12TH ಫೇಲ್, ಇದು ಬರೀ ಸಿನೆಮಾವಲ್ಲ, ಒಂದು ಸ್ಫೂರ್ತಿ..
"ವ್ಯಕ್ತಿಯೊಬ್ಬ ತಾನು ನಂಬಿದ ಸತ್ಯಕ್ಕೆ ಅಂಟಿಕೊಂಡರೆ, ತಲುಪಬೇಕಾದ ಗುರಿಯನ್ನು ಅಪ್ಪಿಕೊಂಡರೆ, ಛಲವೆನ್ನುವುದು ಯಾವುದೇ ಆಮಿಷಗಳಿಗೂ ಚಂಚಲವಾಗದೆ ಸಾಧನೆಯ ಕಿರೀಟವನ್ನು ಮುಡಿಸುತ್ತದೆ ಎಂಬುದಕ್ಕೆ ಈ 12th Fail ಸಿನೆಮಾ ಸಾಕ್ಷಿಯಾಗಿ ನಿಲ್ಲುತ್ತದೆ,"
ಒರಟುತನವೇ ರಕ್ತಗತವಾಗಿರುವ ಡಕಾಯಿತಿಗೆ ಕುಖ್ಯಾತಿ ಹೊಂದಿದ ಚಂಬಲ್ ಕಣಿವೆಯ ಕುಗ್ರಾಮದ ಹುಡುಗನೊಬ್ಬ IPS ಪರೀಕ್ಷೆಯನ್ನು ಪಾಸ್ ಮಾಡಲು ಎದುರಿಸುವ ಸಂಕಷ್ಟಗಳನ್ನು ಮತ್ತು ಸವಾಲುಗಳನ್ನು ನಿರ್ದೇಶಕರು ಅತೀ ಮನೋಜ್ಞಾವಾಗಿ ತೆರೆಯ ಮೇಲೆ ತಂದಿದ್ದಾರೆ. ಸ್ವಲ್ಪ ಹದ ತಪ್ಪಿದರೂ ಸಾಕ್ಷ್ಯಚಿತ್ರವಾಗಬಹುದಾಗಿದ್ದ ಕಥೆಯನ್ನು ತಮ್ಮ ಧಾರಾಳ ಅನುಭವದ ಕುಸುರಿಯಿಂದ ವಿಧು ವಿನೋದ್ ಛೋಪ್ರಾ ಒಂದು ಅತ್ಯುತ್ತಮ ಚಲನಚಿತ್ರವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ಗ್ರಾಮದ ಪೊಲೀಸ್ ಅಧಿಕಾರಿಯೊಬ್ಬ ಹೇಳುವ "ಸತ್ಯವಂತನಾಗಿದ್ದಾರೆ ಉನ್ನತ ಅಧಿಕಾರಿಯಾಗಬಹುದು" ಎಂಬ ಮಾತನ್ನೇ ನಾಯಕ ಮನೋಜ್ ಕುಮಾರ್ ಶರ್ಮಾ ಸ್ಫೂರ್ತಿಯಾಗಿ ತೆಗೆದುಕೊಳ್ಳುತ್ತಾನೆ. ಇಲ್ಲಿಂದ ಆರಂಭವಾಗುವ ಅವನ ಸತ್ಯದ ಪಯಣ IPS ಉತ್ತೀರ್ಣವಾಗುವ ತನಕವೂ ಜೊತೆಸಾಗುತ್ತದೆ. ಪೊಲೀಸ್ ಅಧಿಕಾರಿಯಾಗಲು ಯಾವ ಪರೀಕ್ಷೆ ಪಾಸ್ ಮಾಡಬೇಕು ಎನ್ನುವ ಅರಿವೇ ಇಲ್ಲದ ಮುಗ್ಧನೊಬ್ಬ ಗ್ವಾಲಿಯರ್ ತಲುಪುವ ಮುನ್ನವೇ ಸರ್ವಸ್ವವನ್ನೂ ಕಳೆದುಕೊಂಡು ನಿಂತಿದ್ದಾಗ ಪಾಂಡೆ ಅಪದ್ಭಾಂಧವನಾಗಿ ಕಾಣುವುದು. ಅಲ್ಲಿಂದ ದೆಹಲಿಯನ್ನು ತಲುಪಿ ಹಗಲು ಗ್ರಂಥಾಲಯದ ಕಸ ಗುಡಿಸುವುದು ಶೌಚಾಲಯ ತೊಳೆಯುವುದು, ಉಳಿದ ವೇಳೆಯಲ್ಲಿ ಅಧ್ಯಯನ ಮಾಡುವುದು.. ಗೌರಿ ಭಯ್ಯಾ ನಂತಹ ಹೃದಯವಂತರ ಸಂಗ ಮತ್ತು ಬರೀ ಪ್ರೇಮಕ್ಕಲ್ಲ ಸಾಧನೆಗೂ ನಿನ್ನ ಬೆಂಗಾವಲಗಿ ನಿಲ್ಲುತ್ತೇನೆ ಎನ್ನುವ ನಾಯಕಿ ಶ್ರದ್ಧಾಳ ಸಹವಾಸ, ಈತನ IPS ಕನಸಿನ ಪರಿಶ್ರಮವೆಂಬ ಗಿಡಕ್ಕೆ ನೀರೇರೆಯುತ್ತ ಸಾಗುತ್ತವೆ. Tourism ಎನ್ನುವ ಪದವನ್ನು terrorism ಎಂದು ಅರ್ಥೈಸಿಕೊಂಡು ಉತ್ತರಿಸಿ ಒಂದು ವರ್ಷವನ್ನು ಕಳೆದುಕೊಳ್ಳುವ ಸಂಗತಿಯು, ಗ್ರಾಮೀಣ ಮಕ್ಕಳಲ್ಲಿ ಇಂಗ್ಲಿಷ್ ನ ಅವಶ್ಯಕತೆಯನ್ನು ಎತ್ತಿ ತೋರಿಸುತ್ತದೆ.
ನಾಯಕಿ ತನ್ನ ಪ್ರೇಮವನ್ನು ತಿರಸ್ಕರಿಸಿದಾಗ, ಯುವಕ ಮನೋಜ್ ಭಗ್ನ ಪ್ರೇಮಿಯಾಗಿ ತನ್ನ ಭವಿಷ್ಯವನ್ನೇ ಹಾಳುಮಾಡಿಕೊಳ್ಳಬಹುದಿತ್ತು. ಆದರೆ ಆತ ಅಲ್ಲಿಂದ ಸೀದಾ ತನ್ನ ಮನೆಗೆ ಬಂದು ಬಂಧುಗಳ ಒಡನಾಟದಿಂದ ಭಾವನೆಗಳನ್ನು ರಿಚಾರ್ಜ್ ಮಾಡಿಕೊಳ್ಳುತ್ತಾನೆ. ಪುಟಿದೇಳುತ್ತಾನೆ. ಮತ್ತೆ ತನ್ನ ಕನಸಿನ ಹಕ್ಕಿಯ ರೆಕ್ಕೆಗೆ ಪುಕ್ಕಗಳನ್ನು ಹಚ್ಚುತ್ತಾನೆ. ಅಂದುಕೊಂಡಿದ್ದನ್ನು ಸಾಧಿಸುವ ಹಠಕ್ಕೆ ಬಿದ್ದು ಹಿಟ್ಟಿನ ಗಿರಣಿಯಲ್ಲಿ ಯಂತ್ರಕ್ಕಿಂತ ವೇಗವಾಗಿ ತಿರುಗುತ್ತಾನೆ. ಅಲ್ಲಿಯೇ ಕಲಿಯುತ್ತಾನೆ. ಯುವ ಜನತೆಗೆ ಮಾದರಿಯಾಗುತ್ತಾನೆ. ಅಲ್ಲಿಂದ ಪಯಣ ತುಸು ವೇಗದಲ್ಲಿ ಸಾಗುತ್ತದೆ. ಕೊನೆಯ ಅವಕಾಶದಲ್ಲಿ ಸಂದರ್ಶನದ ಹಂತವನ್ನು ತಲುಪಿಯೇ ಬಿಡುತ್ತಾನೆ. ಆಗ ತನ್ನ ಜೀವಮಾನದಲ್ಲೇ ಮೊದಲ ಬಾರಿ ಬೂಟುಗಳನ್ನು ತೊಟ್ಟು ಪಡುವ ಸಂಕಟವನ್ನು ಪ್ರದರ್ಶಿಸಿದ ರೀತಿ ಮನಮುಟ್ಟುವಂತಿದೆ. ಅಲ್ಲಿಯೂ ತನ್ನ ಸತ್ಯದ ಮಾತು ಮತ್ತು ನೇರ ನಡವಳಿಕೆಯಿಂದ ಸಂದರ್ಶಕರ ಮನಗೆಲ್ಲುತ್ತಾನೆ. ಹಠವೊಂದಿದ್ದರೆ, ತಾನು ನಂಬಿದ ತತ್ವಕ್ಕೆ ಬದ್ಧನಾಗಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದೆಂಬುದನ್ನು ಜಗಕ್ಕೆ ಸಾರಿ ಹೇಳುತ್ತಾನೆ. ಮನೋಜನ ನಿಷ್ಕಲ್ಮಶ ನಡವಳಿಕೆ ಇಡೀ ಪಯಣದ ಜೀವಾಳ. ಗೌರಿ ಭಯ್ಯಾನ Restart ಘೋಷಣೆಯಂತೂ ಸೋತು ಬಿದ್ದವನ ಮುಖದಲ್ಲೂ ಹೋರಾಟದ ಕೆಚ್ಚನ್ನು ಬಡಿದೇಳಿಸುತ್ತದೆ. ಈ Restart ಎನ್ನುವ ಪದ ಥ್ರೀ ಈಡಿಯಟ್ಸ್ ಸಿನೆಮಾದ All is well ಎಂಬಷ್ಟೇ ಆಕರ್ಷಣೀಯವಾಗಿದೆ.
ಚಿತ್ರದ ಪ್ರತೀ ಪಾತ್ರಗಳು ಅಭಿನಯಿಸಿರುವುದಕ್ಕಿಂತ ಹೆಚ್ಚಾಗಿ ಜೀವಿಸಿವೆ. ಜಿದ್ದಿಗೆ ಬಿದ್ದಂತೆ ಕಂಗೊಳಿಸಿವೆ. ಸತ್ಯಕತೆಯೊಂದನ್ನು ತೆರೆಯ ಮೇಲೆ ತರುವಾಗ ಆಗಬಹುದಾದ ಲೋಪದೋಷಗಳನ್ನು ಸಾಕಷ್ಟು ಮಟ್ಟಿಗೆ ಇಲ್ಲವಾಗಿಸಿವೆ. ಇಡೀ ಸಿನೆಮಾ ಪೂರ್ತಿ ತನ್ನ ಮುಗ್ಧ ಮೊಗದಿಂದಲೇ ಗಮನ ಸೆಳೆವ ನಾಯಕ ಮಾತ್ರ ಎಲ್ಲರನ್ನೂ ಸೂಜಿಗಲ್ಲಂತೆ ಸೆಳೆದುಬಿಡುತ್ತಾನೆ. ಆತನಷ್ಟೇ ತೂಕದ ಪಾತ್ರ ನಾಯಕಿಯದ್ದು. ಪರೀಕ್ಷೆ ಪಾಸಾದ ನಾಯಕ ತನ್ನ ತಾಯಿಯೊಂದಿಗೆ ಮಾತನಾಡುವ ಅತಿ ಭಾವುಕ ಸನ್ನಿವೇಶದಲ್ಲೂ ನಾಟಕೀಯತೆ ಗೋಚರಿಸುವುದಿಲ್ಲ. ಯುದ್ಧವನ್ನೇ ಗೆದ್ದು ನಿಂತಿದ್ದರೂ ಮನೋಜ್ ಕುಮಾರ್ ನ ನಿರ್ಲಿಪ್ತ ಭಾವದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅದು ಈ ಕತೆಗಿರುವ ಅಪ್ಯಾಯಮಾನತೆ. ಇದು ಜೀವನ ಚರಿತ್ರೆ ಆಧಾರಿತ ಕತೆಯಾಗಿರುವುದರಿಂದ ಮತ್ತು ಚಿತ್ರದ ಪಾತ್ರಗಳು ಇನ್ನೂ ಜೀವಂತವಾಗಿರುವುದರಿಂದ ಸಿನೆಮಾಗಾಗಿ ಸತ್ಯವನ್ನು ತಿರುಚಲು ಸಾಧ್ಯವಾಗುವುದಿಲ್ಲ.
ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಮಸಾಲೆಗಳನ್ನು ತುಂಬಲು ಹೋದರೆ ಬದುಕಿರುವ ನಾಯಕನ ಪಾತ್ರವನ್ನು ಸಮಾಜ ಅನುಮಾನದಿಂದ ನೋಡುವ ಅವಕಾಶವಿರುತ್ತದೆ. ಜೊತೆಗೆ ಸಮಾಜಕ್ಕೆ ಏನನ್ನು ತಲುಪಿಸಬೇಕೆಂದು ಚಿತ್ರದ ಉದ್ದೇಶವಾಗಿತ್ತೋ ಅದು ಅಸಾಧ್ಯವಾಗಿಬಿಡುತ್ತದೆ. ಇದನ್ನೇ ಮಿತಿಯಾಗಿರಿಸಿಕೊಂಡು ಯಾವುದೂ ಅತಿಯಾಗದಂತೆ ಈ ಸಿನಿಮಾ ನೋಡುಗರನ್ನು ತನ್ನೊಳಗೆ ಮುಳುಗಿಸಿಕೊಂಡುಬಿಡುತ್ತದೆ. ಹೇಳಬೇಕಾದ್ದನ್ನು ನೇರವಾಗಿ ನಿಖರವಾಗಿ ಹೇಳಿ ಮುಗಿಸಿರುವುದು ನಿಜಕ್ಕೂ ಆಪ್ತವಾಗುತ್ತದೆ. ಕೆಲವು ಸನ್ನಿವೇಶಗಳಂತೂ ನೋಡುಗರ ಎದೆಸೀಳಿ ಅಂತರಂಗಕ್ಕಿಳಿದುಬಿಡುತ್ತವೆ. ಕಣ್ಣಾಲಿಗಳನ್ನು ತೋಯಿಸಿಬಿಡುತ್ತವೆ. ಸಿನಿಮಾವನ್ನು ನೋಡುತ್ತಾ ನೋಡುತ್ತಾ ನಮ್ಮೊಳಗೆ ಒಂದು ಆತ್ಮವಲೋಕನ ಅರಿವಿಲ್ಲದಂತೆ ಆವರಿಸಿಕೊಂಡುಬಿಡುತ್ತದೆ. ನಾವು ಮನೋಜ್ ಕುಮಾರ್ ಶರ್ಮನಂತೆ ಸತ್ಯಕ್ಕೆ ಕಟ್ಟುಬಿದ್ದಿದ್ದರೆ, ಅಂದುಕೊಂಡಿದ್ದ ಗುರಿಯನ್ನು ತಲುಪಲು ಗಟ್ಟಿ ಮನಸ್ಸು ಮಾಡಿದ್ದರೆ ಏನಾದರೂ ಸಾಧಿಸಬಹುದಿತ್ತೇನೋ ಎಂಬ ಭಾವ ಆಗಾಗ ಚಿತ್ರದ ಪೂರ್ತಿ ನಮ್ಮನ್ನು ಕಾಡಿಸುತ್ತದೆ. ಚಿತ್ರ ವೀಕ್ಷಣೆ ಮುಗಿದ ಮೇಲೂ ಅದೇ ಗುಂಗಿನಲ್ಲಿರಿಸುತ್ತದೆ.
- ಸತ್ಯರಂಗಸುತ
ಚಿತ್ರ ಕೃಪೆ: ಇಂಟರ್ನೆಟ್