2000 ಟನ್ ತುಳಸಿ ಬೆಳೆಸುವ ರೈತರು

2000 ಟನ್ ತುಳಸಿ ಬೆಳೆಸುವ ರೈತರು

ಹಲವು ವರುಷಗಳ ಮುನ್ನ ಆರ್ಗಾನಿಕ್ ಇಂಡಿಯಾ ಕಂಪೆನಿಯವರು "ತುಳಸಿ ಬೆಳೆಸುತ್ತೀರಾ?” ಎಂದು ಕೇಳಿದಾಗ ಸೈ ಎಂದವರು ವೃದ್ಧ ಕೈಲಾಸ್‌ನಾಥ್ ಸಿಂಗ್. ಅವರು ಒಪ್ಪಿಕೊಳ್ಳಲು ಕಾರಣ ಎಲ್ಲೆಡೆಯೂ ತುಳಸಿ ಸೊಂಪಾಗಿ ಬೆಳೆಯುತ್ತಿದ್ದದ್ದು. ಹಾಗೆಯೇ ತನ್ನ ಹೊಲದ ಕಡಿಮೆ ಇಳುವರಿಯಿಂದಾಗಿ ಸಾಲದಲ್ಲಿ ಮುಳುಗಿದ್ದ ಅವರಿಗೆ, ಅದರಿಂದ ಪಾರಾಗಲು ಇದೊಂದು ದಾರಿಯಾಗಬಹುದು ಎಂದನಿಸಿತ್ತು. ಅವರ ನಿರೀಕ್ಷೆ ನಿಜವಾಯಿತು.

ವರುಷದಿಂದ ವರುಷಕ್ಕೆ ತುಳಸಿ ಕೃಷಿಯಿಂದಾಗಿ ಕೈಲಾಸ್‌ನಾಥ್‌ರ ಆದಾಯ ಹೆಚ್ಚಿದಂತೆ, ತುಳಸಿ ಕೃಷಿ ಕೈಗೆತ್ತಿಕೊಳ್ಳುವ ರೈತರ ಸಂಖ್ಯೆಯೂ ಅವರ ಪ್ರದೇಶದಲ್ಲಿ ಹೆಚ್ಚಿತು. ಉತ್ತರ ಪ್ರದೇಶದ ಪೂರ್ವ ಭಾಗದ ಬುಂದೇಲ್‌ಖಂಡ, ಅಜಮ್‌ಘರ್ ಮತ್ತು ಮಾವ್ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳು. ಈಗ ಅಲ್ಲಿ ತುಳಸಿ ಬೆಳೆಸುವ ರೈತರ ಸಂಖ್ಯೆ 10,000. ಒಂದು ಸಾವಿರ ಎಕರೆಗಳಲ್ಲಿ ಅವರು ಬೆಳೆಸುವ ತುಳಸಿಯನ್ನು ಒಣಗಿಸಿದಾಗ ಅದರ ತೂಕ 2,000 ಟನ್!

ಲಕ್ನೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಆರ್ಗಾನಿಕ್ ಇಂಡಿಯಾ ರೈತರು ಬೆಳೆಸುವ ತುಳಸಿಯ ಕೃಷಿ ವೆಚ್ಚ ಭರಿಸುತ್ತದೆ. ರೈತರ ಬೆಳೆ ನಷ್ಟ ಮತ್ತು ಬೆಲೆ ಏರಿಳಿತದ ರಿಸ್ಕನ್ನೂ ವಹಿಸಿಕೊಳ್ಳುತ್ತದೆ ಈ ಕಂಪೆನಿ. ಹಾಗಾಗಿ ರೈತರು ತಮ್ಮ ಹೊಲಗಳಲ್ಲಿ ತುಳಸಿ ಬೆಳೆಸಿ, ಕೊಯ್ಲು ಮಾಡಿ ಕಂಪೆನಿಗೆ ಒಪ್ಪಿಸಿದರಾಯಿತು. ಕಳೆದ ಎರಡು ದಶಕಗಳಲ್ಲಿ ಹವಾಮಾನ ವೈಪರೀತ್ಯ ಅಥವಾ ಕೀಟ ದಾಳಿಯಿಂದಾಗಿ ಇಳುವರಿ ಕುಸಿದಾಗಲೂ ಈ ಕಂಪೆನಿ ರೈತರ ಕೈಬಿಟ್ಟಿಲ್ಲ; ರೈತರು ತುಳಸಿ ಬೆಳೆಸಿದ ಹೊಲದ ವಿಸ್ತೀರ್ಣಕ್ಕೆ ಅನುಗುಣವಾಗಿ ಹಣ ಪಾವತಿಸಿದೆ.

ಆರ್ಗಾನಿಕ್ ಇಂಡಿಯಾ ರೈತರು ಬೆಳೆಸಿದ ತುಳಸಿಗೆ ಮಾರುಕಟ್ಟೆ ಬೆಲೆಗಿಂತ ಎಂಟು ಪಟ್ಟು ಅಧಿಕ ಬೆಲೆ ಪಾವತಿಸಿದೆ. “ಇದರಿಂದ ನಮಗೆ ಲಾಭವೇ ಆಗಿದೆ. ಯಾಕೆಂದರೆ ಇಲ್ಲಿನ ರೈತರು ನಿಜಕ್ಕೂ ಸಾವಯವ ವಿಧಾನದಲ್ಲಿ ತುಳಸಿ ಬೆಳೆಸುತ್ತಿದ್ದಾರೆ. ಇದರ ಗುಣಮಟ್ಟ ಅಂತರರಾಷ್ಟ್ರೀಯ ಮಾರುಕಟ್ಟೆಯ ಗುಣಮಟ್ಟಕ್ಕೆ ಚೆನ್ನಾಗಿ ಹೊಂದಿಕೆಯಾಗುತ್ತಿದೆ” ಎನ್ನುತ್ತಾರೆ ಕಂಪೆನಿಯ ಮೆನೇಜಿಂಗ್ ಡೈರೆಕ್ಟರ್ ಕೃಷ್ಣನ್ ಗುಪ್ತಾ.

ಅಂದ ಹಾಗೆ ರೈತರ ತುಳಸಿ ಕೃಷಿಯ ವೆಚ್ಚವೂ ಕಡಿಮೆಯಾಗುತ್ತಾ ಇದೆ. ಯಾಕೆಂದರೆ ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳಿಗಾಗಿ ಅವರೇನೂ ವೆಚ್ಚ ಮಾಡುತ್ತಿಲ್ಲ. ಆರ್ಗಾನಿಕ್ ಇಂಡಿಯಾ ಕಂಪೆನಿಯಿಂದಲೇ ಅವರಿಗೆ ಅಗತ್ಯವಾದ ಸಾವಯವ ಗೊಬ್ಬರಗಳ ಪೂರೈಕೆ. ತಮ್ಮ ಫಸಲಿನ ಮಾರಾಟದ ಬಗ್ಗೆಯೂ ಅವರು ಚಿಂತಿಸಬೇಕಾಗಿಲ್ಲ. ಕಂಪೆನಿಯ ಪ್ರತಿನಿಧಿಗಳೇ ರೈತರ ಹೊಲಗಳಿಗೆ ಬಂದು ಫಸಲನ್ನು ಒಯ್ಯುತ್ತಾರೆ. ಬೆಳೆ ಹಾಗೂ ಫಸಲಿನ ಬಗ್ಗೆ ರೈತರಿಗೆ ನಿಶ್ಚಿಂತೆ; ಯಾಕೆಂದರೆ ಆ ಕಂಪೆನಿಯೇ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ.

ಅಲ್ಲಿ ತುಳಸಿ ಕೃಷಿಯ ಹಂಗಾಮು ಜನವರಿಯಿಂದ ಜೂನ್ ತಿಂಗಳು. ಈ ಅವಧಿಯಲ್ಲಿ ಆರ್ಗಾನಿಕ್ ಇಂಡಿಯಾದ ಕ್ಷೇತ್ರ ಸಿಬ್ಬಂದಿ ಮತ್ತು ತಾಂತ್ರಿಕ ಅಧಿಕಾರಿಗಳಿಂದ ಅತ್ಯುತ್ತಮ ಇಳುವರಿ ಪಡೆಯಲು ರೈತರಿಗೆ ಮಾರ್ಗದರ್ಶನ.

ತುಳಸಿ ಬೆಳೆಗಾರರು ಮತ್ತು ಆರ್ಗಾನಿಕ್ ಇಂಡಿಯಾದ ಬಾಂಧವ್ಯದ ಫಲವಾಗಿ ಪ್ರತಿ ವರುಷ "ತುಳಸಿ ಮಹೋತ್ಸವ” ಆಚರಿಸಲಾಗುತ್ತಿದೆ - ಉತ್ತರಪ್ರದೇಶದ ಅಜಮ್‌ಘರ್ ಜಿಲ್ಲೆಯಲ್ಲಿ. ಚಳಿಗಾಲದ ಆರಂಭದಲ್ಲಿ ಇದರ ಆಚರಣೆ. ತುಳಸಿ ಬೆಳೆಗಾರರ ಸನ್ಮಾನ ಮತ್ತು ತುಳಸಿಯ ಪೂಜೆ ಇದರ ವಿಶೇಷತೆಗಳು.

ತುಳಸಿ ಭಾರತೀಯರಿಗೆ ಪೂಜ್ಯ ಸಸ್ಯ. ಎಲ್ಲ ಮನೆಗಳಲ್ಲಿ ತುಳಸಿ ಕಟ್ಟೆ ಇದ್ದೇ ಇರುತ್ತದೆ. ದೇವರ ಪೂಜೆಗಾಗಿ ಹಾಗೂ ಮನೆಯೆದುರು ಪೂಜಿಸಲಿಕ್ಕಾಗಿ ಬೆಳೆಸುವ ತುಳಸಿಯ ಸಸ್ಯಶಾಸ್ತ್ರೀಯ ಹೆಸರು ಓಸಿಮಮ್ ಟೆನುಯಿಫ್ಲೋರಮ್. ಕರ್ಪೂರ ತುಳಸಿ ಇನ್ನೊಂದು ಜನಪ್ರಿಯ ಪ್ರಭೇದ. ನೇರಳೆ ಬಣ್ಣದೆಲೆಗಳ ವಿಷ್ಣು ತುಳಸಿ ಮತ್ತು ಎತ್ತರಕ್ಕೆ ಬೆಳೆಯುವ ವನತುಳಸಿ ಅಥವಾ ಲವಂಗ ತುಳಸಿ (ಇದರ ಎಲೆಗಳಿಗೆ ಲವಂಗದ ಪರಿಮಳ) ಇನ್ನೆರಡು ಪ್ರಭೇದಗಳು.

ತುಳಸಿಯ ರೋಗನಿರೋಧಕ ಮತ್ತು ರೋಗಚಿಕಿತ್ಸಾ ಗುಣಗಳು ಅಗಾಧ. ಜ್ವರ, ಕೆಮ್ಮು, ಶೀತ, ವಾಂತಿ, ಡಯಾರಿಯಾ, ತಲೆನೋವು, ಮೂಗುಸುರಿತ, ಹೊಟ್ಟೆಹುಳ ಬಾಧೆ, ಬೊಕ್ಕೆಗಳು, ಚರ್ಮರೋಗಗಳು, ಸ್ನಾಯುನೋವು, ಹಸಿವಿಲ್ಲದಿರುವಿಕೆ, ಅಜೀರ್ಣ, ಕೆರೆಯುವ ಗಂಟಲು, ಗಾಯಗಳು, ರುಮಾಟಿಸಮ್ ಇತ್ಯಾದಿಗಳ ಚಿಕಿತ್ಸೆಗೆ ತುಳಸಿ ಪರಿಣಾಮಕಾರಿ. ಆದ್ದರಿಂದಲೇ ವಿದೇಶಗಳಲ್ಲಿಯೂ ತುಳಸಿಗೆ ಭಾರೀ ಬೇಡಿಕೆ.

ಉತ್ತರಪ್ರದೇಶದ ಪೂರ್ವ ಭಾಗದ ತುಳಸಿ ಕೃಷಿಕರಿಗೆ ಸದ್ಯ ಕೈತುಂಬ ಕೆಲಸ. ಯಾಕೆಂದರೆ ಆಗ್ರಾದ ತಾಜಮಹಲಿನ ರಕ್ಷಣೆಗಾಗಿ ಹತ್ತು ಲಕ್ಷ ತುಳಸಿ ಸಸಿಗಳನ್ನು ಅದರ ಸುತ್ತಲೂ ನೆಡಲಾಗುತ್ತಿದೆ - ವಾಯುಮಾಲಿನ್ಯದಿಂದಾಗಿ ಬಣ್ಣಗೆಡುತ್ತಿರುವ ತಾಜಮಹಲಿನ ಹಾಲುಗಲ್ಲುಗಳ ಬಿಳಿಬಣ್ಣ ಉಳಿಸಲಿಕ್ಕಾಗಿ. ಅಷ್ಟು ಸಸಿಗಳನ್ನು ಬೆಳೆದು ಪೂರೈಸುವ ದೊಡ್ಡ ಕೆಲಸ ಈ ತುಳಸಿ ಬೆಳೆಗಾರರದ್ದು.

ತುಳಸಿಯಂತಹ ನೂರಾರು ಔಷಧೀಯ ಸಸ್ಯಗಳ ಖಜಾನೆ ನಮ್ಮ ಭಾರತ. ಇವುಗಳ ಕೃಷಿಯಿಂದಾಗಿ ಬೆಳೆಗಾರರ ಭಾಗ್ಯದ ಬಾಗಿಲು ತೆರೆಯಲೆಂದು ಹಾರೈಸೋಣ.