200 ದಿನಗಳು ತುಂಬಿದ ಜ್ಞಾನ ಭಿಕ್ಷಾ ಪಾದಯಾತ್ರೆಯ ಅಭಿಯಾನ…

200 ದಿನಗಳು ತುಂಬಿದ ಜ್ಞಾನ ಭಿಕ್ಷಾ ಪಾದಯಾತ್ರೆಯ ಅಭಿಯಾನ…

6000 ಕಿಲೋಮೀಟರುಗಳು, 500 ಸಂವಾದಗಳು, 15 ಜಿಲ್ಲೆಗಳು, 125 ತಾಲ್ಲೂಕುಗಳು, 1000ರಾರು ಗೆಳೆಯರುಗಳು, 1000ರಾರು ಗ್ರಾಮಗಳು, 100000ತರ ಹೆಜ್ಜೆಗಳು, 10000000ತರ ಗಿಡಮರಗಳು...

ಸಾಮಾನ್ಯನೊಬ್ಬನಿಗೆ ಈ ಸಮಾಜ ತೋರಿದ ಪ್ರೀತಿ ಆತಿಥ್ಯ ಅಭಿಮಾನ ನಿಜಕ್ಕೂ ವಿಸ್ಮಯ ಮೂಡಿಸಿದೆ. ಕೃತಜ್ಞತೆ ಸಲ್ಲಿಸಲು ಪದಗಳಿಗೆ ಹುಡುಕಾಡಬೇಕಾಗಿದೆ. ನವೆಂಬರ್ ಒಂದು 2020 ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ ಪ್ರಾರಂಭವಾದ ಜ್ಞಾನ ಭಿಕ್ಷಾ ಪಾದಯಾತ್ರೆ. ನಿನ್ನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿಗೆ ತಲುಪಿದ ಹಾದಿ ಒಂದು ರೋಚಕ ಅನುಭವ.

ಯಾರಿಂದಲೂ ಹಣ ಪಡೆಯದೆ, ಯಾವುದೇ ಸ್ವಂತ ಹಣ ಖರ್ಚು ಮಾಡದೆ, ಯಾವುದೇ ವಾಹನ ಉಪಯೋಗಿಸದೆ, ಯಾವುದೇ ಜಾತಿ ಧರ್ಮ ಭಾಷೆ ಪಕ್ಷ ಸಿದ್ಧಾಂತ ಪಂಥ ಬಾವುಟಗಳ ಮಿತಿಗೆ ಒಳಪಡದೆ ನಿಜ ಮನುಷ್ಯರ ಹುಡುಕಾಟದ ಈ ಜ್ಞಾನ ಭಿಕ್ಷಾ ಪಾದಯಾತ್ರೆ ಕೇವಲ ಓದುಗ ಗೆಳೆಯರ ಸಹಕಾರದಿಂದ " ಮಾನವೀಯ ಮೌಲ್ಯಗಳ ಪುನರುತ್ಥಾನದ '' ಬಗ್ಗೆ ಒಂದು ಸಣ್ಣ ಮಟ್ಟದ ಚರ್ಚೆ ಹುಟ್ಟುಹಾಕುವಲ್ಲಿ ಸಣ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇನೆ.

ಇಂದಿನ ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯ ಸಂದರ್ಭದಲ್ಲಿ, ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮುಕ್ತತೆ ಮತ್ತು ವೇದಿಕೆ ನಿರ್ಮಾಣವಾಗಿರುವ ಸನ್ನಿವೇಶದಲ್ಲಿ, ವ್ಯವಸ್ಥೆಯ ಸತ್ಯ ಮತ್ತು ವಾಸ್ತವವನ್ನೇ ಬುಡಮೇಲು ಮಾಡುವ  ಕಪೋಲ ಕಲ್ಪಿತ ಸುಳ್ಳುಗಳನ್ನೇ ನಿಜವೆಂದು ಬಿಂಬಿಸುವ ಏಜೆಂಟ್ ಗಳು ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ, ಮನುಷ್ಯನ ಮುಖವಾಡಗಳೇ ಸಹಜ ಎನ್ನುವಷ್ಟು ವಿಜೃಂಭಿಸುತ್ತಿರುವಾಗ, ಅನೇಕ ಸೈದ್ಧಾಂತಿಕ ತಾಕಲಾಟಗಳ ನಡುವೆ ನಿಜ ಮನುಷ್ಯರ ಹುಡುಕಾಟ ಒಂದು ದೊಡ್ಡ ಸವಾಲು.

ಒಂದು ಸಣ್ಣ  ಬರಹ ಅಥವಾ ಮಾತು ಅಥವಾ ಫೋಟೋ ಅಥವಾ ಸ್ನೇಹ ಯಾವುದೇ ಇರಲಿ ಒಂದು ಸಿದ್ದಾಂತ ಅಥವಾ ಪಕ್ಷ ಅಥವಾ ಧರ್ಮದ ಜನರೊಂದಿಗೆ ಮಾತನಾಡಿದ ಮಾತ್ರಕ್ಕೆ ಅದರೊಂದಿಗೆ ಜೋಡಿಸಿ ಇಡೀ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಿ ವಿಕೃತ ಆನಂದ ಪಡುವ, ನಮ್ಮ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನಗಳ ನಡುವೆ ಎಲ್ಲರ ನಡುವೆಯೂ ಕನಿಷ್ಠ ಮಟ್ಟದ ಮಾನವೀಯ ಮೌಲ್ಯಗಳನ್ನು ಬಿತ್ತುವುದು ಸಹ ಮತ್ತೊಂದು ಸವಾಲು.

ಎಡ ಬಲ ಪಂಥಗಳ ನಡುವೆ ಸಮನ್ವಯವೇ ಸಾಧ್ಯವಿಲ್ಲ ಎನ್ನುವ ಕಠೋರ ಉಗ್ರವಾದಿಗಳ ನಡುವೆ ನುಗ್ಗಿ ಮಾನವೀಯತೆಯ ಮುಂದೆ ಈ ಪಂಥಗಳು ಅತ್ಯಂತ ಕ್ಷುಲ್ಲಕ, ಈ‌ ಧರ್ಮಗಳು ಸಮಾಜವನ್ನು ಒಡೆಯುತ್ತವೆ, ಈ ಪಕ್ಷಗಳು ದೇಶವನ್ನು ನಾಶ ಮಾಡುತ್ತವೆ, ಈ‌ ಸಿದ್ದಾಂತಗಳು ಅಭಿವೃದ್ಧಿಯನ್ನು ಕುಂಠಿತ ಗೊಳಿಸಿ ಜನರ ಜೀವನ ಮಟ್ಟ ಕುಸಿಯುವಂತೆ ಮಾಡಿ ಜನರ ನೆಮ್ಮದಿ ಹಾಳು ಮಾಡುತ್ತವೆ ಎಂದು ಹೇಳುತ್ತಾ ಎಲ್ಲರ ನಡುವೆ ಸಮನ್ವಯ ಸಾಧಿಸುವುದು ತುಂಬಾ ತುಂಬಾ ಕಷ್ಟದ ಕೆಲಸ. ಟೋಪಿ ಹಾಕಿದ ಮುಸ್ಲಿಂ, ನಾಮ ಹಾಕಿದ ಹಿಂದೂ, ಕ್ರಾಸ್ ಹಾಕಿದ ಕ್ರಿಶ್ಚಿಯನ್, ಮಾಂಸ ತಿನ್ನುವ ಇನ್ನೊಬ್ಬರು, ಮಾಂಸ ತಿನ್ನದ ಇನ್ನೊಬ್ಬರು  ಎಲ್ಲರೂ ನಾವೇ ಶ್ರೇಷ್ಠ ಎನ್ನುವ ಮನಸ್ಥಿತಿ ರಕ್ತಗತವಾಗಿರುವಾಗ ವಿಶ್ವ ಮಾನವ ಪ್ರಜ್ಞೆ ಮತ್ತು ಭಾರತೀಯ ನಾಗರಿಕ ಪ್ರಜ್ಞೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಕಠಿಣ ಪರಿಶ್ರಮ.

ಇವರನ್ನು ಅವರು ನಂಬುವುದಿಲ್ಲ, ಅವರನ್ನು ಇವರು ನಂಬುವುದಿಲ್ಲ, ಇದನ್ನು ಸಮನ್ವಯಗೊಳಿಸಲು ಪ್ರಯತ್ನಿಸುವವರನ್ನು ಯಾರೂ ನಂಬುವುದಿಲ್ಲ. ಆದರೆ ಮಾನವೀಯ ಮೌಲ್ಯಗಳಲ್ಲಿ  ಶುದ್ಧತೆ ಸರಳತೆ ಒಳ್ಳೆಯತನ ಬದುಕನ್ನು ಸಾರ್ಥಕತೆಯೆಡಗೆ ಕೊಂಡೊಯ್ಯುವ ಒಂದು ಅಂತರ್ಗತ ಶಕ್ತಿ ಇದೆ. ಮಾನವೀಯ ಮೌಲ್ಯಗಳು ವಿನಾಶದ ಅಂಚಿಗೆ ತಲುಪಿರುವ ಈ ಸಂದರ್ಭದಲ್ಲಿ, ಕೊರೋನಾ ಎಂಬ ಸಾಂಕ್ರಾಮಿಕ ರೋಗ ಬದುಕಿನ ನಶ್ವರತೆಯ ಬಗ್ಗೆ ನೆನಪಿಸುತ್ತಿರುವ ಈ ಸನ್ನಿವೇಶದಲ್ಲಿ ನಿಧಾನವಾಗಿ ನಿಜ ಮಾನವರು ಈ ಸಮಾಜದ ಮುಖ್ಯ ವಾಹಿನಿಗೆ ಬರುವ ವಾತಾವರಣ ಸೃಷ್ಟಿಯಾಗುತ್ತಿದೆ. ಶ್ರಮ ಜೀವಿಗಳು ಮತ್ತೆ ಮುನ್ನಲೆಗೆ ಬರಬಹುದು. ಪ್ರಾಮಾಣಿಕರು ಮತ್ತೆ ಪ್ರಾಮುಖ್ಯತೆ ಪಡೆಯಬಹುದು. ಒಳ್ಳೆಯವರು ಮತ್ತೆ ಮುನ್ನಡೆಯಬಹುದು. ಆ ಆಶಯದೊಂದಿಗೆ ಈ ಕಾಲ್ನಡಿಗೆ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿದೆ. 

ವೈಯಕ್ತಿಕವಾಗಿ ಆರ್ಥಿಕ ಕೌಟುಂಬಿಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಏನೇ ಇರಲಿ ಸಮಾಜದಲ್ಲಿ ಮತ್ತೆ ಮಾನವೀಯ ಮೌಲ್ಯಗಳು ಪುನರ್ ಸ್ಥಾಪಿಸುವ ಕನಸಿನೊಂದಿಗೆ ಈ ಪ್ರಯಾಣ ನಿರಂತರವಾಗಿ ಮುಂದುವರಿಯುತ್ತದೆ. ಸಾಕಷ್ಟು ಕಷ್ಟ ನೋವು ಅವಮಾನಗಳು ಆಗುತ್ತಿದ್ದರೂ ಅದನ್ನು ನುಂಗಿಕೊಂಡು ಮುನ್ನಡೆಯುವ ಆತ್ಮವಿಶ್ವಾಸ ಈ ಪಯಣ ನೀಡಿದೆ. ಜನರ ಮನಸ್ಸಿನಾಳದ ಒಳ್ಳೆಯತನ ಜಾಗೃತ ಗೊಳಿಸುವ ಭರವಸೆ ಈ ಯಾತ್ರೆ ನೀಡಿದೆ. ಇನ್ನೂ ಸಾಕಷ್ಟು ದೂರ ಚಲಿಸಬೇಕಿದೆ. 

ಇದು ಇನ್ನೂ ತಾಯಿ ಹೊಟ್ಟೆಯೊಳಗಿನ ಗರ್ಭ ಮಾತ್ರ. ಈಗಲೇ ಏನನ್ನೂ ಹೇಳಲಾಗದು. ಎಲ್ಲಕ್ಕೂ ಸಮಯವೇ ಉತ್ತರಿಸುತ್ತದೆ....

  • ಜ್ಞಾನ ಭಿಕ್ಷಾ ಪಾದಯಾತ್ರೆಯ 200 ನೆಯ ದಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ವಾಸ್ತವ್ಯ.

 -ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ: ಪಾದಯಾತ್ರೆಗೆ 200 ದಿನ ತುಂಬಿದ ನೆನಪಿಗೆ ಸಮಾನ ಮನಸ್ಕ ಗೆಳೆಯರು ಗಿಡ ನೆಟ್ಟು  ಸಂಭ್ರಮಿಸಿದರು.