30,000 ವರುಷ ಪುರಾತನ ಬೀಜದಿಂದ ಸಸ್ಯ ಪುನರುಜ್ಜೀವನ …
ಇದು ಮಹಾನ್ “ಅಳಿಲು ಸೇವೆ”ಯ ಕತೆ. ಸೈಬೀರಿಯಾದ ಹಿಮಗಡ್ಡೆಯ ಆಳದಲ್ಲಿ ೩೦,೦೦೦ ವರುಷ ಮುಂಚೆ ಅಳಿಲುಗಳು ರಕ್ಷಿಸಿಟ್ಟಿದ್ದ ಹಣ್ಣಿನ ಬೀಜದಿಂದ ಹೂಬಿಡುವ ಸಸಿಗಳನ್ನು ರಷ್ಯಾದ ವಿಜ್ನಾನಿಗಳು ಪುನರುಜ್ಜೀವನಗೊಳಿಸಿದ್ದಾರೆ.
ಸಾವಿರಾರು ವರುಷ ಹಳೆಯ ಬೀಜದಿಂದ ಸಸಿ ಬೆಳೆಸಿದ ಈ ದೊಡ್ಡ ಸುದ್ದಿ ಪ್ರಕಟಿಸಿದವರು ರಷ್ಯಾದ ವಿಜ್ನಾನ ಅಕಾಡೆಮಿಯ ಸಂಶೋಧಕರಾದ ಸ್ಟೆಟ್ಲಾನಾ ಯಶಿನಾ ಮತ್ತು ಡೇವಿಡ್ ಗಿಲಿಚಿನಸ್ಕಿ.
ಪ್ರಾಚೀನ ಜೈವಿಕ ವಸ್ತುಗಳ ಸಂಶೋಧನೆಯಲ್ಲಿ ಇದೊಂದು ಮೈಲಿಗಲ್ಲು. ಯಾಕೆಂದರೆ ಸತ್ತೇ ಹೋಗಿದೆ ಎನ್ನಬಹುದಾದ ಜೈವಿಕ ವಸ್ತುವಿನಿಂದ ಜೀವ ಮೂಡಿಸುವುದು ಅಸಾಮಾನ್ಯ ಕೆಲಸ.
ಪುರಾತನ ಸಸ್ಯವನ್ನು ಪುನರುಜ್ಜೀವನಗೊಳಿಸಿದ ಈ ವರೆಗಿನ ದಾಖಲೆ ೨,೦೦೦ ವರುಷ ಹಳೆಯ ತಾಳೆಬೀಜಗಳಿಗೆ ಸಂಬಂಧಿಸಿದ್ದು – ಅವು ಪತ್ತೆಯಾದದ್ದು ಇಸ್ರೇಲಿನ ಮೃತಸಮುದ್ರದ ಹತ್ತಿರದ ಮಸಾಡಾ ಕೋಟೆಯಲ್ಲಿ.
ರೇಡಿಯೋ ಕಾರ್ಬನ್ ಪರೀಕ್ಷೆಯು ಸೈಬೀರಿಯಾದಲ್ಲಿ ಪತ್ತೆಯಾದ ಸೈಲೆನೆ ಸ್ಟೇನೋಫಿಲ್ಲಾ ಸಸ್ಯದ ಆ ಬೀಜಗಳು ಸುಮಾರು ೩೧,೮೦೦ ವರುಷ ಹಳೆಯವು ಎಂದು ಖಚಿತ ಪಡಿಸಿವೆ.
ಈ ಸಂಶೋಧನೆಗೆ ನಾಂದಿ ರಷ್ಯಾದ ಈಶಾನ್ಯ ಸೈಬೀರಿಯಾದ ಕೊಲಿಮಾ ನದಿಯ ದಡದಲ್ಲಿ ಅಳಿಲುಗಳ ಶೀತನಿದ್ರೆಯ ೭೦ ಬಿಲಗಳು ಪತ್ತೆಯಾದದ್ದು. ಅವೆಲ್ಲವೂ ನೆಲಮಟ್ಟದಿಂದ ೨೦ – ೪೦ ಮೀಟರ್ (೬೫ರಿಂದ ೧೩೦ ಅಡಿ) ಆಳದಲ್ಲಿದ್ದವು. ಅವುಗಳಲ್ಲಿ ವಿವಿಧ ಸಸ್ಯಗಳ ಸಾವಿರಾರು ಬೀಜಗಳು ಪತ್ತೆಯಾದವು. ಅಲ್ಲಿ ಖಡ್ಗಮೃಗಗಳು, ಕಾಡುಕೋಣಗಳು, ಕುದುರೆಗಳು, ಜಿಂಕೆಗಳು ಮತ್ತು ಇತರ ಸಸ್ಯಭಾಗಗಳೊಂದಿಗೆ ಈ ಬೀಜಗಳೂ ಹೂತುಹೋಗಿದ್ದವು.
ಇವುಗಳ ಸಂರಕ್ಷಣೆಗೆ ಹಿಮಗಡ್ಡೆ ದೊಡ್ಡ ಫ್ರೀಜರಿನಂತೆ ಕೆಲಸ ಮಾಡಿತು. ಅಳಿಲುಗಳು ಹೊತ್ತು ಒಯ್ದಿದ್ದ ಈ ಬೀಜಗಳು, ಅಷ್ಟು ಆಳದಲ್ಲಿ ಶೂನ್ಯದಿಂದ ೭ ಡಿಗ್ರಿ ಸೆಲ್ಷಿಯಸ್ ಕಡಿಮೆ ಶೀತದಲ್ಲಿ ಸಾವಿರಾರು ವರುಷ ಹಾಳಾಗದೆ ಉಳಿದವು.
ಅಳಿಲುಗಳು ಬಿಲಗಳಲ್ಲಿ ಬೀಜಗಳನ್ನಿಟ್ಟ ಸ್ವಲ್ಪ ಸಮಯದಲ್ಲೇ ಆ ಬಿಲಗಳು ಹಿಮದಿಂದ ಮುಚ್ಚಿಹೋದವು. ಅನಂತರ ನಿರಂತರವಾಗಿ ಹಿಮಗಡ್ಡೆಯಿಂದ ಆವರಿಸಲ್ಪಟ್ಟಿದ್ದವು. ಆದ್ದರಿಂದ ವಿಜ್ನಾನಿಗಳಿಗೆ ತಾಜಾ ಬೀಜಗಳೇ ಸಿಕ್ಕಿದಂತಾಯಿತು.
ಮೊಸ್ಕೋ ಹತ್ತಿರದ ಪ್ರಯೋಗಾಲಯದಲ್ಲಿ ವಿಜ್ನಾನಿಗಳು ಬೀಜಗಳಿಂದಲೇ ಸಸಿ ಬೆಳೆಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಅನಂತರ, ಬೀಜವನ್ನು ಆವರಿಸಿದ ಕೋಶಗಳಿಂದ ಸಸಿ ಬೆಳೆಸಿದರು – ನಿಯಂತ್ರಿತ ಬೆಳಕು ಮತ್ತು ಉಷ್ಣತೆಯಲ್ಲಿ ಇರಿಸಿದ ಕುಂಡಗಳಲ್ಲಿ.
ಸೂಕ್ತ ಪರಿಸರದಲ್ಲಿ ಸಸ್ಯಕೋಶಗಳು ಸಾವಿರಾರು ವರುಷ ಜೀವಂತವಾಗಿ ಇರಬಲ್ಲವು ಎಂಬ ವಿಜ್ನಾನಿಗಳ ನಂಬಿಕೆ ಈ ಸಂಶೋಧನೆಯಿಂದಾಗಿ ಇನ್ನೊಮ್ಮೆ ಖಚಿತವಾಗಿದೆ. ಆ ಬಿಲಗಳಲ್ಲಿ ಸೈಲೆನೆ ಸ್ಟೆನೋಫಿಲ್ಲಾ ಸಸ್ಯದ ಇತ್ತೀಚೆಗಿನ ಬೀಜಗಳು ಸೇರಿಕೊಂಡಿಲ್ಲ ಎಂಬುದನ್ನು ಆ ಸಂಶೋಧಕರು ರೇಡಿಯೋ ಕಾರ್ಬನ್ ಪರೀಕ್ಷೆ ಮೂಲಕ ಸಾಬೀತು ಪಡಿಸಿದ್ದಾರೆ.
ಇಂಥದೇ ಇನ್ನೊಂದು ರೋಚಕ ಕತೆ: ಉತ್ತರ ಅಮೇರಿಕಾದ ಬಹುವಾರ್ಷಿಕ ಸಸ್ಯ ಆರ್ಕಟಿಕ್ ಲುಪೈನಿನ ೧೦,೦೦೦ ವರುಷ ಪುರಾತನ ಬೀಜಗಳಿಂದ ಸಸ್ಯ ಪುನರುಜ್ಜೀವನ ಮಾಡಿದ್ದು. ಆ ಬೀಜಗಳು ಸಿಕ್ಕಿದ್ದು ಯುಕೋನಿನ ಚಿನ್ನದ ಗಣಿಗಾರನೊಬ್ಬನಿಗೆ ೨೦ನೆಯ ಶತಮಾನದ ಮಧ್ಯಭಾಗದಲ್ಲಿ.
ಈ ಪ್ರಕೃತಿಯ ಆಗುಹೋಗುಗಳು ನಿಗೂಢ. ಆ ಬೀಜಗಳನ್ನು ನೆಲದಾಳಕ್ಕೆ ಒಯ್ದದ್ದು ಅಳಿಲು. ಅವನ್ನು ಉಳಿಸಿದ್ದು ಹಿಮಗಡ್ಡೆ. ಈಗ ಅದರಿಂದ ಸಸಿ ಬೆಳೆಸಿದ್ದು ಮನುಷ್ಯ. ಎಲ್ಲಿಗೆಲ್ಲಿಯ ಸಂಬಂಧ!