33 ಕೋಟಿ ದೇವತೆಗಳು ಎಂದರೆ ಯಾರು?

33 ಕೋಟಿ ದೇವತೆಗಳು ಎಂದರೆ ಯಾರು?

ಹಿಂದೂಗಳನ್ನು ವಿರೋಧಿಸುವವರು ನಿಮ್ಮ 33 ಕೋಟಿ ದೇವತೆಗಳ ಹೆಸರು ಏನೆಂದು ಪ್ರಶ್ನೆ ಕೇಳಿ ಅಣಕಿಸುತ್ತಾರೆ. ಹಿಂದೂಗಳು ಕೂಡ ಈ ಪ್ರಶ್ನೆ ಕೇಳಿ ವಿಚಲಿತರಾಗುತ್ತಾರೆ. ಅಸಲಿಗೆ ಈ ‘ಕೋಟಿ’ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಮರೆಮಾಚಿ ಕೆಲವರು ತಮಗೆ ಬೇಕಾದ ರೀತಿಯಲ್ಲಿ ಸಂಸ್ಕೃತಿಯನ್ನು ತಿದ್ದಿ ತೀಡಿ ಜಾಣರೆನಿಸಿಕೊಂಡರು.

ವೇದ ಪುರಾಣಗಳು ಹೇಳುವ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು ಮತ್ತು ಅವರ ಹೆಸರು ಮತ್ತು ಹಿಂದೂ ಧಾರ್ಮಿಕ ಸಾಹಿತ್ಯದಲ್ಲಿ ಉಲ್ಲೇಖಿಸಲಾಗಿರುವ 33 ಕೋಟಿ ದೇವತೆಗಳು ಯಾರು, ಅವರ ಹೆಸರುಗಳೇನು ಗೊತ್ತೇ!?

ಹಿಂದೂ ಧರ್ಮ – ಸಂಸ್ಕೃತಿಯಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ. ಬಹುತೇಕ ಜನರು ಇಲ್ಲಿ ‘ಕೋಟಿ’ ಅಂದರೆ ಸಂಖ್ಯೆ ಅಂದುಕೊಂಡಿದ್ದಾರೆ ಮತ್ತು 33 ಕೋಟಿ ಹೆಸರುಗಳನ್ನು ಹೇಳಿರೆಂದು ತಾಕೀತು ಮಾಡುತ್ತಾರೆ. ವಾಸ್ತವದಲ್ಲಿ ಈ ‘ಕೋಟಿ’ ಸಂಖ್ಯೆಯನ್ನು ಸೂಚಿಸುವ ಕೋಟಿಯಲ್ಲ. ಸಂಸ್ಕೃತದಲ್ಲಿ *‘ಕೋಟಿ’* ಅಂದರೆ ‘ವಿಧ’, ‘ವರ್ಗ’ (type) ಎಂಬ ಅರ್ಥವೂ ಇದೆ.

ಉದಾ: ಉಚ್ಚಕೋಟಿ. ಇದರ ಅರ್ಥ ಉಚ್ಚ ವರ್ಗಕ್ಕೆ ಸೇರಿದವರು ಎಂದು. ಹಾಗೆಯೇ ಮತ್ತೊಂದು ಉದಾಹರಣೆ : ಸಪ್ತಕೋಟಿ ಬುದ್ಧರು. ಇದರ ಅರ್ಥ, ಏಳು ಪ್ರಧಾನ ಬುದ್ಧರು ಎಂದು. 

ಯಜುರ್ವೇದ, ಅಥರ್ವ ವೇದ, ಶತಪಥ ಬ್ರಾಹ್ಮಣ ಮೊದಲಾದ ಪ್ರಾಚೀನ ಕೃತಿಗಳಲ್ಲಿ 33 ವಿಧದ ದೇವತೆಗಳನ್ನು ಉಲ್ಲೇಖಿಸಲಾಗಿದೆ. ಇವರೇ ತ್ರಯತ್ರಿಂಶತಿ ಕೋಟಿ (33 ಕೋಟಿ) ದೇವತೆಗಳು. ಹಿಂದೂ ಗ್ರಂಥಗಳು ಮಾತ್ರವಲ್ಲ, ಬೌದ್ಧ, ಪಾರಸಿ ಮೊದಲಾದವು ಕೂಡಾ 33 ದೇವ ವರ್ಗಗಳ ಕುರಿತು ಹೇಳುತ್ತವೆ. ಬೌದ್ಧರ ದಿವ್ಯವಾದನ ಮತ್ತು ಸುವರ್ಣ ಪ್ರಭಾಸ ಸೂತ್ರಗಳಲ್ಲಿ ಇದರ ಉಲ್ಲೇಖವಿದೆ.

ಈಗ ದೇವತೆಗಳ ಈ 33 ವರ್ಗಗಳನ್ನೂ, ಅವುಗಳಲ್ಲಿ ಬರುವ ದೇವತೆಗಳ ಹೆಸರನ್ನೂ ನೋಡೋಣ :

12 ಆದಿತ್ಯರು (ದ್ವಾದಶಾದಿತ್ಯರು) : 1. ತ್ವಷ್ಟ  2. ಪೂಷ  3. ವಿವಸ್ವಾನ್  4. ಮಿತ್ರ  5. ಧಾತಾ  6. ವಿಷ್ಣು  7. ಭಗ  8. ವರುಣ  9. ಸವಿತೃ 10. ಶಕ್ರ  11. ಅಂಶ  12. ಅರ್ಯಮ

11 ರುದ್ರರು (ಏಕಾದಶರುದ್ರಾಃ) : 1. ಮನ್ಯು  2. ಮನು  3. ಮಹಿನಸ  4. ಮಹಾನ್  5. ಶಿವ  6. ಋತಧ್ವಜ  7. ಉಗ್ರರೇತಾ  8. ಭವ  9. ಕಾಲ  10. ವಾಮದೇವ  11. ಧೃತವೃತ

8 ವಸುಗಳು (ಆಷ್ಟವಸವಃ) : 1.ಧರಾ 2.ಪಾವಕ 3.ಅನಿಲ 4.ಅಪ 5.ಪ್ರತ್ಯುಷ 6.ಪ್ರಭಾಸ 7.ಸೋಮ 8.ಧ್ರುವ

ಮತ್ತಿಬ್ಬರು : 1. ಇಂದ್ರ 2.ಪ್ರಜಾಪತಿ

ತ್ರಯತ್ರಿಂಶತಿ (33) ಕೋಟಿ ದೇವತೆಗಳು ಯಾರೆಲ್ಲ ಎಂದು ತಿಳಿಯಿತಲ್ಲ? ಈ ಹೆಸರುಗಳನ್ನು ಬಾಯಿಪಾಠ ಮಾಡುವುದು ಬಹಳ ಸುಲಭ. ಯಾರಾದರೂ ಇನ್ನು 33 ಕೋಟಿ ದೇವತೆಗಳ ಹೆಸರು ಹೇಳಿ ಎಂದರೆ ಹಿಂದೆ ಮುಂದೆ ನೋಡುವ ಅಗತ್ಯವೇ ಇಲ್ಲ! ಅಲ್ಲವೆ?

 (ಸಂಗ್ರಹ ಮಾಹಿತಿ) - ಪ್ರಿಯಾ ಸುದರ್ಶನ್