25 ವರ್ಷಗಳ ಸಂಭ್ರಮದಲ್ಲಿ 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ…'

25 ವರ್ಷಗಳ ಸಂಭ್ರಮದಲ್ಲಿ 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ…'

೯೦ರ ದಶಕದಲ್ಲಿ ಯುವ ಮನಸ್ಸುಗಳಿಗೆ ಲಗ್ಗೆ ಇಟ್ಟ ಹಲವಾರು ಚಲನಚಿತ್ರಗಳ ಪೈಕಿ ಬಾಲಿವುಡ್ ಚಿತ್ರ ‘ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಪ್ರಮುಖವಾದದ್ದು. ದಿಲ್, ಆಶಿಕಿ ಮೊದಲಾದ ಚಿತ್ರಗಳ ನಂತರ ಬಿಡುಗಡೆಯಾದ ಈ ಚಿತ್ರ ಮುಂದಿನ ದಿನಗಳಲ್ಲಿ ಸಿನಿಪ್ರಿಯರ ಬಾಯಲ್ಲಿ ಡಿಡಿಎಲ್ ಜೆ (DDLJ) ಅಥವಾ ಡಿಡಿಎಲ್ (DDL) ಎಂದೇ ಕರೆಯಲ್ಪಟ್ಟಿತು. ೧೯೯೫ರ ಅಕ್ಟೋಬರ್ ೨೦ ರಂದು ಬಿಡುಗಡೆಯಾದ ಈ ಸಿನೆಮಾ ಈ ವರ್ಷ (೨೦೨೦) ತನ್ನ ೨೫ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ಅಂದು ಯುವಕರಾಗಿದ್ದವರು ಇಂದು ಮಧ್ಯವಯಸ್ಕರಾಗಿದ್ದಾರೆ. ಚಿತ್ರದ ಪಾತ್ರಗಳಾದ ರಾಜ್ ಮಲ್ಹೋತ್ರಾ ಮತ್ತು ಸಿಮ್ರಾನ್ ನಮ್ಮ ಮನೆಯವರೇ ಆಗಿಹೋಗಿದ್ದಾರೆ ಎನ್ನುವಷ್ಟು ಆಪ್ತರಾಗಿದ್ದಾರೆ. ಈಗಲೂ ದೂರದರ್ಶನದಲ್ಲಿ ಈ ಚಿತ್ರ ಪ್ರಸಾರವಾಗುವಾಗ ನಾವು ನೋಡದೇ ಬಿಡುವುದಿಲ್ಲ. 

ಈ ಸಿನೆಮಾ ಬಂದಾಗ ನಾನು ಪ್ರಥಮ ವರ್ಷದ ಪದವಿಯಲ್ಲಿದ್ದೆ. ಆಗ ಸ್ಥಳೀಯ ಕೇಬಲ್ ಟಿವಿಯವರು ತಮ್ಮ ಚಾನೆಲ್ ಒಂದರಲ್ಲಿ ರಾತ್ರಿ ಒಂದು ಚಲನ ಚಿತ್ರ ಪ್ರದರ್ಶನ ಮಾಡುತ್ತಿದ್ದರು. ಆಗ ಹೊಸ ಹೊಸ ಚಲನ ಚಿತ್ರಗಳ ನಕಲಿ ಕ್ಯಾಸೆಟ್, ಸಿಡಿಗಳು ಬಹುತೇಕ ಪ್ರಚಾರದಲ್ಲಿ ಇರುತ್ತಿತ್ತು. ಚಲನ ಚಿತ್ರ ಮಂದಿರದಲ್ಲಿ ಕುಳಿತು ರೆಕಾರ್ಡ್ ಮಾಡಿದ ಸಿನೆಮಾದ ಕ್ಯಾಸೆಟ್ ಗಳು ಸಿಗುತ್ತಿದ್ದವು. ಅದರ ಗುಣಮಟ್ಟವೂ ಕಳಪೆ. ಸಿನೆಮಾ ಮಂದಿರದಲ್ಲಿರುವವರ ದ್ವನಿಯೂ ಅದರಲ್ಲಿ ಕೇಳಿಸುತ್ತಿತ್ತು. ಆದರೂ ಚಿತ್ರ ನೋಡ ಬೇಕೆಂಬ ಹುಮ್ಮಸ್ಸು ನಮ್ಮದು. ನಾನೊಂದು ದಿನ ರಾತ್ರಿ ಟಿವಿಯಲ್ಲಿ ಚಾನೆಲ್ ತಿರುಗಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಚಿತ್ರವೇ ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ. ಆಗ ಎಲ್ಲಾ ನಾವು ಬೇಗನೇ ಮಲಗುತ್ತಿದ್ದೆವು. ಆದರೆ ಈ ಚಿತ್ರವು ನನ್ನನ್ನು ಎಷ್ಟು ಹಿಡಿದಿಟ್ಟಿತೆಂದರೆ ಅದು ಮುಗಿಯುವಾಗ ರಾತ್ರಿ ಹನ್ನೆರಡು ಗಂಟೆ. ಸಮಯ ಹೋದದ್ದೇ ತಿಳಿಯಲಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಅದು ನಮ್ಮ ಊರಿನ ಚಿತ್ರ ಮಂದಿರಕ್ಕೆ ಬಂತು. ಮೊದಲ ದಿನವೇ ಹೋಗಿ (ಆಗಿನ್ನೂ ಆ ಚಿತ್ರ ಅಷ್ಟಾಗಿ ಖ್ಯಾತಿ ಪಡೆಯಲು ಪ್ರಾರಂಭಿಸಿರಲಿಲ್ಲ) ನೋಡಿ ಆನಂದಿಸಿದೆ. ಆಗೆಲ್ಲಾ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು. ಮುಂದಿನ ದಿನಗಳಲ್ಲಿ ಆ ಚಿತ್ರ ನಿಧಾನವಾಗಿ ಜನಪ್ರಿಯವಾಗತೊಡಗಿತು. ನಿನ್ನೊಮ್ಮೆ ಗೆಳೆಯರ ಜೊತೆ ಹೋಗಿ ಮತ್ತೆ ನೋಡಿ ಬಂದೆ. ಬೆಂಗಳೂರಿಗೆ ಸಂಬಂಧಿಕರ ಮನೆಗೆ ಹೋದಾಗ ಅಲ್ಲಿನ ‘ಸಾಗರ್’ ಚಿತ್ರಮಂದಿರದಲ್ಲಿ ಕುಳಿತು ಈ ಚಿತ್ರ ನೋಡಿದ ನೆನಪಿನ್ನೂ ನನ್ನಲ್ಲಿ ಹಚ್ಚ ಹಸುರಾಗಿದೆ. ಚಿತ್ರದಲ್ಲಿ ಕಂಡು ಬರುವ ಯುರೋಪ್ ನ ಸುಂದರ ಚಿತ್ರಣ ನಮ್ಮೆಲ್ಲರ ಮನಸೂರೆಗೊಂಡಿತ್ತು. ಅರ್ಧದಷ್ಟು ಚಿತ್ರ ವಿದೇಶದಲ್ಲಿ ಚಿತ್ರೀಕರಣಗೊಂಡಿತ್ತು. 

‘ತುಜೆ ದೇಖಾ ತೊ ಯೇ ಜಾನಾ ಸನಂ..' ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಅದರ ರಿಂಗ್ ಟೋನ್ ಮುಂದಿನ ದಿನಗಳಲ್ಲಿ ಮೊಬೈಲ್ ಸರ್ವವ್ಯಾಪಿಯಾದಾಗ ಹಲವರು ಅಳವಡಿಸಿಕೊಂಡಿದ್ದರು. ಆ ಚಿತ್ರದ ‘ಮೇರೆ ಕ್ವಾಬೋ ಮೈ ಜೊ ಆಯೇ..' ರುಖಜಾ ಓ.., ಮೆಹಂದಿ ಲಗಾಕೆ ರಖನಾ... ಮೊದಲಾದ ಹಾಡುಗಳು ಆ ಕಾಲದಲ್ಲಿ ಎಲ್ಲರ ಬಾಯಲ್ಲಿ ಗುಣಿಗುಣಿಸುತ್ತಿತ್ತು. ಇಂತಹ ಒಂದು ಅದ್ಭುತವೆನಿಸುವ ಚಲನ ಚಿತ್ರದ ಕಥೆಯಲ್ಲಿ ವಿಶೇಷವೇನಿರಲಿಲ್ಲ. ಸಾಧಾರಣ ಪ್ರೇಮ ಕಥೆಯಾಗಿದ್ದರೂ ಅದರ ನಿರೂಪಣೆ, ವಿದೇಶದಲ್ಲಿನ ಸುಂದರ ದೃಶ್ಯಗಳ ಚಿತ್ರೀಕರಣ, ಸೊಗಸಾದ ಹಾಡುಗಳು ಆ ಚಿತ್ರವನ್ನು ಅಸಾಧಾರಣ ಚಿತ್ರವನ್ನಾಗಿ ಮಾಡಿತ್ತು ಎಂದರೆ ತಪ್ಪಾಗಲಾರದು.

ಲಂಡನ್ ನಲ್ಲಿ ವಾಸಿಸುವ ಒಂದು ಪಂಜಾಬಿ ಸಾಂಪ್ರದಾಯಿಕ ಕುಟುಂಬದ ಹುಡುಗಿ ಸಿಮ್ರಾನ್ (ಕಾಜಲ್). ಇವಳ ಮನೆಯಲ್ಲಿ ತಂದೆ ಬಲದೇವ್ ಸಿಂಗ್ (ಅಮರೀಶ್ ಪುರಿ), ತಾಯಿ ಲಾಜವತಿ (ಫರೀದಾ ಜಲಾಲ್) ಹಾಗೂ ತಂಗಿ ರಾಜೇಶ್ವರಿ ಜೊತೆ ವಾಸಿಸುತ್ತಾಳೆ. ಇವಳ ತಂದೆ ಶಿಸ್ತಿನ ಮನುಷ್ಯ. ಭಾರತ ದೇಶವನ್ನು ಅಪಾರವಾಗಿ ಪ್ರೀತಿಸುವ ಬಲಬೀರ ಸಿಂಗ್ ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಭಾರತಕ್ಕೆ ಹೋಗಿ ಉಳಿದ ಜೀವನವನ್ನು ಕಳೆಯ ಬೇಕೆಂಬ ಆಶೆ ಹೊಂದಿರುತ್ತಾನೆ. ಅವನ ಬಾಲ್ಯದ ಗೆಳೆಯ ಅಜಿತ್ (ಸತೀಶ್ ಶಾ) ನ ಮಗನ ಜೊತೆ ಸಿಮ್ರಾನ್ ಗೆ ಮದುವೆ ಮಾಡುವುದು ಎಂದು ಬಾಲ್ಯದಲ್ಲೇ  ತೀರ್ಮಾನವಾಗಿರುತ್ತದೆ. ಮತ್ತೊಂದು ಕಡೆ ಅಶಿಸ್ತಿನ ಜೀವನವನ್ನೇ ಸಾಗಿಸುತ್ತಿರುವ ರಾಜ್ ಮಲ್ಹೋತ್ರಾ (ಶಾರುಖ್ ಖಾನ್) ಲಂಡನ್ ನ ಶ್ರೀಮಂತ ಉದ್ಯಮಿ ಧರ್ಮವೀರ್ ಮಲ್ಹೋತ್ರಾ (ಅನುಪಮ್ ಖೇರ್) ರ ಏಕೈಕ ಪುತ್ರನಾಗಿರುತ್ತಾನೆ. ತಾಯಿಯಿಲ್ಲದ ಕೊರತೆ ಕಾಡದಂತೆ ಮಗನನ್ನು ಬೆಳೆಸಿದ ಧರ್ಮವೀರ್ ಮಲ್ಹೋತ್ರಾ ಪುತ್ರನನ್ನು ಅಪಾರವಾಗಿ ಪ್ರೀತಿಸುತ್ತಾನೆ. ಈ ಎರಡು ಜೋಡಿಗಳು ಯುರೋಪ್ ಪ್ರವಾಸಕ್ಕೆ ತಮ್ಮ ತಮ್ಮ ಗೆಳೆಯರ ಜೊತೆ ಹೋದಾಗ ಅನಿರೀಕ್ಷಿತವಾಗಿ ಯುರೋಪಿನ ಒಂದು ಊರಿನಲ್ಲಿ ರೈಲು ತಪ್ಪಿಸಿಕೊಳ್ಳುತ್ತಾರೆ. ನಿಧಾನವಾಗಿ ಸಿಮ್ರಾನ್ ಗೆ ರಾಜ್ ಮೇಲೆ ಪ್ರೀತಿ ಉಂಟಾಗುತ್ತದೆ. ಪ್ರವಾಸ ಮುಗಿಸಿ ಮನೆಗೆ ಬಂದಾಗ ಇವಳ ಪ್ರೀತಿಯ ವಿಷಯ ತಿಳಿದ ಬಲದೇವ ಸಿಂಗ್ ಕೋಪಗೊಂಡು ತನ್ನ ಕುಟುಂಬದ ಜೊತೆ ಲಂಡನ್ ಬಿಟ್ಟು ಭಾರತಕ್ಕೆ ಹೋಗುತ್ತಾನೆ. 

ಅವಳ ಹಿಂದೆಯೇ ಭಾರತಕ್ಕೆ ಹೋಗುವ ರಾಜ್, ಸಿಮ್ರಾನ್ ಕುಟುಂಬದವರೆಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿ ಮದುವೆಯಾಗಲು ಪ್ರಯತ್ನಿಸುತ್ತಾನೆ. ಲಂಡನ್ ನಲ್ಲಿ ರಾಜ್ ನಿಂದ ಸಿಮ್ರಾನ್ ತಂದೆಗೆ ಒಂದು ಕಹಿ ಅನುಭವ ಆಗಿರುತ್ತದೆ. ಆ ಕಾರಣದಿಂದ ಬಲದೇವ್ ಸಿಂಗ್ ಗೆ ರಾಜ್ ಮೇಲೆ ಕೋಪ ಇರುತ್ತದೆ. ಇವೆಲ್ಲವನ್ನು ಮೆಟ್ಟಿ ನಿಲ್ಲುವ ರಾಜ್, ಎಲ್ಲಾ ಅಡೆತಡೆಗಳನ್ನು ಮುರಿದು, ಹೇಗೆ ಸಿಮ್ರಾನ್ ಳನ್ನು ಮದುವೆಯಾಗುತ್ತಾನೆ, ತನ್ನ ಪ್ರೇಮವನ್ನು ಹೇಗೆ ಸಫಲಗೊಳಿಸುತ್ತಾನೆ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು. ಆದರೆ ಈಗ ಚಿತ್ರ ಬಿಡುಗಡೆಯಾಗಿ ೨೫ ವರ್ಷಗಳ ನಂತರ ಎಲ್ಲಿ ಚಿತ್ರಮಂದಿರದ ತೆರೆಯ ಮೇಲೆ ನೋಡುವುದೆಂದು ಯೋಚನೆ ಮಾಡುವಿರಾ? ಚಿಂತೆ ಬೇಡ. ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ.. ಚಿತ್ರ ಮತ್ತೊಮ್ಮೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆಯಂತೆ. ಸ್ಪೈನ್ ನಲ್ಲಿ ಈ ಚಿತ್ರ ಸದ್ಯದಲ್ಲೇ ಪ್ರದರ್ಶನ ಕಾಣಲಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಪ್ರದರ್ಶನ ಕಾಣಲಿ ಎಂಬುದು ಈ ಚಿತ್ರದ ಅಭಿಮಾನಿಗಳ ಮನದ ಇಂಗಿತ.

ಮುಂಬಯಿಯ ಮರಾಠ ಚಿತ್ರ ಮಂದಿರದಲ್ಲಿ ಬರೋಬ್ಬರಿ ೨೦ ವರ್ಷಗಳ ಕಾಲ ಈ ಚಿತ್ರ ಪ್ರದರ್ಶನವಾಗಿತ್ತು ಎಂದರೆ ನಂಬುವಿರಾ? ನಂಬಲೇ ಬೇಕು. ಚಲನ ಚಿತ್ರ ೧೯೯೫ರಲ್ಲಿ ಬಿಡುಗಡೆಯಾದ ಬಳಿಕ ಪ್ರದರ್ಶನ ಪ್ರಾರಂಭಿಸಿದ ಈ ಚಿತ್ರ ಮಂದಿರವು ತನ್ನ ಕೊನೆಯ ಪ್ರದರ್ಶನವನ್ನು ೨೦೧೫ರಲ್ಲಿ ಮುಗಿಸಿತು. ಅಂದರೆ ೨೦ ವರ್ಷಗಳ ಕಾಲ ಒಂದೇ ಚಿತ್ರಮಂದಿರದಲ್ಲಿ ಒಂದು ಚಿತ್ರ ನಡೆದದ್ದು ದಾಖಲೆಯಾಗಿ ಉಳಿಯಲಿದೆ. ಈಗ ಜನರು ಚಿತ್ರ ಮಂದಿರದ ಕಡೆಗೇ ಸುಳಿಯುತ್ತಿಲ್ಲ. ಮನೆಯಲ್ಲೇ ಕುಳಿತು ಅಂತರ್ಜಾಲ ತಾಣದಲ್ಲೇ ಚಲನ ಚಿತ್ರಗಳನ್ನು ನೋಡುತ್ತಿದ್ದಾರೆ. ಆದರೆ ಅಂದಿನ ದಿನಗಳು ಹಾಗಿರಲಿಲ್ಲ. ೧೯೯೫ರಲ್ಲಿ ನಾಲ್ಕು ದೇಖಾವೆಗಳನ್ನು ಹೊಂದಿದ್ದ ಈ ಚಿತ್ರಮಂದಿರ ನಂತರ ಬೆಳಗ್ಗಿನ ದೇಖಾವೆಯನ್ನು ಈ ಚಿತ್ರಕ್ಕೇ ಮೀಸಲಾಗಿಟ್ಟಿತ್ತು. ಕೊನೆಯ ಪ್ರದರ್ಶನದಲ್ಲೂ ಸುಮಾರು ೨೧೦ ಪ್ರೇಕ್ಷಕರು ಇದ್ದರು ಎಂದ ಮೇಲೆ ಈ ಚಿತ್ರದ ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ ಎಂದಾಯಿತು ಅಲ್ಲವೇ?

ಯಶ್ ಚೋಪ್ರಾ ನಿರ್ಮಿಸಿದ ಈ ಚಿತ್ರವನ್ನು ಅವರ ಮಗ ಆದಿತ್ಯ ಚೋಪ್ರಾ ನಿರ್ದೇಶಿಸಿದ್ದರು. ಇದರ ಕಥೆಯನ್ನು ಆದಿತ್ಯಾ ಚೋಪ್ರಾ ಜೊತೆ ಸೇರಿ ಬರೆದವರು ಜಾವೇದ್ ಸಿದ್ದಿಕಿ. ಮತ್ತೆ ಮತ್ತೆ ಕೇಳುವಂತಹ ಹಾಡುಗಳನ್ನು ಹಾಡಿದವರು ‘ಆಲ್ ಟೈಂ ಫೇವರೇಟ್' ಗಾಯಕರಾದ ಲತಾ ಮಂಗೇಷ್ಕರ್, ಆಶಾ ಭೋಸ್ಲೆ, ಅಭಿಜಿತ್, ಕುಮಾರ ಸಾನು, ಉದಿತ್ ನಾರಾಯಣ್ ಮುಂತಾದ ಖ್ಯಾತನಾಮರು. ಶಾರುಖ್ ಖಾನ್, ಕಾಜೋಲ್ ಅವರ ವೃತ್ತಿ ಜೀವನಕ್ಕೆ ಈ ಚಿತ್ರ ಹೊಸ ತಿರುವು ನೀಡಿತೆಂಬುದು ಸುಳ್ಳಲ್ಲ. ಅಮರೀಶ್ ಪುರಿ. ಫರೀದಾ ಜಲಾಲ್, ಸತೀಶ್ ಶಾ ಮುಂತಾದವರ ನಟನೆಯೂ ಅದ್ಭುತವಾಗಿತ್ತು. ಮನಮೋಹನ್ ಸಿಂಗ್ ಅವರ ಛಾಯಾಗ್ರಹಣಕ್ಕೆ ಇಲ್ಲಿ ಪೂರ್ಣ ಅಂಕಗಳನ್ನು ನೀಡಲೇ ಬೇಕು. ವಿದೇಶದಲ್ಲಿನ ಅದ್ಭುತ, ಮನಮೋಹಕ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಜತಿನ್ - ಲಲಿತ್ ಸಂಗೀತ ನೀಡಿದ್ದಾರೆ. 

ಈ ಚಿತ್ರದ ಹಲವಾರು ವಿಭಾಗಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿಗಳು ಹಾಗೂ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳೂ ದೊರೆತಿವೆ. ಸುಮಾರು ೪೦ ಮಿಲಿಯನ್ ವೆಚ್ಚದಲ್ಲಿ ತಯಾರಿಸಲಾದ ಈ ಚಲನಚಿತ್ರವು ಇಲ್ಲಿಯವರೆಗೆ ಅಂದಾಜು ೧.೨೨ ಬಿಲಿಯನ್ ಮೊತ್ತವನ್ನು ಗಳಿಸಿದೆ ಎಂದರೆ ದಾಖಲೆಯಲ್ಲವೇ? ಇದು ತಯಾರಾದ ಸಮಯ ೯೦ ರ ದಶಕ. ಆಗಿನ್ನೂ ಮಲ್ಟಿಪ್ಲೆಕ್ಸ್ ಗಳು ಬಂದಿರಲಿಲ್ಲ. ಒಂದೇ ದಿನ ಸಾವಿರಾರು ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರಲಿಲ್ಲ. ಆದರೂ ಕಳೆದ ೨೫ ವರ್ಷಗಳಲ್ಲಿ ಪ್ರತೀ ದಿನ ಪ್ರತೀ ಕ್ಷಣ ಒಂದಲ್ಲಾ ಒಂದು ಕಾರಣಕ್ಕೆ ಈ ಚಿತ್ರ ನಮ್ಮ ಮನದ ಪಟಲದಲ್ಲಿ ಮಿಂಚಿ ಮರೆಯಾಗುತ್ತಾ ಇರುತ್ತದೆ. ಚಿತ್ರ ಬಿಡುಗಡೆಯಾಗಿ ೨೫ ವರ್ಷ ತುಂಬುವ ಸಂದರ್ಭದಲ್ಲೇ ಲಂಡನ್ ನ ಲಿಸೆಸ್ಟರ್ ಚೌಕದಲ್ಲಿರುವ ‘ಸೀನ್ಸ್ ಇನ್ ದಿ ಸ್ಕ್ವೇರ್' ನಲ್ಲಿ ಈ ಚಿತ್ರದ ಪಾತ್ರಗಳ ಪ್ರತಿಕೃತಿಯನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗುವ ಸುದ್ದಿ ಬಂದಿರುವುದು ಅಭಿಮಾನಿಗಳ ಸಂತಸ ಇನ್ನಷ್ಟು ಅಧಿಕವಾಗುವಂತೆ ಮಾಡಿದೆ. ಈ ಸ್ಥಳದಲ್ಲಿ ಹಲವಾರು ಖ್ಯಾತ ಚಲನ ಚಿತ್ರಗಳ ನಟ-ನಟಿಯರ ಪ್ರತಿಕೃತಿಗಳನ್ನು ನಿರ್ಮಾಣ ಮಾಡಿದ್ದಾರೆ. ಹಲವಾರು ಹೆತ್ತವರು ತಮ್ಮ ಮಕ್ಕಳಿಗೆ ರಾಜ್ ಮತ್ತು ಸಿಮ್ರಾನ್ ಎಂಬ ಹೆಸರನ್ನು ಇರಿಸಿದ್ದಾರೆ. ಇಷ್ಟೊಂದು ಸುಂದರ ನಿರೂಪಣೆಯ ಚಿತ್ರವನ್ನು ಈಗಿನ ಯುವ ಜನಾಂಗ ನೋಡಿರುವ ಸಾಧ್ಯತೆ ಕಡಿಮೆ. ಅಮೆಝಾನ್ ಪ್ರೈಮ್ ಮತ್ತಿತರ ಅಂತರ್ಜಾಲ ತಾಣಗಳಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಿದೆ. ಒಮ್ಮೆ ನೊಡಿ ಬಿಡಿ ರಾಜ್- ಸಿಮ್ರಾನ್ ಪ್ರೇಮ ಕಥೆಯನ್ನ.       

ಚಿತ್ರಗಳು: ಅಂತರ್ಜಾಲ ತಾಣಗಳಿಂದ