆ ಲೆಕ್ಕಾಚಾರದಲ್ಲಿ ಹಣದುಬ್ಬರ ಪ್ರಮಾಣವನ್ನು ಪರಿಗಣಿಸಿ,ನಲುವತ್ತ ಮೂರು ಸಾವಿರ ಕೋಟಿ ರೂಪಾಯಿಗಳನ್ನು ಇಳಿಸಬೇಕಾಗುತ್ತದೆ.ತ್ರೀಜಿ ಸ್ಪೆಕ್ಟ್ರಮ್ ಟೂಜಿಗಿಂತ ನಾಲ್ಕು ಪಟ್ಟು ದಕ್ಷತೆ ಇರುವ ಕಾರಣ,ಮೂವತ್ತೈದು ಸಾವಿರಕೋಟಿ; ಸ್ಪೆಕ್ಟ್ರಮ್ನ ಲೈಸೆನ್ಸ್ ಅವಧಿ ಕಡಿಮೆ ಇರುವ ಕಾರಣ ಮೂರು ಸಾವಿರ ಕೋಟಿ,ಆವರ್ತನ ಸಂಖ್ಯೆಯ ವ್ಯತ್ಯಾಸಕ್ಕಾಗಿ ಹದಿನೇಳು ಸಾವಿರ ಕೋಟಿ, ಹೀಗೆಲ್ಲಾ ಲೆಕ್ಕ ಹಾಕಿದರೆ ಸರಕಾರಕ್ಕೆ ನಷ್ಟವಾಗಿಲ್ಲ ಎನ್ನುವ ಹೊಸ ವಾದ ಮಂಡಿಸಿದ್ದಾರೆ.ವಕೀಲರಾಗಿರುವ ಸಿಬಾಲ್ ವಾದ ತಲೆದೂಗುವ ಹಾಗಿದ್ದರೂ ಅವರ ವಾದ ವೈಖರಿಯಲ್ಲಿ ಜಾಣಮರೆವೊಂದು ಇಣುಕಿದೆ.ಅದೆಂದರೆ 2008ರಲ್ಲಿಯೂ 2001ರ ಬೆಲೆಗಳಲ್ಲಿ ಸ್ಪೆಕ್ಟ್ರಮ್ ಮಾರುವಾಗ,ಹಣದುಬ್ಬರವನ್ನೆಕೆ ಪರಿಗಣಿಸಲಿಲ್ಲ ಎನ್ನುವುದಕ್ಕೆ ಅವರು ವಿವರಣೆ ನೀಡಿಲ್ಲ.
----------------------------------
2011 ಡೈರಿ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳಿಸಿ,ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆರವರ 2011 ಡೈರಿ ಗೆಲ್ಲಿ!.ಬಹುಮಾನ ಪ್ರಾಯೋಜಿಸಿದವರು ಎನ್ ಇ ಟಿ ನೌಕರರ ಪತ್ತಿನ ಸಂಘ ನಿ.,ನಿಟ್ಟೆ(ರಿ ನಂ. 19327)
*ಅಡೋಬ್ ಫೋಟೋಶಾಪ್ನಂತೆ ಬಳಸಬಹುದಾದ ಮುಕ್ತ ತಂತ್ರಾಂಶ ಯಾವುದು?
*ಮೈಕ್ರೋಸಾಫ್ಟಿನ ಆಫೀಸ್ ತಂತ್ರಾಂಶದ ಬದಲು ಬಳಸಬಹುದಾದ ಮುಕ್ತ ತಂತ್ರಾಂಶ ಯಾವುದು?
(ಉತ್ತರಗಳನ್ನು nittecreditsociety@yahoo.comಗೆ ಮಿಂಚಂಚೆ ಮಾಡಿ,ವಿಷಯ:NS13 ನಮೂದಿಸಿ.)
(ಕಳೆದ ವಾರದ ಸರಿಯುತ್ತರಗಳು:
*ಟ್ಯಾಲಿ ತಂತ್ರಾಂಶದ ಹಣಕಾಸಿನ ಲೆಕ್ಕಾಚಾರಗಳನ್ನು ನಿರ್ವಹಿಸಲು ಬಳಸಬಹುದು.
*ಸಹಕಾರಿ ಸಂಘಗಳ ಲೆಕ್ಕಪತ್ರಗಳನ್ನು ನಿರ್ವಹಿಸಲು ಬಳಸುವ ಜನಪ್ರಿಯ ತಂತ್ರಾಂಶ ಕೋಬ್ಯಾಂಕ್ಸಾಫ್ಟ್.ಕಳೆದವಾರ ಸರಿಯುತ್ತರ ಕಳಿಸಿ ಬಹುಮಾನ ಗೆದ್ದವರು ರಜತ್,ಬಿಜಾಪುರ.ಅಭಿನಂದನೆಗಳು.)
------------------------------------------------------------
ಟ್ವಿಟರ್ ಚಿಲಿಪಿಲಿ
*2010ರಲ್ಲಿ ಕಪಿಲ್ ಸಿಬಾಲ್ ಅವರು ಘೋಷಿಸಿದ್ದ ಮೂವತ್ತೈದು ಡಾಲರು ಬೆಲೆಯ ಲ್ಯಾಪ್ಟಾಪ್ ಇನ್ನೂ ಆಮ್-ಆದ್ಮಿಯ ಕೈ ಸೇರಿಲ್ಲ,ಈಗವರು ಅದೇ ಬೆಲೆಯ ನೀರುಳ್ಳಿ ಘೋಷಿಸಬಹುದು!
*ಓ ದೇವರೇ, ನಾನು ವಸ್ತುಗಳ ಮೋಹಕ್ಕೊಳಗಾಗದ ಹಾಗೆ ಮಾಡು,ಇಲ್ಲವೇ ಅವನ್ನು ಖರೀದಿಸಲು ಬೇಕಾದಷ್ಟು ಹಣ ನನಗೆ ನೀಡು;ಎರಡನೆಯದ್ದೇ ಒಳಿತು...ಎಷ್ಟೋ ಉದ್ಯೋಗಾವಕಾಶಗಳ ನಿರ್ಮಾಣವಾಗುತ್ತದೆ...
*ನಿಮ್ಮ ಪ್ಲಾನ್-ಎ ಕೆಲಸ ಮಾಡದಿದ್ದರೆ ಯೋಚಿಸಬೇಡಿ,ಇನ್ನೂ (ಜೆಡ್ ವರೆಗಿನ) ಇಪ್ಪತ್ತೈದು ಅಕ್ಷರಗಳಿವೆ...
*ನನ್ನ ಹೆಲ್ತ್-ಇನ್ಶೂರೆನ್ಸ್ ಬಹಳ ಸರಳವಾಗಿದೆ-ನಾನು ಆರೋಗ್ಯವಾಗಿದ್ದಾಗ,ನನ್ನೆಲ್ಲಾ ಖರ್ಚುಗಳನ್ನದು ಭರಿಸಲಿದೆ.
-------------------------------------------------
ರಾಮಸ್ವಾಮಿಯವರ ಬೆಂಕಿಕಡ್ಡಿ
ಡಿ ಎಸ್ ರಾಮಸ್ವಾಮಿಯವರು ಚಿಂತನಶೀಲ ಬರಹಗಾರ,ಕವಿ.ಇವರು ಆಕಾಶವಾಣಿಯಲ್ಲೂ ನೂರಕ್ಕೂ ಅಧಿಕ ಚಿಂತನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು.ಅವರ ಚಿಂತನೆಗಳನ್ನೊಳಗೊಂಡ ಬರಹಗಳು ಇರುವ ಬ್ಲಾಗು "ಬೆಂಕಿಕಡ್ಡಿ".ಕವನ ಸಂಕಲನಗಳನ್ನೂ ಪ್ರಕಟಿಸಿರುವ,ರಾಮಸ್ವಾಮಿಯವರ ಸಂಕಲನಗಳ ಕವನಗಳೂ ಬ್ಲಾಗಿನಲ್ಲಿವೆ.ಕಾಂತಾವರ ಕನ್ನಡ ಸಂಘ,ಪತ್ರಿಕೆಗಳ ಕಥಾಸ್ಪರ್ಧೆಗಳು,ಶಿವಮೊಗ್ಗದ ಕರ್ನಾಟಕದ ಸಂಘದ ಜಿ ಎಸ್ ಶಿವರುದ್ರಪ್ಪ ಕಾವ್ಯಪ್ರಶಸ್ತಿ ಇವೆಲ್ಲವನ್ನೂ ರಾಮಸ್ವಾಮಿಯವರು ಬಗಲಿಗೇರಿಸಿಕೊಂಡವರು. ಒಟ್ಟಿನಲ್ಲಿ ಇವರ ಬೆಂಕಿಕಡ್ಡಿ ಬ್ಲಾಗ್,ಚಿಂತನಶೀಲರಿಗೆ ಒಳ್ಳೆಯ ಸಾಮಗ್ರಿ ಒದಗಿಸುವ ಬ್ಲಾಗ್ ಎನ್ನುವುದರಲ್ಲಿ ಅನುಮಾನವಿಲ್ಲ.
Udayavani
Udayavani
*ಅಶೋಕ್ಕುಮಾರ್ ಎ