31. ಖಾಲಿ ಪುಸ್ತಕ - ಬರವಣಿಗೆಯ ಅವಕಾಶ

31. ಖಾಲಿ ಪುಸ್ತಕ - ಬರವಣಿಗೆಯ ಅವಕಾಶ

ಒಂದು ಪುಸ್ತಕದ ಅಂಗಡಿಯಲ್ಲಿ ಖಾಲಿ ಪುಸ್ತಕವೊಂದಿತ್ತು. ಹಲವರು ಅದನ್ನು ತೆರೆದು, ಅದರಲ್ಲಿ ಏನನ್ನೂ ಮುದ್ರಿಸದೆ ಇರೋದನ್ನು ಕಂಡು ಅದನ್ನು ಮುಚ್ಚುತ್ತಿದ್ದರು. ಅಲ್ಲಿ ಒಂದು ಶಾಯಿ ಬಾಟಲಿಯೂ ಇತ್ತು. ಅದನ್ನೂ ಯಾರೂ ತೆರೆದಿರಲಿಲ್ಲ. ಕೊನೆಗೊಂದು ದಿನ ಅಂಗಡಿಯ ಮಾಲೀಕ ಆ ಖಾಲಿ ಪುಸ್ತಕವನ್ನೂ ಶಾಯಿ ಬಾಟಲಿಯನ್ನು ಅಂಗಡಿಯ ಹೊರಗಿದ್ದ ಕಸದ ಬುಟ್ಟಿಗೆ ಎಸೆದ. ಅಷ್ಟರಲ್ಲಿ ಅಲ್ಲಿ ಹಾರಿ ಹೋಗುತ್ತಿದ ಹಕ್ಕಿಯ ಒಂದು ಗರಿ ಕಳಚಿ ಆ ಖಾಲಿ ಪುಸ್ತಕದ ಹತ್ತಿರ ಬಿತ್ತು.

ಅಲ್ಲಿ ಹಾದು ಹೋಗುತ್ತಿದ್ದ ಹುಡುಗಿಯೊಬ್ಬಳು ಕಸದ ಬುಟ್ಟಿಯಲ್ಲಿದ್ದ ಪುಸ್ತಕವನ್ನು ತೆರೆದು ನೋಡಿದಳು. ಅದು ಖಾಲಿ ಇರೋದನ್ನು ಕಂಡು ಅವಳಿಗೆ ಖುಷಿಯಾಯಿತು. ಆ ಪುಸ್ತಕವನ್ನೂ ಪಕ್ಕದಲ್ಲಿದ್ದ ಶಾಯಿ ಬಾಟಲಿಯನ್ನೂ ಹಕ್ಕಿ ಗರಿಯನ್ನು ಎತ್ತಿಕೊಂಡು ಅವಳು ಮನೆಗೆ ಹೋದಳು.

ಅವತ್ತು ರಾತ್ರಿ ಊಟವಾದ ನಂತರ ಅವಳು ಆ ಖಾಲಿ ಪುಸ್ತಕವನ್ನು ತೆರೆದಳು. ಅವಳಿಗೆ ಅದರಲ್ಲಿ ತನ್ನ ಅನುಭವಗಳನ್ನು ಬರೆಯೋಣ ಅನಿಸಿತು. ಅವಳು ಬರೆಯಲು ಶುರು ಮಾಡಿದಳು. ಅನಂತರ ಪ್ರತಿ ದಿನವೂ ರಾತ್ರಿ ಮಲಗುವ ಮೊದಲು ಅವಳು ಖಾಲಿ ಪುಸ್ತಕದಲ್ಲಿ ಒಂದು ಪುಟ ಬರೆಯುತ್ತಾ ಹೋದಳು. ಒಂದು ವರುಷ ದಾಟಿದಾಗ ಆ ಖಾಲಿ ಪುಸ್ತಕದ ಎಲ್ಲ ಪುಟಗಳಲ್ಲಿಯೂ ಅವಳು ಬರೆದಿದ್ದಳು. ಅದನ್ನು ಒಯ್ದು ಅಮ್ಮನಿಗೆ ತೋರಿಸಿದಳು. ಅದನ್ನು ನೋಡಿದ ಅಮ್ಮ ಮಗಳ ಬೆನ್ನು ತಟ್ಟಿ, ಕೆಲವು ಪುಟಗಳನ್ನು ಓದಿದಳು. ಅಚ್ಚರಿಯಿಂದ ಅಮ್ಮ ಕೇಳಿದಳು, “ನೀನು ಬರೆದದ್ದು ಬಹಳ ಚೆನ್ನಾಗಿದೆ. ಯಾಕೆ ನಿನಗೆ ಇದನ್ನೆಲ್ಲ ಬರೆಯೋಣ ಅನಿಸಿತು?” ಮಗಳು ಉತ್ತರಿಸಿದಳು, “ಅಮ್ಮಾ, ಪುಸ್ತಕದ ಪುಟಗಳಲ್ಲಿ ಬರೆಯೋಣ ಅನಿಸಿತು. ನನಗೆ ಗೊತ್ತಿದ್ದ ಸಂಗತಿಗಳನ್ನೇ ಬರೆಯಲು ಶುರು ಮಾಡಿದೆ …. ನನ್ನ ಅನುಭವಗಳು, ನನ್ನ ಅಪ್ಪ-ಅಮ್ಮ, ನನ್ನ ಮನೆ ಇತ್ಯಾದಿ.” ಇತರರು ಅದನ್ನು ನೋಡಿ ಖಾಲಿ ಪುಸ್ತಕವೆಂದು ಮುಚ್ಚುತ್ತಿದ್ದರು. ಆದರೆ ಅವಳು ಅದೊಂದು ಬರವಣಿಗೆಯ ಅವಕಾಶವೆಂದು  ಭಾವಿಸಿ, ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಳು.