33. ನೈಸರ್ಗಿಕ ಆಯ್ಕೆಯ ಸಿದ್ಧಾಂತ ಪ್ರತಿಪಾದಿಸಿದ ಚಾರ್ಲ್ಸ್ ಡಾರ್ವಿನ್
ರೊಬರ್ಟ್ ಡಾರ್ವಿನ್ ಎಂಬ ಶ್ರೀಮಂತ ವೈದ್ಯರಿಗೆ ನಾಲ್ವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಕಿರಿಯ ಮಗ ಚಾರ್ಲ್ಸ್ ಎಂಟು ವರುಷದವನಿದ್ದಾಗ ಅವನ ತಾಯಿ ತೀರಿಕೊಂಡಳು. ಹಾಗಾಗಿ ಅವನ ಅಕ್ಕಂದಿರು ಅವನನ್ನು ಬೆಳೆಸಿದರು. ತಂದೆ ರೊಬರ್ಟ್ ಕಿರಿಯ ಮಗನಿಗೆ ಸಸ್ಯಗಳ ಬಗ್ಗೆ ಇದ್ದ ಆಸಕ್ತಿಯನ್ನು ಗಮನಿಸಿ ಅದನ್ನು ಪ್ರೋತ್ಸಾಹಿಸಿದ. ಜೊತೆಗೆ, ಬೋರ್ಡಿಂಗ್ ಶಾಲೆಯಲ್ಲಿ ಚಾರ್ಲ್ಸ್-ನಿಗೆ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಶಿಕ್ಷಣವನ್ನೂ ಕೊಡಿಸಿದ.
ಚಾರ್ಲ್ಸ್-ನಿಗೆ ಶಾಲೆಯೆಂದರೆ ಬೇಜಾರು. ಆದ್ದರಿಂದ ಅವನು ಶಾಲಾ ಕೆಲಸಗಳನ್ನು ಎಷ್ಟು ಬೇಕೋ ಅಷ್ಟೇ ಮಾಡುತ್ತಿದ್ದ. ಉಳಿದ ಸಮಯದಲ್ಲಿ ಹಕ್ಕಿಗಳನ್ನು ವೀಕ್ಷಿಸುತ್ತಾ, ಚಿಪ್ಪುಹುಳಗಳನ್ನು ಸಂಗ್ರಹಿಸುತ್ತಾ ಕಾಲ ಕಳೆಯುತ್ತಿದ್ದ. ಅವನ ತಂದೆಗೆ ಅವನ ಬಗ್ಗೆ ಆತಂಕ - ಇವನು ಯಾವ ಕೆಲಸಕ್ಕೂ ಬಾರದವನು ಆಗುತ್ತಾನೇನೋ ಎಂದು. ಅವನು ಆಗಾಗ ಚಾರ್ಲ್ಸ್-ನನ್ನು ಎಚ್ಚರಿಸುತ್ತಿದ್ದ: “ನೀನು ಹಕ್ಕಿಗಳನ್ನು ನೋಡೋದು, ನಾಯಿಗಳನ್ನು ಆಡಿಸೋದು ಮತ್ತು ಇಲಿಗಳನ್ನು ಹಿಡಿಯೋದು - ಇವುಗಳಲ್ಲೇ ಮುಳುಗಿರುತ್ತೀಯಾ. ನೀನು ಹೀಗೇ ಮಾಡುತ್ತಿದ್ದರೆ, ನಿನಗೂ ನಮ್ಮ ಕುಟುಂಬಕ್ಕೂ ಕೆಟ್ಟ ಹೆಸರು ತರುತ್ತಿ.”
ಅದೇನಿದ್ದರೂ ಚಾರ್ಲ್ಸ್ ತನ್ನ ಹವ್ಯಾಸಗಳನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸಿದ. ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗಲೇ ಅವನ ಚಿಪ್ಪುಹುಳಗಳ ಸಂಗ್ರಹ ಹೆಸರುವಾಸಿಯಾಗಿತ್ತು. ಅವನ ಹವ್ಯಾಸಗಳೇ ಅವನ ಸಂಶೋಧನೆಯ ಸೋಪಾನಗಳಾದವು. ಅಂತಿಮವಾಗಿ, “ನೈಸರ್ಗಿಕ ಆಯ್ಕೆಯಿಂದ ವಿಕಾಸ” ಎಂಬ ಸುಪ್ರಸಿದ್ಧ ಸಿದ್ಧಾಂತವನ್ನು ಮಂಡಿಸಿ ಅವನು ಜಗತ್ಪ್ರಸಿದ್ಧನಾದ. ಇದುವೇ ಆಧುನಿಕ ವಿಕಾಸವಾದದ ಅಧ್ಯಯನಗಳಿಗೆ ನಾಂದಿಯಾಯಿತು.