2007:ಸಿಂಹಾವಲೋಕನ
(ಇ-ಲೋಕ-55)(1/1/2008)
ಚಂದ್ರಯಾನದತ್ತ ಇಸ್ರೋ ದೃಷ್ಟಿ
ಇಸ್ರೋದ ಪಿಎಸ್‍ಎಲ್‍ವಿ ರಾಕೆಟ್ ಕಾರ್ಟೋಸ್ಯಾಟ್ ಸಹಿತ ನಾಲ್ಕು ಉಪ್ಗ್ರಹಗಳನ್ನು ಯಶಸ್ವಿಯಾಗಿ ಉಡ್ಡಯಿಸಿ ವರ್ಷಾರಂಭದಲ್ಲೇ ಸುದ್ದಿ ಮಾಡಿತು.ಇನ್ಸಾಟ್-4B ಫ್ರೆಂಚ್ ಗಯಾನಾದಿಂದ ಏರಿಯಾನ್ ರಾಕೆಟ್ ಮೂಲಕ ಉಡ್ಡಯನ.ಇಟೆಲಿಯ ಅಜೈಲ್ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಮುಟ್ಟಿಸಲು ಇಸ್ರೋವಿನ ಪಿಎಸ್‍ಎಲ್‍ವಿ ಉಪಗ್ರಹ ಎಪ್ರಿಲ್‍ನಲ್ಲಿ ಉಡಾವಣೆ ಮಾಡಿತು.ಚಂದ್ರನ ನೆಲದಲ್ಲಿಳಿದು ಮಾಹಿತಿ ಸಂಗ್ರಹಿಸಿ,ಭೂಮಿಗೆ ಕಳುಹಿಸಿ,ಭೂಮಿಗೆ ವಾಪಸ್ಸಾಗುವ ಮಾನವ ರಹಿತ ಯಾನದತ್ತ ಇಸ್ರೋದ ಗಮನ ಕೇಂದ್ರೀಕರಿಸಿದೆ.
ಭಾರತದ ಸೂಪರ್ ಕಂಪ್ಯೂಟರಿಗೆ ಟಾಪ್ ಟೆನ್ ಸೂಪರ್ ಕಂಪ್ಯೂಟರುಗಳಲ್ಲಿ ಸ್ಥಾನ
ಪುಣೆಯ ಕಂಪ್ಯುಟೇಶನಲ್ ರಿಸರ್ಚ್ ಲ್ಯಾಬ್ 117.9 ಟೆರಾಫ್ಲಾಪ್ ಸಂಖ್ಯೆಯ ಲೆಕ್ಕಾಚಾರಗಳನ್ನು ಮಾಡಬಲ್ಲ ಸೂಪರ್ ಕಂಪ್ಯೂಟರನ್ನು ತಯಾರಿಸಿ ಸುದ್ದಿ ಮಾಡಿದ್ದು ಕಳೆದ ತಿಂಗಳು.ಇದನ್ನು ಅಭಿವೃದ್ಧಿ ಪಡಿಸಲು ಇಂಟೆಲ್‍ನ ಸಂಸ್ಕಾರಕಗಳನ್ನು ಬಳಸಲಾಗಿದೆ. ಹ್ಯುಲೆಟ್ ಪ್ಯಕರ್ಡ್ ಕಂಪೆನಿಯು ಒದಗಿಸಿದ ಕಂಪ್ಯೂಟರ್ ವ್ಯವಸ್ಥೆಯನ್ನಿದರಲ್ಲಿ ಬಳಸಲಾಗಿದೆ.
ಟಿವಿ ಧಾರಾವಾಹಿಗಳು ಅಂತರ್ಜಾಲದಲ್ಲಿ
ಈ ವರ್ಷ ಎನ್‍ಬಿಸಿಯಂತಹ ಟಿವಿ ಕಂಪೆನಿಗಳು ಅಂತರ್ಜಾಲದ ಮೂಲಕ ತಮ್ಮ ಕೆಲವು ಜನಪ್ರಿಯ ಧಾರಾವಾಹಿಗಳನ್ನು ಉಚಿತವಾಗಿ ಒದಗಿಸಲು ಆರಂಭಿಸಿದುವು.ಕೆಲ ದೈನಿಕ ಧಾರಾವಾಹಿಗಳ ಎಲ್ಲಾ ಭಾಗಗಳೂ ಅಂತರ್ಜಾಲದಲ್ಲಿ ಲಭ್ಯವಾಗಿ,ಪ್ರಸಾರ ಸಮಯದಲ್ಲಿ ಟಿವಿ ನೋಡಲಾಗದವರು ತಮಗೆ ಬೇಕೆನಿಸಿದ ಹೊತ್ತು ಅವನ್ನು ನೋಡುವಂತ ಅನುಕೂಲತೆ ಲಭ್ಯವಾಯಿತು.ಧಾರಾವಾಹಿಗಳನ್ನು ನಿರ್ಮಿಸಿದವರ ಜತೆ ಈ ಹೊಸ ಮಾಧ್ಯಮದಿಂದ ಬಂದ ಲಾಭವನ್ನು ಹಂಚಿಕೊಳ್ಳಲು ನಿರಾಕರಿಸಿದ ಟಿವಿ ಕಂಪೆನಿಗಳು ಹೊಸ ವಿವಾದಕ್ಕೂ ಕಾರಣವಾದುವು.
ಐಪಾಡ್ ಮಾಯಾಜಾಲ
ಸಂಗೀತಪ್ರಿಯರಿಗೆ ಸಂಗೀತ ಮುದ್ರಿಕೆಗಳ ಸಂಗ್ರಹವನ್ನು ಅಂಗೈಯಗಲದ ಸಾಧನದಲ್ಲಿ ಒದಗಿಸಿ,ಜನರ ಮನಗೆದ್ದ ತಂತ್ರಜ್ಞಾನವಾಗಿ ಐಪಾಡ್ ಹೆಸರು ಮಾಡಿತು.ಈ ವರ್ಷದ ಮಧ್ಯ ಭಾಗದಲ್ಲಿ ಏಪಲ್ ಕಂಪೆನಿಯು ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.ಮೊಬೈಲ್ ಹ್ಯಾಂಡ್‍ಸೆಟ್‍ನಂತೆಯೂ ಬಳಕೆಯಾಗಬಲ್ಲ ಐಫೋನ್ ಅಮೆರಿಕಾದ ಸೀಮಿತ ಮಾರುಕಟ್ಟೆಗೆ ಮಾತ್ರಾ ಉಪಯುಕ್ತವಾದರೂ,ನಾಲ್ಕು ಗಿಗಾಬೈಟು ಮತ್ತು ಎಂಟು ಗಿಗಾಬೈಟು ಸ್ಮರಣ ಸಾಮರ್ಥ್ಯವಿರುವ ಐಪಾಡ್ ವಿಶ್ವದ ಎಲ್ಲೆಡೆ ಜನಪ್ರಿಯವಾಯಿತು.ಇದನ್ನು ಹೋಲುವ ಸಾಧನವನ್ನು ಇತರ ಕಂಪೆನಿಗಳೂ ಮಾರಲಾರಂಭಿಸಿದುವು.
ಟೆರಾಬೈಟು ಸಾಮರ್ಥ್ಯದ ಹಾರ್ಡ್‍ಡಿಸ್ಕ್
ನಾವಿನ್ನೂ ಗಿಗಾಬೈಟು ಸಾಮರ್ಥ್ಯದ ಹಾರ್ಡ್‍ಡಿಸ್ಕ್ ಬಳಸುತ್ತಿರುವಂತೆಯೇ ಹಾರ್ಡ್‍ಡಿಸ್ಕ್ ತಯಾರಕರು ಟೆರಾಬೈಟು ಸಾಮರ್ಥ್ಯದ ಹಾರ್ಡ್‍ಡಿಸ್ಕ್ ತಯಾರಿಸಲು ತೊಡಗಿದ್ದಾರೆ.ಹಿಟಾಚಿ,ಸಿಗೇಟ್ ಮತ್ತು ವೆಸ್ಟೆರ್ನ್ ಡಿಜಿಟಲ್ ಕಂಪೆನಿಗಳು ಇಂತಹ ಸ್ಮರಣಕೋಶಗಳನ್ನು ತಯಾರಿಸಲಾರಂಭಿಸಿದುವು.
ಬ್ಲೂರೇಡಿಸ್ಕ್ ಮತ್ತು ಎಚ್‍ಡಿ ಡಿವಿಡಿ ಎನ್ನುವ ಎರಡು ವಿಧದ ಅಧಿಕ ಸಾಮರ್ಥ್ಯದ ಡಿಸ್ಕ್‍ಗಳು ಮಾರುಕಟ್ಟೆಯಲ್ಲಿ ಲಭ್ಯ.ಬ್ಲೂರೇಡಿಸ್ಕ್ ಇಪ್ಪತ್ತೈದು ಅಥವಾ ಐವತ್ತು ಗಿಗಾಬೈಟು ಸಾಮರ್ಥ್ಯದದ್ದಾದರೆ,ಎಚ್‍ಡಿ ಡಿವಿಡಿ ಡಿಸ್ಕ್ ಹದಿನೈದು ಅಥವ ಮೂವತ್ತು ಗಿಗಾಬೈಟು ಸಾಮರ್ಥ್ಯ ಹೊಂದಿದೆ.
ಗೂಗಲ್ ಗುಲ್ಲು
ವರ್ಷವಿಡೀ ಸುದ್ದಿಯಲ್ಲಿದ್ದ ಕಂಪೆನಿಯೆಂದರೆ ಗೂಗಲ್.ಅಂತರ್ಜಾಲ ಮೂಲಕ ಪದಸಂಸ್ಕರಣ ತಂತ್ರಾಂಶದಂತಹ ತಂತ್ರಾಂಶಗಳನ್ನು ಒದಗಿಸಿದ್ದಲ್ಲದೆ, ವಿಕಿಪೀಡಿಯ ಎನ್ನುವ ಅಂತರ್ಜಾಲ ವಿಶ್ವಕೋಶಕ್ಕೆ ಹೋಲುವ ನೋಲ್ ಎನ್ನುವ ತಾಣವನ್ನು ಆರಂಭಿಸಿದೆ.ಮೊಬೈಲ್ ಸಾಧನಕ್ಕೆ ತಂತ್ರಾಶ ಸಿದ್ಧಪಡಿಸಲು ಮುಕ್ತ ತಂತ್ರಾಂಶ ಆಂಡ್ರಾಯಿಡ್ ಎನ್ನುವ ವೇದಿಕೆಯೊದಗಿಸಿದ ಗೂಗಲ್,ನಿಸ್ತಂತು ಸ್ಪೆಕ್ಟ್ರಮ್ ಖರೀದಿಸಲೂ ನಿರ್ಧರಿಸಿದೆ.ತನ್ನ ಚಟುವಟಿಕೆಗಳಿಂದ ಹೊರಹೊಮ್ಮುವ ಅಂಗಾರಾಮ್ಲದ ಪ್ರಮಾಣವನ್ನು ಲೆಕ್ಕ ಹಾಕಿ,ಅಷ್ಟೇ ಅಂಗಾರಾಮ್ಲ ಬಿಡುಗಡೆ ಕಡಿಮೆ ಮಾಡುವ ಮರುಬಳಕೆ ಮಾಡಬಲ್ಲ ಶಕ್ತಿಮೂಲಗಳ ಸ್ಥಾಪನೆಗೆ ಕ್ರಮಕೈಗೊಳ್ಳುವ ನಿರ್ಧಾರವನ್ನೂ ಗೂಗಲ್ ಮಾಡಿದೆ.ಈ ಮೂಲಕ ಕಾರ್ಬನ್ ಶೂನ್ಯ ಸಾಧಿಸುವುದು ಕಂಪೆನಿಯ ಹೆಬ್ಬಯಕೆ.
ಹ್ಯಾಕರುಗಳು ಸುದ್ದಿಯಲ್ಲಿ
ಹ್ಯಾಕರುಗಳು ಕಂಪ್ಯೂಟರುಗಳಿಂದ ಮಾಹಿತಿ ಕದಿಯುವಂತಹ ಕಿಡಿಗೇಡಿ ಕೃತ್ಯಗಳಿಂದ ವರ್ಷವಿಡೀ ಸುದ್ದಿಯಲಿದ್ದರು.ತೊಂಭತ್ತನಾಲ್ಕು ದಶಲಕ್ಷ ಜನರ ಕ್ರೆಡಿಟ್ ಕಾರ್ಡ್ ಮಾಹಿತಿಗಳು ಹ್ಯಾಕರುಗಳ ಕೈಸೇರಿದುವು ಎಂದರೆ ಸಮಸ್ಯೆಯ ಆಳ ಮನವರಿಕೆಯಾಗಬಹುದು.ಅಂತರ್ಜಾಲದ ಕಂಪ್ಯೂಟರುಗಳನ್ನು ವಶಕ್ಕೆ ತೆಗೆದುಕೊಂಡು ಅಕೃತ್ಯಗಳನ್ನು ಎಸಗುವ ಬೋಟ್‍ಜಾಲವೆನ್ನುವ ಹೊಸ ಪೀಡೆ ವರ್ಷವಿಡೀ ಸುದ್ದಿ ಮಾಡಿತು.
*ಅಶೋಕ್‍ಕುಮಾರ್ ಎ