365 ಶ್ರೇಷ್ಠ ವಿಜ್ಞಾನಿಗಳು

365 ಶ್ರೇಷ್ಠ ವಿಜ್ಞಾನಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಟೂರು ವಿಶ್ವನಾಥ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೬೦.೦೦, ಮುದ್ರಣ: ಫೆಬ್ರವರಿ ೨೦೨೧

ಸಂಪಟೂರು ವಿಶ್ವನಾಥ್ ಅವರು ಜಗತ್ತಿನ ೩೬೫ ಶ್ರೇಷ್ಠ ವಿಜ್ಞಾನಿಗಳು ಹಾಗೂ ಗಣಿತಜ್ಞರ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಈ ಪುಸ್ತಕದಲ್ಲಿ ವಿಜ್ಞಾನ, ಗಣಿತ-ಶೋಧಕರು, ತಂತ್ರಜ್ಞಾನಿಗಳು, ಆವಿಷ್ಕಾರರು ಇವರೆಲ್ಲರ ವಿವರಗಳನ್ನು ಹಾಗೂ ಭಾವಚಿತ್ರ ಸಹಿತ ನೀಡಿದ್ದಾರೆ. ಲೇಖಕರು ಈ ವಿವರಗಳನ್ನು ನೀಡುವಾಗ ಎಲ್ಲೂ ಆ ವಿಜ್ಞಾನಿಯ ಹೆಸರನ್ನು ನಮೂದಿಸಿಲ್ಲ. ಒಂದು ರೀತಿಯಲ್ಲಿ ಕ್ವಿಝ್ ತರಹ ‘ವಿವರ ಓದಿ, ಚಿತ್ರ ನೋಡಿ, ಹೆಸರಿಸಿ' ಎಂದು ಬರೆದಿದ್ದಾರೆ. ನಿಮಗೆ ಗೊತ್ತಾಗದಿದ್ದರೆ ಪುಸ್ತ್ರಕದ ಕೊನೆಗೆ ಎಲ್ಲರ ಹೆಸರನ್ನು ನೀಡಿದ್ದಾರೆ. ಇದೊಂದು ರೀತಿಯ ಜ್ಞಾನ ವಾಹಕ. ಕ್ರಿಸ್ತ ಪೂರ್ವದಲ್ಲಿದ್ದ ವಿಜ್ಞಾನಿಗಳಿಂದ ಹಿಡಿದು ಕ್ರಿಸ್ತ ಶಕದ ಇತ್ತೀಚಿನ (೨೧ನೇ ಶತಮಾನದ) ವಿಜ್ಞಾನಿಗಳವರೆಗೆ ಮಾಹಿತಿ ಇದೆ. 

ಪುಸ್ತಕದ ಲೇಖಕರಾದ ಸಂಪಟೂರು ವಿಶ್ವನಾಥ್ ಅವರು ತಮ್ಮ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ವಿಜ್ಞಾನದ ಇತಿಹಾಸದ ಬಗ್ಗೆ ಕೆಲವು ಪ್ರೌಢ ಗ್ರಂಥಗಳು ಈಗ ಲಭ್ಯವಿದೆ. ಪ್ರತಿಯೊಂದು ಪುಸ್ತಕವೂ ವಿಜ್ಞಾನದ ಬಗ್ಗೆ ಕುತೂಹಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ‘365 ಶ್ರೇಷ್ಠ ವಿಜ್ಞಾನಿಗಳು' ಎನ್ನುವ ಈ ಪುಸ್ತಕದ ವಿಶೇಷತೆ (ಭಿನ್ನತೆ)ಯನ್ನು  ತಿಳಿಸಲು ಈ ಮುನ್ನುಡಿ. 

ಕಿರಿಯರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಪುಸ್ತಕ ಇದು. ಈ ಪುಸ್ತಕದಲ್ಲಿ ವಿಜ್ಞಾನದ ಚರಿತ್ರೆಯನ್ನು, (ಗಣಿತವೂ ಸೇರಿದಂತೆ) ವಿವಿಧ ವಿಭಾಗಗಳ ವಿಜ್ಞಾನಿಗಳ ಸಾಧನೆಗೆ (ಸಂಶೋಧನೆ, ಬರಹ) ಹೆಚ್ಚು ಮಹತ್ವ ಕೊಡಲಾಗಿದೆ. ಅವರ ಬದುಕಿನ ವೈಯಕ್ತಿಕ ವಿಚಾರಗಳನ್ನು ಕೇವಲ ಸಾಂದರ್ಭಿಕವಾಗಿ ಮಾತ್ರ ಬಳಸಿದ್ದೇನೆ.

ಸುಮಾರು ೪೦೦೦ ವರ್ಷಗಳಿಂದ ಇಂದಿನವರೆಗೂ (೨೧ನೆಯ ಶತಮಾನದ ಆರಂಭ) ಪ್ರಪಂಚದ ಚಿಂತನಶೀಲರ ಕೊಡುಗೆಗಳನ್ನು ವಿಜ್ಞಾನದ ನೂರಾರು ಶಾಖೆಗಳಡಿಯಲ್ಲಿ ಕ್ರಮಬದ್ಧವಾಗಿ ಜೋಡಿಸಿ ದಾಖಲಿಸುವುದು ಸುಲಭದ ಕೆಲಸವಲ್ಲ. ಯಾವುದೇ ವಿಧಾನವನ್ನು ಅನುಸರಿಸಿದರೂ ಕೆಲವರು ವಿಜ್ಞಾನಿಗಳ ಲೋಪಗಳು, ಕೊರತೆಗಳು, ತಪ್ಪುಗಳು, ವಿಶೇಷತೆಗಳು, ಪ್ರಗತಿಪರ ಆಲೋಚನೆಗಳು ದಾಖಲೆಯಿಲ್ಲದೇ ಹೋಗಬಹುದು. ಹೀಗಾಗಿ ಯಾವುದೇ, ಒಂದು ಆಕರ ಗ್ರಂಥವನ್ನು ಪರಿಪೂರ್ಣ ಎಂದು ಹೇಳಲಾಗದು. 

ವಿಜ್ಞಾನಿಗಳೆಂಬ ಜಾಣರು ಒಂದು ದಿಕ್ಕಿನಲ್ಲಿ (ಕ್ಷೇತ್ರದಲ್ಲಿ) ತೀಕ್ಷ್ಣವಾಗಿ ಆಲೋಚಿಸಿ, ಶೋಧಿಸುವ ಶಕ್ತಿಯನ್ನು ಪಡೆದವರಾದರೂ ಕೆಲವರು ತಮ್ಮ ವೈಯಕ್ತಿಕ ನ್ಯೂನತೆ, ಮೊಂಡುತನ, ಸ್ವಾರ್ಥ, ಸಮಯ ಸಾಧಕತೆಗಳಿಂದ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ತಿರಸ್ಕರಿಸಲ್ಪಡುತ್ತಾರೆ. ಇಂತಹ ಕೆಲವರ ಉದಾಹರಣೆಗಳೂ ಈ ಪುಸ್ತಕದಲ್ಲಿ ಕಾಣಸಿಗುತ್ತವೆ.”

ಸುಮಾರು ೨೩೦ ಪುಟಗಳ ಈ ಪುಸ್ತಕ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ. ಪುಸ್ತಕದ ಕೊನೆಯಲ್ಲಿ ನೀಡಿರುವ ಅನುಬಂಧದಲ್ಲಿ ಗಣಿತ ಪಾರಿಭಾಷಿಕ ಶಬ್ದಗಳ ಪಟ್ಟಿ ಹಾಗೂ ಆಕರ ಗ್ರಂಥಗಳ ಪಟ್ಟಿಯನ್ನು ನೀಡಿದ್ದಾರೆ.