28. ಎಲ್ಲವೂ ನಿಮ್ಮ ಕೈಯಲ್ಲಿದೆ

28. ಎಲ್ಲವೂ ನಿಮ್ಮ ಕೈಯಲ್ಲಿದೆ

ಆ ಊರಿನ ಹೊರವಲಯದಲ್ಲಿ ವಾಸ ಮಾಡುವ ವ್ಯಕ್ತಿ ಬಹಳ ಬುದ್ಧಿವಂತ; ಯಾವುದೇ ಪ್ರಶ್ನೆ ಕೇಳಿದರೂ ಆತ ಉತ್ತರ ಕೊಡುತ್ತಾನೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಹತ್ತಿರದ ಹಳ್ಳಿಯ ಇಬ್ಬರು ಯುವಕರು ಆ ಬುದ್ಧಿವಂತನನ್ನು ಮೂರ್ಖನನ್ನಾಗಿ ಮಾಡಬೇಕೆಂದು ನಿರ್ಧರಿಸಿದರು. ಅವರು ಒಂದು ಸಣ್ಣ ಹಕ್ಕಿಯನ್ನು ಹಿಡಿದುಕೊಂಡು ಆ ಬುದ್ಧಿವಂತನ ಮನೆಗೆ ಹೋದರು.

ಬುದ್ಧಿವಂತ ಇಬ್ಬರು ಯುವಕರನ್ನು ಎದುರುಗೊಂಡ. ಒಬ್ಬ ಯುವಕ ಆ ಹಕ್ಕಿಯನ್ನು ತನ್ನ ಅಂಗೈಗಳ ಒಳಗೆ ಮುಚ್ಚಿಟ್ಟುಕೊಂಡು ಬುದ್ಧಿವಂತನ ಬಳಿ ಪ್ರಶ್ನೆ ಕೇಳಿದ, "ನನ್ನ ಕೈಯಲ್ಲಿರುವ ಹಕ್ಕಿ ಸತ್ತಿದೆಯಾ ಅಥವಾ ಜೀವಂತ ಇದೆಯಾ?"

ಬುದ್ಧಿವಂತನಿಗೆ ಇವರ ಹುನ್ನಾರ ಅರ್ಥವಾಯಿತು. ಅವನು ಹೀಗೆಂದು ಉತ್ತರಿಸಿದ: “ನಾನೀಗ ಹಕ್ಕಿ ಜೀವಂತ ಇದೆಯೆಂದು ಉತ್ತರಿಸಿದರೆ, ನೀನು ಅಂಗೈಗಳಿಂದ ಆ ಹಕ್ಕಿಯನ್ನು ಅಮುಕಿ ಕೊಲ್ಲುತ್ತಿ; ಬದಲಾಗಿ ಆ ಹಕ್ಕಿ ಸತ್ತಿದೆ ಎಂದು ನಾನು ಉತ್ತರಿಸಿದರೆ, ನೀನು ಅಂಗೈಗಳನ್ನು ತೆರೆದು, ಅದು ಹಾರಿ ಹೋಗಲು ಬಿಡುತ್ತಿ. ಆ ಹಕ್ಕಿಯ ಸಾವು ಅಥವಾ ಬದುಕು ನಿನ್ನ ಕೈಯಲ್ಲಿದೆ." ತನ್ನ ಮಾತನ್ನು ಮುಂದುವರಿಸಿ ಆ ಯುವಕರಿಗೆ ಬುದ್ಧಿವಂತ ಹೇಳಿದ, "ಹಾಗೆಯೇ ಯಶಸ್ಸು ಮತ್ತು ಸೋಲು ನಿಮ್ಮ ಕೈಯಲ್ಲೇ ಇದೆ. ಅಂದರೆ ಎಲ್ಲವೂ ನಿಮ್ಮ ಕೈಯಲ್ಲಿದೆ. ಹಾಗಾಗಿ ನಿಮ್ಮ ಕೈಗಳನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿ." ಬುದ್ಧಿವಂತನ ಮಾತುಗಳನ್ನು ಕೇಳಿದ ಯುವಕರು ಮಾತಾಡದೆ ಅಲ್ಲಿಂದ ತಮ್ಮ ಮನೆಗೆ ನಡೆದರು.