16. ಸತತ ಯತ್ನ - ಲುಡ್ವಿಗ್ ವ್ಯಾನ್ ಬೀತೋವನ್ ಸೂತ್ರ
ಹಲವಾರು ದಶಕಗಳ ಮುಂಚೆ ಜರ್ಮನಿಯಲ್ಲಿ ಲುಡ್ವಿಗ್ ವ್ಯಾನ್ ಬೀತೋವನ್ ಜನನ. ಅವನ ಬಾಲ್ಯದಲ್ಲಿ, ಸಣ್ಣಪುಟ್ಟ ತಪ್ಪುಗಳಿಗೂ ಅವನ ತಂದೆ ಅವನನ್ನು ಸದೆಬಡಿಯುತ್ತಿದ್ದ. ಅವನು ಪಿಯಾನೋವನ್ನು ಸರಿಯಾಗಿ ನುಡಿಸುವುದಿಲ್ಲವೆಂದು ಅವನನ್ನು ಟೀಕಿಸಲಾಗುತ್ತಿತ್ತು. ಅವನ ಟೀಚರುಗಳೂ ಅವನೊಬ್ಬ “ನಿರಾಶಾದಾಯಕ ಕಂಪೋಸರ್" ಎಂದು ಹೇಳಿದ್ದರು. ಅಂತೂ ಬೀತೋವನನ್ನು ಹೊಗಳುವವರು ಅಥವಾ ಅವನಿಗೆ ಪ್ರೋತ್ಸಾಹ ನೀಡುವವರು ಯಾರೂ ಇರಲಿಲ್ಲ.
ಆದರೆ ಬೀತೋವನ್ ನಿರಾಶನಾಗಲಿಲ್ಲ. ಅವನು ಸಂಗೀತದಲ್ಲಿ ಸತತವಾಗಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದ. ಕೊನೆಗೂ ಅವನು ಸಾಂಪ್ರದಾಯಿಕ ಸಂಗೀತಕ್ಕೆ ಹೊಸ ಆಯಾಮವೊಂದನ್ನು ನೀಡುವ ಸಾಧನೆ ಮಾಡಿದ. ತನ್ನ ಸಾಧನೆಯ ಬಗ್ಗೆ ಅವನು ಹೀಗೆನ್ನುತ್ತಿದ್ದ, “ಯಾವಾಗಲೂ ಸಂಗೀತ ಕಂಪೋಸ್ ಮಾಡುವಾಗ ನನ್ನ ಮನಸ್ಸಿನಲ್ಲೊಂದು ಚಿತ್ರವಿರುತ್ತದೆ. ನಾನು ಆ ಚಿತ್ರವನ್ನು ಅನುಸರಿಸಿ ಸಂಗೀತ ನುಡಿಸುತ್ತೇನೆ.” ಬೀತೋವನ್ ತನ್ನ ಸಂಗೀತ ಸಾಧನೆಯ ಉತ್ತುಂಗದಲ್ಲಿ ಇದ್ದಾಗ, ಅವನಿಗೆ ಆಘಾತ. ಅವನು ತನ್ನ ಶ್ರವಣ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡ. ಆದರೂ ಬೀತೋವನ್ ತನ್ನ ಸಾಧನಾಪಥದಲ್ಲಿ ಮುಂದುವರಿದ; ಐದು ಜಗತ್ಪ್ರಸಿದ್ಧ ಸಿಂಫೋನಿಗಳನ್ನು ಅವನು ಕಂಪೋಸ್ ಮಾಡಿದ.
ಇಷ್ಟಾದರೂ ಅವನ ಟೀಕಾಕಾರರು ಸುಮ್ಮನಾಗಲಿಲ್ಲ. "ಆ ಸಿಂಫೋನಿಗಳು ಅಸಾಂಪ್ರದಾಯಿಕ” ಎಂಬುದವರ ಟೀಕೆ. ಬೀತೋವನ್ ಇದರಿಂದ ವಿಚಲಿತನಾಗಲಿಲ್ಲ. ಯಾಕೆಂದರೆ ಅವನಿಗೆ ತನ್ನ ಸಿಂಫೋನಿಗಳ ನಾವೀನ್ಯದಲ್ಲಿ ನಂಬಿಕೆಯಿತ್ತು. ಕೊನೆಗೂ ಅವನು ಜಗದ್ವಿಖ್ಯಾತ ಕ್ಲಾಸಿಕಲ್ ಸಂಗೀತದ ಕಂಪೋಸರ್ ಎಂದು ಗೌರವಿಸಲ್ಪಟ್ಟ. ಪಾಶ್ಚಾತ್ಯ ಕ್ಲಾಸಿಕಲ್ ಸಂಗೀತವನ್ನು ರೋಮ್ಯಾಂಟಿಕ್ ಸಂಗೀತವಾಗಿ ಪರಿವರ್ತಿಸುವ ಮಹಾನ್ ಸಾಧನೆಯಲ್ಲಿ ಲುಡ್ವಿಗ್ ವ್ಯಾನ್ ಬೀತೋವನ್ ಪಾತ್ರಕ್ಕೆ ಸರಿಸಾಟಿಯಿಲ್ಲ.