34. ಚಂದದ ಗೂಡು ಕಟ್ಟಿದ ಗೀಜಗ ಕಲಿಸಿದ ಪಾಠ
ಬಾಲಕ ಶಂಭು ಸಿಟ್ಟು ಮಾಡಿಕೊಂಡಿದ್ದ. “ನನಗೆ ಕಲಿಯೋದು ಇಷ್ಟವಿಲ್ಲ. ಅಪ್ಪ ಓದುಓದು ಅಂತಾರೆ. ಅಮ್ಮನೂ ಓದುಓದು ಅಂತಾರೆ. ಹಾಗಾದರೆ ಆಟ ಆಡಲಿಕ್ಕೇ ಇಲ್ಲವಾ?" ಎಂಬುದು ಅವನ ಗೊಣಗಾಟ. ಮನೆಯ ಕಿಟಕಿಯಿಂದ ಕಾಣುವ ಹೊರಗಿನ ನೋಟ ನೋಡುತ್ತ ನಿಂತಿದ್ದ ಅವನು. ಅಲ್ಲಿ ಕಾಣುವ ಮರವೊಂದರಲ್ಲಿ ಹಲವು ಹಕ್ಕಿಗಳ ನಲಿದಾಟ. ಕೆಲವು ಹಕ್ಕಿಗಳು ತಮ್ಮದೇ ಭಾಷೆಯಲ್ಲಿ ಮಾತಾಡಿಕೊಳ್ಳುತ್ತಿದ್ದವು; ಕೆಲವು ಪ್ರಾಸಬದ್ಧವಾಗಿ ಚಿಲಿಪಿಲಿ ಸದ್ದು ಮಾಡುತ್ತಿದ್ದವು; ಕೆಲವು ರೆಂಬೆಯಿಂದ ರೆಂಬೆಗೆ ಜಿಗಿಯುತ್ತಿದ್ದವು; ಇನ್ನು ಕೆಲವು ಹಕ್ಕಿಗಳು ಇತ್ತಲಿಂದ ಹಾರಿ, ಮರಕ್ಕೊಂದು ಸುತ್ತು ಬಂದು, ಅತ್ತಲಿನ ರೆಂಬೆಗೆ ಮರಳುತ್ತಿದ್ದವು. “ಹಕ್ಕಿಗಳು ಇಡೀ ದಿನ ಆಟವಾಡುತ್ತವೆ; ನಾನು ಮಾತ್ರ ಇಡೀ ದಿನ ಪಾಠ ಓದಬೇಕು" ಎಂದು ಬೇಜಾರು ಮಾಡಿಕೊಂಡ ಶಂಭು.
ಆಗ, ಕಿಟಕಿಗೆ ಹತ್ತಿರವಾಗಿದ್ದ ಮರದ ರೆಂಬೆಯಲ್ಲಿ ಗೀಜಗನ ಹಕ್ಕಿಯೊಂದು ಬಂದು ಕುಳಿತಿತು. ಅದೇನು ಮಾಡುತ್ತದೆಂದು ನೋಡಲು ಶುರು ಮಾಡಿದ ಶಂಭು. ಅದು ಸಣ್ಣಸಣ್ಣ ಕಡ್ಡಿಗಳನ್ನು ತಂದು ರೆಂಬೆ ಟಿಸಿಲು ಒಡೆದಿದ್ದಲ್ಲಿ ಇಟ್ಟಿತು. ಪುನಃ ಹಾರಿ ಹೋಗಿ ಇನ್ನಷ್ಟು ಕಡ್ಡಿಗಳನ್ನು ಕೊಕ್ಕಿನಲ್ಲಿ ಕಚ್ಚಿ ತಂದಿತು. ಮತ್ತೊಮ್ಮೆ ಹಾರಿ ಹೋಗಿ ಇನ್ನೂ ಕೆಲವು ಕಡ್ಡಿಗಳನ್ನು ತಂದಿತು. ಅವನ್ನೆಲ್ಲ ಜೋಡಿಸತೊಡಗಿತು. ಗೀಜಗನ ಹಕ್ಕಿ ಗೂಡು ಕಟ್ಟುತ್ತಿದೆಯೆಂದು ಶಂಭುವಿಗೆ ಅರ್ಥವಾಯಿತು.
ಸಂಜೆಯ ಹೊತ್ತಿಗೆ ಗೀಜಗನ ಗೂಡು ತಯಾರಾಗಿತ್ತು - ಚಂದದ ಗೂಡು ಮರದ ಕೊಂಬೆಯಿಂದ ನೇತಾಡುತ್ತಿತ್ತು. ಅದರ ಒಳಹೋಗಲು ಒಂದು ರಂಧ್ರವನ್ನು ಗೀಜಗ ಬಿಟ್ಟಿತ್ತು. ಈ ಗೂಡು ಕಟ್ಟಲು ಅದು ಬಹುಶಃ ಐನೂರು ಸಲ ಹಾರಿ ಹೋಗಿ ಕಡ್ಡಿಗಳನ್ನು ತಂದಿತ್ತು. ಅನಂತರ ಅವನ್ನೆಲ್ಲ ಒಬ್ಬ ನೇಕಾರನಂತೆ ನಾಜೂಕಿನಿಂದ ಜೋಡಿಸಿತ್ತು. ಆ ಪುಟ್ಟ ಹಕ್ಕಿ ಅದೆಷ್ಟು ಕೆಲಸ ಮಾಡಿತ್ತು! ಮನಮೋಹಕ ಗೂಡು ಸಿದ್ಧವಾದಾಗ ಗೀಜಗನ ಹಕ್ಕಿ ಅದರ ಪಕ್ಕ ಕುಳಿತು ಇಂಪಾಗಿ ಹಾಡಿತ್ತು. ಇದನ್ನೆಲ್ಲ ನೋಡುತ್ತಿದ್ದ ಶಂಭು ದಂಗು ಬಡಿದು ಹೋಗಿದ್ದ. ಏನನ್ನಾದರೂ ಸಾಧಿಸಬೇಕಾದರೆ ಕಷ್ಟ ಪಡಬೇಕು ಎಂದು ಅವನಿಗೆ ಚೆನ್ನಾಗಿ ಅರ್ಥವಾಗಿತ್ತು. ಶಾಲಾ ಪಾಠಗಳನ್ನು ಕಲಿಯಲಿಕ್ಕಾಗಿ ತಾನೂ ಕಷ್ಟ ಪಡುತ್ತೇನೆಂದು ಅವನು ಅವತ್ತೇ ನಿರ್ಧರಿಸಿದ.