100. ಬಂಗಾರದ ನಾಣ್ಯಗಳ ದುರಾಸೆಗೆ ತನ್ನ ಮೋಸಕ್ಕೆ ತಾನೇ ಬಲಿ

100. ಬಂಗಾರದ ನಾಣ್ಯಗಳ ದುರಾಸೆಗೆ ತನ್ನ ಮೋಸಕ್ಕೆ ತಾನೇ ಬಲಿ

ಸುರೇಶ ಮಹಾ ಸ್ವಾರ್ಥಿ. ಒಮ್ಮೆ ಅವನು ಮೂವತ್ತು ಬಂಗಾರದ ನಾಣ್ಯಗಳನ್ನು ಕಳೆದುಕೊಂಡ. ಸ್ವಲ್ಪ ಹೊತ್ತಿನ ನಂತರ, ಸುರೇಶನನ್ನು ಭೇಟಿಯಾಗಲು ರಮೇಶ ಬಂದ. ಅವನಿಗೆ ಹಾದಿಯಲ್ಲಿ ಮೂವತ್ತು ಬಂಗಾರದ ನಾಣ್ಯಗಳು ಸಿಕ್ಕವು.

ಆಗ, ತಾನು ಬಂಗಾರದ ನಾಣ್ಯಗಳನ್ನು ಕಳೆದುಕೊಂಡಿದ್ದೇನೆಂದು ಸುರೇಶ ತಿಳಿಸಿದ. ಪ್ರಾಮಾಣಿಕನೂ ಸತ್ಯಸಂಧನೂ ಆದ ರಮೇಶ ತನಗೆ ಸಿಕ್ಕಿದ್ದ ಎಲ್ಲ ಬಂಗಾರದ ನಾಣ್ಯಗಳನ್ನೂ  “ಇವು ನಿನ್ನವೇ ಆಗಿರಬೇಕು” ಎನ್ನುತ್ತಾ ರಮೇಶನ ಕೈಗಿತ್ತ.

ಸುರೇಶ ಆ ನಾಣ್ಯಗಳನ್ನು ಎಣಿಸಿ, "ಇದರಲ್ಲಿ ಹತ್ತು ಬಂಗಾರದ ನಾಣ್ಯಗಳು ಕಡಿಮೆ ಇವೆ” ಎಂದು ಆಪಾದಿಸಿದ. ಅನಂತರ, ಸುರೇಶ ಕೋರ್ಟಿನಲ್ಲಿ ದಾವೆ ಹೂಡಿ, ರಮೇಶನ ಮೇಲೆ ತನ್ನ ಹತ್ತು ಬಂಗಾರದ ನಾಣ್ಯಗಳನ್ನು ಕದ್ದ ಆರೋಪ ಹೊರಿಸಿದ.

ಕೋರ್ಟಿನಲ್ಲಿ ನ್ಯಾಯಾಧೀಶರು ರಮೇಶನನ್ನು ಪ್ರಶ್ನಿಸಿದರು: ನಿನಗೆ ಎಷ್ಟು ಬಂಗಾರದ ನಾಣ್ಯಗಳು ಸಿಕ್ಕವು ಎಂಬುದಾಗಿ. ತನಗೆ ಸಿಕ್ಕಿದ್ದು ಮೂವತ್ತು ಬಂಗಾರದ ನಾಣ್ಯಗಳು ಮಾತ್ರ ಎಂದು ರಮೇಶ ಉತ್ತರಿಸಿದ. ಈಗ ನ್ಯಾಯಾಧೀಶರು ಸುರೇಶನ ಬಳಿ “ನೀನು ಎಷ್ಟು ಬಂಗಾರದ ನಾಣ್ಯಗಳನ್ನು ಕಳೆದುಕೊಂಡೆ?" ಎಂದು ಕೇಳಿದಾಗ ಅವನು ನಲುವತ್ತು ಬಂಗಾರದ ನಾಣ್ಯಗಳನ್ನು ಕಳೆದುಕೊಂಡೆ ಎಂದು ಹೇಳಿದ. ಕೂಡಲೇ ನ್ಯಾಯಾಧೀಶರು ಆ ಮೂವತ್ತು ಬಂಗಾರದ ನಾಣ್ಯಗಳು ಸುರೇಶನಿಗೆ ಸೇರಿದ್ದಲ್ಲ; ಯಾಕೆಂದರೆ ಅವನು ಕಳೆದುಕೊಂಡದ್ದು ನಲುವತ್ತು ಬಂಗಾರದ ನಾಣ್ಯಗಳನ್ನು ಎಂದು ಘೋಷಿಸಿದರು. ಆ ಮೂವತ್ತು ಬಂಗಾರದ ನಾಣ್ಯಗಳನ್ನು ರಮೇಶನಿಗೆ ಅವರು ಕೊಟ್ಟರು. ಹೀಗೆ ಬಂಗಾರದ ನಾಣ್ಯಗಳ ದುರಾಸೆಯಿಂದಾಗಿ ಸುರೇಶ ತನ್ನ ಮೋಸಕ್ಕೆ ತಾನೇ ಬಲಿಯಾದ.