15. ಚಿಟ್ಟೆಯ ಜಂಬ
ಚಂದದ ಉದ್ಯಾನದಲ್ಲಿ ಹಲವಾರು ಕೀಟಗಳ ವಾಸ. ಅಲ್ಲಿದ್ದ ಮನಮೋಹಕ ಚಿಟ್ಟೆಯೊಂದಕ್ಕೆ ತನ್ನ ಸೌಂದರ್ಯದ ಬಗ್ಗೆ ಬಹಳ ಜಂಬ. ಯಾವಾಗಲೂ ತನಗಿಂತ ಸುಂದರ ಚಿಟ್ಟೆ ಈ ಜಗತ್ತಿನಲ್ಲೇ ಇಲ್ಲವೆಂದು ಆತ್ಮಪ್ರಶಂಸೆ ಮಾಡಿಕೊಳ್ಳುತ್ತಿತ್ತು. ಜಿರಳೆಯೊಂದಕ್ಕೆ ಇದನ್ನು ಕೇಳಿಕೇಳಿ ಸಾಕಾಯಿತು. ಅದು ಚಿಟ್ಟೆಗೆ ಸವಾಲು ಹಾಕಿತು, “ನೀನು ಅಷ್ಟೆಲ್ಲ ಜಂಬ ಪಡಬೇಕಾಗಿಲ್ಲ. ನನ್ನ ಜೊತೆ ಸೌಂದರ್ಯ ಸ್ಪರ್ಧೆಗೆ ಬಾ.”
ಈ ಸವಾಲನ್ನು ಕೇಳಿದ ಚಿಟ್ಟೆ ಬಿದ್ದುಬಿದ್ದು ನಕ್ಕಿತು. “ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವುದು ನಾನೇ. ಸರಿ, ಸ್ಪರ್ಧೆ ನಡೆಸೋಣ. ತೀರ್ಪುಗಾರರನ್ನು ನೇಮಿಸು” ಎಂದು ಸ್ಪರ್ಧೆಗೆ ಮುಂದಾಯಿತು ಚಿಟ್ಟೆ. ಜಿರಳೆಗಳು, ಹುಳಗಳು ಮತ್ತು ಚಿಪ್ಪುಹುಳಗಳು ಸ್ಪರ್ಧೆಯ ತೀರ್ಪುಗಾರರೆಂದು ಆಯ್ಕೆಯಾದರು. ಅವರೆಲ್ಲರೂ ಜಿರಳೆಯೇ ಸ್ಪರ್ಧೆಯ ವಿಜೇತ ಎಂದು ತೀರ್ಪು ನೀಡಿದರು. ಚಿಟ್ಟೆ ತೀರ್ಪುಗಾರರ ಜೊತೆ ಜಗಳವಾಡಿತು. "ನಾನೇ ಅತ್ಯಂತ ಸುಂದರ ಕೀಟ ಎಂಬುದನ್ನು ಪ್ರತಿಯೊಬ್ಬರೂ ಕಣ್ಣಾರೆ ಕಾಣಬಹುದು. ನಿಮ್ಮ ತೀರ್ಪು ನ್ಯಾಯಸಮ್ಮತವಲ್ಲ” ಎಂದಿತು ಚಿಟ್ಟೆ. ಆಗ ಚಿಪ್ಪುಹುಳವೊಂದು ಹೀಗೆಂದಿತು, “ಓ ಚಿಟ್ಟೆ, ನಿನ್ನಲ್ಲಿ ಇರೋದು ಬಾಹ್ಯ ಸೌಂದರ್ಯ ಅಷ್ಟೇ. ಕಳೆದ ಚಳಿಗಾಲದಲ್ಲಿ ನನ್ನ ಮನೆ ಹಾಳಾಗಿ ಹೋಯಿತು. ನಾನು ನಿನ್ನ ಬಳಿ ಬಂದು ನನಗೆ ಸಹಾಯ ಮಾಡಬೇಕೆಂದು ಕೇಳಿದೆ. ಆದರೆ ನೀನು ನಿನ್ನ ಮನೆಯ ಬಾಗಿಲನ್ನು ದಢಾರನೆ ಮುಚ್ಚಿದೆ. ಆಗ ಜಿರಳೆ ನನ್ನನ್ನು ಕರೆದು ತನ್ನ ಮನೆಯಲ್ಲಿ ನನಗೆ ಆಶ್ರಯ ಕೊಟ್ಟಿತು. ಚಳಿಗಾಲವಿಡೀ ಜಿರಳೆ ನನಗೆ ಸಹಾಯ ಮಾಡಿತು." ಈಗ ಚಿಟ್ಟೆ ತಲೆ ತಗ್ಗಿಸಿತು. "ಜಿರಳೆ, ನಿನ್ನಲ್ಲಿ ನಿಜಕ್ಕೂ ಸೌಂದರ್ಯವಿದೆ” ಎಂದು ಚಿಟ್ಟೆ ತೀರ್ಪುಗಾರರ ತೀರ್ಪನ್ನು ಅನುಮೋದಿಸಿತು.