2012 - 2013

2012 - 2013

ಕವನ

ಎಂಥ ದಾರುಣ ಸಾವು ಕಳೆದ ವರುಷಕ್ಕೆ ;

ಬೆಲೆ ಕಟ್ಟಲಾಗುವುದೇ ಆ ಮಡಿದ ಜೀವಕ್ಕೆ?

ಬಯಸಿದರೂ ಬರದಿನ್ನು ಮರಳಿ ಜೀವ;

ಅಳಿಸುವರಾರು ಹೆತ್ತ ಕರುಳಿನ ನೋವ?

 

ಸುದ್ದಿವಾಹಿನಿಗಳಲ್ಲಿ ಅವರಿವರ ಜಟಾಪಟಿ;

ಎಲ್ಲರಿಗೂ ತಮ್ಮ ಮುಖ ತೋರಿಸುವ ಪೈಪೋಟಿ!

ಟಿ ಆರ್ ಪಿ ಹೆಚ್ಚಿಸುವ ತಮ್ಮ ಭರಾಟೆಯಲಿ;

ಎಲ್ಲ ಮರೆತಿದ್ದಾರೆ ಮನುಷ್ಯತ್ವದ ವಿಲಿವಿಲಿ.

 

ಹೇಳುವುದೆಷ್ಟು ಸುಲಭ, ಮರೆಯಿರಿ ಹಳತನ್ನು;

ತೊಳೆಯುವುದಷ್ಟು ಸುಲಭವಲ್ಲ ಮನದ ಕೊಳಕನ್ನು.

ಎಷ್ಟು ಮೋಂಬತ್ತಿಗಳ ನಡೆದರೂ ಮೆರವಣಿಗೆ;

ಬುದ್ಧಿ ತಿರುಗಬೇಕಲ್ಲವೇ ಬೆಳಕಿನೆಡೆಗೆ.

 

ಬಿಡಲಾಗದು ನಮ್ಮ ಯತ್ನ, ಮಾಡುತ್ತಲೇ ಇರಬೇಕು;

ಜೀವನದ ದಾರಿಯಲಿ ಮುಂದೆ ನಡೆಯಲೆಬೇಕು.

ಕಲ್ಲು ಮುಳ್ಳುಗಳಿರಲಿ, ಕಷ್ಟ ನಷ್ಟಗಳಿರಲಿ;

ಹೆಜ್ಜೆಗಳನಿಡುವಾಗ ಸಂಯಮ ಮುನ್ನೆಚ್ಚರವಿರಲಿ.

 

ಇದುವೇ ಜೀವ; ಇದು ಜೀವನ, ಸಾಗಬೇಕು ನೋಡು

ವಿಕೃತಿಗಳ ಬಿಟ್ಟು ಹಾಡುವೆಯಾ ಹೊಸ ಹಾಡು

ನಿನ್ನ ಸ್ವರ ಹರಡಲಿ ಎಲ್ಲೆಡೆ ಮಮತೆಯ ತಂಪು

ಆಗಷ್ಟೇ ಹೊಸ ವರುಷ ತರುವುದೆಲ್ಲೆಡೆ ಕಂಪು.

 

-ಎನ್.ಎಸ್.ರವಿಶಂಕರ್