26. ಜೆ. ಕೆ. ರೌಲಿಂಗ್ - ಎಲ್ಲರಿಗೂ ಪ್ರೇರಣೆ

26. ಜೆ. ಕೆ. ರೌಲಿಂಗ್ - ಎಲ್ಲರಿಗೂ ಪ್ರೇರಣೆ

ಜಗದ್ವಿಖ್ಯಾತ “ಹ್ಯಾರಿ ಪೊಟ್ಟರ್ ಸರಣಿ” ಕಾದಂಬರಿಗಳ ಲೇಖಕಿ ಜೆ. ಕೆ. ರೌಲಿಂಗ್. ಈ ಪ್ರತಿಭಾವಂತ ಕಾದಂಬರಿಗಾರ್ತಿ ಇಂಗ್ಲೆಡಿನ ಚಿಪ್ಪಿಂಗ್ ಸೊಡ್‌ಬರಿ ಎಂಬಲ್ಲಿ ಬಡ ತಂದೆತಾಯಿಯರ ಮಗಳಾಗಿ ಹುಟ್ಟಿದಳು. ಶಾಲಾ ವಿದ್ಯಾಭ್ಯಾಸದ ನಂತರ, ಜೊಅನ್ನೇ ಕಾಥ್ಲೀನ್ ರೌಲಿಂಗ್ ಇಂಗ್ಲಿಷ್ ಕಲಿಸಲಿಕ್ಕಾಗಿ ಪೋರ್ಚ್‌ಗಲಿಗೆ ಹೋದಳು. ಅಲ್ಲಿ ಅವಳು ಪತ್ರಕರ್ತನೊಬ್ಬನನ್ನು ಮದುವೆಯಾದಳು. ಅವರಿಗೊಬ್ಬಳು ಮಗಳು ಹುಟ್ಟಿದಳು. ಆದರೆ, ಅವರ ಮದುವೆ ಮುರಿದು ಬಿತ್ತು.

ಅನಂತರ, ಜೆ. ಕೆ. ರೌಲಿಂಗ ಇಂಗ್ಲೆಂಡಿಗೆ ಹಿಂತಿರುಗಿ, ತನ್ನ ಸೋದರಿಯೊಂದಿಗೆ ವಾಸ ಮಾಡ ತೊಡಗಿದಳು. ತನ್ನ ಮಗಳನ್ನು ಸಾಕಲಿಕ್ಕಾಗಿ ಬಹಳ ಕಷ್ಟ ಪಟ್ಟಳು. ಕ್ರಮೇಣ ಅವಳು ಮಾನಸಿಕ ಖಿನ್ನತೆಯಿಂದ ಬಳಲಿದಳು. ಆಗಲೇ ಅವಳು ತನ್ನ ಮೊದಲ ಕಾದಂಬರಿಯನ್ನು ಬರೆಯ ತೊಡಗಿದ್ದು.

“ಹ್ಯಾರಿ ಪೊಟ್ಟರ್ ಆಂಡ್ ದ ಫಿಲೋಸೊಫರ್ಸ್ ಸ್ಟೋನ್” ಜೆ. ಕೆ. ರೌಲಿಂಗಳ ಮೊದಲ ಕಾದಂಬರಿ. ಅದನ್ನು ಹಲವು ಪ್ರಕಾಶಕರು ತಿರಸ್ಕರಿಸಿದರು. ಕೊನೆಗೂ ಅದನ್ನು ಪ್ರಕಾಶಕರೊಬ್ಬರು ಖರೀದಿಸಿ ಪ್ರಕಟಿಸಿದರು. ಆ ಸರಣಿಯ ಮುಂದಿನ ಕಾದಂಬರಿಗಳ ಮಾರಾಟ ಒಂದು ಜಾಗತಿಕ ದಾಖಲೆ - ಅತ್ಯಧಿಕ ಸಂಖ್ಯೆಯ ಪ್ರತಿಗಳ ಮಾರಾಟಕ್ಕಾಗಿ. ಬದುಕಿನಲ್ಲಿ ಯಶಸ್ಸಿನ ಬೆಂಬತ್ತುತ್ತಲೇ ಇರಬೇಕು, ಯಾವುದೇ ಹಂತದಲ್ಲಿ ಕೈಚೆಲ್ಲಬಾರದು ಎಂಬುದನ್ನು ಸಾಧಿಸಿ ತೋರಿಸಿದಾಕೆ ಜೆ. ಕೆ. ರೌಲಿಂಗ್. ಇವತ್ತು ಜಗತ್ತಿನ ಲಕ್ಷಗಟ್ಟಲೆ ಮಕ್ಕಳು ಮತ್ತು ಹಿರಿಯರು ಕತೆಕಾದಂಬರಿಗಳನ್ನು ಓದಲು ಆಕೆಯೇ ಪ್ರೇರಣೆ. ಕೇವಲ ಐದು ವರುಷಗಳಲ್ಲಿ, ಸರಕಾರದ ಹಣ ಸಹಾಯದಿಂದ ದಿನ ದೂಡುತ್ತಿದ್ದ ಮಹಿಳೆಯಾಗಿದ್ದಾಕೆ ಜಗತ್ತಿನ ಅತಿ ಶ್ರೀಮಂತ ಮಹಿಳೆಯರಲ್ಲಿ ಒಬ್ಬಳಾಗಿ ಬದಲಾದದ್ದು ಒಂದು ರೋಚಕ ಪ್ರಸಂಗ. ಇಂತಹ ಸಾಧನೆಗೈದ ಜೆ. ಕೆ. ರೌಲಿಂಗ್ ಪರಿಶ್ರಮದ ದುಡಿಮೆ ಮತ್ತು ದೃಢ ನಿರ್ಧಾರ ಸಾಧನೆಯ ಸೋಪಾನಗಳು ಎಂಬುದಕ್ಕೊಂದು ಜ್ವಲಂತ ನಿದರ್ಶನ.