32. ಪ್ರಾಣಿ ದಯೆ ಒಳ್ಳೆಯ ಗುಣ

32. ಪ್ರಾಣಿ ದಯೆ ಒಳ್ಳೆಯ ಗುಣ

ಗುಣವತಿ ಎಂಬ ಬಾಲಕಿಗೆ ಮನೆಯ ಬಾಗಿಲಿನ ಬಳಿ ಕುಂಯ್ಗುಟ್ಟುವ ಸದ್ದು ಕೇಳಿಸಿತು. ಅವಳು ಬಾಗಿಲು ತೆರೆದು ನೋಡಿದಾಗ ಒಂದು ನಾಯಿ ಕುಂಯ್ ಕುಂಯ್ ಸದ್ದು ಮಾಡುತ್ತಿತ್ತು. ಹೊರಗೆ ಜೋರು ಮಳೆ ಸುರಿಯುತ್ತಿತ್ತು. ಆ ಹೆಣ್ಣು ನಾಯಿ ಪೂರ್ತಿ ಒದ್ದೆಯಾಗಿತ್ತು. "ಏನಾಯಿತು? ಯಾಕೆ ಕುಂಯ್ ಕುಂಯ್ ಅನ್ನುತ್ತಿದ್ದಿ?” ಎಂದವಳು ನಾಯಿಯನ್ನು ಮಾತನಾಡಿಸಿದಳು. ತಕ್ಷಣವೇ ಆ ನಾಯಿ ಮಳೆಯಲ್ಲೇ ಅಂಗಳ ದಾಟಿ, ಕಂಪೌಂಡಿನ ಹೊರಗಿದ್ದ ಸಿಮೆಂಟ್ ಪೈಪಿನ ಹತ್ತಿರ ಓಡಿತು.

ಗುಣವತಿ ಕುತೂಹಲದಿಂದ ನಾಯಿಯನ್ನು ಹಿಂಬಾಲಿಸಿದಳು. ಆ ಪೈಪಿನ ಹತ್ತಿರ ಬಂದಾಗ ಅವಳು ಮೂರು ಪುಟ್ಟ ನಾಯಿ ಮರಿಗಳನ್ನು ಕಂಡಳು. ಪೈಪಿನೊಳಗೆ ಮಳೆನೀರು ನುಗ್ಗಿತ್ತು. ಆ ನಾಯಿಮರಿಗಳಿಗೆ ಅಲ್ಲಿಂದ ಹೊರಬರಲಾಗುತ್ತಿರಲಿಲ್ಲ. “ಅಯ್ಯೋಯ್ಯೋ, ನೀವು ಇಲ್ಲಿದ್ದರೆ ಸತ್ತೇ ಹೋಗುತ್ತೀರಿ” ಎನ್ನುತ್ತಾ ಗುಣವತಿ ಆ ನಾಯಿಮರಿಗಳನ್ನು ಒಂದೊಂದಾಗಿ ಎತ್ತಿಕೊಂಡಳು. ಪುಟ್ಟ ಮರಿಗಳು ಚಳಿಯಿಂದಲೂ ಭಯದಿಂದಲೂ ನಡುಗುತ್ತಿದ್ದವು. ಅಂತೂ ಅವನ್ನು ಎತ್ತಿಕೊಂಡು ಬಂದು ಮನೆಯ ಜಗಲಿಯಲ್ಲಿಟ್ಟಳು. ತಾಯಿ ನಾಯಿಯೂ ಅಲ್ಲಿಗೆ ಧಾವಿಸಿ ಬಂತು. ಅದು ತನ್ನ ಮರಿಗಳನ್ನು ನೆಕ್ಕತೊಡಗಿತು. ಅದನ್ನು ನೋಡುತ್ತಾ ಗುಣವತಿಯ ಕಣ್ಣು ಮಂಜಾಯಿತು. ಮರಿಗಳ ಒದ್ದೆ ಮೈಯನ್ನು ನೆಕ್ಕಿದ ನಂತರ, ತಾಯಿ ನಾಯಿ ಗುಣವತಿಯ ಹತ್ತಿರ ಬಂದು ಜೋರಾಗಿ ಬಾಲ ಅಲ್ಲಾಡಿಸತೊಡಗಿತು. ಅನಂತರ ಗುಣವತಿ ತಾಯಿ ನಾಯಿಗೆ ಮತ್ತು ಮರಿಗಳಿಗೆ ಕಂಪೌಂಡಿನ ಮೂಲೆಯಲ್ಲಿ ಜೋಪಡಿಯೊಂದನ್ನು ಕಟ್ಟಿ ಕೊಟ್ಟಳು. ಗುಣವತಿಯ ಹಲವು ಗೆಳತಿಯರು ಬಂದು ನಾಯಿ ಸಂಸಾರವನ್ನು ನೋಡಿ, ಆ ಮರಿಗಳ ಜೀವ ಉಳಿಸಿದ್ದಕ್ಕಾಗಿ ಗುಣವತಿಯನ್ನು ಅಭಿನಂದಿಸಿದರು.