108 ಆಂಬುಲೆನ್ಸ್ ಗಳಿಗೆ ಹೊಸ ರೂಪ ಸ್ವಾಗತಾರ್ಹ

108 ಆಂಬುಲೆನ್ಸ್ ಗಳಿಗೆ ಹೊಸ ರೂಪ ಸ್ವಾಗತಾರ್ಹ

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾದಿಂದಾಗಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯಗಳು ಹೆಚ್ಚಾಗಿವೆ. ಕೊರೊನಾ ಕಾಣಿಸಿಕೊಳ್ಳುವ ಮೊದಲು ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಅಷ್ಟಕಷ್ಟೇ ಎಂಬಂತೆಯೇ ಇತ್ತು. ಆದರೆ ಕೊರೊನಾ ಎಲ್ಲರಿಗೂ ಪಾಠ ಕಲಿಸಿದೆ ಎಂಬುದು ಸುಳ್ಳಲ್ಲ. ಸದ್ಯ ಕೊರೊನಾ ಮೂರನೇ ಅಲೆಯ ಭೀತಿ ದೂರವಾಗಿದೆ. ಆದರೆ ಕೊರೊನಾ ಮಾತ್ರ ಇನ್ನೂ ಮುಗಿದಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿಯೂ ಜನ ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ಒಂದು ಕ್ಷಣ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಹೀಗಾಗಿ ರಾಜ್ಯ ಸರಕಾರ ಈಗಿನಿಂದಲೇ ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಮೂಲಸೌಕರ್ಯಗಳನ್ನು ನೀಡಲು ಮುಂದಾಗಿದೆ. ಇದರ ಮುಂದುವರಿದ ಭಾಗವೇ 108 ಆಂಬುಲೆನ್ಸ್ ಗಳಿಗೆ ಹೊಸ ರೂಪ ನೀಡುವುದಾಗಿದೆ.

ಸದ್ಯ ರಾಜ್ಯದಲ್ಲಿ ೭೧೦ ಆಂಬುಲೆನ್ಸ್ ಗಳಿದ್ದು ಇದನ್ನು ೭೫೦ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಹಾಗೆಯೇ ಹೊಸದಾಗಿ ೩೫೦ ಆಂಬುಲೆನ್ಸ್ ಗಳ ಖರೀದಿಗೂ ಮೂಂದಾಗಿದೆ. ಅಲ್ಲದೆ ಈಗಿರುವ ಆಂಬುಲೆನ್ಸ್ ಗಳನ್ನು ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದ್ದು, ಇವುಗಳಲ್ಲಿ ವಿಶ್ವ ದರ್ಜೆಯ ಸೇವೆ ನೀಡಲು ಮುಂದಾಗಿದೆ. ಅಷ್ಟೇ ಅಲ್ಲ, ಆಂಬುಲೆನ್ಸ್ ಸೇವೆಯಲ್ಲೂ ವ್ಯಾಪಕ ಮಾರ್ಪಾಡಿಗೆ ಚಿಂತನೆ ನಡೆದಿದ್ದು, ಹತ್ತಿರದಲ್ಲೇ ಇರುವ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಮಾರ್ಗಸೂಚಿ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಒಂದು ಬೇಸಿಕ್ ಲೈಫ್ ಸಪೋರ್ಟ್ ಇರುವಂಥ ಆಂಬುಲೆನ್ಸ್ ಇರಬೇಕು. ಹಾಗೆಯೇ ಪ್ರತಿ ೫ ಲಕ್ಷ ಜನಸಂಖ್ಯೆಗೆ ಒಂದು ಅಡ್ವಾನ್ಸ್ ಡ್ ಲೈಫ್ ಸಪೋರ್ಟ್ ಇರುವ ಆಂಬುಲೆನ್ಸ್ ಇರಬೇಕು. ಹಾಗೆಯೇ ಒಂದು ಆಂಬುಲೆನ್ಸ್ ೨೪ ಗಂಟೆಗಳಲ್ಲಿ ೪ ಪ್ರಕರಣಗಳನ್ನು ನಿರ್ವಹಿಸಬೇಕು. ಅಲ್ಲದೆ ೧೨೦ ಕಿ.ಮೀಗ಼ಿಂತ ಹೆಚ್ಚು ದೂರ ಕ್ರಮಿಸಿದರೆ, ಮತ್ತೊಂದು ಅಂಬುಲೆನ್ಸ್ ಒದಗಿಸಬೇಕು ಎಂದು ಮಾರ್ಗಸೂಚಿಯೇ ಹೇಳಿದೆ.

ಹೀಗಾಗಿ ಈ ಎಲ್ಲ ಬೇಡಿಕೆಗಳಿಗೆ ಪೂರಕವಾಗಿ ಇನ್ನಷ್ಟು ಆಂಬುಲೆನ್ಸ್ ಗಳನ್ನು ಒದಗಿಸುವುದು ಮತ್ತು ಇರುವ ಆಂಬುಲೆನ್ಸ್ ಗಳನ್ನೇ ಮೇಲ್ದರ್ಜೆಗೆ ಏರಿಕೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹವಾದ ನಿರ್ಧಾರವೇ ಆಗಿದೆ.

ಕೊರೊನಾ ಮೊದಲ ಮತ್ತು ಮೂರನೇ ಅಲೆಗಿಂತ ಕೊರೊನಾ ಎರಡನೇ ಅಲೆ ವೇಳೆ ರೋಗಿಯ ಜೀವ ಉಳಿಸುವಲ್ಲಿ ಆಂಬುಲೆನ್ಸ್ ಪಾತ್ರ ಎಂತಹುದು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಅದೆಷ್ಟೋ ಮಂದಿ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೆ ಮನೆ ಬಾಗಿಲಲ್ಲೇ ಪ್ರಾಣ ಬಿಟ್ಟರು. ಅಲ್ಲದೆ ಕೆಲವರಿಗೆ ಆಂಬುಲೆನ್ಸ್ ಸಿಕ್ಕರೂ ಆಮ್ಲಜನಕ ವ್ಯವಸ್ಥೆ ಇರುವಂಥ ವಾಹನಗಳು ಸಿಗದೆ ತೊಂದರೆಗೀಡಾದರು. ಹೀಗಾಗಿಯೇ ಸಾವಿನ ಪ್ರಮಾಣವೂ ೨ ನೇ ಅಲೆ ವೇಳೆ ಹೆಚ್ಚಾಯಿತು. 

ಕೊರೊನಾ ಮೊದಲೆರಡು ಅಲೆಗಳು ಎಲ್ಲ ಸರಕಾರಗಳಿಗೆ ಮತ್ತು ಆಸ್ಪತ್ರೆಗಳಿಗೆ ತಕ್ಕ ಪಾಠವನ್ನೇ ಕಲಿಸಿದೆ. ಆಧುನಿಕ ವ್ಯವಸ್ಥೆ ಇಲ್ಲದೇ ಹೋದರೆ ಯಾವ ಮಟ್ಟಿನ ತೊಂದರೆಯಾಗಬಹುದು ಎಂಬುದನ್ನೂ ತಿಳಿಸಿಕೊಟ್ಟಿದೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಂಡು ಈಗಲೇ ಸರಕಾರದ ವತಿಯಿಂದಲೇ ಆಂಬುಲೆನ್ಸ್ ಗಳ ಹೆಚ್ಚಳ ಮತ್ತು ಮೇಲ್ದರ್ಜೆಗೇರಿಸಲು ಮುಂದಾಗಿರುವುದು ಉತ್ತಮವಾದ ತೀರ್ಮಾನವೇ ಆಗಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ. ೨೧-೦೨-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ