2030 - 2040ರ ಜಗತ್ತಿನ ಮುನ್ನೋಟ: ಬೆಚ್ಚಿ ಬೀಳಿಸುವ ಬದಲಾವಣೆಗಳ ಪಕ್ಷಿನೋಟ

2030 - 2040ರ ಜಗತ್ತಿನ ಮುನ್ನೋಟ: ಬೆಚ್ಚಿ ಬೀಳಿಸುವ ಬದಲಾವಣೆಗಳ ಪಕ್ಷಿನೋಟ

ಇವತ್ತು ಹೊಸ ವರುಷ 2021ಕ್ಕೆ ಹೆಜ್ಜೆಯಿಟ್ಟಿದ್ದೇವೆ ನಾವು. ಇನ್ನು 10 - 20 ವರುಷಗಳಲ್ಲಿ ಈ ಜಗತ್ತು ಹೇಗಿದ್ದೀತು? ಒಂದಂತೂ ನಿಜ, ನಾವು ನಂಬಲಿಕ್ಕಾಗದ ಬದಲಾವಣೆಗಳು ಜಗತ್ತಿನಲ್ಲಿ ಘಟಿಸಲಿವೆ.

"ಹಾಗೆಲ್ಲ ಏನೂ ಆಗೋದಿಲ್ಲ ಬಿಡಿ” ಎನ್ನುವವರು ಎರಡು ಸಂಗತಿಗಳನ್ನು ಗಮನಿಸಬೇಕು:
1)ಕೇವಲ 40 ವರುಷಗಳ ಮುಂಚೆ, 1980ರಲ್ಲಿ “ಕೊಡಕ್" ಎಂಬ ಜಗದ್ವಿಖ್ಯಾತ ಕಂಪೆನಿಯ ವಿವಿಧ ಘಟಕಗಳು ಜಗತ್ತಿನೆಲ್ಲೆಡೆ ಇದ್ದವು. ಅವುಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಒಟ್ಟು ಸಂಖ್ಯೆ 1,70,000. ಜಗತ್ತಿನಲ್ಲಿ ಮಾರಾಟವಾಗುತ್ತಿದ್ದ ಫೋಟೋಗ್ರಾಫಿಕ್ ಫಿಲ್ಮುಗಳ ಶೇಕಡಾ 85 ಆ ಕಂಪೆನಿಯ ಉತ್ಪನ್ನಗಳೇ ಆಗಿದ್ದವು. ಎರಡೇ ದಶಕಗಳಲ್ಲಿ ಆ ಬೃಹತ್ ಕಂಪೆನಿಯ ವ್ಯವಹಾರ ಕುಸಿದು, ಅದು ದಿವಾಳಿ ಆಯಿತು! ಹೀಗಾದೀತೆಂದು ಯಾರೂ ಊಹಿಸಿರಲಿಲ್ಲ. ಇನ್ನು 5 - 10 ವರುಷಗಳಲ್ಲಿ ಹಲವು ಕಂಪೆನಿಗಳಿಗೆ “ಕೊಡಕ್" ಕಂಪೆನಿಗಾದ ಗತಿಯೇ ಆಗಲಿದೆ.

2)ಕೇವಲ ಒಂದು ವರುಷದ ಮುಂಚೆ, ಜನವರಿ 2020ರಲ್ಲಿ ಕೊವಿಡ್-19 ಎಂಬ ವೈರಸಿನ ಧಾಳಿಯಿಂದಾಗಿ ಕೋಟಿಗಟ್ಟಲೆ ಜನರಿಗೆ ಸೋಂಕು ತಗಲಿ, ಲಕ್ಷಗಟ್ಟಲೆ ಜನರು ಸಾಯುತ್ತಾರೆ ಎಂದರೆ ಯಾರಾದರೂ ನಂಬುತ್ತಿದ್ದರೇ? ಇದೀಗ 2020ರ ಒಂದೇ ವರುಷದ ಅವಧಿಯಲ್ಲಿ ಜಗತ್ತಿನಲ್ಲಿ 8.33 ಕೋಟಿ ಜನರಿಗೆ ಆ ವೈರಸಿನ ಸೋಂಕು ತಗಲಿ, 18.16 ಲಕ್ಷ ಜನರು ಅದಕ್ಕೆ ಬಲಿಯಾಗಿದ್ದಾರೆ! ಇದರಿಂದಾಗಿ ನಾವು ಬದುಕುವ ರೀತಿಯೇ ಬದಲಾಗಿದೆ.

ಸದ್ಯೋ ಭವಿಷ್ಯದಲ್ಲಿ ನಾವು ಬದುಕುವ ರೀತಿಯನ್ನು ಇನ್ನಷ್ಟು ಬದಲಾಯಿಸುವ ಬದಲಾವಣೆಗಳು ಹೀಗಿವೆ:

೧)ಪೆಟ್ರೋಲ್ ಎಂಜಿನ್/ ಡೀಸಿಲ್ ಎಂಜಿನಿನ ಕಾರುಗಳು ಬಳಕೆಯಿಂದ ಮಾಯವಾಗಲಿವೆ. ಯಾಕೆಂದರೆ, ಈ ಕಾರುಗಳಲ್ಲಿ 20,000 ಬಿಡಿಭಾಗಗಳಿದ್ದರೆ, ವಿದ್ಯುತ್ ಕಾರುಗಳಲ್ಲಿರುವ ಬಿಡಿಭಾಗಗಳ ಸಂಖ್ಯೆ 50ಕ್ಕಿಂತ ಕಡಿಮೆ! ವಿದ್ಯುತ್ ಕಾರುಗಳನ್ನು ಇನ್ನು ಕೆಲವೇ ವರುಷಗಳಲ್ಲಿ “ಜೀವಿತಾವಧಿ (ಲೈಫ್-ಟೈಮ್) ವಾರಂಟಿ” ಸಹಿತ ಮಾರಲಾಗುವುದು. ಇವನ್ನು ಅಧಿಕೃತ ಮಾರಾಟಗಾರರು ಮಾತ್ರ ರಿಪೇರಿ ಮಾಡುವರು. ಅವರ ಕಾರ್ಯಾಗಾರದಲ್ಲಿ ಬ್ಯಾಟರಿ-ಚಾಲಿತ ಕಾರಿನ ವಿದ್ಯುತ್ ಮೋಟರನ್ನು ಕೆಲವೇ ನಿಮಿಷಗಳಲ್ಲಿ ಬದಲಾಯಿಸಲಾಗುವುದು. ಕೆಟ್ಟು ಹೋದ ವಿದ್ಯುತ ಮೋಟರುಗಳನ್ನು ಸ್ವಯಂಚಾಲಿತ ರಿಪೇರಿ ಕಾರ್ಯಾಗಾರಗಳಿಗೆ ಕಳಿಸಿ, ರೊಬೋಟುಗಳ ಮೂಲಕ ರಿಪೇರಿ ಮಾಡಲಾಗುವುದು. ಇವೆಲ್ಲದರ ಪರಿಣಾಮವಾಗಿ, ನಾವೀಗ ಅಲ್ಲಲ್ಲಿ ಕಾಣುತ್ತಿರುವ ಕಾರು-ರಿಪೇರಿ ಕಾರ್ಯಾಗಾರಗಳೆಲ್ಲ ಮುಚ್ಚಿಹೋಗಲಿವೆ.

೨)ವಿದ್ಯುತ್ ಚಾಲಿತ ಕಾರುಗಳ ವಿದ್ಯುತ್ ಮೋಟರ್ ಸರಿಯಾಗಿ ಕೆಲಸ ಮಾಡದಿದ್ದರೆ "ಎಚ್ಚರಿಕೆಯ ಬಲ್ಬ್” ಬೆಳಗುತ್ತದೆ. ಆಗ ನಿಮ್ಮ ಕಾರನ್ನು ಹತ್ತಿರದ ರಿಪೇರಿ ಕಾರ್ಯಾಗಾರಕ್ಕೆ ಒಯ್ದರಾಯಿತು. ನೀವೊಂದು ಕಪ್ ಕಾಫಿ ಕುಡಿಯುವ ಸಮಯದಲ್ಲಿ ನಿಮ್ಮ ಕಾರು ರಿಪೇರಿಯಾಗಿ ಬರುತ್ತದೆ.

೩)ರಸ್ತೆಗಳ ಬದಿಯಲ್ಲೇ ಇರುವ "ಪವರ್ ಮೀಟರ್"ಗಳು ಮೂಲಕ ಪವರ್ ಕಂಪೆನಿಗಳು ನಿಮ್ಮ ಕಾರಿನ ಬ್ಯಾಟರಿಯನ್ನು ರೀಚಾರ್ಜ್ ಮಾಡುತ್ತವೆ. ಇಂತಹ ವ್ಯವಸ್ಥೆ ಸ್ವೀಡನ್, ಡೆನ್ಮಾರ್ಕ್ ಮತ್ತು ಹೊಲ್ಲೆಂಡ್ ದೇಶಗಳಲ್ಲಿ ಈಗಾಗಲೇ ಆರಂಭವಾಗಿದೆ.

೪)ಇದರಿಂದಾಗಿ, ಭವಿಷ್ಯದ ಕೆಲವೆ ವರುಷಗಳಲ್ಲಿ ಪೆಟ್ರೋಲ್ ಬಂಕುಗಳು ಕಾಣೆಯಾಗಲಿವೆ.

೫)ಕಾರು ಉತ್ಪಾದಕ ಕಂಪೆನಿಗಳಾದ ಹೋಂಡಾ, ಟೊಯೊಟಾ ಮತ್ತು ಸಾಮ್‌ಸಂಗ್  ಬಿಲಿಯನ್‌ಗಟ್ಟಲೆ ಡಾಲರುಗಳ ಹೂಡಿಕೆ ಮಾಡಿ, ವಿದ್ಯುತ್ ಕಾರುಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿವೆ. ಇವುಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ.

೬)ಹೆಚ್ಚೆಚ್ಚು ಮನೆಗಳು ಜನವಾಸದ ಮತ್ತು ವಿದ್ಯುತ್ ಉತ್ಪಾದಕ ಘಟಕಗಳಾಗಲಿವೆ. ಈಗಾಗಲೇ ಭಾರತದಲ್ಲಿ ಸಾವಿರಾರು ಮನೆಗಳ ಚಾವಣಿಗಳಲ್ಲಿ ಜೋಡಿಸಿರುವ ಸೌರ ಫಲಕಗಳ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತುದೆ. ಈ ವಿದ್ಯುತ್ತಿನ ಪುಟ್ಟ ಪಾಲನ್ನು ಮಾತ್ರ ಮನೆಗಳಿಗಾಗಿ ಬಳಸಲಾಗುತ್ತಿದೆ. ಉಳಿದ ವಿದ್ಯುತ್ತನ್ನೆಲ್ಲ ಪವರ್ ಗ್ರಿಡ್ಡಿಗೆ ಮಾರಲಾಗುತ್ತಿದೆ. ಈ ವಿದ್ಯುತ್ತನ್ನು ಸಂಗ್ರಹಿಸುವ ಪವರ್ ಗ್ರಿಡ್ ಅದನ್ನು ವಿದ್ಯುತ್ ಬೇಕಾಗಿರುವ ಕೈಗಾರಿಕೆಗಳಿಗೆ ಮಾರಾಟ ಮಾಡುತ್ತದೆ.

೭)ಇದರ ಪರಿಣಾಮವಾಗಿ, ಕಲ್ಲಿದ್ದಲು ಗಣಿಗಾರಿಕೆ ಸಂಪೂರ್ಣ ನಿಂತು ಹೋಗುತ್ತದೆ. ಪೆಟ್ರೋಲಿಯಮ್ ಉತ್ಪನ್ನಗಳ ಕಂಪೆನಿಗಳೂ ಮುಚ್ಚಿ ಹೋಗುತ್ತವೆ. ಕಚ್ಚಾತೈಲವನ್ನು ನೆಲದಾಳದಿಂದ ತೆಗೆಯಲಿಕ್ಕಾಗಿ ಡ್ರಿಲ್ ಮಾಡುವ ಅಗತ್ಯವೇ ಇರೋದಿಲ್ಲ. ಈಗ ತಮಗೆ ಯಾರೂ ಎದುರಾಳಿಗಳಿಲ್ಲ ಎಂಬಂತೆ ಮೆರೆಯುತ್ತಿರುವ ಒಪೆಕ್ (ಪೆಟ್ರೋಲಿಯಮ್ ರಫ್ತು ಮಾಡುವ ದೇಶಗಳ ಒಕ್ಕೂಟ) ನೆಲ ಕಚ್ಚಲಿದೆ.

೮)ಕೇವಲ 20 ವರುಷಗಳ ಮುಂಚೆ, ಇಸವಿ 2000ದಲ್ಲಿ, ಇನ್ನು ಐದು ವರುಷಗಳ ನಂತರ ಕೆಮರಾಗಳಿಗೆ ಫೋಟೋಗ್ರಾಫಿಕ್ ಫಿಲ್ಮ್ ಹಾಕಿ ಫೋಟೋ ತೆಗೆಯುವವರೇ ಇರೋದಿಲ್ಲ ಎಂದು ಯಾರಾದರೂ ಯೋಚಿಸಿದ್ದರೇ? ಮೊಬೈಲ್ ಫೋನುಗಳ ಕ್ರಾಂತಿಯಿಂದಾಗಿ, ಆ ಚಟುವಟಿಕೆ ಕಾಣದಂತೆ ಮಾಯವಾಯಿತು! ಸ್ಮಾರ್ಟ್ ಫೋನುಗಳ ಕೆಮರಾಗಳಿಂದ ಅದ್ಭುತ ಫೋಟೋ ತೆಗೆದು, ಯಾರಿಗೆ ಬೇಕಾದರೂ ನಿಮಿಷದೊಳಗೆ ರವಾನಿಸಲು ಸಾಧ್ಯವಿರುವಾಗ, ಆ ಫಿಲ್ಮುಗಳು ಯಾರಿಗೆ ಬೇಕಾಗಿವೆ?

೯)ಇದೀಗ, ಕೃತಕ ಬುದ್ಧಿಮತ್ತೆ (ಎಐ ಅಂದರ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಅಂತಹದೇ ಕ್ರಾಂತಿಯನ್ನು ಮಾಡುತ್ತಿದೆ. ಇದರ ಅಳವಡಿಕೆಯಿಂದಾಗಿ, ವೈದ್ಯಕೀಯ ರೋಗಪತ್ತೆ, ಆನ್-ಲೈನ್ ಶಿಕ್ಷಣ, ಥ್ರೀ-ಡಿ ಮುದ್ರಣ, ಹೈಡ್ರೋಫೋನಿಕ್ ಕೃಷಿ ಮತ್ತು ಸ್ವಯಂಚಾಲಿತ (ಚಾಲಕರಿಲ್ಲದ) ಕಾರುಗಳ ದಕ್ಷತೆ ಊಹಿಸಲಾಗದಷ್ಟು ಉತ್ತಮವಾಗಲಿದೆ.

೧೦)ಕೃತಕ ಬುದ್ಧಿಮತ್ತೆಯಿಂದಾಗಿ ಕಂಪ್ಯೂಟರುಗಳ ಸಾಮರ್ಥ್ಯ ಅಗಾಧವಾಗಿ ಹೆಚ್ಚಲಿದೆ. ಈಗಾಗಲೇ ಪ್ರಚಂಡ ಬುದ್ಧಿವಂತ ಚದುರಂಗದ ಆಟಗಾರರನ್ನು ಕಂಪ್ಯೂಟರುಗಳು ಚದುರಂಗದಾಟದಲ್ಲಿ ಸೋಲಿಸುತ್ತಿವೆ. ಕೇವಲ ಹತ್ತೇ ವರುಷಗಳಲ್ಲಿ, 2030ರಲ್ಲಿ ಕಂಪ್ಯೂಟರುಗಳು ಮನುಷ್ಯರಿಗಿಂತ ಹಲವು ಪಟ್ಟು ಜಾಸ್ತಿ "ಬುದ್ಧಿವಂತಿಕೆ" ಹೊಂದಲಿವೆ.

೧೧)ಯುಎಸ್‌ಎ ದೇಶದಲ್ಲಿ ಯುವ ವಕೀಲರಿಗೆ ಈಗ ಸುಲಭದಲ್ಲಿ ಉದ್ಯೋಗ ಸಿಗುತ್ತಿಲ್ಲ. ಯಾಕೆಂದರೆ, ಐಬಿಎಮ್ ಕಂಪೆನಿಯ “ವಾಟ್ಸನ್" ಎಂಬ ಮಹಾಕಂಪ್ಯೂಟರ್ ಅವರನ್ನೆಲ್ಲ ದಕ್ಷತೆಯಲ್ಲಿ ಮೀರಿಸುತ್ತದೆ. ಇದು ಕೆಲವೇ ಸೆಕೆಂಡುಗಳಲ್ಲಿ ಶೇ.90ರಷ್ಟು ನಿಖರವಾದ ಕಾನೂನು-ಅಭಿಪ್ರಾಯ ನೀಡುತ್ತದೆ. (ವಕೀಲರು ನೀಡುವ ಕಾನೂನು-ಅಭಿಪ್ರಾಯದ ನಿಖರತೆ ಶೇ.70) ಇದರಿಂದಾಗಿ, ಭವಿಷ್ಯದಲ್ಲಿ ವಕೀಲರ ಸಂಖ್ಯೆ ಶೇ.90ರಷ್ಟು ಕಡಿಮೆಯಾಗಲಿದೆ. ಜೀವನೋಪಾಯಕ್ಕಾಗಿ ಕಾನೂನು ಪದವೀಧರರಾಗುವವರು ಇದನ್ನು ಗಮನಿಸಿ.

೧೨)2020ರಲ್ಲಿ ಸ್ವಯಂಚಾಲಿತ ಕಾರುಗಳ ಹಲವು ಮಾದರಿಗಳನ್ನು ಕಂಪೆನಿಗಳು ಬಿಡುಗಡೆ ಮಾಡಿವೆ. ಇನ್ನು ಐದೇ ವರುಷಗಳಲ್ಲಿ, ಇವುಗಳಿಂದಾಗಿ ಕಾರು ಉತ್ಪಾದನಾ ಕೈಗಾರಿಕೆಯಲ್ಲಿ ಅಲ್ಲೋಲಕಲ್ಲೋಲವಾಗಲಿದೆ. ಯಾಕೆಂದರೆ, ನಿಮಗಿನ್ನು ಸ್ವಂತ ಕಾರು ಬೇಡವೇ ಬೇಡ! ಮೊಬೈಲಿನಿಂದ ಫೋನ್ ಮಾಡಿದರೆ ಸಾಕು: ಸ್ವಯಂಚಾಲಿತ ಕಾರು ನೀವಿರುವಲ್ಲಿಗೆ ಬಂದು ನಿಮ್ಮನ್ನು ಎಲ್ಲಿಗೆ ಬೇಕಾದರೂ ಒಯ್ಯುತ್ತದೆ.

೧೩)ಈ ಕ್ರಾಂತಿಕಾರಕ ಬದಲಾವಣೆಯಿಂದಾಗಿ ಹಲವು ಅನಿರೀಕ್ಷತ ಪರಿಣಾಮಗಳು ಆಗಲಿವೆ. ಕಾರ್ ಪಾರ್ಕ್ ಮಾಡುವ ಸಮಸ್ಯೆಯೇ ಇರೋದಿಲ್ಲ! ಕಾರ್ ಪಾರ್ಕಿಂಗ್ ಜಾಗವನ್ನೆಲ್ಲ ಉದ್ಯಾನಗಳಾಗಿ ಪರಿವರ್ತಿಸಬಹುದು. ಇದರಿಂದಾಗಿ ನಗರಗಳ ಚಿತ್ರಣವೇ ಬದಲಾಗಲಿದೆ. ಯಾಕೆಂದರೆ, ಖಾಸಗಿ ಕಾರುಗಳ ಸಂಖ್ಯೆ ಶೇ.90ರಷ್ಟು ಕಡಿಮೆಯಾಗಲಿದೆ. ಹಾಗಾಗಿ, ನಗರಗಳ ರಸ್ತೆಗಳಲ್ಲಿ ವಾಹನದಟ್ಟಣೆ ಇಲ್ಲವಾಗುತ್ತದೆ. ನಗರಗಳಲ್ಲಿ ವಾಯುಮಾಲಿನ್ಯವೂ ಕಡಿಮೆಯಾಗುತ್ತದೆ.

೧೪)ಸ್ವಂತ ಕಾರು ಅಗತ್ಯವಿಲ್ಲ ಎಂದಾದಾಗ “ಚಾಲನಾ ಪರವಾನಗಿ”ಯೂ ಅಗತ್ಯವಿಲ್ಲ. ಈಗಿನ ಎಳೆಯ ಮಕ್ಕಳು ಯುವಜನರಾದಾಗ ಅವರಿಗೆ ಕಾರು ಚಾಲನಾ ತರಬೇತಿ, ಪರವಾನಗಿ - ಇವೆಲ್ಲ ಬೇಕಾಗೋದಿಲ್ಲ.

೧೫)ಎಲ್ಲದಕ್ಕಿಂತ ಮುಖ್ಯವಾಗಿ, ರಸ್ತೆ ಅಪಘಾತಗಳಿಂದಾಗಿ ಸಾಯುವವರ ಸಂಖ್ಯೆ ತೀರಾ ಕಡಿಮೆಯಾಗಲಿದೆ. ಈಗ ಜಗತ್ತಿನಲ್ಲಿ  ಪ್ರತಿ ವರುಷ 12 ಲಕ್ಷ ಜನರು ರಸ್ತೆಗಳಲ್ಲಿ ಕಾರು-ಅಪಘಾತಗಳಿಂದಾಗಿ ಸಾಯುತ್ತಿದ್ದಾರೆ. ಅಂದರೆ, ಪ್ರತೀ 60,000 ಮೈಲು ಕಾರು ಚಾಲನೆಗೆ ಒಬ್ಬರು ರಸ್ತೆ-ಅಪಘಾತದಿಂದಾಗಿ ಮೃತರಾಗುತ್ತಿದ್ದಾರೆ. ಸ್ವಯಂಚಾಲಿತ ಕಾರುಗಳಿದ್ದಾಗ ಪ್ರತೀ 60 ಲಕ್ಷ ಮೈಲು ಕಾರು ಚಾಲನೆಗೆ ಒಬ್ಬರಂತೆ ಅಪಘಾತಕ್ಕೆ ಬಲಿಯಾಗಬಹುದು.

೧೬)ಕಾರು ಉತ್ಪಾದಕ ಕಂಪೆನಿಗಳು ದಿವಾಳಿಯಂಚಿಗೆ ಬರಬಹುದು. ಈಗಾಗಲೇ ತೆಸ್‌ಲಾ, ಆಪಲ್, ಗೂಗಲ್ ಕಂಪೆನಿಗಳು ಸ್ವಯಂಚಾಲಿತ ಕಾರುಗಳ ಉತ್ಪಾದನೆಯಲ್ಲಿ ಕ್ರಾಂತಿಕಾರಕ ಮುನ್ನಡೆ ಸಾಧಿಸಿವೆ. ವೊಲ್ವೋ ಕಂಪೆನಿ 2025ರಿಂದ ಇಂಟರ್ನಲ್ ಕಂಬಷನ್ ಎಂಜಿನ್ ಇರುವ ಕಾರುಗಳನ್ನು ಉತ್ಪಾದಿಸುವುದಿಲ್ಲ. ಮರ್ಸಿಡೆಸ್, ಬಿಎಂಡಬ್ಲ್ಯು, ವೋಕ್ಸ್-ವ್ಯಾಗನ್, ಆಡಿ - ಇಂತಹ ಸುಪ್ರಸಿದ್ಧ ಕಾರು ಉತ್ಪಾದಕ ಕಂಪೆನಿಗಳ ಇಂಜಿನಿಯರುಗಳಿಗೆ “ಮುಂದೇನು" ಎಂಬ ಆತಂಕ ಹೆಚ್ಚುತ್ತಿದೆ.

೧೭)ವಿಮಾ ಕಂಪೆನಿಗಳಿಗೂ ಆಘಾತ ಕಾದಿದೆ. ಯಾಕೆಂದರೆ, ಜನರು ಬಳಸುವ ಕಾರುಗಳ ಸಂಖ್ಯೆ ಶೇ.90 ಕಡಿಮೆಯಾದಾಗ, ವಿಮಾ ಕಂತು ಕುಸಿಯಲಿದೆ. ಈ ವ್ಯವಹಾರಕ್ಕೆ ವಿಪತ್ತು ಕಾದಿದೆ.

೧೮)ರಿಯಲ್ ಎಸ್ಟೇಟ್ ಉದ್ಯಮವೂ ಆಘಾತದಿಂದ ಅಲುಗಾಡಲಿದೆ. ಯಾಕೆಂದರೆ, ಮಹಾನಗರ ಮತ್ತು ನಗರಗಳಲ್ಲಿ ಮನೆ ಮಾಡುವ ಬದಲಾಗಿ, ದೂರದ ಗ್ರಾಮೀಣ ಪ್ರದೇಶಗಳಲ್ಲಿ ಜನರು (ಗಣನೀಯ ಕಡಿಮೆ ಬೆಲೆಗೆ) ಮನೆ ಮಾಡಲಿದ್ದಾರೆ. ಈಗಂತೂ “ಮನೆಯಿಂದಲೇ ಉದ್ಯೋಗ” ಎಂಬುದೇ ವಾಡಿಕೆಯಾಗಿದೆ.

೧೯)ಕಳೆದ ಮೂವತ್ತು ವರುಷಗಳಲ್ಲಿ ಸೌರಶಕ್ತಿಯ ಬಳಕೆ ಅಗಾಧವಾಗಿ ಜಾಸ್ತಿಯಾಗಿದೆ. ಅದು ಇನ್ನೂ ಹೆಚ್ಚಾಗಲಿದೆ. ಯಾಕೆಂದರೆ, ಗ್ರಾಹಕರು ಬಳಸುವ ಸೌರವಿದ್ಯುತ್ತಿನ ದರ ಕುಸಿಯುತ್ತಿದೆ.

೨೦)ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಚಿಕಿತ್ಸೆಯ ರಂಗದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಲಿವೆ. ನಿಮ್ಮ ಮೊಬೈಲ್ ಫೋನಿನ ಮೂಲಕ ಅನೇಕ ವೈದ್ಯಕೀಯ ಪರೀಕ್ಷೆಗಳನ್ನು ಮಾಡಬಲ್ಲ ತಂತ್ರಜ್ನಾನ, ಸಾಧನಗಳು ಮತ್ತು ಆಪ್‌ಗಳನ್ನು ಹಲವಾರು ಕಂಪೆನಿಗಳು ಅಭಿವೃದ್ಧಿ ಪಡಿಸುತ್ತಿವೆ. ಇದರಿಂದಾಗಿ ರೋಗಪತ್ತೆ ಮತ್ತು ರೋಗಚಿಕಿತ್ಸೆ ತೀರಾ ಸುಲಭವಾಗಲಿದೆ.

ಅಂತೂ, ಇನ್ನು ಕೇವಲ 10ರಿಂದ 20 ವರುಷಗಳಲ್ಲಿ ನಮ್ಮೆಲ್ಲರ ಬದುಕು ನಾವ್ಯಾರೂ ಊಹಿಸಲಾಗದಷ್ಟು ಬದಲಾಗಲಿದೆ. ಪ್ರತಿಯೊಬ್ಬರೂ ಈ ಎಲ್ಲ ಬದಲಾವಣೆಗಳಿಗೆ ಮಾನಸಿಕವಾಗಿ ತಯಾರಾಗಲೇ ಬೇಕಾಗಿದೆ. ಯಾಕೆಂದರೆ ಇದು ಅಳಿವು-ಉಳಿವಿನ ಪ್ರಶ್ನೆ, ಅಲ್ಲವೇ?

ಫೋಟೋಗಳು: ವಿದ್ಯುತ್ ಚಾಲಿತ ಕಾರುಗಳು ಮತ್ತು ಅವುಗಳ ಚಾರ್ಜಿಂಗ್ ಸ್ಟೇಷನುಗಳು
ಫೋಟೋ ೨: ವಿದ್ಯುತ್ ಚಾಲಿತ ನಿಸ್ಸಾನ್ ಕಂಪೆನಿ ಕಾರು (ಫೋಟೋ ಕೃಪೆ: ಗೆಟ್ಟಿ ಇಮೇಜಸ್)

Comments