19. ಕಣಜದ ಹುಳದಿಂದ ಸ್ಫೂರ್ತಿ
ಸುಧೀರ ದುರ್ಬಲ ಹುಡುಗ. ಹಿರಿಯ ವಿದ್ಯಾರ್ಥಿಗಳು ಅವನಿಗೆ ಹೊಡೆದು, ಅವನು ತಂದಿದ್ದ ಬುತ್ತಿ ತಿನ್ನುತ್ತಿದ್ದರು. ಅವರ ವಿರುದ್ಧ ದೂರ ಕೊಡಬೇಕೆಂದು ಸುಧೀರ ಹೊರಟಾಗ, ಹಿರಿಯ ವಿದ್ಯಾರ್ಥಿಗಳು ಅವನನ್ನು ಹೆದರಿಸಿದರು. “ನೀನೇನಾದರೂ ನಮ್ಮ ವಿಷಯದಲ್ಲಿ ದೂರು ಕೊಟ್ಟರೆ, ನಿನಗೆ ಇನ್ನಷ್ಟು ತೊಂದರೆ ಕೊಡುತ್ತೇವೆ” ಎಂದರು. ಅಸಹಾಯಕನಾದ ಸುಧೀರ ಅದೊಂದು ದಿನ ದುಃಖದಿಂದ ಉದ್ಯಾನಕ್ಕೆ ಹೋದ. ಅಲ್ಲಿನ ಬೆಂಚಿನಲ್ಲಿ ಕುಳಿತಾಗ ಅವನೊಂದು ಕಣಜದ ಹುಳವನ್ನು ನೋಡಿದ. ತಕ್ಷಣವೇ ಅವನಿಗೆ ಹೆದರಿಕೆಯಾಯಿತು. ಅನಂತರ “ಇಷ್ಟು ಸಣ್ಣ ಕಣಜದ ಹುಳ ನನ್ನಲ್ಲಿ ಯಾಕೆ ಹೆದರಿಕೆ ಹುಟ್ಟುಸುತ್ತದೆ?" ಎಂದು ಅವನು ಯೋಚಿಸಿದ.
“ಕಣಜದ ಹುಳ ಕಂಡೊಡನೆ ಅದು ಚುಚ್ಚುತ್ತದೆಂದು ಜನರು ಹೆದರುತ್ತಾರೆ. ಇದುವೇ ತನ್ನನ್ನು ರಕ್ಷಿಸಿಕೊಳ್ಳಲು ಉಪಾಯ” ಎಂದು ಸುಧೀರನಿಗೆ ಅರ್ಥವಾಯಿತು. ಮರುದಿನ ದಢಿಯ ಹುಡುಗನೊಬ್ಬ ಸುಧೀರನ ಬುತ್ತಿಯನ್ನು ಕಿತ್ತುಕೊಂಡು ತಿಂದ. ಆದರೆ, ಆ ದಿನ ಸುಧೀರ ತಂದಿದ್ದ ತಿನಿಸು ಭಾರೀ ಖಾರವಾಗಿತ್ತು. ಅದನ್ನು ತಿಂದ ದಢಿಯ ನೀರು ಕುಡಿಯಲಿಕ್ಕಾಗಿ ಓಡಿದ. ಅನಂತರ, ಸುಧೀರನ ಬುತ್ತಿಯನ್ನು ಯಾರೂ ಮುಟ್ಟಲಿಲ್ಲ. ಇನ್ನೊಮ್ಮೆ ದಾಂಢಿಗ ಹುಡುಗನೊಬ್ಬ ಸುಧೀರನಿಗೆ ಹೊಡೆಯಲು ಬಂದ. ಸುಧೀರ ಗಂಭೀರ ಧ್ವನಿಯಲ್ಲಿ ಅವನಿಗೆ ಹೇಳಿದ, "ನಾನು ಈಗಾಗಲೇ ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ನೀನೇನಾದರೂ ನನ್ನ ಮೈಮುಟ್ಟಿದರೆ ಅವರಿಗೆ ನಾನು ಫೋನ್ ಮಾಡ್ತೇನೆ. ಅವರು ಬಂದು ನಿನ್ನ ಹೆಡೆಮುರಿ ಕಟ್ಟಿ, ಜೈಲಿಗೆ ಒಯ್ಯುತ್ತಾರೆ.” ಇದನ್ನು ಕೇಳಿ ಹೆದರಿದ ದಾಂಢಿಗ ಅಲ್ಲಿಂದ ಓಡಿ ಹೋದ. ಅಂತೂ ಕಣಜದ ಹುಳದ ಸ್ಫೂರ್ತಿಯಿಂದ ಸುಧೀರ ಆತ್ಮವಿಶ್ವಾಸ ಬೆಳೆಸಿಕೊಂಡ.