30. ಪ್ರಾಮಾಣಿಕನಾಗಲು ಧೈರ್ಯ ಬೇಕು

30. ಪ್ರಾಮಾಣಿಕನಾಗಲು ಧೈರ್ಯ ಬೇಕು

ಒಬ್ಬ ಯುವರಾಜನಿದ್ದ. ಅವನು ಸುಳ್ಳು ಹೇಳುತ್ತಿದ್ದ; ತಾನು ತಪ್ಪು ಮಾಡಿದಾಗಲಂತೂ ಸುಳ್ಳು ಹೇಳುವುದೇ ಅವನ ಅಭ್ಯಾಸ. ಕ್ರಮೇಣ ಅದು ಚಟವಾಯಿತು. ಇದರಿಂದಾಗಿ ಅವನ ತಪ್ಪಿಗೆ ಇತರರಿಗೆ ಶಿಕ್ಷೆಯಾಗುತ್ತಿತ್ತು. ಈ ಕಾರಣದಿಂದಾಗಿ ಸೇವಕರು ಮತ್ತು ಇತರರಲ್ಲಿ ಅವನ ಬಗ್ಗೆ ಅಸಮಾಧಾನ ಬೆಳೆಯಿತು. ಅವರು ಅವನಿಂದ ದೂರ ಇರತೊಡಗಿದರು. ಯುವರಾಜನಿಗೆ ಯಾರ ಸಾಂಗತ್ಯವೂ ಇಲ್ಲದೆ ಬಹಳ ಬೇಸರವಾಗುತ್ತಿತ್ತು.

ಅದೊಂದು ದಿನ ಸಣ್ಣ ಹುಡುಗನೊಬ್ಬ ಯುವರಾಜನ ಮೆಚ್ಚಿನ ಮಾವಿನ ಗಿಡವನ್ನು ಕಡಿದು ಹಾಕಿದ. ಆದರೆ ರಾಜ ಆ ಸಣ್ಣ ಹುಡುಗನಿಗೆ ಶಿಕ್ಷೆ ನೀಡಲಿಲ್ಲ; ಅವನನ್ನು ಬಯ್ಯಲೂ ಇಲ್ಲ. ಇದನ್ನು ಕಂಡ ಯುವರಾಜ ಕೋಪಗೊಂಡ. ಆಗ ರಾಜ ಅವನಿಗೆ ತಿಳಿಯ ಹೇಳಿದ: “ಯುವರಾಜಾ, ಸತ್ಯ ಹೇಳುವುದಕ್ಕಿಂತ ಸುಳ್ಳು ಹೇಳುವುದು ಸುಲಭ. ಆ ಸಣ್ಣ ಹುಡುಗ ಧೈರ್ಯವಂತ. ಗಿಡ ಕಡಿದದ್ದು ತಾನೇ ಎಂದವನು ಸತ್ಯ ಹೇಳಿದ. ಅದಕ್ಕಾಗಿ ನಾನು ಅವನನ್ನು ಕ್ಷಮಿಸಿದ್ದೇನೆ. ಇನ್ನೊಮ್ಮೆ ಅವನು ಹಾಗೆ ಮಾಡಿದರೆ, ಅವನಿಗೆ ಶಿಕ್ಷೆ ನೀಡುತ್ತೇನೆ.”

ರಾಜನ ಮಾತುಗಳನ್ನು ಕೇಳಿದ ಯುವರಾಜನಿಗೆ ಸತ್ಯ ಹೇಳಲು ಧೈರ್ಯ ಬೇಕೆಂಬುದು ಅರ್ಥವಾಯಿತು. ಅಂದಿನಿಂದ ಅವನು ಸುಳ್ಳು ಹೇಳಲಿಲ್ಲ. ಕ್ರಮೇಣ ಸೇವಕರೂ ಇತರರೂ ಯುವರಾಜನೊಂದಿಗೆ ಒಡನಾಡಲು ಶುರು ಮಾಡಿದರು. ಯುವರಾಜ ಸಂತೋಷದಿಂದ ದಿನಗಳೆಯತೊಡಗಿದ.